ಅದೊಂದು ಹೆಸರನ್ನು ಯಾರೂ ಕೇಳಿರಲಿಲ್ಲ, ಹಾಗೆಯೇ ಆ ಹೆಸರಿನ ಅರ್ಥವೇನೆಂದು ಯಾರಿಗೂ ಗೊತ್ತಿಲ್ಲ. ಆಡಿಯೋ ಬಿಡುಗಡೆ ಸಮಾರಂಭದಲ್ಲಾದರೂ ಉತ್ತರ ಗೊತ್ತಾಗಬಹುದು ಎಂಬ ನಂಬಿಕೆ ಸುಳ್ಳಾಯಿತು. ಉತ್ತರ ಹೇಳಬೇಕಿದ್ದ ನಿರ್ದೇಶಕ ಭರತ್ ಕುಮಾರ್ ಉತ್ತರ ಕೊಡಲಿಲ್ಲ. ಎಲ್ಲವನ್ನೂ ಚಿತ್ರದಲ್ಲೇ ನೋಡಬೇಕೆಂದು ಹೇಳಿ ಸುಮ್ಮನಾದರು.
ಅಂದಹಾಗೆ, ಆ ಹೆಸರು “ಅರಣ್ಯಾನಿ’. ಒಂದಿಷ್ಟು ಹೊಸಬರ ತಂಡವು ಸದ್ದಿಲ್ಲದೆ “ಅರಣ್ಯಾನಿ’ ಎಂಬ ಚಿತ್ರವನ್ನು ಮಾಡಿ ಮುಗಿಸಿ, ಇದೀಗ ಬಿಡುಗಡೆಗೆ ಕಾಯುತ್ತಿದೆ. ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರತಂಡವು ಹಾಡುಗಳನ್ನು ಬಿಡುಗಡೆ ಮಾಡಿತು. ಹಾಡುಗಳ ಬಿಡುಗಡೆ ಸಮಾರಂಭಕ್ಕೆ ಎಂ.ಎಲ್.ಸಿ. ಅಶ್ವತ್ಥ್ನಾರಾಯಣ್ ಬಂದಿದ್ದರು.
ಅವರ ಜೊತೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು. “ಅರಣ್ಯಾನಿ’ ಚಿತ್ರವನ್ನು ಭರತ್ ಕುಮಾರ್ ನಿರ್ದೇಶಿಸಿದರೆ, ರವಿಕುಮಾರ್ ಎನ್ನುವವರು ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಂಜನ್, ಸಂತೋಷ್, ತೇಜು ಪೊನ್ನಪ್ಪ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಒಂದಿಷ್ಟು ಯುವಕರು ಕಾಡಿಗೆ ಹೋಗಿ ಅಲ್ಲಿ ತಪ್ಪಿಸಿಕೊಳ್ಳುವ ಕಥೆ ಇರುವ ಈ ಚಿತ್ರದ ಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. “ಒಂದೊಳ್ಳೆಯ ಕಥೆ ಬೇಕೆಂದು ಸಾಕಷ್ಟು ಹುಡುಕಾಡಿದೆ. ಕೊನೆಗೆ ಒಂದು ದಿನ “ಅರಣ್ಯಾನಿ’ ಎಂಬ ಹೆಸರು ಹೊಳೆಯಿತು. ಅದನ್ನಿಟ್ಟುಕೊಂಡು ಕಥೆ ಬರೆಯುತ್ತಾ ಹೋದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ.
“ಅರಣ್ಯಾನಿ’ ಎಂದರೇನು ಎಂಬುದನ್ನು ಚಿತ್ರದಲ್ಲೇ ನೋಡಿರಿ’ ಎಂದು ಹೇಳಿದರು. ಈ ಚಿತ್ರಕ್ಕೆ ದಿವಂಗತ ಸಂಗೀತ ನಿರ್ದೇಶಕ ಎಲ್. ವೈದ್ಯನಾಥನ್ ಅವರ ಮಗ ಮುತ್ತು ಕುಮಾರಸ್ವಾಮಿ ಸಂಗೀತ ಸಂಯೋಜಿಸಿದ್ದಾರೆ. ಅಪ್ಪನ ಆಶೀರ್ವಾದದಿಂದ ಕನ್ನಡ ಚಿತ್ರರಂಗಕ್ಕೆ ಬಂದಿರುವುದಾಗಿ ಅವರು ಹೇಳಿದರು.