ಎಲ್ಲರಲ್ಲಿರುವುದು ಒಂದೇ ಧರ್ಮ,
ಧರ್ಮದಲ್ಲಿಲ್ಲ ಸಂಕೋಚ ಕರ್ಮ.
ಧರ್ಮದ ಮರ್ಮವನು ಅರಿಯಂದ
ನಮ್ಮ ಮೃಡಗಿರಿ ಅನ್ನದಾನೀಶ
ಈ ವಚನ ಸಾರ್ವಕಾಲಿಕ ಸತ್ಯವನ್ನೇ ಪ್ರತಿಪಾದಿಸಿದೆ. ಮಾನವ, ಶಿವನ ಸೃಷ್ಟಿ. ಜಾತಿ- ಮತಗಳ ಸೃಷ್ಟಿ ಮಾನವನದು. ಎಲ್ಲರಲ್ಲಿರುವ ಧರ್ಮ ಒಂದೇಯಾಗಿದೆಯಲ್ಲದೆ, ಧರ್ಮ ತತ್ವದಲ್ಲಿ ಸಂಕೋಚ ಇರುವುದಿಲ್ಲ. ನೀತಿ- ನಿಯಮಗಳಲ್ಲಿ ವ್ಯತ್ಯಾಸ ಇರುವುದಿಲ್ಲ. ಜೀವನದ ಅಭ್ಯುದಯ ಹಾಗೂ ಮುಕ್ತಿಯ ನಿಲುವನ್ನು ತೋರಿಸುವುದೇ ಧರ್ಮವಾದ್ದರಿಂದ, ನಮ್ಮ ಗುರಿಯಲ್ಲಿ ಅಭಿನ್ನತೆ ಇರುತ್ತದೆ. ಒಂದು ಊರಿಗೆ ಬೇರೆ ಬೇರೆ ದಿಕ್ಕಿನಿಂದ ವಿಭಿನ್ನ ಮಾರ್ಗಗಳು ಹರಿದು ಬಂದಿದ್ದರೂ, ಎಲ್ಲ ದಾರಿ ಸೇರುವುದು ಒಂದೇ ನಗರಕ್ಕಲ್ಲವೇ?
ಹಲವು ನಾಮಗಳಿಂದ ಕೂಡಿದ ಒಬ್ಬ ದೇವರನ್ನು ಕೂಡುವ ಬಗೆಯೇ ಧರ್ಮಪಥವೆನಿಸಿದೆ. ಧರ್ಮವು ಮಾನವರನ್ನು ಒಗ್ಗೂಡಿಸಿದರೆ, ಜಾತಿ- ಮತಗಳು ಅಂತರಗೊಳಿಸುತ್ತವೆ. ಅಜ್ಞಾನದಿಂದಲೂ, ಸ್ವಾರ್ಥ ಸಾಧನೆ ಯಿಂದಲೂ ಧರ್ಮ- ದೇವರ ಹೆಸರಿನಿಂದ ಕಲುಷಿತ ವಾತಾವರಣ ವನ್ನು ಹರಡುವುದು ಸರಿಯೆನಿಸದು. ವಿಚಾರವಂತರು ಇಂಥ ಪ್ರಸಂಗಗಳಿಗೆ ಅವಕಾಶ ಕೊಡಬಾರದು. ಕೆಲವರು ವ್ಯಕ್ತಿ ಪ್ರತಿಷ್ಠೆಗಾಗಿ ವಾದ-ವಿವಾದಗಳಲ್ಲಿ ಸಮಯವನ್ನು ವ್ಯರ್ಥಗೊಳಿಸುವರು.
ಒಬ್ಬ ಮಹಾರಾಜ, ಧರ್ಮಶಾಸ್ತ್ರಗಳನ್ನು ಅಭ್ಯಸಿಸಿ ತಾನೇ ಜಾಣನೆಂದು ಭಾವಿಸಿದ್ದ. ಪಂಡಿತರಿಗೆ ಪುರಸ್ಕಾರ ಕೊಡುವುದಾಗಿ ಪ್ರಚಾರ ಮಾಡಿ, ಅವರನ್ನು ವಾದ- ವಿವಾದಗಳಲ್ಲಿ ಸೋಲಿಸಿ, ಯಾರಿಗೂ ಏನನ್ನೂ ಕೊಡುತ್ತಿರಲಿಲ್ಲ. ಹೀಗೆ ಬಹಳ ಜನರು ನಿರಾಶೆಯಿಂದ ಹಿಂತಿರುಗುತ್ತಿದ್ದರು. ಒಮ್ಮೆ ಮಹಾಜ್ಞಾನಿಯಾದ ಸಂತನೊಬ್ಬನು ಆ ನಗರಕ್ಕೆ ಆಗಮಿಸುವನು. ರಾಜನ ವರ್ತನೆಯನ್ನು ಕೇಳಿ ತಿಳಿದು, ರಾಜನಿಗೆ ಸರಿಯಾದ ಬುದ್ಧಿ ಕಲಿಸಬೇಕೆಂದು ಅರಮನೆಗೆ ಹೋಗುವನು.
ಮಹಾರಾಜ ತನಗೆ ಉಪದೇಶ ನೀಡಬೇಕೆಂದು ಕೇಳಿಕೊಂಡಾಗ, ಸನ್ಯಾಸಿಯು- “ಧರ್ಮೋಪದೇಶಕ್ಕೆ ರಾಜಭವನ ಸರಿಯಾದ ಸ್ಥಳವಲ್ಲ. ನಿರಾಹಾರಿಯಾಗಿ ನದಿ ತೀರದಲ್ಲಿ ಪ್ರಶಾಂತ ಸ್ಥಾನದಲ್ಲಿ ತತ್ತ್ವೋಪದೇಶ ಮಾಡೋಣ’ ಎಂದಾಗ, ಅದಕ್ಕೆ ಒಪ್ಪುತ್ತಾನೆ. ನಿರ್ಜನ ಪ್ರದೇಶಕ್ಕಾಗಿ ಇಬ್ಬರೂ ದೋಣಿ ಮೂಲಕ ಹೊಳೆ ದಾಟಬೇಕು. ಇನ್ನೇನು ದೋಣಿಯಲ್ಲಿ ಕೂರಬೇಕು ಎನ್ನುವಾಗ, ಸನ್ಯಾಸಿಯು, “ಈ ದೋಣಿ ಚೆನ್ನಾಗಿಲ್ಲ. ಬೇರೆ ತರಿಸಿರಿ’ ಎನ್ನುತ್ತಾನೆ.
ಹೀಗೆ ಮೂರ್‍ನಾಲ್ಕು ದೋಣಿಗಳು ಬಂದರೂ, ಸನ್ಯಾಸಿಗೆ ಅವು ಇಷ್ಟವಾಗುವುದಿಲ್ಲ. ರಾಜನಿಗೆ ಸಿಟ್ಟು ಬರುತ್ತದೆ. “ಹೊಳೆ ದಾಟಲು ಯಾವ ದೋಣಿಯಾದರೇನು? ಒಳಗೆ ತೂತಿಲ್ಲದಿದ್ದರೆ ಸಾಕು, ನದಿಯನ್ನು ದಾಟಬಹುದು’ ಎನ್ನುತ್ತಾನೆ, ಮಹಾರಾಜ. ಆಗ ಸನ್ಯಾಸಿ, “ಬದುಕೂ ಹಾಗೆಯೇ ಅಲ್ಲವೇ? ಮನುಷ್ಯನ ಜಾತಿ ಯಾವುದಾದರೇನು? ಧಾರ್ಮಿಕ ವಿಚಾರದಲ್ಲಿ ಒಣಪ್ರತಿಷ್ಠೆಯು ಜೀವನ ಸಾರ್ಥಕತೆಗೆ ಅಡ್ಡಿಯಾಗುತ್ತದೆ’ ಎಂದು ಬುದ್ಧಿಮಾತು ಹೇಳುತ್ತಾನೆ.
* ಶ್ರೀ ಮ.ನಿ.ಪ್ರ. ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು, ಸಂಸ್ಥಾನಮಠ, ಮುಂಡರಗಿ