Advertisement

ಸಾಫ್ಟ್ ಸಿಗ್ನಲ್ ಗೆ ಬಲಿಯಾದ ಹಾರ್ಡ್ ಹಿಟ್ಟರ್ ಸೂರ್ಯ: ಏನಿದು ಸಾಫ್ಟ್ ಸಿಗ್ನಲ್?

02:44 PM Mar 19, 2021 | ಕೀರ್ತನ್ ಶೆಟ್ಟಿ ಬೋಳ |

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯ ಅಂಪೈರ್  ಗಳ ತಪ್ಪುಗಳಿಂದ ವಿವಾದಕ್ಕೆ ಕಾರಣವಾಯಿತು.  ಅರ್ಧಶತಕ ಗಳಿಸಿ ಆಡುತ್ತಿದ್ದ ಹಾರ್ಡ್ ಹಿಟ್ಟರ್ ಸೂರ್ಯ ಕುಮಾರ್ ಯಾದವ್ ಅಂಪೈರ್ ನೀಡಿದ ಸಾಫ್ಟ್ ಸಿಗ್ನಲ್ ಗೆ ಬಲಿಯಾಗಬೇಕಾಯಿತು. ವಾಷಿಂಗ್ಟನ್ ಸುಂದರ್ ಕೂಡಾ ಇದೇ ರೀತಿಯ ಅನುಮಾನಕ್ಕೆ ಕಾರಣವಾಯಿತು. ಅಷ್ಟಕ್ಕೂ ಏನಿದು ಸಾಫ್ಟ್ ಸಿಗ್ನಲ್, ವಿವಾದ ಯಾಕೆ ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.

Advertisement

ಏನಿದು ಸಾಫ್ಟ್ ಸಿಗ್ನಲ್?

ಕ್ರಿಕೆಟ್ ನಲ್ಲಿ ಕೆಲವು ಕಠಿಣ ಸಂದರ್ಭ ಎದುರಾದಾಗ, ಉದಾ: ಅನುಮಾನಾಸ್ಪದ ಕ್ಯಾಚ್ ಇದ್ದಾಗ ಮೈದಾನದ ಅಂಪೈರ್ ಟಿವಿ ಅಂಪೈರ್ ಸಹಾಯ ಕೇಳುತ್ತಾರೆ. ಆದರೆ ಆ ವೇಳೆ ತನ್ನ ದೃಷ್ಟಿಯಲ್ಲಿ ಆ ತೀರ್ಪು ಏನು (ಔಟ್ ಅಥವಾ ನಾಟ್ ಔಟ್) ಎಂದು ಮೈದಾನದ ಅಂಪೈರ್ ಹೇಳಬೇಕು. ಇದನ್ನು ಸಾಫ್ಟ್ ಸಿಗ್ನಲ್ ಎನ್ನಲಾಗುತ್ತದೆ. ಟಿವಿ ಅಂಪೈರ್ ಗೆ ಸರಿಯಾದ ಸಾಕ್ಷಿ ಸಿಗದಿದ್ದರೇ ಸಾಫ್ಟ್ ಸಿಗ್ನಲ್ ಅನ್ನೇ ಅಂತಿಮ ತೀರ್ಪಾಗಿ ಪರಿಗಣಿಸಬಹುದು ಎನ್ನುತ್ತದೆ ನಿಯಮ.

ಯಾವಾಗ ಆರಂಭ?

2014ರಲ್ಲಿ ಐಸಿಸಿ ಈ ನಿಯಮವನ್ನು ಪರಿಚಯಿಸಿತು. ಅದಕ್ಕಿಂತ ಮೊದಲು ಮೈದಾನದ ಅಂಪೈರ್ ಗಳು ಮೂರನೇ ಅಂಪೈರ್ ಜೊತೆ ಚರ್ಚೆ ನಡೆಸುತ್ತಿದ್ದರು.

Advertisement

ಏನಿದು ವಿವಾದ?

ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯ ಈ ಸಾಫ್ಟ್ ಸಿಗ್ನಲ್ ನಿಯಮದ ಮತ್ತೊಂದು ಆಯಾಮವನ್ನು ಪರಿಚಯಿಸಿತು. ಭಾರತದ ಇನ್ನಿಂಗ್ಸ್ ನ 14 ನೇ ಓವರ್ ವೇಳೆ ಸೂರ್ಯ ಕುಮಾರ್ ಯಾದವ್ ಹೊಡೆದ ಚೆಂಡನ್ನು ಇಂಗ್ಲೆಂಡ್ ಫೀಲ್ಡರ್ ಡೇವಿಡ್ ಮಲಾನ್ ಕ್ಯಾಚ್ ಪಡೆದರು. ನೆಲಕ್ಕೆ ತೀರಾ ಹತ್ತಿರದಿಂದ ಕ್ಯಾಚ್ ಪಡೆದ ಕಾರಣ ಅಂಪೈರ್ ಮೇಲ್ಮನವಿ ಸಲ್ಲಿಸಿದರು. ಆದರೆ ಔಟ್ ಎಂದು ಸಾಫ್ಟ್ ಸಿಗ್ನಲ್ ನೀಡಿದರು.

ಮೂರನೇ ಅಂಪೈರ್ ಹಲವು ಬಾರಿ ಹಲವು ಆಯಾಮಗಳಲ್ಲಿ ವಿಡಿಯೋ ನೋಡಿದರು. ಚೆಂಡು ನೆಲ ಸ್ಪರ್ಶವಾಗಿದ್ದು ಬಹುತೇಕ ಆ್ಯಂಗಲ್ ಗಳಲ್ಲಿ ಕಾಣುತ್ತಿತ್ತು. ಆದರೆ ಪೂರಕ ಸಾಕ್ಷ್ಯಗಳ ಕೊರತೆಯಿದೆ ಎಂಬ ಕಾರಣಕ್ಕೆ ಮೂರನೇ ಅಂಪೈರ್, ಸಾಫ್ಟ್ ಸಿಗ್ನಲ್ ತೀರ್ಪನ್ನೇ ಎತ್ತಿ ಹಿಡಿದರು. ಹಾಗಾಗಿ ಸೂರ್ಯ ಕುಮಾರ್ ಔಟಾಗಬೇಕಾಯಿತು.

ಅದೇ ಇನ್ನಿಂಗ್ಸ್ ನ 20ನೇ ಓವರ್ ನಲ್ಲಿ ವಾಷಿಂಗ್ಟನ್ ಸುಂದರ್ ಬಾರಿಸಿದ ಚೆಂಡನ್ನು ಬೌಂಡರಿ ಲೈನ್ ಬಳಿಯಿದ್ದ ಆದಿಲ್ ರಶೀದ್ ಹಿಡಿದರು. ರಶೀದ್ ಕಾಲು ಬೌಂಡರಿ ಗೆರೆಗೆ ತಾಗಿದೆಯೋ ನೋಡಲು ಮೂರನೇ ಅಂಪೈರ್ ಮೊರೆ ಹೋಗಲಾಯಿತು. ಆಗಲೂ ಔಟ್ ಎಂಬ ಸಾಫ್ಟ್ ಸಿಗ್ನಲ್. ಹಲವು ಆಯಾಮಗಳಿಂದ ವಿಡಿಯೋ ಪರಿಶೀಲಿಸಿದ ಥರ್ಡ್ ಅಂಪೈರ್ ವಿರೇಂದರ್ ಶರ್ಮಾ, ರಶಿದ್ ಕಾಲು ಬೌಂಡರಿ ಗೆರೆಗೆ ತಾಗಿಲ್ಲ ಎನ್ನುವುದಕ್ಕೆ ಯಾವುದೇ ಆಧಾರವಿಲ್ಲದೇ ಇದ್ದರೂ, ಸಾಫ್ಟ್ ಸಿಗ್ನಲ್ ತೀರ್ಪನ್ನೇ ಪುರಸ್ಕರಿಸಿದರು.

ಒಂದೇ ಇನ್ನಿಂಗ್ಸ್ ಎರಡು ಬಾರಿ ಈ ರೀತಿ ಅಂಪೈರ್ ತೀರ್ಪು ನೀಡಿರುವುದು ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದರೂ, ಸಾಫ್ಟ್ ಸಿಗ್ನಲ್ ಯಾಕೆ ಎಂದು ಐಸಿಸಿಗೆ ಪ್ರಶ್ನಿಸಲಾರಂಭಿಸಿದ್ದಾರೆ.

ಮಾಜಿ ಆಟಗಾರರ ಅಸಮಾಧಾನ

ಗುರುವಾರ ನಡೆದ ಘಟನೆಯ ಬಳಿಕ ಕ್ರಿಕೆಟ್ ಪಂಡಿತರು, ಮಾಜಿ ಆಟಗಾರರು ಈ ಸಾಫ್ಟ್ ಸಿಗ್ನಲ್ ನಿಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೂರ್ಯ ಕುಮಾರ್ ಔಟ್ ಎಂದು ತೀರ್ಮಾನ ನೀಡುವಾಗ ಮೂರನೇ ಅಂಪೈರ್ ಕಣ್ಣು ಮುಚ್ಚಿದ್ದರು ಎಂದು ವೀರೆಂದ್ರ ಸೆಹವಾಗ್ ಟೀಕಿಸಿದ್ದಾರೆ. ಉನ್ನತ ದರ್ಜೆಯ ತಂತ್ರಜ್ಞಾನದಿಂದ ನಿಮಗೆ ಸರಿಯಾದ ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದಾದರೆ, ಅಂಪೈರ್ ಅಂದಾಜಿಗೆ ಹೇಳಿದ ತೀರ್ಮಾನ ಹೇಗೆ ಒಪ್ಪಿಕೊಳ್ಳಬಹುದು. ಸಾಫ್ಟ್ ಸಿಗ್ನಲ್ ಬಗ್ಗೆ ಮರುಚಿಂತನೆ ಅಗತ್ಯ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಸಾಫ್ಟ್ ಸಿಗ್ನಲ್ ಬಹುದೊಡ್ಡ ಪಾತ್ರ ವಹಿಸುತ್ತದೆ. ಆದರೆ ಮೈದಾನದ ಅಂಪೈರ್ ಔಟ್ ಅಥವಾ ನಾಟ್ ಔಟ್ ಹೇಳುವ ಬದಲು ತನಗೆ ಗೊತ್ತಿಲ್ಲ ಎನ್ನಬೇಕು. ಇದರಿಂದ ಪಂದ್ಯವನ್ನು ಸಮಾನವಾಗಿ ಕಾಣಲು ಸಾಧ್ಯ. ನಮಗೆ ಇದರ ಬಗ್ಗೆ ಹೆಚ್ಚಿನ ಸ್ಪಷ್ಟತೆ ಅಗತ್ಯವಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯ ಪಟ್ಟಿದ್ದಾರೆ.

 

ಮರು ಪರಿಶೀಲನೆ ಅಗತ್ಯ

ಐಸಿಸಿಯು ತನ್ನ ಕೆಲವು ನಿಯಮಗಳ ಬಗ್ಗೆ ಈಗಾಲಾದರೂ ಗಮನ ಹರಿಸಬೇಕಾದ ಅಗತ್ಯವಿದೆ. ಅದರಲ್ಲೂ ಸದ್ಯ ಈ ಸಾಫ್ಟ್ ಸಿಗ್ನಲ್ ವಿಚಾರದಲ್ಲಿ ನಿಯಮ ಬದಲಾವಣೆಯ ಅಗತ್ಯವಿದೆ. ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳುವಂತೆ, 30 ಗಜಗಳ ಒಳಗಡೆ ಇಂತಹ ಪ್ರಸಂಗ ನಡೆದಾಗ ಮಾತ್ರ ಅಂಪೈರ್ ಸಾಫ್ಟ್ ಸಿಗ್ನಲ್ ನೀಡುವ ಅವಕಾಶ ಇರಬೇಕು. ಬೌಂಡರಿ ಲೈನ್ ನಲ್ಲಿ ಕ್ಯಾಚ್ ಹಿಡಿದ ಫೀಲ್ಡರ್ ಗೆ ತನ್ನ ಕ್ಯಾಚ್ ಬಗ್ಗೆ ಖಚಿತತೆ ಇರದೇ ಇರುವಾಗ 70 ಮೀಟರ್ ದೂರದಲ್ಲಿ ನಿಂತಿರುವ ಅಂಪೈರ್ ಗೆ ಹೇಗೆ ತಿಳಿಯುತ್ತದೆ. ಚಿಂತನಾರ್ಹ ವಿಚಾರವಿದು.

Advertisement

Udayavani is now on Telegram. Click here to join our channel and stay updated with the latest news.

Next