Advertisement

ಇರಿಡಿಯಂ ಸ್ಪಾರ್ಕ್‌ ಪ್ಲಗ್‌ ಏನು ವಿಶೇಷ?

07:18 AM Jan 18, 2019 | |

ಎಕ್ಸಲರೇಟರ್‌ ತಿರುವಿದರೆ ಚಿಮ್ಮುವ ಬೈಕ್‌, ಎಂಜಿನ್‌ ಕೂಡ ಸಖತ್‌ ರೆಸ್ಪಾನ್ಸಿವ್‌! ಇದಕ್ಕೆ ಕಾರಣ ಇರಿಡಿಯಂ ಸ್ಪಾರ್ಕ್‌ ಪ್ಲಗ್‌.

Advertisement

ಭಾರೀ ಕಾರ್ಯಕ್ಷಮತೆ ಹೊಂದಿದ ಬೈಕ್‌ಗಳಲ್ಲಿ ಈ ಸ್ಪಾರ್ಕ್‌ ಪ್ಲಗ್‌ ಸಾಮಾನ್ಯವಾಗಿರುತ್ತವೆ. ಇಂಧನ ದಹನವಾಗಲು ನೆರವು ನೀಡುವುದು ಸ್ಪಾರ್ಕ್‌ ಪ್ಲಗ್‌. ಸ್ಪಾರ್ಕ್‌ ಪ್ಲಗ್‌ ಕಾರ್ಯಕ್ಷಮತೆ ಹೆಚ್ಚಿದ್ದಷ್ಟೂ ವಾಹನದ ಕಾರ್ಯಕ್ಷಮತೆ, ಇಂಧನ ದಕ್ಷತೆ ಹೆಚ್ಚುತ್ತದೆ. ಸಾಮಾನ್ಯ ತಾಮ್ರದ ಸ್ಪಾರ್ಗ್‌ ಪ್ಲಗ್‌ಗಳಿಗಿಂತ ಇರಿಡಿಯಂ ವಿಶೇಷತೆಯನ್ನು ಹೊಂದಿದೆ. ಹೆಚ್ಚಿನ ಕಾರ್ಯಕ್ಷಮತೆಯನ್ನು ಬಯಸುವವರು, ವಿಶೇಷವಾಗಿ ರೇಸಿಂಗ್‌ ಮತ್ತು ಟೂರಿಂಗ್‌ ಉದ್ದೇಶದ ಬೈಕರ್‌ಗಳು ತಮ್ಮ ಬೈಕ್‌ನಲ್ಲಿ ಇರಿಡಿಯಂ ಸ್ಪಾರ್ಕ್‌ ಪ್ಲಗ್‌ಗಳನ್ನು ಅಳವಡಿಸುತ್ತಾರೆ.

ಸ್ಪಾರ್ಕ್‌ ಪ್ಲಗ್‌ ಕೆಲಸವೇನು?
ಸ್ಪಾರ್ಕ್‌ ಪ್ಲಗ್‌ಗಳು ಇಂಧನ- ಗಾಳಿ ಮಿಶ್ರಣ ಉರಿಯುವಂತೆ ಮಾಡಲು ಕಿಡಿಯನ್ನು ಹಚ್ಚುವ ಕೆಲಸ ಮಾಡುತ್ತದೆ. ಈ ಪ್ರಕ್ರಿಯೆ ಎಂಜಿನ್‌ ಬೋರ್‌ ಹೆಡ್‌ನ‌ ಒಳಗೆ ಆಗುತ್ತಿರುತ್ತದೆ. ಇಗ್ನೀಷನ್‌ ಕಾಯಿಲ್‌ನಿಂದ ಬಂದ ಶಕ್ತಿಯನ್ನು ಸ್ಪಾರ್ಕ್‌ ಪ್ಲಗ್‌ ಎಲೆಕ್ಟ್ರಿಕಲ್‌ ಶಕ್ತಿಯಾಗಿ ಪರಿವರ್ತಿಸಿ, ಕಿಡಿ ಹಾರುವಂತೆ ಮಾಡುತ್ತದೆ.

ಇರಿಡಿಯಂ ಲಾಭವೇನು?
ಸಾಮಾನ್ಯ ಸ್ಪಾರ್ಕ್‌ ಪ್ಲಗ್‌ನಲ್ಲಿ ನಿಕೆಲ್‌- ಕಬ್ಬಿಣ ಅಥವಾ ಕ್ರೋಮಿಯಂನಿಂದ ಮಾಡಿದ್ದಾಗಿರುತ್ತದೆ. ಇರಿಡಿಯಂನಲ್ಲಿ ಸಂಪೂರ್ಣ ಇರಿಡಿಯಂನಿಂದಲೇ ಮಾಡಿದ್ದು, ಇದು ಹೆಚ್ಚಿನ ಕಾರ್ಯಕ್ಷಮತೆ ಉಳ್ಳದ್ದು. ಸಾಮಾನ್ಯ ಸ್ಪಾರ್ಕ್‌ ಪ್ಲಗ್‌ನಲ್ಲಿ ಕಾರ್ಬನ್‌ ಬೇಗನೆ ತುಂಬಿ ಅದರ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಆದರೆ ಇರಿಡಿಯಂನಲ್ಲಿ ಈ ಸಾಧ್ಯತೆಗಳು ಕಡಿಮೆಯಿದ್ದು, ಹೆಚ್ಚು ಕಿಡಿ ಹಾರುವ ಗುಣ ಹೊಂದಿರುತ್ತದೆ.

ಕಡಿಮೆ ವೋಲ್ಟೇಜ್‌ನಲ್ಲಿ ಹೆಚ್ಚು ಫೈರಿಂಗ್‌
ಇರಿಡಿಯಂ ಸ್ಪಾರ್ಕ್‌ ಪ್ಲಗ್‌ಗೆ ಸಾಮಾನ್ಯವಾಗಿ 3ರಿಂದ 5 ಸಾವಿರ ವೋಲ್ಟ್ವರೆಗೆ ವಿದ್ಯುತ್‌ ಬೇಕಾಗುತ್ತದೆ. ಇದು ಸಾಮಾನ್ಯ ಪ್ಲಗ್‌ಗಿಂತ ಕಡಿಮೆ ಸಾಕು. ಇದರ ಎಲೆಕ್ಟ್ರೋಡ್‌ಗಳು 0.4 ಎಂ.ಎಂ. ನಷ್ಟು ಸಣ್ಣದಾಗಿದ್ದರೂ, ಕಡಿಮೆ ಓಲ್ಟೇಜ್‌ನಲ್ಲೂ ಹೆಚ್ಚಿನ ಕಿಡಿ ಹಾರಿಸುವ ಕಾರ್ಯಕ್ಷಮತೆ ನೀಡುವುದರಿಂದ ಬೈಕ್‌ ಹೆಚ್ಚು ಕಾರ್ಯಕ್ಷಮತೆ ಯನ್ನು ತೋರಿಸುತ್ತದೆ.

Advertisement

ನವಿರಾದ ಐಡ್ಲಿಂಗ್‌, ಕಡಿಮೆ ಇಂಧನ ಬಳಕೆ
ಇರಿಡಿಯಂ ಸ್ಪಾರ್ಕ್‌ ಪ್ಲಗ್‌ ಇದ್ದಲ್ಲಿ ಎಂಜಿನ್‌ ಐಡ್ಲಿಂಗ್‌ ವ್ಯತ್ಯಾಸವಾಗುವುದು ಕಡಿಮೆ. ಜತೆಗೆ ಆರ್‌ಪಿಎಂ ಒಂದೇ ರೀತಿ ಕಾಪಿಟ್ಟುಕೊಳ್ಳುತ್ತದೆ. ಸಾಮಾನ್ಯ ಸ್ಪಾರ್ಕ್‌ ಪ್ಲಗ್‌ಗಳಲ್ಲಿ ಇದು ವ್ಯತ್ಯಾಸವಾಗುವುದು ಹೆಚ್ಚು. ಇಂಧನ ದಹನವನ್ನು ಪರಿಣಾಮಕಾರಿಯಾಗಿ ಮಾಡುವುದರಿಂದ ಇರಿಡಿಯಂನಲ್ಲಿ ಐಡ್ಲಿಂಗ್‌ ನವಿರಾಗಿರುತ್ತದೆ. ಜತೆಗೆ ಎಂಜಿನ್‌ ಮಿಸ್‌ಫೈರಿಂಗ್‌ ಕಡಿಮೆ ಇದ್ದು, ಇಂಧನ ಉತ್ತಮವಾಗಿ ದಹನವಾಗಿವುದರಿಂದ ಇಂಧನ ಬಳಕೆಯೂ ಕಡಿಮೆ ಇರುತ್ತದೆ. ಅರ್ಥಾತ್‌ ಮೈಲೇಜ್‌ ಹೆಚ್ಚಿರುತ್ತದೆ.

ಬೆಲೆ ಹೆಚ್ಚು
ಇರಿಡಿಯಂ ಕಾರ್ಯಕ್ಷಮತೆ ಹೆಚ್ಚಿಸುವ ಸ್ಪಾರ್ಕ್‌ ಪ್ಲಗ್‌ ಆಗಿರುವುದರಿಂದ ಇದರ ಬೆಲೆಯೂ ಹೆಚ್ಚು. ಸಾಮಾನ್ಯ ಸ್ಪಾರ್ಕ್‌ ಪ್ಲಗ್‌ಗೆ 60- 90 ರೂ. ಇದ್ದರೆ, ಇರಿಡಿಯಂನ ಬೆಲೆ 500 ರೂ. ಮೇಲ್ಪಟ್ಟು ಇರುತ್ತದೆ. ಬೈಕ್‌ನಲ್ಲಿ ಉತ್ಪತ್ತಿಯಾಗುವ ವೋಲ್ಟೇಜ್‌ಗೆ ಅನುಗುಣವಾಗಿ ಇರಿಡಿಯಂನ್ನು ಅಳವಡಿಸಿಕೊಳ್ಳಬೇಕು. ಇದಕ್ಕೆ ಅನುಗುಣವಾಗಿ ಅದರ ಬೆಲೆಯೂ ವ್ಯತ್ಯಾಸವಾಗುತ್ತದೆ.

•ಈಶ

Advertisement

Udayavani is now on Telegram. Click here to join our channel and stay updated with the latest news.

Next