Advertisement
ಬಾಲ್ಯದ ಬೊಜ್ಜನ್ನು ತಡೆಯುವುದು ಹೇಗೆ?
ಬಾಲ್ಯದಲ್ಲಿಯೇ ಬೊಜ್ಜು ಬೆಳೆಸಿಕೊಳ್ಳುವುದನ್ನು ತಡೆಯಲು ಬಹು ಆಯಾಮದ ಕಾರ್ಯವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಆಹಾರಾಭ್ಯಾಸ ಪರಿವರ್ತನೆ, ವರ್ತನಾತ್ಮಕ ಬದಲಾವಣೆ ಮತ್ತು ದೈಹಿಕ ಚಟುವಟಿಕೆಗಳು ಇದರಲ್ಲಿ ಸೇರಿವೆ. ಹೊಟೇಲುಗಳಲ್ಲಿ ಊಟ ಉಪಾಹಾರ ಸೇವಿಸದೆ ಇರುವುದು, ಸಾಫ್ಟ್ ಡ್ರಿಂಕ್ ಕುಡಿಯುವುದನ್ನು ಕಡಿಮೆ ಮಾಡುವುದು, ಸೇವಿಸುವುದೇ ಆದಲ್ಲಿ ಕಡಿಮೆ ಸೇವಿಸುವುದು, ಕ್ಯಾಲೊರಿ ಸಮೃದ್ಧ ಆಹಾರಗಳನ್ನು ಕಡಿಮೆ ಮಾಡಿ ನಾರಿನಂಶಯುಕ್ತ ಆಹಾರಗಳನ್ನು ಹೆಚ್ಚು ಉಪಯೋಗಿಸುವುದು ಇತ್ಯಾದಿ ಆಹಾರಾಭ್ಯಾಸ ಬದಲಾವಣೆಗಳಲ್ಲಿ ಸೇರಿವೆ. ಮಕ್ಕಳು ಮತ್ತು ಹೆತ್ತವರಲ್ಲಿ ಆರೋಗ್ಯಪೂರ್ಣ ಆಹಾರ ಶೈಲಿಯ ಬಗ್ಗೆ ಎಚ್ಚರ ಮೂಡಿಸುವುದು, ಆಹಾರ ದಿನಚರಿಯ ಬಗ್ಗೆ ಬರೆದಿರಿಸಿಕೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸುವುದು ವರ್ತನಾತ್ಮಕ ಬದಲಾವಣೆಯ ಕಾರ್ಯತಂತ್ರಗಳಲ್ಲಿ ಸೇರಿವೆ. ಸ್ತ್ರೀಯರು ಮತ್ತು ಬಾಲಕಿಯರ ಪೌಷ್ಟಿಕಾಂಶ ಮಟ್ಟವನ್ನು ಉತ್ತಮಪಡಿಸುವುದು ಕೂಡ ಬಾಲ್ಯದಲ್ಲಿಯೇ ಬೊಜ್ಜು ಬೆಳೆಸಿಕೊಳ್ಳುವುದನ್ನು ತಡೆಗಟ್ಟುವಲ್ಲಿ ನಿರ್ಣಾಯಕವಾಗಿದೆ. ಗರ್ಭಧಾರಣೆಯ ಬಳಿಕ ಮತ್ತು ಅದಕ್ಕೆ ಮುನ್ನ ತಾಯಿಯ ಪೌಷ್ಟಿಕಾಂಶ ಮಟ್ಟವು ಜನಿಸಲಿರುವ ಶಿಶುವಿನ ಮೇಲೆ ಪರಿಣಾಮ ಬೀರುತ್ತದೆಯಲ್ಲದೆ, ಬಳಿಕದ ಜೀವನದಲ್ಲಿ ಬೊಜ್ಜು ಬೆಳೆಸಿಕೊಳ್ಳುವ ಅಪಾಯದ ಜತೆಗೆ ಸಂಬಂಧ ಹೊಂದಿರುತ್ತದೆ.