Advertisement

ಉಳಿಕೆ ವಸ್ತುಗಳ ಬಳಕೆ ಹೇಗಪ್ಪಾ ಅಂದರೇ?

11:15 AM Aug 07, 2017 | |

ಮನೆ ವಿನ್ಯಾಸ ಹೇಗಿರಬೇಕು ಎಂದು ಪ್ಲಾನ್‌ ತಯಾರಿಸಲು ಹೊರಟಾಗ ಸಣ್ಣ ಪುಟ್ಟ ಸ್ಥಳಗಳ ಬಗ್ಗೆ ನಾವು ಅಷ್ಟೊಂದು ತಲೆ ಕೆಡಿಸಿಕೊಂಡಿರುವುದಿಲ್ಲ. ಆದರೆ ಒಮ್ಮೆ ಮನೆ ಮುಗಿದ ನಂತರ ನಮಗೆ ನಾಲ್ಕಾರು ಯೋಜನೆಗಳು ಹೊಳೆದುಬಿಡುತ್ತವೆ.  ಹಾಗಾಗಿ ಕಿಚನ್‌ ಪ್ಲಾಟ್‌ ಫಾರಂ ಮೇಲೆಯೂ ಪಾತ್ರೆ ಇತ್ಯಾದಿಗಳಿಗೆ ತೊಂದರೆ ಆಗದಂತೆ, ಅದೇ ರೀತಿಯಲ್ಲಿ ಕೈಗೆ ಸಿಗುವ ಹಾಗೆ ಸಣ್ಣ ಸಣ್ಣ ಶೆಲ್ಫ್ಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳಬಹುದು.

Advertisement

ಮನೆ ಕಟ್ಟುವಾಗ ಎಷ್ಟೇ ಎಚ್ಚರ ವಹಿಸಿ ಎಷ್ಟುಬೇಕೋ ಅಷ್ಟು ಮಾತ್ರ ತರಲು ಹರಸಾಹಸ ಪಟ್ಟರೂ ಒಂದಷ್ಟು ಸಾಮಾನುಗಳು ಕೊನೆಗೂ ಮಿಕ್ಕಿಯೇ ಮಿಗುತ್ತವೆ. ಇವುಗಳನ್ನು ಬೇರೆಬೇರೆ  ಅಂಗಡಿಗಳಿಂದ ತಂದಿರುವ ಕಾರಣ, ಸಣ್ಣ ಪುಟ್ಟ ವಸ್ತುಗಳನ್ನು ದೂರ ಹೋಗಿ ವಾಪಸ್ಸು ಕೊಡಲೂ ಕೂಡ ಆಗುವುದಿಲ್ಲ. ಹಾಗಾಗಿ ಈ ಮಾದರಿಯ ವಸ್ತುಗಳಲ್ಲಿ ಬಹುತೇಕವನ್ನು ಒಂದಲ್ಲ ಒಂದು ರೀತಿಯಲ್ಲಿ ಉಪಯೋಗಿಸಿದರೆ, ದುಬಾರಿ ಬೆಲೆ ಕೊಟ್ಟು ತಂದ ವಸ್ತು ವ್ಯರ್ಥ ಆಗುವ ಬದಲು ನಮಗೆ ಬಹುಕಾಲ ಉಪಯುಕ್ತವಾಗಬಲ್ಲದು. 

ರೇಲಿಂಗ್‌ಗೆ ಸ್ಟೇನ್‌ ಲೆಸ್‌ ಸ್ಟೀಲ್‌ ಕೊಳವೆಗಳು
ಸುಮಾರು ಎರಡು ಅಡಿಯಿಂದ ಹಿಡಿದು ನಾಲ್ಕು ಅಡಿಗಳವರೆಗಿನ ಕೈಪಿಡಿ ಕೊಳವೆಗಳನ್ನು ಸೂಕ್ತ ರೀತಿಯ ಅಡ್ಡ ಪಟ್ಟಿ ಕೊಟ್ಟು ಗೋಡೆಗೆ ಸಿಗಿಸಿ ಟಾಯ್ಲೆಟ್‌ ಒಳಗೆ ಟವೆಲ್‌ ರ್ಯಾಕ್‌ ಇಲ್ಲವೆ ಕಾಲು ಜಾರಿದರೆ ಹಿಡಿಯಲು ಅನುಕೂಲಕರವಾಗುವ ರೀತಿಯಲ್ಲಿ ಗೋಡೆಗಳಲ್ಲಿ ಮೂರು ಇಲ್ಲವೇ ನಾಲ್ಕು ಅಡಿ ಎತ್ತರದಲ್ಲಿ ಕೊಡಬಹುದು.  ಮಾರುಕಟ್ಟೆಯಲ್ಲಿ ಸಿಗುವ ಟವಲ್‌ ರ್ಯಾಕ್‌ಗಳು ಅಷ್ಟೊಂದು ಸದೃಢವಾಗಿರುವುದಿಲ್ಲ. ಜೊತೆಗೆ ಅವು ಬಣ್ಣ ಹೊಡೆದವಾಗಿದ್ದರೆ, ಕಾಲಾಂತರದಲ್ಲಿ ಕಿಲುಬು ಹಿಡಿಯುವ ಅಪಾಯ ಇರುತ್ತದೆ. ಇದರ ಬದಲು ಉಳಿಕೆಯಾಗಿರುವ ಸ್ಟೆನ್‌ಲೆಸ್‌ ಸ್ಟೀಲ್‌ ಪೈಪ್‌ ಬಳಸಿ ಸುಲಭದಲ್ಲಿ ಸುಂದರವಾದ ಟವಲ್‌ ರಾಡ್‌ ಅಥವಾ ಜಾರದಂತೆ ತಡೆಯುವ ಸುರಕ್ಷತಾ ಕೈಪಿಡಿಗಳನ್ನು ಮಾಡಿಕೊಳ್ಳಬಹುದು.

ಮಾರ್ಬಲ್‌ ತುಂಡುಗಳು
ಬಾತ್‌ ರೂಮಿನಲ್ಲಿ ಸಣ್ಣ ಶೆಲ್ಫ್ ಗಳನ್ನು ಮಾಡಲು ಈ ಪೀಸುಗಳನ್ನು ಬಳಸಬಹುದು. ಒಂದು ಕಡೆ ಪಾಲಿಶ್‌ ಇರುವ ಈ ಹಲಗೆಗಳ ಕೊನೆಯನ್ನು ಸೂಕ್ತ ರೀತಿಯಲ್ಲಿ ನುಣ್ಣಗಾಗಿಸಿ, ನಮಗೆ ಬೇಕಿರುವ ಜಾಗದಲ್ಲಿ, ಕೈಗೆಟುಕುವ ರೀತಿಯಲ್ಲಿ ನಾಲ್ಕರಿಂದ ಆರು ಇಂಚಿನ ಶೆಲ್ಫ್ಗಳನ್ನು ಮಾಡಿಕೊಳ್ಳಬಹುದು. ಈಗ ಲಭ್ಯವಿರುವ ಕಟ್ಟಿಂಗ್‌ ಮೆಶೀನ್‌ ಗಳು ಗೋಡೆಗೆ ಹಾಕಿರುವ ಟೈಲ್ಸ್‌ ಗಳನ್ನು ಡ್ಯಾಮೇಜ್‌ ಮಾಡದೆ, ತೂತು ಕೊರೆಯಬಲ್ಲವು. ಕಡೇಪಕ್ಷ  ಮುಕ್ಕಾಲು ಇಂಚಿನಿಂದ ಹಿಡಿದು ಒಂದು ಇಂಚಿನಷ್ಟು ಆಳವಿದ್ದರೆ, ಗ್ರಾನೈಟ್‌ ಶೆಲ್ಫ್ ಕೂರಿಸಲು ಸಹಾಯಕಾರಿ. ಗೋಡೆಗಳನ್ನು ಮಶಿನ್‌ ಕಟ್ಟಿಂಗ್‌ ಮಾಡುವ ಮೊದಲು, ಒಳಗೆ ನೀರಿನ ಇಲ್ಲವೇ ವಿದ್ಯುತ್‌ನ ಪೈಪ್‌ ಇದೆಯೇ? ಎಂದು ಪರೀಕ್ಷಿಸುವುದು ಉತ್ತಮ. 

ಒಮ್ಮೆ ಬಾತ್‌ರೂಮಿನ ಗೋಡೆಗಳಿಗೆ ವಿದ್ಯುತ್‌ ಹಾಗೂ ನೀರಿನ ಕೊಳವೆಗಳನ್ನು ಅಳವಡಿಸಿದ ನಂತರ, ಅವುಗಳ ಫೋಟೊ ಒಂದನ್ನು ತೆಗೆದಿಟ್ಟುಕೊಳ್ಳುವುದು ಉತ್ತಮ. ಏಕೆಂದರೆ, ಒಮ್ಮೆ ಸಿಮೆಂಟ್‌ ಗಾರೆ ಹಾಕಿ ಮುಚ್ಚಿ ಟೈಲ್ಸ್‌ ಅಂಟಿಸಿದರೆ, ನಮಗೆ ಎಲಿ, ಯಾವ, ಪೈಪ್‌ ಹೋಗಿದೆ ಎಂಬುದು ತಿಳಿಯುವುದೇ ಇಲ್ಲ! 

Advertisement

ಕಿಚನ್‌ ಶೆಲ್ಫ್
ಅಡುಗೆ ಮನೆಯಲ್ಲಿ ಎಷ್ಟು ಶೇಖರಣೆ ಜಾಗ ಇದ್ದರೂ ಸಾಲುವುದಿಲ್ಲ. ಇದು ಮನೆ ಕಟ್ಟವವರಿಗೆ ಎದುರಾಗುವ ಸಾಮಾನ್ಯ ಕಂಪ್ಲೆಂಟ್‌. ಮನೆ ವಿನ್ಯಾಸ ಹೇಗಿರಬೇಕು ಎಂದು ಪ್ಲಾನ್‌ ತಯಾರಿಸಲು ಹೊರಟಾಗ ಸಣ್ಣ ಪುಟ್ಟ ಸ್ಥಳಗಳ ಬಗ್ಗೆ ನಾವು ಅಷ್ಟೊಂದು ತಲೆ ಕೆಡಿಸಿಕೊಂಡಿರುವುದಿಲ್ಲ. ಆದರೆ ಒಮ್ಮೆ ಮನೆ ಮುಗಿದ ನಂತರ ನಮಗೆ ನಾಲ್ಕಾರು ಯೋಜನೆಗಳು ಹೊಳೆದುಬಿಡುತ್ತವೆ.  ಹಾಗಾಗಿ ಕಿಚನ್‌ ಪ್ಲಾಟ್‌ ಫಾರಂ ಮೇಲೆಯೂ ಪಾತ್ರೆ ಇತ್ಯಾದಿಗಳಿಗೆ ತೊಂದರೆ ಆಗದಂತೆ, ಅದೇ ರೀತಿಯಲ್ಲಿ ಕೈಗೆ ಸಿಗುವ ಹಾಗೆ ಸಣ್ಣ ಸಣ್ಣ ಶೆಲ್ಫ್ಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳಬಹುದು. ಇವು ಸುಮಾರು ಆರು ಇಂಚಿನಷ್ಟು ಇದ್ದರೂ ಸಾಕು. ನಿಮ್ಮಲ್ಲಿ ಆರರಿಂದ ಎಂಟು ಇಂಚು ಅಗಲದ ಗ್ರಾನೈಟ್‌ ಇಲ್ಲವೇ ಮಾರ್ಬಲ್‌ ಹಲಗೆಗಳು ಇದ್ದರೆ, ಎರಡು ಮೂರು ಅಡಿಗಳಷ್ಟು ಉದ್ದದ ಶೆಲ್ಫ್ಗಳನ್ನೂ ನಿರಾಯಾಸವಾಗಿ ಮಾಡಿಕೊಳ್ಳಬಹುದು.  

ಮನೆ ಮುಂದೆ ಹಸಿರು ಗಿಡಗಳಿಗೆ ಶೆಲ್ಫ್
ಇತ್ತೀಚಿನ ದಿನಗಳಲ್ಲಿ ಜಾಗದ ಕೊರತೆಯಿಂದ ಎಲ್ಲೆಡೆ “ವರ್ಟಿಕಲ್‌ ಗಾರ್ಡನ್‌’ ನದೇ ಸದ್ದು. ನಿಮ್ಮ ಮನೆಯ ಮುಂದೆಯೂ, ಅಲಂಕಾರಿಕ ಗಿಡಗಳನ್ನು ಇಡಲು ನಾಲ್ಕಾರು ಶೆಲ್ಫ್ಗಳನ್ನು ಗ್ರಾನೈಟ್‌ ಹಲಗೆಗಳನ್ನು ಬಳಸಿ ಮಾಡಿಕೊಳ್ಳಬಹುದು. ಇವು ಪಾಟ್‌ನ ಗಾತ್ರ ಆಧರಿಸಿ ನಾಲ್ಕರಿಂದ ಆರು ಇಂಚಿನಷ್ಟು ಇದ್ದರೂ ಸಾಕು. ಅಡಿಗೆ ಮೂರು ನಾಲ್ಕು ಪಾಟುಗಳನ್ನು ಇಟ್ಟರೂ, ಎರಡು, ಮೂರು ಅಂತಸ್ತಿನಲ್ಲಿಟ್ಟ ಪಾಟ್‌ಗಳ ಸಾಲು, ಮೂರು ಅಡಿ ಇದ್ದರೂ, ಹತ್ತಾರು ಹಸಿರು ಗಿಡಗಳನ್ನು ಇಡಲು ಅನುಕೂಲಕರ. ಎಲಿವೇಷನ್‌ಗೆ ಎಂದು ದುಬಾರಿ ವಸ್ತುಗಳನ್ನು ತಂದು ಸೌಂದರ್ಯ ವರ್ಧಿಸಲು ನೋಡುವ ಬದಲು ನೈಸರ್ಗಿಕವಾಗೇ ಲಭ್ಯವಿರುವ ಹೂಗಿಡಗಳನ್ನು ತಂದು ಮನೆಯ ಮುಂಭಾಗ ಹಸಿರಿನಿಂದ ಕಂಗೊಳಿಸುವಂತೆ ಮಾಡಬಹುದು.

ಮರದ ತುಂಡುಗಳ ಬಳಕೆ
ಯಾವುದೇ ಮರದ ಕೆಲಸ ಮಾಡಿದರೂ ಒಂದಷ್ಟು ತುಂಡುಗಳು ಬೀಳುವುದು ಅನಿವಾರ್ಯ. ಮನೆ ಮುಗಿಯುವ ಹೊತ್ತಿಗೆ, ವಾಚ್‌ಮನ್‌ ಅಡುಗೆ ಮಾಡಲು ಉರಿಸಿ ಮಿಗಿಸಿದ ಸೌದೆಯ ರಾಶಿಯೇ ಸಾಕಷ್ಟು ಇರುತ್ತದೆ. ಇವುಗಳನ್ನು ಬಳಸಿಯೂ ಸುಂದರ ವಸ್ತುಗಳನ್ನು ಮಾಡಬಹುದು. ದಿನಬಳಕೆಯ ಪಾದರಕ್ಷೆಗಳನ್ನು ಇಡಲು, ಅವು ಒದ್ದೆ ಆದರೆ ಒಣಗಲು ಅನುಕೂಲಕರವಾದ ತೆರೆದ ಶೇಲ್ಫ್ಗಳನ್ನು ಮಾಡಲು ಹೆಚ್ಚು ಅಗಲವಿಲ್ಲದ ಹಲಗೆಗಳನ್ನೂ ಬಳಸಿ ಸಣ್ಣದೊಂದು ರ್ಯಾಕ್‌ ಮಾಡಿಸಬಹುದು. ಕಿಟಕಿ ಬಾಗಿಲುಗಳಿಗೆ ಕರ್ಟನ್‌ ರಾಡ್‌ ಹಾಕಲು, ಮರದಲ್ಲೇ ಮಾಡಿದ ಸುಂದರ ವಿನ್ಯಾಸದ ಬ್ರಾಕೆಟ್‌ಗಳನ್ನು ಬಡಗಿಗಳಿಂದ ತಯಾರಿಸಬಹುದು. ಕೆಲವೊಂದು ಜಾಗದಲ್ಲಿ ಸೋಫ‌ ಇಲ್ಲವೇ ಇತರೆ ಕುರ್ಚಿ ಮೇಜು ತಗುಲಿ ಗೋಡೆ ಹಾನಿಯಾಗುವಂತಿದ್ದರೆ, ಅಲ್ಲಿ ಪ್ಯಾನೆಲಿಂಗ್‌ ರೀತಿಯಲ್ಲಿ ಇದೇ ಮಿಕ್ಕುಳಿದ ವಿವಿಧ ಗಾತ್ರದ ಹಲಗೆಗಳನ್ನು ಬಳಸಿ ಆಕರ್ಷಕ ವಿನ್ಯಾಸವನ್ನು ಮಾಡಬಹುದು.

ಮನೆಯಲ್ಲಿ ಮಕ್ಕಳು ತೀರ ಚಿಕ್ಕವರಿದ್ದರೆ, ಅಡುಗೆ ಮನೆ, ಬಾಲ್ಕನಿಗೆ ಪದೇ ಪದೇ ಬಂದು ತೊಂದರೆ ಕೊಡುತ್ತಿದ್ದರೆ, ಅವರು ಹತ್ತಲಾರದಷ್ಟು ಎತ್ತರದ “ಡಚ್‌’ ಬಾಗಿಲುಗಳನ್ನು ತುಂಡು ಮರಗಳನ್ನು ಬಳಸಿಯೇ ಸುಂದರವಾಗಿ ಮಾಡಬಹುದು. ಮಕ್ಕಳಿಗೆ ಹಿರಿಯರು ಕಾಣುತ್ತಿದ್ದರೆ ಸಮಾಧಾನ, ಹಾಗೆಯೇ ಅವರನ್ನು ನೋಡಿಕೊಳ್ಳುತ್ತಿರುವವರಿಗೂ ಈ ಅರ್ಧ ಎತ್ತರದ ಅಂದರೆ ಸುಮಾರು ಎರಡು ಅಡಿ ಎತ್ತರದ ತೆರೆದ ಮಾದರಿಯ ಬಾಗಿಲುಗಳ ಮೂಲಕ ಮಕ್ಕಳನ್ನು ಗಮನಿಸುವುದು  ಸುಲಭವಾಗುತ್ತದೆ.  ಹೀಗೆ ಮಾಡುವಾಗ, ಹಲಗೆಗಳು ಉದ್ದದ್ದಕ್ಕೆ ಅಂದರೆ ನಿಲುವಾಗಿ ಇರುವಂತೆ ನೋಡಿಕೊಳ್ಳುವುದು ಅಗತ್ಯ. ಅಡ್ಡಡ್ಡಕ್ಕೆ ಅಳವಡಿಸಿದರೆ, ಮಕ್ಕಳು ನಿರಾಯಾಸವಾಗಿ ಮೆಟ್ಟಿಲು ಹತ್ತಿದಂತೆ ಹಂತಹಂತವಾಗಿ ಮೇಲಿನಿಂದ ಇಳಿದು ಬಂದು ಬಿಡಬಹುದು. ಯಾವುದೇ ಕಾರ್ಯ ಮಾಡಿದರೂ ಒಂದಷ್ಟು ವೇಸ್ಟ್‌ ಅಗುವುದು ಅನಿವಾರ್ಯ. ಆದರೆ ಇದೇ ತುಂಡುಗಳನ್ನು ಬಳಸಿ ಉಪಯುಕ್ತ ಪದಾರ್ಥಗಳನ್ನು ಮಾಡಿಕೊಂಡರೆ, ನಮಗೆ ನಷ್ಟ ಆಯಿತು ಎನಿಸುವುದಿಲ್ಲ!

ಆರ್ಕಿಟೆಕ್ಟ್ ಕೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next