ಬೆಂಗಳೂರು: ಆಡಳಿತಾರೂಢ ಬಿಜೆಪಿಯ ಸೋಲು ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟಿದೆ.
“ಪಕ್ಷದ ಸೋಲಿಗೆ ವೈಯಕ್ತಿಕ ಹೊಣೆ ಹೊರುತ್ತೇನೆ’ ಎಂದು ಔಪಚಾರಿಕ ಹೇಳಿಕೆ ನೀಡಿದ್ದಾರೆ. ಸೋಲಿನ ಜವಾಬ್ದಾರಿ ಒಪ್ಪಿಕೊಳ್ಳುವುದು ಅನಿವಾರ್ಯವೂ ಹೌದಾಗಿತ್ತು. ಸೋಲಿನ ನಂತರ ಬೊಮ್ಮಾಯಿ ಭವಿಷ್ಯವೇನೆಂಬ ಬಗ್ಗೆ ಪ್ರಶ್ನೆಗಳು ಹುಟ್ಟಿವೆ. ಅವರನ್ನು ಮರಳಿ ಶಾಸಕಾಂಗ ಪಕ್ಷ ನಾಯಕನಾಗಿ ಆಯ್ಕೆ ಮಾಡಬಹುದೇ ಎಂಬ ಕುತೂಹಲ ಸೃಷ್ಟಿಯಾಗಿದೆ.
ಬಿಜೆಪಿ ಮೂಲಗಳ ಪ್ರಕಾರ ಸದ್ಯಕ್ಕೆ ಯಾವುದೇ ಶಸ್ತ್ರಚಿಕಿತ್ಸೆಗೂ ಈಗ ಚರ್ಚೆ ನಡೆಯುತ್ತಿಲ್ಲ. ಹಾಲಿ ಪ್ರಕ್ರಿಯೆಗಳೆಲ್ಲ ಮುಗಿದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆ ಕರೆದು ಅಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪೈಕಿ ಯಾರೇ ಮುಖ್ಯಮಂತ್ರಿಯಾದರೂ ಪ್ರಬಲ ವಿಪಕ್ಷ ನಾಯಕನ ಅಗತ್ಯವಿರುತ್ತದೆ. ಈಗಿರುವ ನಾಯಕರುಗಳ ಪೈಕಿ ಸಂಸದೀಯ ಪಟ್ಟುಗಳನ್ನು ಚೆನ್ನಾಗಿ ಕರಗತ ಮಾಡಿಕೊಂಡ ಬೊಮ್ಮಾಯಿಗೆ ಆ ಸ್ಥಾನ ಲಭಿಸುವ ಸಾಧ್ಯತೆಯೂ ಇದೆ. ಅದು ಎಷ್ಟರ ಮಟ್ಟಿಗೆ ನಿಜವಾಗುತ್ತದೆ ಎಂಬುದರ ಮೇಲೆ ಬೊಮ್ಮಾಯಿ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಅದಿಲ್ಲವಾದರೆ ಕಾಮನ್ ಮ್ಯಾನ್ ಸಿಎಂ ಎಂದು ಸ್ವಯಂ ಬಿರುದು ಕಟ್ಟಕೊಂಡ ಬೊಮ್ಮಾಯಿ ಸಾಮಾನ್ಯ ಶಾಸಕರಾಗಷ್ಟೇ ಮುಂದುವರಿಯಬೇಕಾಗುತ್ತದೆ.
ಇದನ್ನೂ ಓದಿ:ಈ ಆಟಗಾರ ಶೀಘ್ರದಲ್ಲೇ ಭಾರತ ತಂಡದ ಪರವಾಗಿ ಆಡುತ್ತಾನೆ: ಮಾಜಿ ಕೋಚ್ ಶಾಸ್ತ್ರಿ
ಚುನಾವಣೆಯಲ್ಲಿ ತಮಗೆ ಪಕ್ಷ ನಿಗದಿಪಡಿಸಿದ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದ ಬೊಮ್ಮಾಯಿ ಸ್ವಕ್ಷೇತ್ರ ಶಿಗ್ಗಾಂವಿಗೆ ಹೆಚ್ಚಿನ ಸಮಯ ನೀಡಿದ್ದು ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ. ಅಂದಾಜು 10 ದಿನಗಳ ಕಾಲ ಶಿಗ್ಗಾಂವಿನಲ್ಲಿ ಪ್ರಚಾರ, ರೋಡ್‌ಶೋ ನಡೆಸಿದ್ದ ಅವರು ಇನ್ನಷ್ಟು ಕ್ಷೇತ್ರಗಳಿಗೆ ಸಮಯ ನೀಡಬಹುದಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಬೊಮ್ಮಾಯಿ ಸಿಎಂ ಆಗಿದ್ದರೂ, ಮಾಜಿ ಸಿಎಂ ಯಡಿಯೂರಪ್ಪ ಅವರನ್ನೇ ವರಿಷ್ಠರು ಹೆಚ್ಚಿಗೆ ಜಪಿಸಿದ್ದು ಸಾಕಷ್ಟು ಗೊಂದಲಗಳಿಗೆ ಎಡೆ ಮಾಡಿಕೊಟ್ಟಿತು.
ಗೃಹ ಸಚಿವ ಅಮಿತ್ ಶಾ ಅವರೇ ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪ ಮುಖ ನೋಡಿ ಬಿಜೆಪಿಗೆ ವೋಟ್ ಹಾಕಿ ಎಂದು ಪ್ರಚಾರ ಸಭೆಗಳಲ್ಲಿ ಬಹಿರಂಗವಾಗಿಯೇ ಹೇಳಿದ್ದು ಬಸವರಾಜ ಬೊಮ್ಮಾಯಿ ಅವರ ನಾಯಕತ್ವದ ಮೇಲೆ ನಕರಾತ್ಮಕ ಧೋರಣೆಗಳು ಇಲ್ಲವೇ ನಿರ್ಲಕ್ಷ್ಯದ ಭಾವನೆ ಮೂಡಿರಲೂಬಹುದು ಎಂಬ ರೀತಿಯ ಚರ್ಚೆಗಳು ನಡೆದವು.
ಅಂತಿಮವಾಗಿ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಹಾಗೂ ಅಧಿಕಾರ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ, ಅವರ ಭವಿಷ್ಯ ಬಿಜೆಪಿ ಹೈಕಮಾಂಡ್ ನಿರ್ಧಾರದ ಮೇಲೆ ನಿಂತಿದೆ.