Advertisement

ಅಂಕ ಗಣಿತ ಕಡ್ಡಾಯ!

09:12 AM Apr 29, 2019 | mahesh |

ಈಗ ಎಲ್ಲೆಲ್ಲೂ ಒಂದೇ ಪ್ರಶ್ನೆ “ಎಷ್ಟು ಮಾರ್ಕು ಬಂತು?’ ಅಂಕಗಳನ್ನೇ ಬುದ್ಧಿವಂತಿಕೆಯ ಮಾನದಂಡವಾಗಿ ಮಾಡಿ ಎಷ್ಟೋ ಸಮಯವಾಯಿತು. ಅಧಿಕ ಅಂಕ ಪಡೆದವರಿಗೆ ಸಾಕಷ್ಟು ಅವಕಾಶಗಳೇನೋ ಇವೆ. ಆದರೆ, ಕಡಿಮೆ ಅಂಕ ಪಡೆದವರನ್ನು ಮತ್ತು ಅನುತ್ತೀರ್ಣರಾದವರನ್ನು ಸಮಾಜ ಹೇಗೆ ಸ್ವೀಕರಿಸುತ್ತದೆ ?

Advertisement

ಗುರು ಕೇಳುತ್ತಾನೆ, “ನಿನಗೇನು ಬೇಕು?’
“ನನಗೆ ಝೆನ್‌ ಕಲಿಯಬೇಕು’ ಎನ್ನುತ್ತಾನೆ ಆಗಂತುಕ.
“ಸರಿ’ ಎಂದು ಹೇಳಿ ಗುರು ಅವನನ್ನು ತನ್ನ ಜೊತೆಗೆ ಇರಿಸಿಕೊಳ್ಳುತ್ತಾನೆ.
ಒಂದು ವರ್ಷ ಕಳೆದ ಬಳಿಕ ಗುರು ಕೇಳುತ್ತಾನೆ, “ನಿನಗೇನು ಬೇಕು?’
“ನನಗೆ ಝೆನ್‌ ಕಲಿಯಬೇಕು’ ಎನ್ನುತ್ತಾನೆ ಆಗಂತುಕ.
“ನೀನು ಪಾತಿ ಮಾಡಿ ಹೂಗಿಡಗಳನ್ನು ನೆಡಲು ಕಲಿತಿರುವೆಯಲ್ಲ’
“ಹೌದು’
“ಹೂಗಿಡಗಳನ್ನು ಕಸಿಮಾಡಲು ಕಲಿತಿರುವೆಯಲ್ಲ’
“ಹೌದು’
“ಗಿಡದಲ್ಲಿ ಅರಳಿದ ಬಣ್ಣ ಬಣ್ಣದ ಹೂಗಳನ್ನು ನೋಡಿ ಪರವಶನಾಗಲು ಕಲಿತಿರುವೆಯಷ್ಟೆ’
“ಹೌದು’
“ಆ ಹೂವುಗಳನ್ನು ಪೇಟೆಗೆ ಒಯ್ದು ಮಾಲೆ ಕಟ್ಟಿ ಮಾರಲು ಕಲಿತಿರುವೆಯಲ್ಲ’
“ಹೌದು’
“ಆ ಹಣದಿಂದ ಧಾನ್ಯ ತಂದು ಬೇಯಿಸಿ ಉಣ್ಣಲು ಕಲಿತಿರುವೆಯಲ್ಲ’
“ಹೌದು’
“ಝೆನ್‌ ಎಂದರೆ ಅದೇ’
.
ಝೆನ್‌ ಎಂದರೆ ಜ್ಞಾನ. ಜ್ಞಾನ ಎಂದರೆ ಏನು? ಯಾವುದು ಜ್ಞಾನ, ಯಾವುದು ಜ್ಞಾನವಲ್ಲ. ಇದನ್ನು ನಿರ್ಧರಿಸುವವರು ಯಾರು?
ಹೂಗಿಡಗಳನ್ನು ನೆಟ್ಟು ಅವುಗಳಿಗೆ ನೀರೆರೆದು ಹೂಬೆಳೆಸಿ ಅವುಗಳನ್ನು ಮಾರಿ ಜೀವನ ಹೊರೆಯುವುದು ಕೂಡಾ ಜ್ಞಾನವೇ.
ಹೆಚ್ಚಿನ ಸಂದರ್ಭದಲ್ಲಿ ನೋಡುತ್ತೇವೆ: ಹತ್ತನೆಯ ತರಗತಿಯಲ್ಲಿ ಕನ್ನಡ ಮೀಡಿಯಂನಲ್ಲಿ ಓದಿದವರು ಒಳ್ಳೆಯ ಅಂಕ ಬಂದರೆ ಪಿಯುಸಿಯಲ್ಲಿ “ಸಾಯನ್ಸ್‌’ ತೆಗೆದುಕೊಳ್ಳುತ್ತಾರೆ. ಆದರೆ, ವಿಜ್ಞಾನದ ಪರಿಭಾಷೆಗಳು ಅವರಿಗೆ ಅರ್ಥವಾಗುವುದಿಲ್ಲ. ಕಲಿಯಲು ಕಷ್ಟಪಡುತ್ತಾರೆ. ಕೆಲವರು ಫೇಲ್‌ ಆಗುತ್ತಾರೆ, ಇನ್ನು ಕೆಲವರು ಕಡಿಮೆ ಅಂಕ ತೆಗೆಯುತ್ತಾರೆ. ಮುಂದೆ ಹೇಗೆ ಶಿಕ್ಷಣ ಮುಂದುವರಿಸುವುದು ಎಂದು ಕಂಗಾಲಾಗಿ ಬಿಡುತ್ತಾರೆ. ಹೆಚ್ಚಿನವರ ಶೈಕ್ಷಣಿಕ ಬದುಕು ಕಠಿಣವೆನ್ನಿಸುತ್ತದೆ.

ಬ್ರಿಲಿಯಂಟ್‌ ಅನ್ನಿಸಿಕೊಂಡವರು “ಸಾಯನ್ಸ್‌’ ಓದಿ ಒಳ್ಳೆಯ ಅಂಕ ತೆಗೆದು “ಇಂಜಿನಿಯರಿಂಗ್‌’ ಮಾಡಿ ಯಾವುದಾದರೂ ಕಾರ್ಖಾನೆಯಲ್ಲಿ ದುಡಿಯುತ್ತ ಜೀವನವನ್ನು ಕಳೆಯುತ್ತಾರೆ; ಅಕ್ಷರಶಃ ಜೀವನವನ್ನು ಕಳೆದುಕೊಂಡು ಬಿಡುತ್ತಾರೆ. ಆದರೆ, ಅನುತ್ತೀರ್ಣರಾದವರು ಕೃಷಿಕರಾಗಿ, ಅದೇ ಕ್ಷೇತ್ರದಲ್ಲಿ ನಿಷ್ಠೆಯಿಂದ ದುಡಿದು, ಯಾರಿಗೂ ಸಲಾಂ ಹಾಕದೆ ಸ್ವಾವಲಂಬಿಗಳಾಗಿ ಬದುಕಬಹುದು! ಇವತ್ತು ಒಳ್ಳೆಯ ಅಂಕ ತೆಗೆದು ಇಂಜಿನಿಯರ್‌ಗಳಾದವರು ಕೂಡ “ಕ್ಯಾಂಪಸ್‌ ಸೆಲೆಕ್ಷನ್‌’ ಆಗದಿದ್ದರೆ ಉದ್ಯೋಗಕ್ಕೆ ಪರದಾಡುವ ಸ್ಥಿತಿ ಬಂದಿದೆ.

ಇಂಜಿನಿಯರ್‌ಗಳಾದರೋ ದಿಢೀರನೇ ಉದ್ಯೋಗ ಕ್ಷೇತ್ರಕ್ಕೆ ಹೋದಾಗ ಅಲ್ಲಿ ಅವರು ಕೆಲಸ ಮಾಡಬೇಕಾದ ಕೌಶಲವೇ ಬೇರೆ, ತಾನು ಕಲಿತ ವಿಷಯವೇ ಬೇರೆ ಎಂಬಂಥ ಸ್ಥಿತಿಯನ್ನು ಎದುರಿಸುತ್ತಾರೆ. ಜ್ಞಾನ ಮತ್ತು ಕೌಶಲ ಜೊತೆಯಾಗಿ ಇದ್ದರೆ ಯಾವುದೂ ಅಸಾಧ್ಯವಲ್ಲ. ಹೆಚ್ಚಿನ ಕಂಪೆನಿಗಳು ಮುಚ್ಚಿ ಹೋಗುವುದು ಅಲ್ಲಿನ ಪ್ರಾಡಕ್ಟ್ಗಳಿಗೆ ಬೇಡಿಕೆ ಇರದಿರುವ ಕಾರಣಕ್ಕಾಗಿ ಅಲ್ಲ , ಆ ಪ್ರಾಡಕ್ಟ್ಗಳನ್ನು ರೂಪಿಸುವ ಕುಶಲಗಾರರು ಇಲ್ಲದ ಕಾರಣಕ್ಕಾಗಿ.

ನಿಜವಾಗಿ ಅಂಥ ಕೌಶಲವುಳ್ಳವರು, ಶಾಲಾಕಾಲೇಜುಗಳಲ್ಲಿ ಅಂಕ ಪಡೆಯಲು ಫೆಯಿಲ್‌ ಆಗಿ ಎಲ್ಲಿಯೋ ಕಳೆದುಹೋಗಿರುತ್ತಾರೆ. ಆದರೆ, ಒಳ್ಳೆಯ ಅಂಕ ಪಡೆದವರನ್ನೇ ಕೌಶಲವುಳ್ಳವರೆಂದು ಪರಿಗಣಿಸಿ ಅವರಿಗೆ ದೊಡ್ಡ ಕಂಪೆನಿಗಳ ಹೊಣೆಯನ್ನು ವಹಿಸಲಾಗುತ್ತದೆ. ಅವರು ತಾವು ಒಳ್ಳೆಯ ಅಂಕ ಪಡೆದವರೆಂಬುದನ್ನು ಮರೆತು, ವಿನಯಪೂರ್ವಕವಾಗಿ ಉದ್ಯೋಗದಲ್ಲಿ ಪರಿಣತಿಯನ್ನು ಬೆಳೆಸಿಕೊಳ್ಳದಿದ್ದರೆ ಅವರು ತಾವು ವಿಫ‌ಲರಾಗುವುದು ಮಾತ್ರವಲ್ಲ, ತಮ್ಮೊಂದಿಗೆ ಒಂದು ವ್ಯವಸ್ಥೆಯನ್ನೂ ವಿಫ‌ಲಗೊಳಿಸುತ್ತಾರೆ.

Advertisement

ಮುಖ್ಯವಾಗಿ ಜ್ಞಾನ ಎಂದರೇನು? ಕೌಶಲ ಎಂದರೇನು? ಇವೆರಡನ್ನೂ ಜೊತೆಯಾಗಿರಿಸಬೇಕೆ, ಬೇರೆ ಬೇರೆಯಾಗಿ ಕಾಣಬೇಕೆ?- ಇಂಥ ಸಂಗತಿಗಳ ಕುರಿತು ಚಿಂತನೆಗಳೇ ನಡೆದಿಲ್ಲ.
ಹಾಗಾಗಿಯೇ ಝೆನ್‌ ಗುರು ಹೇಳಿರುವುದು- ಹೂಗಿಡಗಳನ್ನು ಬೆಳೆಸುವುದು ಕೂಡ ಜ್ಞಾನವೇ.

ಸರಸ್ವತಿ ರಾವ್‌ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next