Advertisement

ಯುವಿ, ರೈನಾಗಿರುವ ಭರವಸೆಯಾದರೂ ಏನು?

12:30 AM Feb 16, 2019 | Team Udayavani |

ಕೆಲವು ಆಟಗಾರರಿಗೆ ಅದೇಕೆ ಹಾಗಾಗುತ್ತದೋ ಗೊತ್ತಿಲ್ಲ. ಅವರಿಲ್ಲ ಪ್ರತಿಭೆಯಿಲ್ಲವಾ ಎಂದರೆ, ನಿಸ್ಸಂಶಯವಾಗಿ ಅವರು ದಂತಕಥೆಗಳು. ತಂಡಕ್ಕಾಗಿ ಅವರ ಕೊಡುಗೆ ಏನು ಎಂದು ಕೇಳಿದರೆ, ಅಸಾಮಾನ್ಯ ಇನಿಂಗ್ಸ್‌ಗಳ ಸರಮಾಲೆಯನ್ನೇ ತಂದುನಿಲ್ಲಿಸಬಹುದು. ಆದರೂ ಯಾಕೋ, ಇದ್ದಕ್ಕಿದ್ದಂತೆ ತೆರೆಮರೆಗೆ ಸರಿಯುತ್ತಾರೆ. ಇದ್ದಕ್ಕಿದ್ದಂತೆ ಕಳೆಗುಂದಿದಂತೆ ಕಾಣುತ್ತಾರೆ. ಮತ್ತೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಮಾಡುವ ಎಲ್ಲ ಯತ್ನಗಳು ವ್ಯರ್ಥವಾಗುತ್ತವೆ. ಸಾಕಷ್ಟು ಅವಕಾಶ ಸಿಕ್ಕರೂ ನಿರೀಕ್ಷಿತ ಪ್ರದರ್ಶನ ನೀಡಲು ವಿಫ‌ಲರಾಗುತ್ತಾರೆ. ಎಲ್ಲೋ ಅಲ್ಲಲ್ಲಿ ಮತ್ತೆ ಹಳೆಯ ವೈಭವಕ್ಕೆ ಮರಳಿದರು ಎಂದುಕೊಳ್ಳುತ್ತಿರುವಾಗಲೇ, ವೈಫ‌ಲ್ಯವೋ, ದುರದೃಷ್ಟವೋ…ಒಟ್ಟಿನಲ್ಲಿ ಅವರನ್ನಿಟ್ಟುಕೊಂಡರೆ ಉಪಯೋಗವಿಲ್ಲ ಎಂಬ ಸ್ಥಿತಿಗೆ ಬರುತ್ತಾರೆ.

Advertisement

ಪ್ರಸ್ತುತ ಇಂತಹ ಸ್ಥಿತಿಗೆ ತಲುಪಿರುವುದು ಯುವರಾಜ್‌ ಸಿಂಗ್‌, ಸುರೇಶ್‌ ರೈನಾ, ಗೌತಮ್‌ ಗಂಭೀರ್‌, ಹರ್ಭಜನ್‌ ಸಿಂಗ್‌. ಈ ನಾಲ್ವರಲ್ಲಿ 2011ರ ವಿಶ್ವಕಪ್‌ ಗೆಲ್ಲಲು ಮಹತ್ವದ ಪಾತ್ರವಹಿಸಿರುವ ಗೌತಮ್‌ ಗಂಭೀರ್‌ ನಿವೃತ್ತಿ ಹೇಳಿಯಾಯಿತು.  ಇನ್ನು ಕಾದರೆ ಪ್ರಯೋಜನವಿಲ್ಲ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ಯಾವ ಸಾಧ್ಯತೆಯೂ ಇಲ್ಲ; ಎಂಬುದು ಅವರಿಗೂ ಸೇರಿದಂತೆ ಎಲ್ಲರಿಗೂ ಮನವರಿಕೆಯಾಗಿತ್ತು. ವಿಶೇಷವೆಂದರೆ ಯುವರಾಜ್‌ ಸಿಂಗ್‌, ಗೌತಮ್‌ ಗಂಭೀರ್‌ ಸಮವಯಸ್ಕರು. ಇಬ್ಬರಿಗೂ ಈಗ 37 ವರ್ಷ. ಆದರೆ ಕ್ರಿಕೆಟ್‌ ಪ್ರವೇಶವನ್ನು ಪರಿಗಣಿಸಿದರೆ, ಯುವರಾಜ್‌ ಸಿಂಗ್‌, ಗಂಭೀರ್‌ಗಿಂತ ಬಹಳ ಹಿರಿಯ. ಗಂಭೀರ್‌ ತಂಡಕ್ಕೆ ಬರುವ ಹೊತ್ತಿಗಾಗಲೇ ಯುವರಾಜ್‌, ವಿಶ್ವವಿಖ್ಯಾತರಾಗಿದ್ದರು. ಯುವಿ 2000ನೇ ವರ್ಷದಲ್ಲಿ ಏಕದಿನ ಕ್ರಿಕೆಟ್‌ ಮೂಲಕ ಪದಾರ್ಪಣೆ ಮಾಡಿದರೆ, ಗಂಭೀರ್‌ 2003ರಲ್ಲಿ ಪದಾರ್ಪಣೆ ಮಾಡಿದರು. ಈ ಇಬ್ಬರ ಪ್ರವೇಶದ ವೇಳೆಗೆ ಇನ್ನೂ ಟಿ20 ಕ್ರಿಕೆಟ್‌ ಅಬ್ಬರ ಇರಲಿಲ್ಲ. ಟಿ20ಗೆ ಹೇಳಿ ಮಾಡಿಸಿದ ಕ್ರಿಕೆಟಿಗರೇ ಆಗಿದ್ದರೂ, ಅದಕ್ಕೆ ಅವಕಾಶ ಸಿಕ್ಕಿದ್ದು ಸ್ವಲ್ಪ ತಡವಾಗಿ. 

ಹೆಚ್ಚು ಕಡಿಮೆ ಇಬ್ಬರಿಗೂ ಏಕಕಾಲದಲ್ಲಿ ತಾವಿನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವುದು ಸಾಧ್ಯವಿಲ್ಲ ಎನ್ನುವುದು ಖಚಿತವಾಯಿತು. 2017 ಅನ್ನುವಷ್ಟರಲ್ಲಿ ವಿಷಯ ಅವರಿಗೆ ಮಾತ್ರವಲ್ಲ, ಕ್ರಿಕೆಟ್‌ ಅಭಿಮಾನಿಗಳಿಗೂ ಸ್ಪಷ್ಟವಾಗಿತ್ತು. ಭಾರತೀಯ ಕ್ರಿಕೆಟ್‌ನಲ್ಲಿ  ಸ್ಥಾನಕ್ಕಾಗಿ ಇರುವ ಪ್ರಬಲ ಪೈಪೋಟಿಯೇ ಇದಕ್ಕೆ ಕಾರಣ. ಇಷ್ಟಾದರೂ ಈ ಕ್ರಿಕೆಟಿಗರು ಭರವಸೆಯಿಟ್ಟುಕೊಂಡಿದ್ದರು, ಎಲ್ಲೋ ಒಮ್ಮೆ ಅವಕಾಶ ಸಿಕ್ಕಿದರೆ ಮತ್ತೆ ಆಡಬಹುದೇನೋ ಎಂಬ ಆಸೆ ಇತ್ತು. ಕಳೆದ ವರ್ಷದ ಕೊನೆಗೆ ಗೌತಮ್‌ ಗಂಭೀರ್‌ ಎಲ್ಲ ರೀತಿಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದರು. ಯುವರಾಜ್‌ ಸಿಂಗ್‌ ಮಾತ್ರ ಕಾಯುತ್ತಿದ್ದಾರೆ. ಅವರ ಸ್ಥಿತಿ ಹೇಗಿದೆÁಂದರೆ, ಐಪಿಎಲ್‌ನಲ್ಲೂ ಸ್ಥಾನ ಉಳಿಸಿಕೊಳ್ಳುವುದು ಕಷ್ಟಸಾಧ್ಯ ಎನ್ನುವಂತಾಗಿದೆ. 2019ರ ಐಪಿಎಲ್‌ ಹರಾಜಿನ ಮೊದಲ ಸುತ್ತಿನಲ್ಲಿ ಅವರನ್ನು ಕೊಳ್ಳುವವರೇ ಇಲ್ಲವಾಗಿತ್ತು. 2ನೇ ಬಾರಿ ಹಾಗೂ ಹೀಗೂ ಮೂಲಬೆಲೆ 1 ಕೋಟಿ ರೂ.ಗೆ ಅವರನ್ನು ಮುಂಬೈ ಇಂಡಿಯನ್ಸ್‌ ಖರೀದಿಸಿತು.

ಅವರು ಯಾಕೆ ನಿವೃತ್ತಿ ಹೇಳುತ್ತಿಲ್ಲ? ಐಪಿಎಲ್‌ಗ‌ೂ ಸೇರಿ ಎಲ್ಲ ರೀತಿಯ ಕ್ರಿಕೆಟ್‌ಗೆ ಒಂದೇ ಬಾರಿ ನಿವೃತ್ತಿ ಹೇಳ್ಳೋಣವೆಂದು ಕಾಯುತ್ತಿದ್ದಾರೋ? ಬಹುತೇಕ ನಿವೃತ್ತಿಯೇ ಆದಂತಿರುವ ಅವರಿಗೆ ಈ ಶಿಷ್ಟಾಚಾರಗಳಲ್ಲಿ ಆಸಕ್ತಿ ಹೋಗಿದೆಯೋ?

ಹಾಗೆ ನೋಡಿದರೆ, ಯುವರಾಜ್‌ ಸಿಂಗ್‌ಗೆ ತಂಡದಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳಲು ಬೇಕಾದಷ್ಟು ಅವಕಾಶ ಸಿಕ್ಕಿದೆ. ಅವರು ಅದಕ್ಕೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ ಅಷ್ಟೇ. 2011ರ ವಿಶ್ವಕಪ್‌ನಲ್ಲಿ ವಿಜೃಂಭಿಸಿ, ಸರಣಿ ಶ್ರೇಷ್ಠರಾದ ನಂತರ ಅವರು ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಗೊಳಗಾದರು. ಮತ್ತೆ ಕ್ರಿಕೆಟ್‌ಗೆ ಮರಳಿದರೂ, ಅವರ ಎಂದಿನ ನಿಖರ ಹೊಡೆತ, ಅದ್ಭುತ ಕ್ಷೇತ್ರರಕ್ಷಣೆ ಮಾಯವಾಗಿತ್ತು. ನಿಮಗೆ ಗೊತ್ತಿರಲಿ, 2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ಪನ್ನು ಭಾರತ ಗೆದ್ದಿದ್ದೇ ಯುವರಾಜ್‌ರಿಂದ. ಆ ಕೂಟದಲ್ಲಿ ಅವರು ಸತತ 6 ಸಿಕ್ಸರ್‌ ಬಾರಿಸಿ ವಿಶ್ವದಾಖಲೆ ನಿರ್ಮಿಸಿರುವುದು, ಈಗಲೂ ಅಭಿಮಾನಿಗಳಿಗೆ ಹೃದಯಸ್ಪರ್ಶಿ ನೆನಪು. 

Advertisement

ಧೋನಿ ನಾಯಕತ್ವ ತೊರೆದ ನಂತರ ಮರೆಗೆ ಸರಿದ ರೈನಾ

ಯುವರಾಜ್‌ ಸಿಂಗ್‌, ಗೌತಮ್‌ ಗಂಭೀರ್‌ಗೆ ಹೋಲಿಸಿದರೆ ಸುರೇಶ್‌ ರೈನಾಗೆ ಇನ್ನೂ 32 ವರ್ಷ. ಅವರು ಅಸಾಮಾನ್ಯ ಕ್ಷೇತ್ರರಕ್ಷಕ ಮಾತ್ರವಲ್ಲ, ಏಕಾಂಗಿಯಾಗಿ ತಂಡವನ್ನು ಗೆಲ್ಲಿಸಬಲ್ಲ ಸ್ಫೋಟಕ ಬ್ಯಾಟ್ಸ್‌ಮನ್‌. ಅವರಿಗಿರುವ ಏಕೈಕ ದೋಷ, ಶಾರ್ಟ್‌ಪಿಚ್‌ ಎಸೆತ, ಬೌನ್ಸರಗಳ ಮುಂದೆ ತಡಕಾಡುವುದು. ಈ ದೌರ್ಬಲ್ಯವೇ ಅವರನ್ನು ತಂಡದಿಂದ ಹೊರಹಾಕಿದೆಯೋ ಎಂಬ ಅನುಮಾನವೂ ಬರುತ್ತದೆ. ಇದೇನೇ ಇರಲಿ, ಅಸಾಧ್ಯ ಎನ್ನುವ ಸನ್ನಿವೇಶ ಇದ್ದಾಗಲೂ ಅವರು ಭಾರತವನ್ನು ಗೆಲ್ಲಿಸಿದ್ದಾರೆ. ಅವನ್ನೆಲ್ಲ ಮರೆಯಲಾದೀತೆ?

2005ರಲ್ಲಿ ಶ್ರೀಲಂಕಾ ವಿರುದ್ಧ ಡಂಬುಲ್ಲಾದಲ್ಲಿ ನಡೆದ ಏಕದಿನ ಪಂದ್ಯದ ಮೂಲಕ, ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್‌ ಪ್ರವೇಶಿಸಿದರು. ಧೋನಿ ನಾಯಕತ್ವದಡಿಯಲ್ಲಿ ಭಾರತ ತಂಡದ ಪ್ರಮುಖ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿದ್ದರು. ಧೋನಿ ಟೆಸ್ಟ್‌ ತಂಡಕ್ಕೆ ದಿಢೀರನೆ ನಿವೃತ್ತಿ ಹೇಳಿದ ತರುವಾಯ, ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನದಲ್ಲಿ ಬಾಗಿಲುಗಳು ಮುಚ್ಚಿಕೊಳ್ಳತೊಡಗಿದವು. ಧೋನಿ ಸೀಮಿತ ಓವರ್‌ಗಳ ನಾಯಕತ್ವಕ್ಕೆ ವಿದಾಯ ಹೇಳಿದ ಬಳಿಕ, ರೈನಾ ಬದುಕು ಅಸ್ಥಿರವಾಯಿತು. ಧೋನಿಯ ನಿಷ್ಠಾವಂತರು ಎಂದು ಕರೆಸಿಕೊಂಡಿದ್ದ ಸುರೇಶ್‌ ರೈನಾ, ರವೀಂದ್ರ ಜಡೇಜ, ಆರ್‌.ಅಶ್ವಿ‌ನ್‌ ಮೂವರೂ ಸ್ಥಾನಕ್ಕಾಗಿ ಹೋರಾಡಬೇಕಾದ ಸ್ಥಿತಿಯಿದೆ. ಈ ಮೂವರ ಪೈಕಿ ರೈನಾ ಸಂಪೂರ್ಣ ಕಡೆಗಣಿಸಲ್ಪಟ್ಟಿದ್ದರೆ, ಅಶ್ವಿ‌ನ್‌-ಜಡೇಜ ಬಹುತೇಕ ಟೆಸ್ಟ್‌ ತಂಡಕ್ಕೆ ಸೀಮಿತಗೊಂಡಿದ್ದಾರೆ. ಇದ್ದಿದ್ದರಲ್ಲಿ ಜಡೇಜ ಮಾತ್ರ ಈ ಬಾರಿಯ ವಿಶ್ವಕಪ್‌ನಲ್ಲಿ ಆಡುವ ವಿಶ್ವಾಸ ಹೊಂದಿರುವುದು.

ರೈನಾ ವಿಚಾರಕ್ಕೆ ಬಂದರೆ, ಅವರ ಫಿಟೆ°ಸ್‌ ಬಗ್ಗೆ ಅನುಮಾನಗಳಿದ್ದವು. ಇನ್ನೊಮ್ಮೆ ಅವರು, ಕ್ರಿಕೆಟ್‌ಗಿಂತಲೂ ತನ್ನ ಮಗು ಮತ್ತು ಪತ್ನಿಯ ಬಗ್ಗೆಯೇ ಹೆಚ್ಚು ಆಸಕ್ತರಾಗಿದ್ದಾರೆ ಎಂಬಂತಹ ಆರೋಪಗಳನ್ನು ಮಾಡಲಾಯಿತು. ಇದಕ್ಕೆ ಸರಿಯಾಗಿ, 2018ರಲ್ಲಿ ಅವರಿಗೆ ಆಡಲು ಸಿಕ್ಕಿದ್ದೇ ಮೂರು ಏಕದಿನ ಪಂದ್ಯ ಮಾತ್ರ. ಇದಕ್ಕೂ ಮುನ್ನ ಅಂದರೆ 2015ರಲ್ಲಿ ಅವರು ಗರಿಷ್ಠ ಪಂದ್ಯಗಳನ್ನಾಡಿದರು. ಆಗಿನ್ನೂ  ಧೋನಿಯೇ ನಾಯಕರಾಗಿದ್ದರು! ಅನಿಲ್‌ ಕುಂಬ್ಳೆ ನಂತರ ಭಾರತ ಸ್ಪಿನ್‌ ಬೌಲಿಂಗ್‌ ಜಗತ್ತನ್ನು ಆಳುತ್ತಾರೆ ಎಂದು ಕರೆಸಿಕೊಂಡಿದ್ದ ಹರ್ಭಜನ್‌ ಸಿಂಗ್‌ ಬಗ್ಗೆ ಚರ್ಚೆಯೇ ಅಗತ್ಯವಿಲ್ಲ. ಅವರು ನಿವೃತ್ತಿ ಹೇಳಿದ್ದಾರೆನ್ನುವುದೇ ಹಲವರ ನಂಬಿಕೆಯಾಗಿದೆ!

ನಿರೂಪ

Advertisement

Udayavani is now on Telegram. Click here to join our channel and stay updated with the latest news.

Next