ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ದೇವರಲ್ಲಿಯೇ ಮನಸ್ಸನ್ನು ಕೇಂದ್ರೀಕರಿಸುವುದನ್ನು ಭಕ್ತಿ ಎನ್ನುತ್ತೇವೆ. ಭಕ್ತಿಯ ಮಾರ್ಗಗಳೂ ಸಾವಿರಾರು. ಒಟ್ಟಾರೆ ಮನಸ್ಸು ಹಿಡಿತದಲ್ಲಿರಬೇಕು. ಆಡಂಬರದ ಅಥವಾ ಡಾಂಭಿಕ ಭಕ್ತಿಯಿಂದ ಏನೂ ಪ್ರಯೋಜನವಿಲ್ಲ. ಸತ್ಯದ ಹಾದಿಯಲ್ಲಿಯೇ ನಡೆಯಬೇಕು. ವಾಂಛೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು.
ಸರಳವಾಗಿ ಹೇಳಬೇಕೆಂದರೆ ಭಕ್ತಿಯೇ ಮುಕ್ತಿಯ ಮಾರ್ಗ. ಜೀವನದಲ್ಲಿ ಏನೇ ಸಂಭವಿಸಲಿ. ಕೊನೆಯಲ್ಲಿ ಮುಕ್ತಿಯೊಂದು ಸಿಕ್ಕರೆ ಸಾಕು ಎಂಬುದು ಎಲ್ಲರ ಆಸೆ. ಆದರೆ ಈ ಮುಕ್ತಿ ಎಂದರೇನು? ಮತ್ತೆಂದೂ ಈ ಭುವಿಯಲ್ಲಿ ಜನಿಸದೆ ದೇವರ ಪಾದವನ್ನು ಸೇರುವುದನ್ನೇ ಮುಕ್ತಿ ಎನ್ನುತ್ತೇವೆ. ಅಂದರೆ, ಪುನರ್ ಜನ್ಮವಿಲ್ಲದೆ ಇರುವುದು. ಮುಕ್ತಿಯನ್ನು “ಮೋಕ್ಷ’ ಎಂದೂ ಕರೆಯಲಾಗುತ್ತದೆ. ಮುಕ್ತಿಯನ್ನು ಪಡೆಯಲು ಭಕ್ತಿ ಎಂಬುದು ಸರಳವಾದ ಮಾರ್ಗದಂತೆ ಕಂಡು ಬಂದರೂ, ಅದು ಕಠಿಣವಾದ ಹಾದಿಯೂ ಹೌದು.
ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ದೇವರಲ್ಲಿಯೇ ಮನಸ್ಸನ್ನು ಕೇಂದ್ರೀಕರಿಸುವುದನ್ನು ಭಕ್ತಿ ಎನ್ನುತ್ತೇವೆ. ಭಕ್ತಿಯ ಮಾರ್ಗಗಳೂ ಸಾವಿರಾರು. ಒಟ್ಟಾರೆ ಮನಸ್ಸು ಹಿಡಿತದಲ್ಲಿರಬೇಕು. ಆಡಂಬರದ ಅಥವಾ ಡಾಂಭಿಕ ಭಕ್ತಿಯಿಂದ ಏನೂ ಪ್ರಯೋಜನವಿಲ್ಲ. ಸತ್ಯದ ಹಾದಿಯಲ್ಲಿಯೇ ನಡೆಯಬೇಕು. ವಾಂಛೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಧರ್ಮದ ನಡೆಯಲ್ಲಿಯೇ ಸಾಗಬೇಕು. ಮಾನವನ ಬದುಕು ಎಂಬುದು ಮುಕ್ತಿಯನ್ನು ಹೊಂದಲು ಪಡೆದ ಅವಕಾಶ. ಎಲ್ಲರಲ್ಲಿಯೂ ವಿವೇಚನಾ ಶಕ್ತಿ ಇದೆ. ಆದರೆ ಸಾವಿರಾರು ಬಗೆಯ ಮನಸ್ಸುಗಳ ನಡುವೆ ಹೊಂದಿಕೊಂಡು ಜೀವಿಸುವಾಗ ತಿಳಿದೋ ತಿಳಿಯದೆಯೋ ತಪ್ಪುಗಳು ಸಂಭವಿಸಬಹುದು. ಅಂತಹ ಸಂದರ್ಭಗಳಲ್ಲಿ ಮನಸ್ಸನ್ನು ಗಟ್ಟಿಮಾಡಿಕೊಂಡು ಸಮಚಿತ್ತದಿಂದ ವರ್ತಿಸಬೇಕಾಗುತ್ತದೆ. ಆ ಶಕ್ತಿ ನಮಗೆ ದೊರೆಯಲು ಮನಸ್ಸು ಸದೃಢವಾಗಿರಬೇಕು. ಅದಕ್ಕೆ ಏಕಾಗ್ರತೆಯ ಅವಶ್ಯಕತೆಯಿದೆ. ಭಕ್ತಿ ಇದಕ್ಕೆ ಪೂರಕವಾದ ಸುಲಭ ಸಾಧನ. ಅಂದರೆ ಮನಸ್ಸು ಹಿಡಿತದಲ್ಲಿದ್ದು ಸನ್ಮಾರ್ಗದಲ್ಲಿ ನಡೆದರೆ ಮುಕ್ತಿ ಅಥವಾ ಮೋಕ್ಷ$ಖಂಡಿತ.
ಸಂಸ್ಕೃತದಲ್ಲಿ ಒಂದು ಉಕ್ತಿಯಿದೆ. “ಪ್ರಥ್ಯಾಂಬು ಜಾಹ್ನವಿ ಸಂಗಾತ್ ತ್ರಿರಿಶೈರಪಿ ವಂದ್ಯತೆ’ ಅಂದರೆ-ಮಳೆಯ ಹನಿಯು ಪವಿತ್ರ ನದಿದೇವನದಿ ಗಂಗೆಯನ್ನು ಸೇರಿದರೆ, ಅದು ತ್ರಿಲೋಕಗಳಿಂದಲೂ ಮಾನ್ಯವಾಗುತ್ತದೆ. ಪೂಜನೀಯ ಸ್ಥಾನವನ್ನು ಹೊಂದುತ್ತದೆ. ಮಳೆ ನೀರು ಹರಿದು ಯಾವುದೋ ಹಳ್ಳವನ್ನೋ ತೊರೆಯನ್ನೋ ಸೇರಿ ಹರಿದು ಸಮುದ್ರವನ್ನು ಸೇರಿದರೆ ಅದು ಯಾವುದೇ ವಿಶೇಷತೆಯನ್ನು ಗಳಿಸುವುದಿಲ್ಲ. ಅಂತೆಯೇ, ನಮ್ಮ ಬದುಕಿನ ಸೂತ್ರ ದೇವನೆಡೆಗೆ ಅಂದರೆ, ಸನ್ಮಾರ್ಗದಲ್ಲಿದ್ದರೆ ಜೀವನದ ಕೊನೆ ಎಂಬುದು ಕೇವಲ ಸಾವಾಗಿರುವುದಿಲ್ಲ. ಅದು ಮುಕ್ತಿಯನ್ನು ಪಡೆಯುವ ಮಾರ್ಗ ಆಗಿರುತ್ತದೆ. ಅರಿಷಡ್ವರ್ಗಗಳಿಂದ ದೂರವಿರಬೇಕಾದುದು ಅತ್ಯಗತ್ಯ. ಇದು ಕಷ್ಟಸಾಧ್ಯವೂ ಹೌದು. ಸಜ್ಜನರ ಸಂಗವಿ¨ªಾಗ ಇದು ಸುಲಭಸಾಧ್ಯ. ಹೇಗೆ ಮಳೆ ನೀರು ಗಂಗೆಯನ್ನು ಸೇರಿ ಪವಿತ್ರವಾಯಿತೋ ಹಾಗೇ, ನಾವು ಸಜ್ಜನ ಸಂಗದಿಂದ ನಮ್ಮನ್ನು ಶುದ್ಧವಾಗಿಟ್ಟುಕೊಳ್ಳಬಹುದು.
ಬದುಕುವ ರೀತಿನೀತಿಗಳೇ ಮುಕ್ತಿಯ ಮಾರ್ಗಗಳು. ಕಾಸರ್ಕವನ್ನು ನೆಟ್ಟು ಮಾವನ್ನು ಪಡೆಯಲು ಸಾಧ್ಯವೇನು? ಹಾಗಾಗಿ ಮುಕ್ತಿಯನ್ನು ಬಯಸುವವರು ಜೀವನದ ಕೊನೆಯಲ್ಲಿ ಮೋಕ್ಷದ ದಾರಿಯನ್ನು ಹುಡುಕಿಕೊಂಡು ಹೋದರೆ ಅದರ ಫಲ ಅಷ್ಟಕ್ಕಷ್ಟೆ. ಜೀವನದ ಮೊದಲ ಹಂತದಿಂದಲೇ ಆ ಪ್ರಯತ್ನ ನಮ್ಮಲ್ಲಿರಬೇಕು. ಸರಳ, ಸಂಸ್ಕಾರಯುತವಾದ ಹಿತಮಿತ ಬಯಕೆಯ ಜೀವನ ವಿಧಾನ, ಸಹೃದಯತೆ, ಸನ್ನಡತೆ, ಪರೋಪಕಾರ, ಉಪಕಾರ ಸ್ಮರಣೆ, ಸಜ್ಜನರ ಸಾನಿಧ್ಯ ಮೊದಲಾದವುಗಳ ಜೊತೆಗೆ ಜೀವನದ ನಡೆಯನ್ನು ನಿಯಂತ್ರಿಸುವ ಮನಸ್ಸಿನ ಹಿಡಿತ… ಇವೆಲ್ಲ ಸರಿಯಾಗಿದ್ದರೆ ಮುಕ್ತಿ ಪಡೆಯಲು ಖಂಡಿತ ಸಾಧ್ಯವಿದೆ.
ಮುಕ್ತಿ : ಮುಕ್ತಿ ಎಂದರೆ ಬಿಡುಗಡೆ ಎಂದು ಅರ್ಥ. ಬದುಕೆಂಬುದು ಬಿಡುಗಡೆಯ ಹಾದಿ. ಹೂವು ಕೈಯಲ್ಲಿದೆ ಅದರ ಆಯಸ್ಸು ಒಂದು ದಿನ, ಅದನ್ನು ಸದ್ವಿನಿಯೋಗ ಮಾಡುವ ಮನಸ್ಸೇ ಮುಕ್ತಿಯ ಪಥ.
ವಿಷ್ಣು ಭಟ್ಟ ಹೊಸ್ಮನೆ