ಕಳೆದ ವಾರ ನನ್ನ ಐಸ್‌ಲ್ಯಾಂಡ್ ಪ್ರವಾಸದ ಅನಂತರ ನನ್ನ ಮೊಮ್ಮಗನೊಡನೆ ಚೆಸ್ ಆಡುತ್ತ ಕುಳಿತಾಗ ಆತ ಕೇಳಿದ ಪ್ರಶ್ನೆ ಇದು. ನನ್ನ ಉತ್ತರ: ಮೊದಲನೆಯದಾಗಿ “ಗೈರುವಾ’ದ ಬ್ಲಾಕ್ ಬೀಚು. “ಎತ್ತಣ ಮಾಮರ/ ಎತ್ತಣ ಕೋಗಿಲೆ? ಅಂತ ಅಲ್ಲಮ ಪ್ರಭುಗಳಂತೆ ಉಷ್ಣ ವಲಯದ ಭಾರತಕ್ಕೂ ಉತ್ತರದ ಆರ್ಕ್‌ಟಿಕ್ ವೃತ್ತಕ್ಕೆ ತಾಗಿದ ಐಸ್‌ಲ್ಯಾಂಡೆಂಬ ಪುಟ್ಟ ನಡುಗಡ್ಡೆಗೂ ಅದೆಂಥ ಸಂಬಂಧವಯ್ಯಾ ಕೇಳಬಹುದು. ಆದರೆ ಬಾಲಿವುಡ್ ಸಿನೆಮಾ ಭಕ್ತರು ತತ್‌ಕ್ಷಣ ರೋಹಿತ್ ಶೆಟ್ಟಿಯ “ಗೆರುವಾ!’ ಅಂತ ಗುರುತಿಸಿ, ಕೂಡಲೇ 2015ರ “ದಿಲ್ವಾಲೆ’ ಹಿಂದಿ ಸಿನೆಮಾದ ಹಾಡನ್ನು ಗುನುಗುನಿಸಲು ಶುರು ಮಾಡಿಬಿಡುತ್ತಾರೆ!
ನಾಲ್ಕೂ ಮುಕ್ಕಾಲು ನಿಮಿಷಗಳ ಆ ವೀಡಿಯೋ ಹಾಡಿನ ದೃಶ್ಯಗಳೆಲ್ಲವನ್ನೂ ಐಸ್‌ಲ್ಯಾಂಡ್ ದೇಶದಲ್ಲಿಯೇ ಚಿತ್ರೀಕರಣ ಮಾಡಿದಂತೆ “ತೋರುತ್ತದೆ’ಯಾದ್ದರಿಂದ ಅದು ವೈರಲ್ ಆಗಿದೆ. ಯೂಟ್ಯೂಬ್‌ನಲ್ಲಿ ಆ ವೀಡಿಯೋಗೆ 540ಮಿಲಿಯನ್ಗೂ ಹೆಚ್ಚು ಹಿಟ್ಸ್ ಆಗಿವೆ. ಅದು ರಿಲೀಸ್ ಆದ ವರ್ಷದಲ್ಲಿ ಐಸ್‌ಲ್ಯಾಂಡಿಗೆ ಬಂದ ಭಾರತೀಯರ ಸಂಖ್ಯೆ ಬರೀ ಒಂದು ಸಾವಿರ ಇತ್ತು. ಎರಡೇ ವರ್ಷಗಳ ಅನಂತರ 2007ರಲ್ಲಿ 19ಪಟ್ಟು ಹೆಚ್ಚಾಯಿತಂತೆ! (ಸಂಧ್ಯಾ ಕೀಲರಿಯವರ ಅಂಕಿಸಂಖ್ಯೆ).
ಆ ಕಪ್ಪು ಬಣ್ಣದ ಲಾವಾ ಬೀಚ್ ದೃಶ್ಯಗಳಲ್ಲದೆ ಅನತಿದೂರದಲ್ಲಿಯ ಎರಡು ಜಲಪಾತಗಳು ಸಹ ಅದರಲ್ಲಿ ಸುಂದರವಾಗಿ ಚಿತ್ರಿತವಾಗಿವೆ. ಬಿಸಿಲು ಇದ್ದರೆ ಇಪ್ಪತ್ತೈದು ಮೀಟರ್ ಅಗಲದಲ್ಲಿ ಮತ್ತು ಅರವತ್ತು ಮೀಟರ್‌ಎತ್ತರದಿಂದ ಧುಮುಕುವ ಆ ರಮಣೀಯ ಜಲಪಾತದ ಜೋಡು ಕಾಮನಬಿಲ್ಲುಗಳ ಮುಂದೆ ತಾವೇ ಶಾರೂಖ್ ಖಾನ್-ಕಾಜೋಲ್ ಅಂತ ನಟಿಸುತ್ತ ಸೆಲ್ಫಿ ಫೋಟೋ ತೆಗೆಸಿಕೊಳ್ಳುವ ಭಾರತೀಯ ಜೋಡಿಗಳಿಗೆ ಕಡಿಮೆಯಿಲ್ಲ! ಅಲ್ಲಿಂದ ಡ್ರೈವ್ ಮಾಡುತ್ತ ಇನ್ನೂ ಸ್ವಲ್ಪ ಮುಂದೆ ಹೋದರೆ ಸೆಲಾಲ್ಯಾಂಡಾಸ್ ಎನ್ನುವ ಒಂದು ಜಲಪಾತವು ಮೇಲಿನ ಬಂಡೆಯ ಶೆಲ್ಫಿನಿಂದಾಚೆ ಧುಮುಕುವುದರಿಂದ ಅದರ ಹಿಂದೆ ನಿಂತುಕೊಳ್ಳಲು ಇಪ್ಪತ್ತೈದು ಅಡಿಗಳ ಜಾಗ ಇರುವುದರಿಂದ ಒದ್ದೆಯಾದ ಕಾಲ್ದಾರಿಯಲ್ಲಿ ತೊಯ್ಸಿಕೊಂಡಾದರೂ ನಡೆದು ದಾಟಬಹುದು. ಇಳಿಯುತ್ತಿರುವ ರಭಸದ ನೀರಿನ ಗೋಡೆಯ ಸಂದಿಗಳಿದ ತೂರಿ ಬರುವ ಸೂರ್ಯನ ಪ್ರಕಾಶ ಮತ್ತು ಮಧ್ಯೆಮಧ್ಯೆ ಇಣುಕುವ ನೀಲಿ ಆಕಾಶದ ತುಣುಕುಗಳ ಕಣ್ಣುಮುಚ್ಚಾಲೆಯ ದೃಶ್ಯವನ್ನು ನಾನು ಸಹ ಮರೆಯುವಂತಿಲ್ಲ.
ಗ್ಲೇಸಿಯರ್ ಲಗೂನ್‌ನಲ್ಲೂ ನರ್ತನ!
ವೀಡಿಯೋದಲ್ಲಿ ಮುಂದಿನ ದೃಶ್ಯ, ಬಿಳಿ-ನೀಲಿ ಮಿಶ್ರಿತ ದೊಡ್ಡ ಹಿಮಗಡ್ಡೆಗಳು ತೇಲುವ ಯೋಕುಲ್ ಸಾರ್ಲೋನ್‌ನ ((Jokulsarlon) ಗ್ಲೇಸಿಯರ್‌ಲಗೂನ್ ಸರೋವರ. ಮೇಲಿನ ಪ್ರೇಕ್ಷಣೀಯ ಸ್ಥಳಗನ್ನೆಲ್ಲ ಜೋಡಿಸುವುದು ಹೈವೇರೂಟ್ 1 ಎನ್ನುವ ರಿಂಗ್‌ರೋಡ್. ಈ ಬೃಹತ್ ಸರೋವರ ಇರುವುದು ಯೂರೋಪಿನ ಅತ್ಯಂತ ದೊಡ್ಡದೆನ್ನುವ ಹೆಗ್ಗಳಿಕೆಯ ವಾಟ್ಲಾಯೋಕುಲ್ ಗ್ಲೇಸಿಯರ್‌ನ ದಕ್ಷಿಣ ತುದಿಯಲ್ಲಿ. ಬಿಸಿಲಿನಲ್ಲಿ ಹಿಮಗಡ್ಡೆಗಳು ತೇಲುತ್ತ ತಿರುಗುತ್ತಿರುವಾಗ ಸೆರೆ ಹಿಡಿದ ಪ್ರತೀ ಫೋಟೋ ಸಹ ಭಿನ್ನ. ಅದಕ್ಕೇ ಐಸ್‌ಲ್ಯಾಂಡ್‌ನ್ನು ಛಾಯಾಗ್ರಾಹಕರಿಗೆ ಹೇಳಿ ಮಾಡಿಸಿದ ಜಾಗ ಎನ್ನಬಹುದು. ಹಿಮ ಗಡ್ಡೆಗಳನ್ನು ಸ್ಪೆಶಲ್ ಬೋಟ್‌ನಲ್ಲಿ ಹತ್ತಿರ ಹೋಗಿ ನೋಡುವುದು ಇನ್ನೂ ಚೆಂದ.
ಹಿಮನದಿ ಕರಗಿದಂತೆ ವೈವಿಧ್ಯಮಯ ಆಕಾರದ ಪುಟ್ಟ ದೊಡ್ಡ ಹಿಮಗಡ್ಡೆಗಳು ತೇಲುತ್ತ ಡೈಮಂಡ್ ಬೀಚಿನತ್ತ ಹಂಸಗಮನದಿಂದ ಸಾಗುವ ರೀತಿಯನ್ನು ಬಣ್ಣಿಸಲು “ಉಪಮಾ ಕಾಳಿದಾಸಸ್ಯ’ ಖ್ಯಾತಿಯ ಕವಿಪುಂಗವನ ವರ್ಣನಾಶಕ್ತಿ ಸಹ ಸಾಲದೇನೋ! ಅದಕ್ಕೇ ಹಾಲಿವುಡ್‌ನ ಬ್ಯಾಟ್‌ಮ್ಯಾನ್, ಜೇಮ್ಸ್ ಬಾಂಡ್ ಇತ್ಯಾದಿ ಅನೇಕ ಸಿನೆಮಾಗಳಲ್ಲೂ ಇದು ಚಿತ್ರಿತವಾದದ್ದು ಆಶ್ಚರ್ಯಕರವಲ್ಲ. ತೇಲುತ್ತ, ಅಲೆಗಳ ಹೊಡೆತಕ್ಕೆ ಇನ್ನಷ್ಟು ಚೂರುಚೂರಾಗಿ ಆ ಐಸ್ ತುಣುಕುಗಳನ್ನು ಅಲೆಗಳು ಕರಿಬಣ್ಣದ ಲಾವಾ ಬೀಚ್‌ನ ಮೇಲೆ ತಂದು ಹರಡಿದಾಗ ಅವುಗಳು ಬಿಸಿಲಲ್ಲಿ ಸೂರ್ಯ ಕಿರಣಗಳಿಂದ ಮಿಂಚುತ್ತ ವಜ್ರಗಳಂತೆ ಕಾಣುತ್ತವೆಯೆಂತಲೇ ಆ ಕರಾವಳಿಗೆ ಡೈಮಂಡ್ ಬೀಚೆನ್ನುವ ಹೆಸರು. ಅಲ್ಲಿ ಮೈಮರೆತು ನಿಂತ ಟೂರಿಸ್ಟ್‌ಗಳು ಅನಿರೀಕ್ಷಿತವಾಗಿ ವೇಗದಿಂದ ಬಂದು ಅಪ್ಪಳಿಸುವ ತೆರೆಗಳ ಬಗ್ಗೆ ಎಚ್ಚರ ವಹಿಸಬೇಕಾಗುತ್ತದೆ!
1973ರ ಪ್ಲೇನ್ ಅಪಘಾತದ ಘಟನೆ
ಗೆರುವಾ ವೀಡಿಯೋದ ಲಾಂಛನ ಎನ್ನಬಹುದಾದದ್ದು ಖಾನ್-ಕಾಜೋಲ್ ಜೋಡಿ ಒಂದು ಮುರಿದು ಬಿದ್ದ ಏರೋಪ್ಲೇನ್ ಮೇಲೆ ಕುಣಿಯುವ ದೃಶ್ಯ. ಆ ವರ್ಷದ ಕೊರೆಯುವ ನವೆಂಬರ್ ಚಳಿಯಲ್ಲಿ ಆಮೆರಿಕನ್ ನೌಕಾದಳದ DC-3 ಏರೋಪ್ಲೆನ್ ಏಳು ಜನ ಸಿಬಂದಿ ಹೊತ್ತು ಹೊರಟಾಗ ಐಸ್ ಹೆಪ್ಪುಗಟ್ಟಿ ತೊಂದರೆಯಾಗಿ ಪೈಲಟ್ ಇಂಧನ ತೀರಿದೆಯೆಂದು (ತಪ್ಪಾಗಿ) ಗ್ರಹಿಸಿ ನಿರ್ಜನ ಸೋಲೇಮಸಂಡರ್ ಎನ್ನುವ (Solheimasandur) ಬ್ಲ್ಯಾಕ್ ಬೀಚ್‌ನಲ್ಲಿ ಕ್ರಾಶ್ ಲ್ಯಾಂಡ್ ಮಾಡಿದ. ಸುದೈವದಿಂದ ಪ್ರಾಣಹಾನಿ ಆಗಲಿಲ್ಲ. ಎಲ್ಲರನ್ನೂ ಹೆಲಿಕಾಪ್ಟರ್‌ನಲ್ಲಿ ಪಾರುಮಾಡಲಾಯಿತು. ಆದರೆ ಕೆಟ್ಟು ಬಿದ್ದ ಪ್ಲೇನ್ ಮಾತ್ರ ಈಗ ನುಗ್ಗಾದರೂ ಅಂದಿನಿಂದ ಬೀಚ್‌ನಲ್ಲೇ ಉಳಿದು ಸಾವಿರಾರು ಬಾಲಿವುಡ್ ಆರಾಧಕರಿಗೆ ಯಾತ್ರಾ ಸ್ಥಳವಾಗಿ ಮಾರ್ಪಟ್ಟದ್ದು ವಿಪರ್ಯಾಸ. ಸಮಯದ ಅಭಾವದಿಂದ ನಮಗೆ ಅಲ್ಲಿಗೆ ಹೋಗುವ ಅವಕಾಶವಿರಲಿಲ್ಲ. ಆ ಹುದುಲು ಭೂಮಿಯಲ್ಲಿ ಸಾಮಾನ್ಯ ಕಾರು ಹೋಗುವ ಹಾಗಿಲ್ಲ. ATV ಎನ್ನುವ ಆಲ್ ಪರ್ಪಸ್ ಯಾನಗಳಲ್ಲಿ ಅಥವಾ ಶಟಲ್ ಬಸ್‌ನಲ್ಲಿ ಹೋಗಿ ನಾಲ್ಕು ಕಿ.ಮೀ. ನಡೆಯಬೇಕಂತೆ. ನಾನು ನೋಡಿದ ಫೋಟೋ ಮತ್ತು ವೀಡಿಯೋಗಳು ಮಾತ್ರ ನಿರ್ಜನ ಆದರೆ ಸುಂದರ ಸ್ಥಳ ಅದು ಅಂತ ತೋರಿಸುತ್ತವೆ.
ಸದ್ಯಕ್ಕಂತೂ, ಭಾರತೀಯರಿಗೆ ಮಾನಸಿಕವಾಗಿ ಹತ್ತಿರವಾದರೂ ದುರ್ಗಮ ಪ್ರದೇಶ ಅದು. ಚದುರಂಗ ಆಟದಲ್ಲಿ ಆಸ್ಥೆ
ಭಾರತಕ್ಕೂ ಹಾಗೂ ಚೆಸ್ ಎಂದು ಈಗ ಕರೆಯುವ ಪುರಾತನ ಚದುರಂಗಕ್ಕೂ ಸಂವತ್ಸರಗಳ ಸಂಬಂಧ ಎನ್ನುವುದರಲ್ಲಿ ಸಂಶಯವಿಲ್ಲ. ಅದರ ಹುಟ್ಟಿನ ಬಗ್ಗೆ ಪ್ರಚಲಿತವಿರುವ “ಮನೆಯಿಂದ ಮನೆಗೆ ದ್ವಿಗುಣಗೊಳಿಸುತ್ತ ಹೋಗುವ ಒಂದೇ ಕಾಳು ಅಕ್ಕಿ’ ಎನ್ನುವ ದಂತ ಕಥೆಯನ್ನು ಯಾರು ಕೇಳಿಲ್ಲ? ಆ ಆಟವನ್ನು ಕಂಡುಹಿಡಿದ ವ್ಯಾಪಾರಿಯೊಬ್ಬ ಒಮ್ಮೆ ಒಬ್ಬ ರಾಜನಿಗೆ ತೋರಿಸಿ ಆಡಲು ಕಲಿಸಿಕೊಟ್ಟನಂತೆ. ಖುಷಿಯಾದ ರಾಜಾ ಏನು ಸಂಭಾವನೆ ಕೊಡಲಿ ಅಂತ ಕೇಳಿದಾಗ “ಮೊದಲ ಮನೆಯಲ್ಲಿಟ್ಟ ಒಂದೇ ಕಾಳು ಅಕ್ಕಿಯಿಂದ ಆರಂಭಿಸಿ ದ್ವಿಗುಣಗೊಳಿಸುತ್ತ ಕೊನೆಯ 64ನೆಯ ಮನೆಯ ವರೆಗೆ ಇಡುತ್ತ ಹೋಗಿ’ ಎಂದು ಹೇಳಿದಾತನ ಬುದ್ಧಿಮತ್ತೆಯ ಕಥೆ ಜನಜನಿತ. ಕೊನೆಯ ಮನೆಗೆ ಬಂದಾಗ ಆ ಸಂಖ್ಯೆ 18ರ ಮುಂದೆ 18 ಶೂನ್ಯಗಳನ್ನು ಇಡುವಷ್ಟು ಬೆಳೆದಿರುತ್ತದೆ ಅಂತ ಒಂದು ಕಡೆ ಓದಿದ್ದು. ಯಾವ ರಾಜನ ಖಜಾನೆಯಲ್ಲೂ ಅಷ್ಟು ಅಕ್ಕಿ ಮೂಟೆಗಳು ಇರಲಿಕ್ಕಿಲ್ಲ!
ಅದೇನೇ ಇರಲಿ, ಇತಿಹಾಸದ ಪ್ರಕಾರ ಚದುರಂಗದ ಮೊದಲ ಉಲ್ಲೇಖದ ಕ್ರಿ.ಶ. ಆರನೆಯ ಶತಮಾನದ ಗುಪ್ತರ ಕಾಲದಲ್ಲಿ ಅಂತ ಪುರಾವೆಗಳಿವೆ ಎನ್ನುವರು ಕೆಲವರು. ಬಾಣಭಟ್ಟನ ಹರ್ಷಚರಿತದಲ್ಲಿ (ಕ್ರಿ.ಶ.625) ಆ ಆಟದ ಹೆಸರಿದೆಯಂತೆ. ಆದ್ದರಿಂದ ಚದುರಂಗ ಅಥವಾ ಶತರಂಜ್ ಭಾರತದಲ್ಲೇ ಉದಯಿಸಿತು ಮತ್ತು ಅರಬ್, ಪರ್ಶಿಯಾ, ಚೀನ ದೇಶಗಳಿಗೆ ಹಬ್ಬಿತು ಎನ್ನುವುದನ್ನು ಬಹುಶಃ ಎಲ್ಲರೂ ಒಪ್ಪುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಚೆಸ್‌ಗ್ರಾಂಡ್ ಮಾಸ್ಟರ್ “ಮಿಂಚಿನ ಕಿಡ್’ ಎಂದು ಕರೆಸಿಕೊಳ್ಳುವ ವಿಶ್ವನಾಥನ್ ಆನಂದ್ 5 ಸಲ ವರ್ಲ್ಡ್ ಚಾಂಪಿಯನ್ ಆದದ್ದು ಮತ್ತು ಈಗಿನ ಭಾರತ ತಂಡದಲ್ಲಿ ಭಾಗವಹಿಸುತ್ತಿರುವ ಗುಕೇಶ್, ಅರ್ಜುನ್, ಪ್ರಗ್ನಾನಂದನ್, ದಿವ್ಯ , ದ್ರೋನಾವಲಿಗಳ ಹೆಸರುಗಳು ಭಾರತದ ಚೆಸ್ ಪ್ರಿಯ ಎಳೆಯರಿಗೆ ಸ್ಫೂರ್ತಿದಾಯಕವಾಗಿವೆ ಎನ್ನುವುದಕ್ಕೆ ಆರಂಭದಲ್ಲೇ ಹೇಳಿದಂತೆ ನನ್ನನ್ನು ಮೊದಲ ಆಟದಲ್ಲೇ ಪರಾಭವಗೊಳಿಸಿದ ಮೊಮ್ಮಗನೇ ಸಾಕ್ಷಿ! ಅದಕ್ಕೂ ಐಸ್‌ಲ್ಯಾಂಡ್‌ಗೂ ಏನು ಸಂಬಂಧ ಅಂತ ನೀವು ಕೇಳುವುದು ಸಹಜ ಪ್ರಶ್ನೆ. ಉತ್ತರ ಇಲ್ಲಿದೆ.
ಆ ದೇಶದಲ್ಲಿ ಸಹ ಮೊದಲಿನಿಂದಲೂ ಮತ್ತು ಇನ್ನೂ ಚೆಸ್ ಬಹಳ ಜನಪ್ರಿಯ ಪಟದ ಆಟವಾಗಿದೆ. (Board game). ನಾನು ಭಾರತದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಕೇಳಿದ ಸುದ್ದಿ. ಚೆಸ್ ಫೆಡರೇಶನ್ 1972ರಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಚೆಸ್ ಗ್ರಾಂಡ್ ಮಾಸ್ಟರ್ ರಶಿಯನ್ ಬೋರಿಸ್ ಸ್ಪಾಸ್ಕಿ (Spasky) ಮತ್ತು ಅಮೆರಿಕದ ಬಾಬಿ ಫಿಶರ್(ಚಾಲೆಂಜರ್) ನಡುವಿನ “ಗ್ರಜ್’ ಮ್ಯಾಚ್ ಜಗತ್ತಿನಲ್ಲೆಲ್ಲ ಅಲೆಗಳನ್ನೆಬ್ಬಿಸಿದ್ದು ಇನ್ನೂ ನೆನಪಿದೆ. ಆಗ “ದ ವರ್ಲ್ಡ್ ಚೆಸ್ ಚಾಂಪಿಯನ್ ಶಿಪ್’ ನಡೆದದ್ದು ಐಸ್‌ಲ್ಯಾಂಡ್‌ನ ರಾಜಧಾನಿ ರೈಕ್ಯಾವಿಕ್‌ನಲ್ಲೇ.
ಕಾರಣಾಂತರಗಳಿಂದ ಅದು “ಮ್ಯಾಚ್ ಆಫ್ ದ ಸೆಂಚುರಿ’ ಎನ್ನುವ ಖ್ಯಾತಿ ಗಳಿಸಿದೆ. ಬಳಿಕ ಅನೇಕ ಘಟನೆಗಳು ನಡೆದವು. ಮತ್ತೆ ಅವರಿಬ್ಬರಲ್ಲಿ ನಡೆದ ಕೆಲವೇ ಚೆಸ್ ಮ್ಯಾಚ್‌ಗಳು, ಫಿಶರನ್‌ನ ವಿಚಿತ್ರ ವರ್ತನೆ, ಆತನ ಬಿಗಡಾಯಿಸಿದ ಮಾನಸಿಕ ಆರೋಗ್ಯದ ಸ್ಥಿತಿ, ಆತ ಮತ್ತೆ ರಿಮ್ಯಾಚ್ ಆಡಲು ಯುಗಸ್ಲಾವಿಯಾಗೆ ಹೋಗಿದ್ದು, ತನ್ನ ನಿಯಮಕ್ಕೆ ವಿರುದ್ಧ ಎಂದು ಅಮೆರಿಕ ಸರಕಾರ ಆತನ ಪಾಸ್‌ಪೋರ್ಟ್ ರದ್ದು ಮಾಡಿದ್ದು-ಇತ್ಯಾದಿ. ಅದರಿಂದಾಗಿ ಆತನನ್ನು ಜಪಾನ್ ಸರಕಾರ ಬಂಧಿಸಿದ್ದರಿಂದ ಹೊರಗೆ ಹೋಗಲು ಅಸಾಹಯಕನಾದಾಗ ಕೊನೆಯಲ್ಲಿ ಆತನಿಗೆ ಪಾಸ್‌ಪೋರ್ಟ್ ಕೊಟ್ಟು ಐಸ್‌ಲ್ಯಾಂಡ್‌ನ ಪ್ರಜೆಯನ್ನಾಗಿ ಮಾಡಿದ್ದು ಐಸ್‌ಲ್ಯಾಂಡ್ ದೇಶ!
ಆ ದೇಶದ ಪ್ರತೀ ಊರಿನಲ್ಲಿ ಸ್ಕಾಕ್ ಫೆಲಾಗ್ ಎನ್ನುವ ಚೆಸ್ ಸಂಘಗಳಿವೆ (Skakfelag) ಎಂದರೆ ಅದರ ಜನಪ್ರಿಯತೆಯನ್ನು ಅಳೆಯಬಹುದು. ಅದುವೇ ನಾನು ಹೇಳಲು ಬಂದ ಬಾದರಾಯಣ ಸಂಬಂಧ! ತನ್ನ ಕೊನೆಯ ಉಸಿರಿನವರೆಗೆ ಆತ ವಾಸ ಮಾಡಿದ್ದು ಐಸ್‌ಲ್ಯಾಂಡಿನ ಸೆಲ್ಫಾಸ್ ಎನ್ನುವ ಊರಲ್ಲಿ. ನಮ್ಮ ಬಸ್ ಆತನ ಸಮಾಧಿಯ ಬಳಿ ಸುಳಿದರೂ ಫೋಟೋ ಸ್ಟಾಪ್ ಅವಕಾಶ ಸಿಗದೆ ನಾನು ಕೇಳಿದಾಗ ನನಗೆ ಅದನ್ನು ಕಳಿಸಿಕೊಟ್ಟ ಬಾಬಿ ಫಿಶರ್‌ಸೆಂಟರ್‌ನ ಕಾರ್ಯದರ್ಶಿ ಅಲ್ಡಿಸ್ (Aldis) ಆಕೆಗೆ ಧನ್ಯವಾದಗಳು.
ಗೋಲ್ಡನ್ ಸರ್ಕಲ್‌ನ ಇನ್ನಿತರ ಆಕರ್ಷಣೆಗಳು
ಈ “ಸುವರ್ಣ ಪರಿ’ಯೊಳಗೆ ಅನೇಕ ಪ್ರೇಕ್ಷಣೀಯ ಸ್ಥಳಗಳು ಸೆಲ್ಫಾಸ್ ಸುತ್ತಮುತ್ತಲು ಇವೆ. ಸೆಲ್ಫಾಸ್ ಹತ್ತಿರವೇ ಇದೆ. ಗುಲ್ಫಾಸ್ ಎನ್ನುವ ಎರಡು ಮಜಲುಗಳ ಅದ್ಭುತ ಜಲಪಾತ. ಒಂದು ಸೆಕೆಂಡಿನಲ್ಲಿ 1.4ಲಕ್ಷ ಲೀಟರ್‌ನಷ್ಟು ನೀರು ಅಲ್ಲಿ ಧುಮುಕುತ್ತದೆ. ಅದನ್ನು ನೋಡಲು ಎರಡು ಕಣ್ಣುಗಳು ಸಾಲದು!
ಐಸ್‌ಲ್ಯಾಂಡ್ ಟ್ರೋಲ್‌ಗಳ ಕಥೆಗಳಿಗೂ ಕೊನೆಯಿಲ್ಲ. ಅವರ ಭಾಷೆಯಲ್ಲಿ ಸಾದಾ ಕಥೆಗೆ ಸಾಗಾ (saga)ಎನ್ನುತ್ತಾರೆ. ಇಂಗ್ಲಿಷ್ ಭಾಷೆಗೆ ಐಸ್‌ಲ್ಯಾಂಡ್‌ನವರು ಕೊಟ್ಟ ಎರಡು ಮಹತ್ವದ ಶಬ್ದಗಳಲ್ಲಿ ಅದು ಒಂದು. ಎರಡನೆಯದು ಗೀಸರ್ ಎನ್ನುವ ಬಿಸಿನೀರಿನ ಬುಗ್ಗೆಯ ಅರ್ಥದ ಪದ. ಈಗ ಗೊತ್ತಾಯಿತಲ್ಲ, ಅದರ ಉತ್ಪತ್ತಿ? ಆ ದೇಶದಲ್ಲಿ ಅವುಗಳಿಗೂ ಲೆಕ್ಕವಿಲ್ಲ. ಐದು ನಿಮಿಷಕ್ಕೊಮ್ಮೆ ಪುಟಿದೇಳುವ ಸ್ಟೋಕ್ಕುರ್‌ಎನ್ನುವ ಗೀಸರ್ ಫೋಟೋ ಮತ್ತು ವೀಡಿಯೋ ಮಾಡುವ ಪ್ರವಾಸಿಗಳೊಂದಿಗೆ ಕಣ್ಣುಮುಚ್ಚಾಲೆ ಆಡಿ ಕಣ್ಣು ಮಿಟುಕಿಸುತ್ತದೆ. ಒಂದು ಸಲ ಇನ್ನೇನು ಭುಸ್ಸೆಂದು ಆವಿಯೊಂದಿಗೆ ಬಿಸಿ ಕಾರಂಜಿ ಪುಟಿದೇಳುತ್ತದೆ ಎನ್ನುವಷ್ಟರಲ್ಲಿ ಫುಸ್ಸೆಂದು ಅಬಾರ್ಟ್ ಆಗುತ್ತದೆ. ಮುಂದಿನ ಸಲ ಚಿಕ್ಕದು ಅಥವಾ ಅತೀ ದೊಡ್ಡ ವಿಸ್ಫೋಟ ಮಾಡಿ ಗಾಳಿಯಲ್ಲಿ ಕುದಿನೀರಿನ ಸಿಂಚನ ಸಿಂಪಡಿಸಿ (ಎಚ್ಚರಿಕೆ: 80 ರಿಂದ 100 ಸೆಂಟಿಗ್ರೇಡ್) ಮೈ ಸುಡುವಂತೆ ಮಾಡುತ್ತದೆ! ಇದು ಗೀಸರ್‌ಗಳ ಓಕುಳಿಯಾಟ!
ಅದು ಕೊನೆಯ ದಿನದ ಪಯಣವಾದ್ದರಿಂದ ತಾತ್ಕಾಲಿಕವಾಗಿಯಾದರೂ ನಮ್ಮ ದೇಶಗಳ ಸಂಬಂಧ ಕಡಿದು ರೈಕ್ಯಾವಿಕ್ ವಿಮಾನ ನಿಲ್ದಾಣದತ್ತ ಕಾಲೆಳೆಯುತ್ತ, ಪೋರ್ಟರ್ ಇಲ್ಲದ ಊರಲ್ಲಿ ಜತೆಗೆ ಸೂಟ್ ಕೇಸನ್ನೂ ನಾನೇ ಜಗ್ಗುತ್ತ ನಡೆಯುತ್ತಾ ಅನುಭವಗಳ ಸವಿನೆನಪನ್ನು ಮೆಲಕು ಹಾಕುತ್ತಾ ವಿಮಾನ ಹತ್ತಿದೆ.
*ಶ್ರೀವತ್ಸ ದೇಸಾಯಿ, ಡೋಂಕಾಸ್ಟರ್