ಹರಡುತ್ತಿರುವ ಮಾಹಿತಿಗಳು ಮತದಾರನೊಳಗೆ ಸೇರಿ ಹೋಗಿ ಒಂದು ತೀರ್ಮಾನಕ್ಕೆ ಆತ ಬರುವ ಸಾಧ್ಯತೆ ಹೆಚ್ಚು. ಅದಕ್ಕಾಗಿಯೇ ಚುನಾವಣೆ ಮತ್ತು ಮತದಾನಗಳು ಪ್ರಜಾಪ್ರಭುತ್ವದ ಬ್ಯೂಟಿ (ಸೌಂದರ್ಯ) ಎಂದು ಕರೆಸಿಕೊಳ್ಳುತ್ತವೆ. ವಿಶೇಷವಾಗಿ ರಾಜ್ಯಶಾಸ್ತ್ರ
ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಯುವಕರು, ಕೃಷಿಕರು, ಸಾಹಿತಿಗಳಿಂದ ಹಿಡಿದು ಎಲ್ಲಾ ಸಮುದಾಯದವರೂ ಇಲ್ಲಿ ಭಾಗೀದಾರರು.
Advertisement
ಈ ಹಿನ್ನೆಲೆಯಲ್ಲಿ ಮತದಾರನು ಚುನಾವಣಾ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸದಿದ್ದರೂ, ಮತದಾನದ ದಿನ ಮಹತ್ತರ ಪಾತ್ರ ವಹಿಸುತ್ತಾನೆ. ಯಾವ ಪಕ್ಷಕ್ಕೆ ಮತ ನೀಡಬೇಕೆಂದು ವಿವೇಚಿಸಿ ಹಾಕುವ ವರ್ಗವೊಂದಿದ್ದರೆ, ಮನಸೋ ಇಚ್ಛೆ ಹಾಕುವ ವರ್ಗ ಇನ್ನೊಂದಿದೆ. ಹಾಗಾದರೆ ಮತದಾರ ಪರಿಪಕ್ವನಾಗಿದ್ದಾನೆಯೇ? ಇನ್ನೂ ಆಗಿಲ್ಲ ಎನ್ನುವ ಉತ್ತರ ದೊರಕುತ್ತದೆ. ಇಂತಹ ಮನಸ್ಥಿತಿ ಯಿಂದ ಉಂಟಾಗುವ ಅವಕಾಶಗಳನ್ನು ನಮ್ಮ ರಾಜಕೀಯ ಪಕ್ಷಗಳು ಬಳಸಿಕೊಂಡು ಹೇಳಿಕೆಗಳನ್ನು ನೀಡುತ್ತಿವೆಯೇ ಎನ್ನುವ ಸಂದೇಹ ಉಂಟಾಗುತ್ತಿದೆ.
Related Articles
Advertisement
ಹಾಗಾದರೆ ಸರಕಾರಗಳು ರಚನೆಯಾದ ನಂತರವೂ ಒಂದು ಪಕ್ಷದ ಮುಖವಾಣಿಯಂತೆ ಇರುವುದು ಪ್ರಜಾಪ್ರಭುತ್ವ ಸಿದ್ಧಾಂತಕ್ಕೆ ವಿರುದ್ಧವಲ್ಲವೇ? ಸರಕಾರದ ರಚನೆ ಮಾಡಬೇಕಾದರೆ ರಾಜಕೀಯ ಪಕ್ಷಗಳು ಅಗತ್ಯ. ನಂತರವೂ ಅದನ್ನು ಮುಂದುವರೆಸಿಕೊಂಡು ಹೋದರೆ ಸಮತೆ ಮತ್ತು ಸಮಾನತೆಯ ಪಾಡೇನು? ಜನತೆಯ ಸರಕಾರ ಎನ್ನುವ ಬದಲು ನಿರ್ದಿಷ್ಟ ಪಕ್ಷದ ಸರಕಾರ ಎಂದೆನಿಸುವುದಿಲ್ಲವೇ? ಪ್ರಜಾಪ್ರಭುತ್ವದ ಫಲವನ್ನು ಪಕ್ಷದ ಫಲ ಎಂದು ಭಾವಿಸುವ ಜನತೆ ಪ್ರಜಾಪ್ರಭುತ್ವವನ್ನು ಸರಿಯಾಗಿ ಅರ್ಥೈಸಿಕೊಳ್ಳುವಲ್ಲಿ ಎಡವಿದ್ದಾರೆಯೇ? ಪಕ್ಷಗಳು ಈ ನಿಟ್ಟಿನಲ್ಲಿಯೇ ಕಾರ್ಯನಿರ್ವಹಿಸುವ ಗುಟ್ಟೇನು? ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಪರವಾಗಿರುವ ಹಲವು ಅನುಯಾಯಿಗಳು ಪರೋಕ್ಷವಾಗಿ ಪಕ್ಷಗಳಿಗೆ ಸಹಾಯ ಮಾಡಬಲ್ಲರು. ಸರಕಾರ ರಚನೆಯ ನಂತರದ ನೀತಿ, ನಿಯಮಗಳನ್ನು ರೂಪಿಸುವಲ್ಲಿ ಆಸಕ್ತ ಗುಂಪುಗಳಾಗಿ ಅವರು ಪ್ರಭಾವಿಸಬಲ್ಲವು. ಆದರೆ ಮತದಾನದ ದಿನ ಜನತೆಯೇ ಮೂಲ ಧಾತು. ಇಂತಹ ಪ್ರಚಂಡ ಶಕ್ತಿಯನ್ನು ಹೊಂದಿರುವ ಜನರನ್ನು ಅದ್ಯಾವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಮುಂಚಿತವಾಗಿಯೇ ಲೆಕ್ಕಾಚಾರ ಮಾಡುತ್ತಿವೆಯೋ? ಈ ಲೆಕ್ಕಾಚಾರವೂ ಪ್ರತಿ ರಾಜಕೀಯ ಪಕ್ಷದ ಆಲೋಚನೆಯ ಭಾಗವಾಗಿದೆಯೇ? ಚುನಾವಣಾ ಆಯೋಗ ನೀಡಿದ ಅಂತಿಮ ಮತದಾರರ ಪಟ್ಟಿಯನ್ನೇ ಆಧರಿಸಿ ಈ ಲೆಕ್ಕಾಚಾರಗಳ್ಳೋ? ಅರ್ಥವಾಗದ ಪ್ರಶ್ನೆಗಳು.
ಜನತೆಯೂ ತಮ್ಮ ಆಕಾಂಕ್ಷೆಗಳ ಈಡೇರಿಕೆಗಾಗಿ ಪಕ್ಷಗಳನ್ನು ನೆಚ್ಚಿಕೊಂಡಿರುವುದು ಪ್ರಜಾಪ್ರಭುತ್ವದ ಅಣಕ. ಚುನಾಯಿತ ಸರಕಾರಗಳೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ ಬಹುಶಃ ಈ ದೇಶದಲ್ಲಿ ಬಡವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತಿತ್ತು. ಚುನಾಯಿತ ಸರಕಾರ ಪ್ರಜಾಪ್ರಭುತ್ವದ ಪ್ರತೀಕ. ಅಂತಹ ಸರಕಾರವೂ ಪಕ್ಷಾಧಾರಿತ ಕಾರ್ಯಗಳನ್ನು ಹೆಚ್ಚು ಹೆಚ್ಚು ಮಾಡುತ್ತಿದ್ದರೆ, ಜನಸಾಮಾನ್ಯರ ಪಾಡೇನು? ಪ್ರಜಾಪ್ರಭುತ್ವವನ್ನು ಉಳಿಸುತ್ತಿರುವ ಜನಸಾಮಾನ್ಯರನ್ನು ಕಲ್ಯಾಣದತ್ತ ಕೊಂಡೊಯ್ಯುವುದು ಸರಕಾರದ ಮಂತ್ರವಾಗಬೇಕು. ಪಕ್ಷಗಳು ಸರಕಾರ ರಚನೆಯನ್ನು ಮಾಡುವಲ್ಲಿ ನಿರ್ಣಾಯಕರಾಗಬೇಕು. ಪಕ್ಷಗಳಿಗೂ ಜನತೆ ಎಂದರೆ ಆಯಾ ಪಕ್ಷಗಳ ಕಾರ್ಯಕರ್ತರಾಗಿದ್ದಾರೆ ಎನ್ನುವುದು ದಿಟವಾಗುತ್ತಿದೆ.
ಕರ್ನಾಟಕವೂ ಇದಕ್ಕೆ ಹೊರತಾಗಿಲ್ಲ. ಜನತೆಯನ್ನು ಸಮಗ್ರವಾಗಿ ನೋಡಲು ಅವುಗಳಿಗೆ ಸಾಧ್ಯವಾಗುತ್ತಿಲ್ಲ. ಪ್ರಜಾಪ್ರಭುತ್ವದ ಸ್ವಭಾವದ ವಿಸ್ತರಣೆ ಇಂದು ಆಗಬೇಕಾಗಿದೆ. ಸೀಮಿತ ವರ್ಗ ಮತ್ತು ರಾಜಕೀಯ ಪಕ್ಷಗಳಿಗಿಂತ ಮೀರಿ ಅದರ ವಿಸ್ತರಣೆ ಆಗಬೇಕಾಗಿದೆ. ಭಾರತದ ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ಜನತೆಯ ಭಾಗವಹಿಸುವಿಕೆ ಮುಖ್ಯ. ಇಂದಿನ ಚುನಾವಣೆಗಳನ್ನು ನೋಡಿದರೆ, ಸುಮಾರು ಅರ್ಧಕ್ಕಿಂತ ಹೆಚ್ಚಿನ ಜನಸಂಖ್ಯೆಯ ಬಹುಮತವನ್ನಾಧಾರಿಸಿದ ಪಕ್ಷಗಳು ಸರಕಾರ ರಚಿಸುತ್ತಿವೆ. ಇಲ್ಲಿಯೂ ಜನತೆಯ ಭಾಗವಹಿಸುವಿಕೆಯನ್ನು ವಿಸ್ತರಿಸಬೇಕಿದೆ. ಚುನಾವಣೆಯನ್ನು ನಂಬರ್ ಗೇಮ್ ಮೂಲಕ ಗೆಲ್ಲುವ ಕಸರತ್ತು ನಡೆಸುವ ಪಕ್ಷಗಳು ಇತ್ತ ಕಡೆಯೂ ಗಮನಹರಿಸಬೇಕಿದೆ. ಹಾಗಾದಾಗ ಪ್ರಜಾಪ್ರಭುತ್ವದ ಉಸಿರು ಇನ್ನಷ್ಟು ಕಾಲ ಇರಬಲ್ಲದು. ಸಾಂಪ್ರದಾಯಕವಾಗಿ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ಭಾರತಕ್ಕೆ ಅದನ್ನು ಹೆಚ್ಚು ಗಟ್ಟಿಗೊಳಿಸುವುದು ಅನಿವಾರ್ಯ ಮತ್ತು ಅಗತ್ಯವೂ ಹೌದು.
*ಡಾ| ಶೌರೀಶ್ ಕುಧ್ಕುಳಿ