ಎಂ ಪಾಕ್ಸ್ ಅಥವಾ ಮಂಕಿ ಪಾಕ್ಸ್ ಯಾ ಕನ್ನಡದಲ್ಲಿ ಮಂಗನ ಸಿಡುಬು ಎಂದು ಕರೆಯಬಹುದಾದ ಕಾಯಿಲೆಯು ಜ್ವರ ಮತ್ತು ಮೈಯಲ್ಲಿ ನೋವಿನಿಂದ ಕೂಡಿದ ಗುಳ್ಳೆಗಳನ್ನು ಉಂಟುಮಾಡುವ ಒಂದು ವೈರಾಣು ಸೋಂಕು ರೋಗವಾಗಿದೆ. ಮಂಗಗಳಲ್ಲಿ ಮೊತ್ತಮೊದಲಿಗೆ ಈ ಕಾಯಿಲೆಯನ್ನು ಪತ್ತೆ ಮಾಡಿದ ಕಾರಣ ಮಂಕಿ ಪಾಕ್ಸ್ ಅಥವಾ ಮಂಗನ ಸಿಡುಬು ಎಂಬ ಹೆಸರು ಬಂದಿದೆ. 2022ನೇ ಇಸವಿಯ ಕೊನೆಯ ಅವಧಿಯಲ್ಲಿ ಈ ಕಾಯಿಲೆಯ ಹೆಸರನ್ನು ಅಧಿಕೃತವಾಗಿ ಎಂ ಪಾಕ್ಸ್ ಎಂಬುದಾಗಿ ಬದಲಾಯಿಸಲಾಯಿತು.
ಎಂ ಪಾಕ್ಸ್ ಹೇಗೆ ಹರಡುತ್ತದೆ?
ಎಂ ಪಾಕ್ಸ್ ಸೋಂಕುಪೀಡಿತನ ದೇಹದ ಗುಳ್ಳೆಗಳಿಂದ ಹೊರಸೂಸುವ ದ್ರವದ ಸ್ಪರ್ಶವಾದ ವಸ್ತುವನ್ನು ಆರೋಗ್ಯವಂತ ವ್ಯಕ್ತಿಯು ಸ್ಪರ್ಶಿಸುವುದರ ಮೂಲಕ
ಸೋಂಕುಪೀಡಿತನ ಶ್ವಾಸಕೋಶದಿಂದ ಹೊರಬಿದ್ದ ಹನಿಬಿಂದುಗಳ ಮೂಲಕ
ಗರ್ಭಿಣಿಯು ಈ ಸೋಂಕನ್ನು ತನ್ನ ಶಿಶುವಿಗೆ ರವಾನಿಸುತ್ತಾಳೆ
ಆರೋಗ್ಯವಂತ ವ್ಯಕ್ತಿಯು ಸೋಂಕುಪೀಡಿತನ ಬಳಿ ಇರುವುದರಿಂದ ಮಾತ್ರವೇ ಸೋಂಕು ಹರಡುವುದಿಲ್ಲ. ಆದರೆ ಸೋಂಕುಪೀಡಿತರ ಚರ್ಮ, ಮುಖದ ನೇರ ಸ್ಪರ್ಶದಿಂದ ಸೋಂಕು ಹರಡಬಲ್ಲುದು.
ಎಂ ಪಾಕ್ಸ್ ಲಕ್ಷಣಗಳು ಕಂಡುಬಂದಲ್ಲಿ ಏನು ಮಾಡಬೇಕು?
ನಿಮ್ಮ ವೈದ್ಯರು ಅಥವಾ ದಾದಿಯನ್ನು ಸಂಪರ್ಕಿಸಬೇಕು. ಅವರು ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳಿ ಆ ಬಳಿಕ ಪರೀಕ್ಷೆಯನ್ನು ಗೊತ್ತು ಮಾಡುತ್ತಾರೆ. ವೈದ್ಯರು ಅಥವಾ ದಾದಿ ನಿಮ್ಮನ್ನು ಪರೀಕ್ಷಿಸಿ ಫಲಿತಾಂಶ ತಿಳಿಸುವವರೆಗೆ ಇತರರ ಜತೆಗೆ ನಿಕಟ ಸಂಪರ್ಕ, ಲೈಂಗಿಕ ಸಂಪರ್ಕವನ್ನು ಹೊಂದಬಾರದು.
ಎಂ ಪಾಕ್ಸ್ ಖಚಿತಪಡಿಸಿಕೊಳ್ಳಲು ಪರೀಕ್ಷೆ ಇದೆಯೇ?
ಇದೆ. ನಿಮ್ಮ ವೈದ್ಯರು ಅಥವಾ ದಾದಿ ನಿಮಗೆ ಎಂ ಪಾಕ್ಸ್ ಇರುವುದಾಗಿ ಶಂಕಿಸಿದರೆ ನಿಮ್ಮ ದೇಹದಲ್ಲಿ ಉಂಟಾಗಿರುವ ಗುಳ್ಳೆಯಿಂದ ದ್ರವ ಮಾದರಿಯನ್ನು ಸಂಗ್ರಹಿಸುತ್ತಾರೆ. ಇದನ್ನು ಪರೀಕ್ಷೆಗಾಗಿ ವಿಶೇಷ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ರೋಗನಿರೋಧಕ ಪ್ರತಿಕಾಯಗಳ ಪ್ರಮಾಣವನ್ನು ತಿಳಿಯುವುದಕ್ಕಾಗಿ ರಕ್ತ ಪರೀಕ್ಷೆಯನ್ನೂ ಸೂಚಿಸಬಹುದಾಗಿದೆ.
ಸೋಂಕು ಸ್ಪರ್ಶವಾಗಿದೆ ಎಂಬ ಶಂಕೆ ಇದ್ದರೆ ನಾನೇನು ಮಾಡಬೇಕು?
ಎಂ ಪಾಕ್ಸ್ ಸೋಂಕುಪೀಡಿತರ ನಿಕಟ ಸಂಪರ್ಕಕ್ಕೆ ಬಂದಿದ್ದರೆ, ನಿಮಗೆ ಲಕ್ಷಣಗಳು ಕಾಣಿಸಿಕೊಂಡಿಲ್ಲದಿದ್ದರೂ ವೈದ್ಯರು ಅಥವಾ ದಾದಿಗೆ ತಿಳಿಸಿ. ಮುಂದೇನು ಮಾಡಬೇಕು ಎಂದು ಅವರು ನಿಮಗೆ ತಿಳಿಸುತ್ತಾರೆ. ಲಸಿಕೆ ಪಡೆಯುವುದು ಕೂಡ ಇದರಲ್ಲಿ ಸೇರಿರಬಹುದು. ನೀವು ಎಂ ಪಾಕ್ಸ್ ಸೋಂಕಿಗೆ ಒಡ್ಡಿಕೊಂಡಿದ್ದರೆ ಲಕ್ಷಣಗಳು ಕಂಡುಬರುತ್ತವೆಯೇ ಎಂದು 21 ದಿನಗಳ ವರೆಗೆ ನಿಗಾ ಇರಿಸಬೇಕು.
ಎಂ ಪಾಕ್ಸ್ ಸೋಂಕಿಗೆ ಒಡ್ಡಿಕೊಳ್ಳುವುದನ್ನು ಹೇಗೆ ತಡೆಯಬಹುದು?
ಎಂ ಪಾಕ್ಸ್ ಸೋಂಕಿಗೆ ಒಡ್ಡಿಕೊಳ್ಳುವುದನ್ನು ತಡೆಯುವ ಅತ್ಯುತ್ತಮ ಮಾರ್ಗ ಎಂದರೆ ಎಂ ಪಾಕ್ಸ್ ಸೋಂಕಿ ಹೊಂದಿರಬಹುದಾದ ವ್ಯಕ್ತಿಗಳ ನಿಕಟ ಸಂಪರ್ಕದಿಂದ ದೂರವಿರುವುದು.
ಸೋಂಕಿಗೆ ಒಡ್ಡಿಕೊಳ್ಳುವ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು:
ಕುಟುಂಬ ಸದಸ್ಯ, ಸ್ನೇಹಿತ ಅಥವಾ ಸಂಗಾತಿ ಎಂ ಪಾಕ್ಸ್ ಹೊಂದಿದ್ದಲ್ಲಿ ಗುಳ್ಳೆಗಳು ಸಂಪೂರ್ಣ ಗುಣ ಹೊಂದುವವರೆಗೆ ಸ್ವಯಂ ಪ್ರತ್ಯೇಕವಾಗಿರಬೇಕು.
ಲೈಂಗಿಕ ಸಂಪರ್ಕ ಹೊಂದುವ ಯಾವುದೇ ಸಂದರ್ಭದಲ್ಲಿ ಕಾಂಡೋಮ್ ಬಳಕೆಯಿಂದ ಪ್ರಯೋಜನವಾಗಬಹುದಾಗಿದೆ.
ಯಾರು ಎಂ ಪಾಕ್ಸ್ ಲಸಿಕೆ ಹಾಕಿಸಿಕೊಳ್ಳಬೇಕು?
ಎಂ ಪಾಕ್ಸ್ ಸೋಂಕಿಗೆ ಒಡ್ಡಿಕೊಂಡವರು ಅಥವಾ ಅಂತಹ ಸಾಧ್ಯತೆ ಇರುವವರು ಲಸಿಕೆ ಹಾಕಿಸಿಕೊಳ್ಳಬೇಕು. ಇದನ್ನು “ಪೋಸ್ಟ್ ಎಕ್ಸ್‌ಪೋಶರ್ ಪ್ರೊಫಿಲ್ಯಾಕ್ಸಿಸ್’ ಎಂದು ಕರೆಯಲಾಗುತ್ತದೆ. ಲಸಿಕೆ ಕೆಲಸ ಮಾಡಬೇಕಿದ್ದರೆ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಹಾಕಿಸಿಕೊಳ್ಳಬೇಕು. ಕಳೆದ ಎರಡು ವಾರಗಳ ಅವಧಿಯಲ್ಲಿ ಎಂ ಪಾಕ್ಸ್ ಸೋಂಕುಪೀಡಿತರ ನಿಕಟ ಸಂಪರ್ಕಕ್ಕೆ ನೀವು ಬಂದಿದ್ದಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದು. ಆರೋಗ್ಯ ಸೇವಾ ಸಿಬಂದಿ ಇತರ ಕೆಲವು ವಿಧವಾಗಿಯೂ ಸೋಂಕಿಗೆ ತೆರೆದುಕೊಳ್ಳಬಹುದು.
ಅವುಗಳೆಂದರೆ:
ಎಂ ಪಾಕ್ಸ್ ರೋಗಿಯ ಜೊಲ್ಲು ಕಣ್ಣು ಅಥವಾ ಬಾಯಿಯನ್ನು ಸೇರುವುದು.
ಪ್ರಮಾದವಶಾತ್ ಸೂಜಿಯಿಂದ ಚುಚ್ಚಿಸಿಕೊಳ್ಳುವುದು. ಎಂ ಪಾಕ್ಸ್ ಸೋಂಕಿಗೆ ಒಡ್ಡಿಕೊಳ್ಳುವ ಹೆಚ್ಚು ಅಪಾಯ ಇರುವವರು ಸೋಂಕಿಗೆ ಒಡ್ಡಿಕೊಳ್ಳುವುದಕ್ಕೆ ಮುನ್ನವೇ ಲಸಿಕೆ ಹಾಕಿಸಿಕೊಳ್ಳುವುದನ್ನು ತಜ್ಞರು ಶಿಫಾರಸು ಮಾಡುತ್ತಾರೆ. ಇದನ್ನು “ಪ್ರಿ-ಎಕ್ಸ್‌ಪೋಶರ್ ಪ್ರೊಫಿಲ್ಯಾಕ್ಸಿಸ್’ ಎನ್ನುತ್ತಾರೆ.
ಕಳೆದ ಆರು ತಿಂಗಳುಗಳ ಅವಧಿಯಲ್ಲಿ ಲೈಂಗಿಕ ಸಂಪರ್ಕ ಹೊಂದಿರುವ ಸಲಿಂಗಿಗಳು, ಲಿಂಗಪರಿವರ್ತನೆ ಹೊಂದಿರುವವರು, ತೃತೀಯ ಲಿಂಗಿಗಳು.
ಎಚ್‌ಐವಿ, ಕ್ಲಾಮಿಡಿಯಾ, ಗೊನೊರಿಯಾ ಅಥವಾ ಸಿμಲಿಸ್‌ನಂತಹ ಲೈಂಗಿಕವಾಗಿ ಹರಡುವ ರೋಗ ಹೊಂದಿರುವವರು.
ಒಬ್ಬರಿಗಿಂತ ಹೆಚ್ಚು ಲೈಂಗಿಕ ಸಂಗಾತಿಗಳನ್ನು ಹೊಂದಿರುವವರು.
ಎಂ ಪಾಕ್ಸ್ ಸೋಂಕು ಸ್ಪರ್ಶವಾಗಬಹುದಾದ ಪರಿಸರದಲ್ಲಿ ಕೆಲಸ ಮಾಡುವವರು (ಉದಾಹರಣೆಗೆ, ಈ ವಿಧವಾದ ವೈರಾಣು ಪರೀಕ್ಷೆಯನ್ನು ನಡೆಸುವ ಪ್ರಯೋಗಾಲಯದಲ್ಲಿ ಕೆಲಸ ಮಾಡುವವರು).
ಎಚ್‌ಐವಿ ಅಥವಾ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುವ ಇತರ ಅನಾರೋಗ್ಯ ಹೊಂದಿರುವವರಿಗೆ ಲಸಿಕೆ ಹಾಕಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.
ಎಂ ಪಾಕ್ಸ್ ನನ್ನಿಂದ ಇತರರಿಗೆ ಹರಡುವುದನ್ನು ಹೇಗೆ ತಡೆಯಬಹುದು?
ನೀವು ಎಂ ಪಾಕ್ಸ್‌ಗೆ ತುತ್ತಾಗಿದ್ದಲ್ಲಿ ಸೋಂಕು ಇತರರಿಗೆ ಪ್ರಸಾರವಾಗದಂತೆ ತಡೆಯಲು ನೀವು ಕೆಲವು ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.
ಅತ್ಯುತ್ತಮ ವಿಧಾನವೆಂದರೆ, ಸ್ವಯಂ ಪ್ರತ್ಯೇಕವಾಗಿರುವುದು (ಸೆಲ್ಫ್ ಐಸೊಲೇಶನ್):
ಸ್ವಯಂ ಏಕಾಂತವನ್ನು ಗುಳ್ಳೆಗಳು ಸಂಪೂರ್ಣವಾಗಿ ಗುಣವಾಗುವವರೆಗೆ ಮುಂದುವರಿಸಬೇಕು. ಅಂದರೆ ಹುರುಪೆಗಳು ಬಿದ್ದುಹೋಗಿ ಹೊಸ ಚರ್ಮ ಮೂಡುವವರೆಗೆ ಪ್ರತ್ಯೇಕವಾಗಿರಬೇಕು.
ಇತರರನ್ನು ಸೋಂಕಿನಿಂದ ರಕ್ಷಿಸಲು ನೀವು ಹೀಗೂ ಮಾಡಬೇಕು:
ನಿಮ್ಮ ಗುಳ್ಳೆಗಳ ಸಂಪರ್ಕಕ್ಕೆ ಬಂದಿರಬಹುದಾದ ಬಟ್ಟೆಬರೆ, ಹಾಸಿಗೆ ಹೊದಿಕೆ ಅಥವಾ ಇತರ ವಸ್ತುಗಳನ್ನು ನೀವೇ ಬಿಸಿನೀರಿನಲ್ಲಿ ತೊಳೆಯಬೇಕು.
ನಿಮ್ಮ ಕೈಗಳನ್ನು ಆಗಾಗ ತೊಳೆದುಕೊಳ್ಳಬೇಕು. ಮನೆಯಲ್ಲಿರುವ ಇತರರು ಕೂಡ ಕೈಗಳನ್ನು ಆಗಾಗ ತೊಳೆದುಕೊಳ್ಳಬೇಕು.
ನೀವು ಇತರರ ಜತೆಗೆ ಇರುವ ಸಂದರ್ಭ ಬಂದರೆ ಹೆಚ್ಚು ಜಾಗರೂಕರಾಗಿರಿ. ಗುಳ್ಳೆಗಳು ಇರುವ ದೇಹಭಾಗವನ್ನು ಮುಚ್ಚಿಕೊಳ್ಳಿ, ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಿ.
ಎಂ ಪಾಕ್ಸ್‌ನ ಲಕ್ಷಣಗಳೇನು?
ವ್ಯಕ್ತಿಯೊಬ್ಬರು ಈ ಕಾಯಿಲೆಯನ್ನು ಉಂಟುಮಾಡುವ ವೈರಾಣು ಸೋಂಕಿಗೆ ತುತ್ತಾದ 5ರಿಂದ 13 ದಿನಗಳ ಬಳಿಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ರೋಗ ಲಕ್ಷಣಗಳು ಜ್ವರ, ತಲೆನೋವು, ತೀವ್ರ ದಣಿವನ್ನು ಒಳಗೊಂಡಿರಬಹುದಾಗಿದೆ. ಇದಾಗಿ ಕೆಲವು ದಿನಗಳ ಬಳಿಕ ಮೈಯಲ್ಲಿ ನೋವಿನಿಂದ ಕೂಡಿದ ಗುಳ್ಳೆಗಳು ಉಂಟಾಗುತ್ತವೆ.
ಗುಳ್ಳೆಗಳು ಮೊಡವೆಗಳು ಅಥವಾ ವ್ರಣಗಳಂತೆ ಕಾಣಿಸಬಹುದು. ಕೆಲವು ವ್ಯಕ್ತಿಗಳಲ್ಲಿ ಈ ಗುಳ್ಳೆಗಳು ಜನನಾಂಗ ಅಥವಾ ಗುದಭಾಗದಲ್ಲಿ ಮೊದಲಿಗೆ ಕಂಡುಬರುತ್ತವೆ.
ಈ ಗುಳ್ಳೆಗಳು ಮುಖದ ಮೇಲೆ, ಬಾಯಿಯ ಒಳಗೆ, ಕೈಗಳು, ಕಾಲುಗಳು ಮತ್ತು ದೇಹದ ಇತರ ಭಾಗಗಳಲ್ಲಿಯೂ ಉಂಟಾಗಬಹುದು.
ಈ ಗುಳ್ಳೆಗಳಲ್ಲಿ ನೀರು ತುಂಬಿಕೊಂಡು ಬಳಿಕ ಒಡೆಯಬಹುದು. ಆ ಬಳಿಕ ಅವು ಒಣಗಿ ಹುರುಪೆಗಳಾಗಿ ಕ್ರಮೇಣ ಬಿದ್ದುಹೋಗುತ್ತವೆ.
ಗುಳ್ಳೆಗಳು ಆರಂಭದಲ್ಲಿ ನೋವಿನಿಂದ ಕೂಡಿರುತ್ತವೆ, ಆದರೆ ಒಡೆದು, ಒಣಗಿ ಹುರುಪೆಗಳಾಗಿ ಬದಲಾಗುವ ಸಂದರ್ಭದಲ್ಲಿ ತುರಿಕೆ ಉಂಟಾಗಬಹುದು. ಕೆಲವು ಬಾರಿ ಎಂಪಾಕ್ಸ್‌ಗೆ ತುತ್ತಾದ ರೋಗಿಗಳು
ಈ ಕೆಳಗಿನ ಇನ್ನಿತರ ಕೆಲವು ಲಕ್ಷಣಗಳನ್ನು ಕೂಡ ಹೊಂದಿರಬಹುದು:
ಗುದದ್ವಾರದಲ್ಲಿ ನೋವು, ಊತ ಮತ್ತು ರಕ್ತಸ್ರಾವದಂತಹ ಲಕ್ಷಣಗಳು
ಗಂಟಲು ನೋವು – ಇದರಿಂದ ನುಂಗಲು ಅಥವಾ ಆಹಾರ ಸೇವಿಸಲು ಕಷ್ಟವಾಗುತ್ತದೆ
ಕಣ್ಣಿನ ಊತ, ಕಿರಿಕಿರಿ, ನೋವು ಅಥವಾ ಸ್ಪಷ್ಟವಾಗಿ ಕಾಣಿಸದ ಸ್ಥಿತಿ
ಎಂ ಪಾಕ್ಸ್: ಚಿಕಿತ್ಸೆ ಹೇಗೆ?
ಎಂ ಪಾಕ್ಸ್ ಸೋಂಕಿಗೆ ತುತ್ತಾದವರಲ್ಲಿ ಬಹುತೇಕ ಮಂದಿ ಗಂಭೀರ ಅನಾರೋಗ್ಯಕ್ಕೀಡಾಗುವುದಿಲ್ಲ ಮತ್ತು ಗುಣಮುಖರಾಗುವ ವರೆಗೆ ಮನೆಯಲ್ಲಿಯೇ ಇರಬಹುದು. ಗುಣ ಹೊಂದಲು ಕೆಲವು ವಾರಗಳು ಬೇಕಾಗುತ್ತವೆ. ಕೆಲವು ಪ್ರಕರಣಗಳಲ್ಲಿ, ವೈದ್ಯರು ಟೆಕೊವಿರಿಮ್ಯಾಟ್ ಎನ್ನುವ ಆ್ಯಂಟಿವೈರಲ್ ಔಷಧ ಚಿಕಿತ್ಸೆಯನ್ನು ಶಿಫಾರಸು ಮಾಡಬಹುದಾಗಿದೆ.
ಯಾರು ಎಂ ಪಾಕ್ಸ್‌ಗೆ ತುತ್ತಾಗುವ ಅಪಾಯ ಹೊಂದಿರುತ್ತಾರೆ?
ಎಂ ಪಾಕ್ಸ್ ಸೋಂಕುಪೀಡಿತರ ನೇರ ಸಂಪರ್ಕಕ್ಕೆ ಬರುವ ಯಾವುದೇ ವ್ಯಕ್ತಿಗೆ ಸೋಂಕು ಹರಡಬಹುದಾಗಿದೆ.
ಡಾ| ಪೂಜಾ ಹಂಜಿ,
ಅಸಿಸ್ಟೆಂಟ್ ಪ್ರೊಫೆಸರ್,
ಜನರಲ್ ಮೆಡಿಸಿನ್ ವಿಭಾಗ
ಕೆಎಂಸಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಜನರಲ್ ಮೆಡಿಸಿನ್ ವಿಭಾಗ, ಕೆಎಂಸಿ, ಮಂಗಳೂರು)