“ರಕ್ಷಾ ಬಂಧನ” ಹಬ್ಬವು ಅಣ್ಣ ತಂಗಿಯರ ಭಾಂಧವ್ಯದ ಸಂಕೇತವಾಗಿದೆ. ರಕ್ಷಾಬಂಧನ ಎಂಬ ಪದದ ಮೂಲ ಸಂಸ್ಕೃತದವಾಗಿದ್ದು ಇದರ ಅರ್ಥ ಹೆಸರೇ ಸೂಚಿಸುವಂತೆ “ರಕ್ಷಣೆಯ ಗಂಟು” ಎಂಬುದಾಗಿದೆ. ಈ ಹಬ್ಬವನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಿಸಿದರೂ ಕೂಡ ಎಲ್ಲರೂ ಬಣ್ಣ ಬಣ್ಣದ ದಾರದ ಎಳೆಗಳನ್ನು ಬಳಸಿಯೇ ಬಳಸುತ್ತಾರೆ. ಏಕೆಂದರೆ ಆ ಒಂದು ದಾರದ ಎಳೆಯು ಅಣ್ಣ ತಂಗಿಯರ ಸಂಭಂದದ ದ್ಯೋತಕವಾಗಿದೆ. ಆ ದಾರವು ತಂಗಿಯಿಂದ ಅಣ್ಣನಿಗಾಗಿ ಉತ್ತಮ ಆರೋಗ್ಯ , ಸುಖ ಸೌಭಾಗ್ಯಗಳನ್ನು ಹರಿಸಿ ಹಾರೈಸುವುದಾಗಿದೆ. ಅಕ್ಕ ತಂಗಿಯರು ಅಣ್ಣ ತಮ್ಮಂದಿರ ಹಣೆಗೆ ತಿಲಕವನಿತ್ತು, ಬಲಗೈಗೆ ಈ ಬಂಧನದ ದಾರ “ರಾಖಿ”ಯನ್ನು ಕಟ್ಟಿ ಸಿಹಿಯನ್ನು ತಿನಿಸಿ , ಜೀವನದಲ್ಲಿ ಎಲ್ಲ ರೀತಿಯಿಂದಲೂ ಒಳ್ಳೆಯದಾಗಲಿ ಎಂದು ಹರಸುತ್ತಾ ಆರತಿಯನ್ನು ಮಾಡುತ್ತಾರೆ. ಹಾಗೆಯೇ ಅಣ್ಣ ತಮ್ಮಂದಿರು ಅಕ್ಕ ತಂಗಿಯರ ಈ ಪ್ರೀತಿ ಹರಕೆಯ ಪ್ರತಿಯಾಗಿ ತಮ್ಮಿಂದ ಸಾಧ್ಯವಾದ ಉಡುಗೊರೆಯನ್ನು ನೀಡುತ್ತಾರೆ.
ರಕ್ಷಾ ಬಂಧನದ ಮೂಲ:
ಈ ರಕ್ಷಾಬಂಧನದ ಇತಿಹಾಸ ಅಷ್ಟಿಷ್ಟಲ್ಲ 326 ಬಿಸಿ ಜಗತ್ಪ್ರಸಿದ್ದ ಅಲೆಕ್ಸಾಂಡರ್ ನ ಕಾಲದಿಂದಲೂ ಇದೆಯಂತೆ. ಇನ್ನು ಹಿಂದೂ ಸಂಪ್ರದಾಯದಲ್ಲಂತೂ ಈ ಹಬ್ಬದ ವಿಶಿಷ್ಟತೆಯನ್ನು ಸಾರುವ ಪೌರಾಣಿಕ ಕಥೆಗಳೇ ಇದೆ.
ಭವಿಷ್ಯ ಪುರಾಣದಲ್ಲಿ ಇಂದ್ರನು ಬಾಲಿಯ ಜೊತೆಗೆ ಯುದ್ಧಕ್ಕೆ ತೆರಳುವಾಗ ಇಂದ್ರನ ಸತಿಯು ಅವನ ಬಲಗೈಗೆ ರಾಖಿಯನ್ನು ಕಟ್ಟಿ ಯುದ್ಧದಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸುತ್ತಾಳೆ. ಹಾಗಾದರೆ ಈ ಹಬ್ಬವು ಕೇವಲ ಅಣ್ಣ ತಂಗಿಯರಿಗೆ ಸೀಮಿತವಾದುದಲ್ಲ.
ಇನ್ನು ಭಗವತ್ ಪುರಾಣ ಮತ್ತು ವಿಷ್ಣುಪುರಾಣದಲ್ಲಿ ವಿಷ್ಣುವು ಬಾಲಿ ರಾಜನಿಂದ ಮೂರು ಲೋಕಗಳನ್ನು ಜಯಿಸಿದ ನಂತರ ಬಾಲಿ ರಾಜನು ವಿಷ್ಣುವಿಗೆ ತನ್ನ ಅರಮನೆಯಲ್ಲಿ ತಂಗಲು ತಿಳಿಸುತ್ತಾನೆ.ಆದರೆ ಲಕ್ಷ್ಮಿ ದೇವಿಯು ಈ ವಿಚಾರವಾಗಿ ಅಸಮಾಧಾನವನ್ನು ವ್ಯಕ್ತಪಡಿಸುತ್ತಾಳೆ ನಂತರ ಬಾಲಿ ರಾಜನನ್ನು ತನ್ನ ಅಣ್ಣನೆಂದು ಅವನ ಕೈಗೆ ರಾಖಿಯನ್ನು ಕಟ್ಟುತ್ತಾಳೆ. ಈ ಪ್ರೀತಿ, ಆದರಕ್ಕೆ ಮನಸೋತು ಬಾಲಿ ರಾಜನು ನಿನಗೇನು ಬೇಕು ಕೇಳು ತಂಗಿ ಎನ್ನುತ್ತಾನೆ.ಆಗ ಲಕ್ಷ್ಮಿಯು ತನ್ನ ಪತಿ ವಿಷ್ಣುವು ತನ್ನ ಮನೆಗೆ ಮರಳಬೇಕೆಂದು ಕೋರುತ್ತಾಳೆ.
ಇನ್ನೊಂದು ಕಥೆಯ ಪ್ರಕಾರ ,ಈ ಹಬ್ಬದಂದು ಗಣೇಶನ ಮನೆಗೆ ಅವನ ತಂಗಿಯಾದ ದೇವಿ ಮಾನಸ ಬರುತ್ತಾಳೆ ಮತ್ತು ಅವನ ಕೈಗೆ ಈ ರಕ್ಷಣೆಯ ದಾರವನ್ನು ಕಟ್ಟುತ್ತಾಳೆ. ಆಗ ಗಣೇಶನ ಮಕ್ಕಳಾದ ಶುಭ- ಲಾಭ ತುಂಬಾ ಸಂತಸಪಡುತ್ತಾರೆ ಹಾಗೆಯೇ ತಮಗೆ ತಂಗಿಯಿಲ್ಲ ವೆಂದು ಕ್ರೋಧ ವ್ಯಕ್ತಪಡಿಸುತ್ತಾರೆ. ಅವರಿಬ್ಬರೂ ಸೇರಿ ಅಪ್ಪ ಗಣಪನಲ್ಲಿ ತಮಗೂ ರಕ್ಷಾಬಂಧನ ಹಬ್ಬವನ್ನು ಆಚರಿಸಲು ಒಬ್ಬ ತಂಗಿ ಬೇಕೆಂದು ವಿನಂತಿಸಿಕೊಳ್ಳುತ್ತಾರೆ. ಇವರಿಬ್ಬರ ಕೋರಿಕೆಗೆ ಗಣಪನು ಒಲಿದು “ಸಂತೋಷಿ ಮಾ” ಳ ಸೃಷ್ಟಿಯಾಗುತ್ತದೆ. ಶುಭ, ಲಾಭ ಮತ್ತು ಸಂತೋಷಿ ಮಾ ತದನಂತರ ಪ್ರತಿವರ್ಷ ರಕ್ಷಾಬಂಧನದ ಆಚರಣೆಯನ್ನು ಮುಂದುವರೆಸುತ್ತಾರೆ.
ಇನ್ನೂ ಒಂದು ಕಥೆ ಇದೆ ಅದು ,ಕೃಷ್ಣ ಮತ್ತು ದ್ರೌಪದಿಯ ಕಥೆ. ಕೃಷ್ಣ ಮತ್ತು ದ್ರೌಪದಿ ಒಳ್ಳೆಯ ಸ್ನೇಹಿತರು. ಯುದ್ಧದಲ್ಲಿ ಕೃಷ್ಣನ ಬೆರಳಿಗೆ ಗಾಯವಾದಾಗ ದ್ರೌಪದಿಯು ತನ್ನ ಸೀರೆಯ ಅಂಚನ್ನು ಹರಿದು ಗಾಯಕ್ಕೆ ಕಟ್ಟುತ್ತಾಳೆ. ಈ ಋಣವನ್ನು ತೀರಿಸುವ ನಿಟ್ಟಿನಲ್ಲಿ ಕೃಷ್ಣನು ದ್ರೌಪದಿಗೆ ಸದಾ ರಕ್ಷಣೆಯ ಮಾತನ್ನು ನೀಡುತ್ತಾನೆ. ಮುಂದೆ ಮಹಾಭಾರತ ಯುದ್ಧಕ್ಕೆ ತೆರಳುವಾಗ ದ್ರೌಪದಿಯು ಕೃಷ್ಣನಿಗೆ ರಾಖಿಯನ್ನು ಕಟ್ಟಿ ಕಳಿಸುತ್ತಾಳೆ ಅದೇ ರೀತಿ ಕುಂತಿಯು ಅಭಿಮನ್ಯುವಿಗೆ ರಾಖಿಯನ್ನು ಕಟ್ಟಿ ಯುದ್ಧದಲ್ಲಿ ನಿನಗೆ ಜಯವಾಗಲಿ ಎಂದು ಹರಸುತ್ತಾಳೆ.
ಹೀಗೆ ಸಾಂಪ್ರದಾಯಿಕ ಹಿನ್ನೆಲೆಯನ್ನು ಹೊಂದಿದ ಈ ಹಬ್ಬವನ್ನು ನಾವು ಇಂದಿಗೂ ಅಣ್ಣ ತಮ್ಮ ಅಕ್ಕ ತಂಗಿಯರ ಭಾಂಧವ್ಯವನ್ನು ರಕ್ಷಿಸಿಕೊಂಡು ಒಬ್ಬರು ಇನ್ನೊಬ್ಬರ ಕಷ್ಟಕಾಲದಲ್ಲಿ ನಿಂತು ಸಹಾಯ ಸಹಕಾರದಿಂದ ನೆರವಾಗಿ ಈ ಸಂಬಂಧವನ್ನು ಗಟ್ಟಿಗೊಳಿಸಿ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಈ ನಿಟ್ಟಿನಲ್ಲಿ ಜಗತ್ತಿನ ಎಲ್ಲ ಅಣ್ಣ ತಮ್ಮಂದಿರು ಅಕ್ಕ ತಂಗಿಯರಿಗೆ ರಕ್ಷಾಬಂಧನ ಹಬ್ಬದ ಹಾರ್ದಿಕ ಶುಭಹಾರೈಕೆಗಳು.
*ಜಯಶ್ರೀ ಚಬ್ಬಿ, ಮಸ್ಕ್ ತ್