ಬೆಂಗಳೂರು: ಪ್ರತ್ಯೇಕ ರಾಜ್ಯದ ಬೇಡಿಕೆಗೆ ಸಂಬಂಧಿಸಿದಂತೆ ಆರೋಪ, ಪ್ರತ್ಯಾರೋಪಗಳು ಆಡಳಿತ ಮತ್ತು ವಿಪಕ್ಷಗಲ ನಡುವೆ ತಾರಕ್ಕೇರಿದ್ದು, ಏತನ್ಮಧ್ಯೆ ಏಕೀಕೃತ ಕರ್ನಾಟಕ ಒಡೆಯಲು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರು ಷಡ್ಯಂತ್ರ ನಡೆಸಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಗಂಭೀರವಾಗಿ ಆರೋಪಿಸಿದ್ದಾರೆ.
ಎಚ್.ಡಿ.ದೇವೇಗೌಡರ ಅನುಮತಿ ಇಲ್ಲದೆ ಈ ರೀತಿ ಕುಮಾರಸ್ವಾಮಿ ಹೇಳಲು ಸಾಧ್ಯವೇ ಎಂದು ಬಿಎಸ್ ವೈ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ. ಈವರೆಗೂ ಎಂದಿಗೂ ಪ್ರತ್ಯೇಕತೆ ಕೂಗು ಬಂದಿರಲಿಲ್ಲವಾಗಿತ್ತು. ಜಾತಿ ವಿಷ ಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಈ ಹಿಂದೆ ವೀರಶೈವ ಲಿಂಗಾಯತ ಪ್ರತ್ಯೇಕತೆ ಮಾಡಲು ಕಾಂಗ್ರೆಸ್ ಕೈ ಹಾಕಿತ್ತು. ಈಗ ರಾಜ್ಯ ಪ್ರತ್ಯೇಕಿಸುವ ಮೂಲಕ ಜೆಡಿಎಸ್ ಬಲಪಡಿಸುವ ಹುನ್ನಾರ ದೇವೇಗೌಡರದ್ದು ಎಂದು ಕಿಡಿಕಾರಿದರು.
ಬಿಜೆಪಿ ಶಾಸಕರು ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಿಲ್ಲ. ಆ ಭಾಗದ ಅಭಿವೃದ್ಧಿ ಕಡಿಮೆ ಆಗಿದೆ ಎಂದು ಮಾತ್ರ ಹೇಳಿದ್ದರು. ಆದರೆ ಸಿಎಂ ಸೊಕ್ಕು ಧಿಮಾಕಿನ ಮಾತಿನ ಮೂಲಕ ವಿಷಬೀಜ ಬಿತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರತ್ಯೇಕತೆ ಕೂಗು ಎದ್ದಿರುವ 13 ಜಿಲ್ಲೆಗಳಿಗೆ ಭೇಟಿ ಕೊಡುತ್ತೇನೆ. ಅಖಂಡ ಕರ್ನಾಟಕಕ್ಕಾಗಿ ಹೋರಾಟ ನಡೆಸುತ್ತೇನೆ. ಪ್ರತಿಪಕ್ಷ ನಾಯಕನಾಗಿ ನಾನು ನನ್ನ ಕೆಲಸ ನಿರ್ವಹಿಸುತ್ತೇನೆ ಎಂದು ಬಿಎಸ್ ವೈ ಹೇಳಿದರು.
ಪ್ರತ್ಯೇಕ ರಾಜ್ಯಕ್ಕೆ ಬೆಂಬಲ ಕೊಡಬೇಡಿ: ರಾಯರೆಡ್ಡಿ
ಉತ್ತರ ಕರ್ನಾಟಕ ರೈತರ ವಿರುದ್ಧ ಸಿಎಂ ಕುಮಾರಸ್ವಾಮಿ ಅವರು ನೀಡಿದ್ದ ಹೇಳಿಕೆ ಹಿಂಪಡೆಯುವಂತೆ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ . ಬಸವರಾಜ ರಾಯರೆಡ್ಡಿ ಆಗ್ರಹಿಸಿದ್ದಾರೆ.
ಅಲ್ಲದೇ ಪ್ರತ್ಯೇಕ ಕರ್ನಾಟಕ ಹೋರಾಟಕ್ಕೆ ಜನ ಬೆಂಬಲ ಕೊಡಬಾರದು. ಪ್ರತ್ಯೇಕ ಕರ್ನಾಟಕ ಬಂದ್ ರಾಜಕೀಯ ಪ್ರೇರಿತ. ಶ್ರೀರಾಮುಲು ಕೂಡಾ ಇತಿಹಾಸ ಓದಿಕೊಳ್ಳಲಿ ಎಂದು ಸಲಹೆ ನೀಡಿದರು.