Advertisement

ಎಂಆರ್‌ಪಿಎಲ್‌ಗ‌ೂ ತಟ್ಟುವುದೇ ನೀರು ಕೊರತೆಯ ಬಿಸಿ?

02:29 AM May 05, 2019 | Sriram |

ಮಂಗಳೂರು: ಮುಂಗಾರು ಮಳೆ ಇನ್ನಷ್ಟು ದಿನ ವಿಳಂಬಿಸಿದರೆ ರಾಜ್ಯದ ಅತಿದೊಡ್ಡ ಕಚ್ಚಾ ತೈಲ ಸಂಸ್ಕರಣ ಘಟಕವಾದ ಎಂಆರ್‌ಪಿಎಲ್‌ನಲ್ಲಿ ಪೆಟ್ರೋಲ್, ಡೀಸೆಲ್ ಉತ್ಪಾದನೆ ಬಾಧಿತವಾಗಬಹುದು.

Advertisement

ಸದ್ಯ ವಾರ್ಷಿಕ ನಿರ್ವಹಣೆಗಾಗಿ ಎಂಆರ್‌ಪಿಎಲ್ ಮೂರನೇ ಹಂತದ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಲಭ್ಯ ನೀರನ್ನು ಬಳಸಿ ಒಂದು ಮತ್ತು ಎರಡನೇ ಹಂತಗಳು ಮಾತ್ರ ಕೆಲಸ ಮಾಡುತ್ತಿವೆ. ಮೇ ಮಧ್ಯಭಾಗದಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಿಗದಿದ್ದರೆ ಇವುಗಳೂ ಕಾರ್ಯಾಚರಣೆ ನಿಲ್ಲಿಸಬೇಕಾಗಬಹುದು.

ಬಂಟ್ವಾಳ ಸಮೀಪದ ಎಎಂಆರ್‌ ಡ್ಯಾಂ ಪಕ್ಕದ ಡ್ಯಾಂನಿಂದ ಎಂಆರ್‌ಪಿಎಲ್‌ನಲ್ಲಿ 6 ಎಂಜಿಡಿ ಮತ್ತು ವಿಶೇಷ ಆರ್ಥಿಕ ವಲಯಕ್ಕೆ 9 ಎಂಜಿಡಿಗಳಂತೆ ಒಟ್ಟು 15 ಎಂಜಿಡಿ ನೀರು ಸರಬರಾಜಾಗುತ್ತಿತ್ತು. ಮಂಗಳೂರಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುತ್ತಿದ್ದಂತೆ ಎ. 15ರಿಂದ ಕೈಗಾರಿಕೆಗಳಿಗೆ ನೀರು ಸರಬರಾಜನ್ನು ಜಿಲ್ಲಾಡಳಿತ ಹಂತಹಂತವಾಗಿ ಕಡಿತ ಮಾಡಿತ್ತು. ಸದ್ಯ 6.5 ಎಂಜಿಡಿ ಲಭಿಸುತ್ತಿದೆ.

ಈ ಬಾರಿ ಹೆಚ್ಚುವರಿ ಉತ್ಪಾದನೆ
ಎಂಆರ್‌ಪಿಎಲ್ ಮೂಲಗಳ ಪ್ರಕಾರ, ಪ್ರತೀ ವರ್ಷ ಒಂದೊಂದು ಹಂತವನ್ನು ನಿರ್ವಹಣೆಗಾಗಿ ಅಲ್ಪಕಾಲ ಸ್ಥಗಿತಗೊಳಿಸಲಾಗುತ್ತದೆ. ಪೂರೈಕೆಗೆ ಸಮಸ್ಯೆ ಆಗದಂತೆ ಹೆಚ್ಚುವರಿ ಉತ್ಪಾದಿಸಿ ದಾಸ್ತಾನು ಮಾಡಿಡಲಾಗಿದೆ. ಹೀಗಾಗಿ ಸದ್ಯ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಎದುರಾಗದು.

ಸಾಮಾನ್ಯ ಸ್ಥಿತಿಯಲ್ಲಿ ಎಂಆರ್‌ಪಿಎಲ್ ಪ್ರತಿದಿನ 2,500 ಟನ್‌ಎಲ್ಪಿಜಿ, 20 ಸಾವಿರ ಟನ್‌ ಡೀಸೆಲ್ ಮತ್ತು 2,500 ಟನ್‌ ಪೆಟ್ರೋಲ್ ಉತ್ಪಾದಿಸುತ್ತದೆ. ಒಂದು ಘಟಕ ತಾತ್ಕಾಲಿಕ ಸ್ಥಗಿತಗೊಂ ಡಿದ್ದರೂ ಉತ್ಪನ್ನ ಪೂರೈಕೆಯಲ್ಲಿ ಕೊರತೆಯಾಗಿಲ್ಲ, ದಾಸ್ತಾನಿನಿಂದ ಪೂರೈಸಲಾಗುತ್ತಿದೆ ಎನ್ನುತ್ತಾರೆ ಎಂಆರ್‌ಪಿಎಲ್ ಅಧಿಕಾರಿಗಳು.

Advertisement

ಹಿಂದೆಯೂ ಆಗಿತ್ತು!
2016ರಲ್ಲಿಯೂ ನೀರಿನ ಕೊರತೆಯಿಂದ ಸಮಸ್ಯೆ ಉಂಟಾಗಿತ್ತು. ಪೆಟ್ರೋಲ್, ಡೀಸೆಲ್ ಉತ್ಪಾದನೆ ಆ ವರ್ಷ ಶೇ. 30ರಿಂದ 40ರಷ್ಟು ಕಡಿಮೆಯಾಗಿತ್ತು. ಎಲ್ಪಿಜಿ ಉತ್ಪಾದನೆಯೂ ಕಡಿಮೆಯಾಗಿತ್ತು. 2012ರಲ್ಲೂ ಇಂತಹ ಸ್ಥಿತಿ ತಲೆದೋರಿ ಐದಾರು ದಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ಯಾಕೆ ನೀರು ಬೇಕು?
ಎಂಆರ್‌ಪಿಎಲ್ ನಿರ್ವಹಣೆಗೆ ದಿನಕ್ಕೆ 6 ಎಂಜಿ (ಮಿಲಿಯ ಗ್ಯಾಲನ್‌) ನೀರು ಬೇಕು. ಇದು ಸ್ಥಾವರದ ಕ್ಯಾಪ್ಟಿವ್‌ ಪವರ್‌ ಪ್ಲಾಂಟ್‌ನಲ್ಲಿ ವಿದ್ಯುತ್‌ ಉತ್ಪಾದಿಸಲು ಬಳಕೆಯಾಗುತ್ತದೆ. 300ರಿಂದ 400 ಡಿಗ್ರಿ ಸೆ. ಉಷ್ಣತೆಯಲ್ಲಿ ಕಚ್ಚಾ ತೈಲದ ಸಂಸ್ಕರಣೆ ನಡೆಯು ವಾಗ ತಂಪು ಕಾರಕವಾಗಿಯೂ ನೀರು ಅಗತ್ಯ. ಇದಕ್ಕಾಗಿ ಎಂಆರ್‌ಪಿಎಲ್ ನೇತ್ರಾವತಿಯಿಂದ ಮಾತ್ರವಲ್ಲದೆ ಕಾವೂರು ಒಳಚರಂಡಿ ಸಂಸ್ಕರಣ ಘಟಕದಿಂದಲೂ ನೀರು ಪಡೆಯುತ್ತಿದೆ. ಭವಿಷ್ಯದಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ತಣ್ಣೀರುಬಾವಿಯಲ್ಲಿ ರಾಜ್ಯದ ಮೊದಲ ಸಮುದ್ರ ನೀರು ಸಂಸ್ಕರಣ ಘಟಕ ನಿರ್ಮಾಣ ಆರಂಭಿಸಲಾಗಿದೆ.

ಕೊರತೆ ಎದುರಾಗದು

ಮಾರುಕಟ್ಟೆಗೆ ಪೂರೈಕೆ ಬಾಧಿತವಾಗದಂತೆ ಈಗಾಗಲೇ ಹೆಚ್ಚುವರಿ ಉತ್ಪಾದನೆ ನಡೆಸಿ ದಾಸ್ತಾನು ಮಾಡಲಾಗಿದೆ. ಲಭ್ಯ ನೀರಿನಲ್ಲಿ ಎರಡು ಹಂತಗಳು ಕಾರ್ಯಾಚರಿಸುತ್ತಿವೆ. ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳ ಲಾಗುವುದು.
– ಎಂ. ವೆಂಕಟೇಶ್‌,ವ್ಯವಸ್ಥಾಪಕ ನಿರ್ದೇಶಕರು, ಎಂಆರ್‌ಪಿಎಲ್
– ದಿನೇಶ್‌ ಇರಾ
Advertisement

Udayavani is now on Telegram. Click here to join our channel and stay updated with the latest news.

Next