Advertisement

ಕಲಿತದ್ದನ್ನು ಅನುಷ್ಠಾನಕ್ಕೆ ತಾರದಿದ್ದರೆ ಏನು ಉಪಯೋಗ?

10:19 AM Dec 23, 2019 | sudhir |

ಒಂದು ದಿನ ವ್ಯಕ್ತಿಯೊಬ್ಬನಿಗೆ ಕಾಡಿನಲ್ಲಿ ಕಟ್ಟಿಗೆ ಆರಿಸುತ್ತಿದ್ದಾಗ ಶುಭ್ರ ಶ್ವೇತ ವರ್ಣದ ಪಕ್ಷಿಯೊಂದು ಕಣ್ಣಿಗೆ ಬಿದ್ದಿತು. ಆ ವ್ಯಕ್ತಿ ತನ್ನ ಜೀವನದಲ್ಲಿ ಅಷ್ಟೊಂದು ಮನಮೋಹಕವಾದ ಪಕ್ಷಿಯನ್ನು ನೋಡಿರಲೇ ಇಲ್ಲ. ಅವನಿಗೆ ಅದನ್ನು ಹೇಗಾದರೂ ಹಿಡಿದು ಮನೆಗೊಯ್ದು ಸಾಕಬೇಕು ಎಂದೆನಿಸಿತು. ನಿಧಾನಕ್ಕೆ ಸದ್ದಾಗದಂತೆ ಅದರ ಹಿಂದೆ ಹೆಜ್ಜೆಯಿಡುತ್ತಾ, ಗಬಕ್ಕನೆ ಹಿಡಿದುಬಿಟ್ಟ. ಅಚ್ಚರಿಯೆಂಬಂತೆ ಆ ಪಕ್ಷಿ ಮನುಷ್ಯರ ಧ್ವನಿಯಲ್ಲಿ ಮಾತನಾಡಲಾರಂಭಿಸಿತು. “”ಗೆಳೆಯ, ದಯವಿಟ್ಟೂ ನನ್ನನ್ನು ಬಿಟ್ಟುಬಿಡು. ನನ್ನನ್ನು ಬಿಡುಗಡೆಗೊಳಿಸಿದರೆ ನಿನಗೆ ಮೂರು ಅತ್ಯಮೂಲ್ಯ
ಸಲಹೆಗಳನ್ನು ನೀಡುತ್ತೇನೆ. ಆ ಸಲಹೆಗಳಿಗೆ ನಿನ್ನ ಜೀವನವನ್ನೇ ಬದಲಿಸುವಂಥ ಶಕ್ತಿ ಇದೆ!”

Advertisement

“”ಹಾಗಿದ್ದರೆ, ಈಗಲೇ ಹೇಳು” ಎಂದ ವ್ಯಕ್ತಿ.
ಆಗ ಆ ಪಕ್ಷಿ ಹೇಳಿತು, “”ನೀನು ನನ್ನನ್ನು ಬಿಡುಗಡೆಗೊಳಿಸಿದ ತಕ್ಷಣ ಮೊದಲ ಸಲಹೆಯನ್ನು ನೀಡುತ್ತೇನೆ, ನಂತರ ಹಾರಿಹೋಗಿ ಆ ಕೊಂಬೆಯ ಮೇಲೆ ಕುಳಿತ ನಂತರ ಎರಡನೇ ಸಲಹೆ ಕೊಡುತ್ತೇನೆ. ಕೊನೆಯದಾಗಿ, ಆ ಮರವನ್ನು ಬಿಟ್ಟು ಗಗನಕ್ಕೆ ಚಿಮ್ಮುವ ಮುನ್ನ ಮೂರನೇ ಸಲಹೆ ಕೊಡುತ್ತೇನೆ”.

ವ್ಯಕ್ತಿ ಕೂಡಲೇ ತನ್ನ ಹಿಡಿತವನ್ನು ಸಡಿಲಗೊಳಿಸಿದ. ಆ ಪಕ್ಷಿ ಮರದ ಕೊಂಬೆಯತ್ತ ಹಾರುವ ಮುನ್ನ ಮೊದಲ ಸಲಹೆ ನೀಡಿತು-“”ಗೆಳೆಯ, ನೀನು ಹಿಂದೆ ಮಾಡಿದ ತಪ್ಪುಗಳಿಗಾಗಿ ಇಂದು ಅತಿಯಾಗಿ ನೊಂದುಕೊಳ್ಳಬೇಡ, ನಿನ್ನನ್ನು ನೀನೇ ವಿಪರೀತ ಶಿಕ್ಷಿಸಿಕೊಳ್ಳಬೇಡ”

“”ಸರಿ, ಎರಡನೆಯ ಸಲಹೆಯೇನು?” ಎಂದು ಕುತೂಹಲ ತಾಳದೆ ಕೇಳಿದ ವ್ಯಕ್ತಿ.
ಆ ಪಕ್ಷಿ ಮರದ ಕೊಂಬೆಯನ್ನು ತಲುಪಿ ಹೇಳಿತು-“” ನಿನ್ನ ಜ್ಞಾನಕ್ಕೆ (ಕಾಮನ್‌ ಸೆನ್ಸ್‌) ವಿರುದ್ಧವಾಗಿ ಗೋಚರಿಸುವ ಸಂಗತಿಗಳನ್ನು ಕಣ್ಣು ಮುಚ್ಚಿ ನಂಬಬೇಡ, ಮೊದಲು ಸತ್ಯಾಸತ್ಯತೆಯನ್ನು ಪ್ರಶ್ನಿಸಿ, ಪರೀಕ್ಷಿಸಿ ನಿರ್ಧಾರಕ್ಕೆ ಬಾ.”

ವ್ಯಕ್ತಿಗೆ ಕಿರಿಕಿರಿಯಾಯಿತು:””ಅಯ್ಯೋ, ಇವೂ ಒಂದು ಸಲಹೇನಾ? ಇವೆರಡೂ ನನಗೆ ಮೊದಲಿನಿಂದ ಗೊತ್ತಿದೆ. ಜೀವನ ಬದಲಾಗುವಂಥದ್ದು ಏನಾದರೂ ಹೇಳ್ತೀಯ ಅಂದರೆ, ನನಗೆ ಮೊದಲೇ ಗೊತ್ತಿರುವಂಥದ್ದನ್ನೇ ಹೇಳುತ್ತಿದ್ದೀಯಲ್ಲ” ಎಂದು ಆಕ್ರೋಶದಿಂದ ನುಡಿದ.

Advertisement

ಹಕ್ಕಿ, ಕೂಡಲೇ ಮರದ ತುತ್ತತುದಿಗೆ ಹಾರಿ, ಅಲ್ಲಿ ಕುಳಿತು ಜೋರಾಗಿ ನಗಲಾರಂಭಿಸಿತು.

“ಯಾಕೆ ನಗುತ್ತಿದ್ದೀಯಾ?’ ಕೋಪಗೊಂಡು ಕೇಳಿ ವ್ಯಕ್ತಿ.
“ಯಾಕೆ ಅಂದರೆ, ನಿನ್ನಂಥ ಮಹಾ ಮೂರ್ಖನನ್ನು ನಾನು ಜೀವನದಲ್ಲಿ ನೋಡಿಯೇ ಇರಲಿಲ್ಲ. ನಿನಗೆ ಗೊತ್ತೇ, ನನ್ನ ದೇಹದಲ್ಲಿ 1000 ಅಮೂಲ್ಯ ವಜ್ರಗಳು ಇವೆ ಅಂತ? ನೀನು ನನ್ನನ್ನು ಕೊಂದುಹಾಕಿದ್ದರೆ, ಆ ವಜ್ರಗಳೆಲ್ಲ ನಿನ್ನ  ಪಾಲಾಗುತ್ತಿದ್ದವು…’ ಎಂದಿತು ಹಕ್ಕಿ.

ಅವನಿಗೆ ಆಘಾತವಾಯಿತು. “”ಅಯ್ಯೋ… ದೇವರೇ…ನಾನೆಂಥ ಮುಠಾಳ. ನನ್ನ ಈ ದಡ್ಡತನದಿಂದಾಗಿ ಜೀವನ ಪರ್ಯಂತ ಪರದಾಡುವಂತಾಯಿತಲ್ಲ. ಇನ್ನೂ ಯಾಕೆ ಬದುಕಿದ್ದೇನೆ ನಾನು? ನನ್ನಂಥ ಮೂರ್ಖರು ಜಗತ್ತಿನಲ್ಲಿ ಯಾರೂ ಇಲ್ಲವೆನಿಸುತ್ತದೆ…” ಎಂದು ಗೋಳಾಡಲಾರಂಭಿಸಿದ. ತುಸು ಸಾವರಿಸಿಕೊಂಡು, ಕಣ್ಣು ಒರೆಸಿಕೊಂಡು ಕೇಳಿದ, “”ಹೇ ಮಾಯಾವಿ ಪಕ್ಷಿಯೇ, ನನ್ನಂಥ ಮೂರ್ಖ ಮತ್ತೂಬ್ಬನಿಲ್ಲ ಎನ್ನುವುದು ಸಾಬೀತಾಯಿತು… ಹೊರಡುವ ಮುನ್ನ ಮೂರನೇ ಸಲಹೆ ಏನೆಂದು ಹೇಳಿ ಹೊರಡು.ಬಹುಶಃ ಆ ಸಲಹೆಯಿಂದಾದರೂ ನನ್ನ ಮನಸ್ಸಿಗೆ ತುಸು ಸಾಂತ್ವನ ಸಿಗುತ್ತದೇನೋ?’

ಪಕ್ಷಿ ಮತ್ತೆ ನಗುತ್ತಾ ಅಂದಿತು: “”ಅಳಬೇಡ ಮಾರಾಯ, ನಾನು ಸುಮ್ಮನೇ ನಿನ್ನನ್ನು ಪರೀಕ್ಷೆ ಮಾಡಲು ಹೀಗೆ ಹೇಳಿದೆ.

ನೀನು ಮೂರನೇ ಸಲಹೆ ಏನೆಂದು ಕೇಳುತ್ತಿದ್ದೀಯಲ್ಲ, ಹೇಳಿ ಏನುಪಯೋಗ? ನಿಮಿಷದ ಹಿಂದಷ್ಟೇ ನಾನು ನಿನಗೆ ನೀಡಿದ ಎರಡು ಅಮೂಲ್ಯ ಸಲಹೆಗಳನ್ನೇ ಮುರಿದು ಬಿಟ್ಟೆ! ಹಿಂದೆ ಮಾಡಿದ ತಪ್ಪುಗಳಿಗಾಗಿ ಅತಿಯಾಗಿ ನೊಂದು ಕೊಳ್ಳಬೇಡ, ನಿನ್ನನ್ನು ನೀನೇ ದಂಡಿಸಿಕೊಳ್ಳಬೇಡ ಎಂದು ಹೇಳಿದ್ದೆ, ಅದನ್ನು ನೀನು ಪಾಲಿಸಲಿಲ್ಲ. ನನ್ನಂಥ ಮೂರ್ಖ ಯಾರೂ ಇಲ್ಲ ಎಂದು ಗೋಳಾಡುತ್ತಿದ್ದೀಯ. ಇನ್ನು, ಯಾವುದನ್ನೇ ಆಗಲೇ ಕಣ್ಣು ಮುಚ್ಚಿಕೊಂಡು ನಂಬಬೇಡ, ನಿನ್ನ ಸಾಮಾನ್ಯ ಜ್ಞಾನಕ್ಕೆ ವಿರುದ್ಧವಾಗಿ ಗೋಚರಿಸುವ ಸಂಗತಿಗಳ ಸತ್ಯಾಸತ್ಯತೆಯನ್ನು ಪ್ರಶ್ನಿಸು, ಪರೀಕ್ಷಿಸು ಎಂದಿದ್ದೆ. ಆದರೆ ನೀನು ಅದನ್ನೂ ಪಾಲಿಸಲಿಲ್ಲ. ನನ್ನ ಈ ಪುಟ್ಟ ದೇಹದಲ್ಲಿ ಸಾವಿರಾರು ವಜ್ರಗಳು ಇರಲು ಸಾಧ್ಯವೇ?”

ಆ ವ್ಯಕ್ತಿ ಕೂಡಲೇ ಅಂದ-“”ಓಹ್‌ ಪಕ್ಷಿಯೇ, ಆದದ್ದಾಯಿತು. ನಿಜಕ್ಕೂ ನಾನು ನಿನಗೆ ಆಭಾರಿಯಾಗಿ ಇರುತ್ತೇನೆ. ಬೇಗ ಹೇಳು, ನಿನ್ನ ಮೂರನೇ ಸಲಹೆ ಏನು?”
ಪಕ್ಷಿ ಹೇಳಿತು-“”ಮೊದಲೇ ಗೊತ್ತಿರುವುದನ್ನು ಅನುಷ್ಠಾನಕ್ಕೆ ತರಲು ನಿನಗೆ ಆಗುತ್ತಿಲ್ಲ ಎಂದರೆ, ಹೊಸ ಸಂಗತಿಗಳನ್ನು ಕಲಿಯುವ ಹಂಬಲವೇಕೆ?”
ಇಷ್ಟು ಹೇಳಿ ಪಕ್ಷಿ ನಭಕ್ಕೆ ಚಿಮ್ಮಿತು. ಆ ಮೂರು ಸಲಹೆಗಳು ಆ ವ್ಯಕ್ತಿಯ ಜೀವನ ಬದಲಿಸಿದವೋ ಇಲ್ಲವೋ ಎನ್ನುವ ವಿಚಾರ ಒತ್ತಟ್ಟಿಗಿಡಿ. ಈಗ ನೀವು ಹೇಳಿ, ಈ ಮೂರು ಸಲಹೆಗಳಿಗೆ ನಿಮ್ಮ ಜೀವನವನ್ನು ಬದಲಿಸುವ ಶಕ್ತಿಯಿದೆಯಲ್ಲವೇ? ನಾವೆಲ್ಲರೂ ಜೀವನದ ಒಂದಲ್ಲ ಒಂದು ಘಟ್ಟದಲ್ಲಿ ತಪ್ಪುಗಳನ್ನು ಮಾಡಿಯೇ ಇರುತ್ತವೆ, ಆದರೆ ಅದಕ್ಕಾಗಿ ನಮ್ಮನ್ನು ನಾವೇ ದಂಡಿಸುತ್ತಾ ಕೂರಬೇಕಿಲ್ಲ. ಹಿಂದೆ ಆದದ್ದಕ್ಕಾಗಿ ನೀವು ನಿತ್ಯವೂ ಯಾತನೆ ಅನುಭವಿಸಬೇಕಿಲ್ಲ. ಆದ್ದದ್ದು ಆಗಿಹೋಯಿತು. ತಪ್ಪುಗಳಿಂದ ಪಾಠ ಕಲಿತು ಮುಂದೆ ಸಾಗಿ.

ಎರಡನೆಯದಾಗಿ, ಬುದ್ಧಿವಂತರಾಗಿ, ತರ್ಕಬದ್ಧ ವ್ಯಕ್ತಿಗಳಾಗಿ, ಯಾವುದೇ ವಿಷಯವಾಗಲಿ ಅದನ್ನು ಪ್ರಮಾಣಿಸಿ ನೋಡಿ. ಹತ್ತು ಜನ ಹೇಳುತ್ತಾರೆ ಎಂದರೆ ಅದೇ ಸತ್ಯ ಆಗಿರಬೇಕು ಎಂದೇನೂ ಇಲ್ಲ. ಯಾವುದನ್ನೂ ಅಂಧಾನುಕರಣೆ ಮಾಡಲೇಬೇಡಿ. ಯಾವ ವ್ಯಕ್ತಿಯನ್ನೇ ಆಗಲಿ, ಯಾವ ವಿಷಯವನ್ನೇ ಆಗಲಿ ನಂಬುವ ಮುನ್ನ ನಿಮ್ಮ ವಿವೇಕವನ್ನು ಬಳಸಿ. ಮೂರನೆಯದಾಗಿ, ಇದನ್ನೆಲ್ಲ ತಿಳಿದುಕೊಂಡ ಮೇಲೂ ಈ ಅಂಶಗಳನ್ನು ನೀವು ಅನುಷ್ಠಾನತರುವುದಿಲ್ಲ ಎಂದಾದರೆ, ದಯವಿಟ್ಟೂ ಹೊಸ ಸಂಗತಿಗಳನ್ನು ಕಲಿಯುವುದಕ್ಕೆ ಹೋಗಬೇಡಿ. ಅದರಿಂದ ಏನೂ ಪ್ರಯೋಜನವಿಲ್ಲ. ಮೇಲಿನ ಕಥೆಯಲ್ಲಿನ ಹಕ್ಕಿಯು ಮಾಯಾವಿಯೋ ಅಲ್ಲವೋ ಎನ್ನುವುದು ಪ್ರಶ್ನೆಯೇ ಅಲ್ಲ. ಇದು ಕಟ್ಟು ಕಥೆ ಎಂಬುದು ಸತ್ಯ. ಆದರೆ ಆ ಕಥೆಯ ನೀತಿ ಪಾಠ ಅಮೂಲ್ಯ ಹೌದೋ ಅಲ್ಲವೋ ಎನ್ನುವುದಷ್ಟೇ ನಮಗೆ ಮುಖ್ಯವಾಗಬೇಕು.

ನಾನು ಯಾವಾಗಲೂ ಹೇಳುತ್ತಿರುತ್ತೇನೆ, ಜ್ಞಾನ ಮತ್ತು ಮೇಕಪ್‌ ಎನ್ನುವುದಕ್ಕೆ ಬಹಳ ಸಾಮ್ಯತೆ ಇದೆ. ಅದನ್ನು ನೀವು ಅಪ್ಲೆ„
ಮಾಡಿದಾಗಲಷ್ಟೇ ನಿಮ್ಮ ಸ್ಥಿತಿ ಸುಧಾರಿಸುತ್ತದೆ. ಈ ಸಲಹೆಗಳನ್ನು ನಿಮ್ಮ ಜೀವನದಲ್ಲಿ ಅಪ್ಲೆ„ ಮಾಡಿ, ಆಗ ಮಾತ್ರ ಬದುಕು ಬದಲಾಗಬಲ್ಲದು.

– ಗೌರ್‌ ಗೋಪಾಲ್‌ ದಾಸ್‌

Advertisement

Udayavani is now on Telegram. Click here to join our channel and stay updated with the latest news.

Next