Advertisement

ಎಡನೀರು ಸ್ವಾಮೀಜಿ ಕೃಷ್ಣೈಕ್ಯ: ಏನಿದು ದೇಶದ ಗಮನ ಸೆಳೆದಿದ್ದ ಕೇಶವಾನಂದ ಭಾರತಿ ಪ್ರಕರಣ

12:55 PM Sep 06, 2020 | keerthan |

ಮಣಿಪಾಲ: ಕೇರಳದ ಕಾಸರಗೋಡಿನ ಶಂಕರಾಚಾರ್ಯ ಸಂಸ್ಥಾನಂ ಎಡನೀರು ಮಠಾಧೀಶರಾದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು ಅಸ್ತಂಗತರಾಗಿದ್ದಾರೆ. 1970ರಲ್ಲಿ ಕೇಶವಾನಂದ ಭಾರತಿ ವರ್ಸಸ್ ಕೇರಳ ಸರ್ಕಾರ ಪ್ರಕರಣ ದೇಶದ ನ್ಯಾಯಂಗ ವ್ಯವಸ್ಥೆಯಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಸುಪ್ರೀಂ ಕೋರ್ಟ್ ನ ಅತೋ ದೊಡ್ಡ ಪೀಠದಲ್ಲಿ ನಿರಂತರ 68 ದಿನಗಳ ನಡೆದ ವಿಚಾರಣೆಯ ಕುರಿತು ಇಲ್ಲಿದೆ ಮಾಹಿತಿ.

Advertisement

ಅದು 1970ರ ಫೆಬ್ರವರಿ ತಿಂಗಳು. ಕೇರಳ ಸರ್ಕಾರ ಭೂಸುಧಾರಣೆ ಕಾಯ್ದೆಯ ಹೆಸರಲ್ಲಿ ಕಾಸರಗೋಡಿನ ಬಳಿಯಿರುವ “ಎಡನೀರು ಮಠ’ಕ್ಕೆ ಸೇರಿದ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳಲು ನಿರ್ಧರಿಸಿ, ಈ ಕುರಿತು ನೋಟಿಸ್‌ ಜಾರಿ ಮಾಡಿತು. ಆದರೆ ಸರ್ಕಾರದ ಈ ನಡೆಗೆ ಎಡನೀರು ಮಠದ ಶ್ರೀ ಕೇಶವಾನಂದ ಭಾರತಿಯವರು ವಿರೋಧ ವ್ಯಕ್ತಪಡಿಸಿದರು.

ಆಗ ಅವರ ನೆರವಿಗೆ ಬಂದವರು ಪ್ರಖ್ಯಾತ ನ್ಯಾಯವಾದಿ, ನ್ಯಾಯಶಾಸ್ತ್ರಜ್ಞ ನಾನಾಬಾಯ್‌ ಫಾಲ್ಕಿವಾಲಾ. ಫಾಲ್ಕಿವಾಲಾ ಅವರು ಸ್ವಾಮೀಜಿಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಮನವೊಲಿಸಿದರು. ಅವರೇ ಅರ್ಜಿದಾರರ ಪರವಾಗಿ ವಕಾಲತ್ತು ವಹಿಸಿದ್ದರು. ಸರ್ಕಾರದ ಹಸ್ತಕ್ಷೇಪಲ್ಲದೇ ಧಾರ್ಮಿಕ ಸ್ವಾಮ್ಯದ ಆಸ್ತಿಯನ್ನು ನಿರ್ವಹಿಸುವ ಹಕ್ಕಿನ ಬಗ್ಗೆಯೂ ಅರ್ಜಿಯಲ್ಲಿ ಪ್ರಸ್ತಾಪವಿತ್ತು. ಈ ಪ್ರಕರಣ ಕೇವಲ ಮಠದ ಆಸ್ತಿಗೆ ಸಂಬಂಧಿಸಿದ ವಿಚಾರಕ್ಕಷ್ಟೇ ಅಲ್ಲದೇ, ಮೂಲಭೂತ ಹಕ್ಕುಗಳ ಮಾನ್ಯತೆಯ ಬಗ್ಗೆಯೂ ವಿಸ್ಮತ ಚರ್ಚೆಗೆ ನಾಂದಿ ಹಾಡಿದ್ದು ವಿಶೇಷ. “ಕೇಶವಾನಂದ ಭಾರತಿ ವರ್ಸಸ್‌ ಕೇರಳ ಸರ್ಕಾರ’ ಎಂದು ಗುರುತಿಸಿಕೊಳ್ಳುವ ಈ ಪ್ರಕರಣದ ಕುರಿತಾಗಿ ಸುಪ್ರೀಂ ಕೋರ್ಟ್‌ನಲ್ಲಿ ನಿರಂತರ 68 ದಿನಗಳ ಕಾಲ ವಾದ ಪ್ರತಿವಾದಗಳು ನಡೆದವು!

1972ರ ಅಕ್ಟೋಬರ್‌ 31ರಂದು ಆರಂಭವಾದ ವಾದ- ಪ್ರತಿವಾದಗಳು 1973ರ ಮಾರ್ಚ್‌ 23ಕ್ಕೆ ಮುಗಿದವು. ಈ ಕೇಸಿನ ಕುರಿತಾಗಿ ಬಂದ ತೀರ್ಪನ್ನು ಭಾರತದ ನ್ಯಾಯಶಾಸ್ತ್ರದ ಇತಿಹಾಸದಲ್ಲಿ ಹಾಗೂ ಭಾರತದ ಸಂವಿಧಾನದ ಕುರಿತಾದ ವಿಚಾರದಲ್ಲಿ ಮಹತ್ತರ ಮೈಲಿಗಲ್ಲೆಂದು ಪರಿಗಣಿಸಲಾಗುತ್ತದೆ. ಇನ್ನೊಂದು ವಿಶೇಷತೆ ಎಂದರೆ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತೀ ದೊಡ್ಡ ನ್ಯಾಯಪೀಠ, ಅಂದರೆ 13 ಸದಸ್ಯರ ಸಾಂವಿಧಾನಿಕ ನ್ಯಾಯಪೀಠವು ಈ ಕೇಸನ್ನು ಕೂಲಂಕಷವಾಗಿ ಪರಿಶೀಲಿಸಿದ್ದು.

Advertisement

ಇದನ್ನೂ ಓದಿ: ವಿಷ್ಣುಪಾದದಲ್ಲಿ ಐಕ್ಯರಾದ ಎಡನೀರು ಕೇಶವಾನಂದ ಭಾರತಿ ಸ್ವಾಮೀಜಿ

“ ಸಂವಿಧಾನಕ್ಕೆ ತಿದ್ದುಪಡಿ ತರುವ ಅಧಿಕಾರ ಸಂಸತ್ತಿಗೆ ಇದೆಯೇನೋ ಸರಿ. ಆದರೆ, ಈ ಅಧಿಕಾರ ಬಳಸಿ ಸಂಸತ್ತು ಸಂವಿಧಾನವನ್ನು ಹೇಗೆ ಬೇಕಿದ್ದರೂ ತಿದ್ದಬಹುದೇ?’ ಎಂಬ ಪ್ರಶ್ನೆ ಕೇಶವಾನಂದ ಭಾರತಿ ಪ್ರಕರಣದಲ್ಲಿ ಪ್ರಮುಖ ಪ್ರಶ್ನೆಯಾಗಿ ಎದುರಾಯಿತು. ಆಗ ಸುಪ್ರೀಂ ಕೋರ್ಟ್‌, ಸಂವಿಧಾನಕ್ಕೆ ತರುವ ಯಾವುದೇ ತಿದ್ದುಪಡಿಯು ಅದರ ಮೂಲ ಸ್ವರೂಪಕ್ಕೆ, ಅಂದರೆ, ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವಂತಿರಬಾರದು ಎಂದು ಅಭಿಪ್ರಾಯಪಟ್ಟಿತು. ಅಲ್ಲದೆ ಪರಿಚ್ಛೇದ (ಶೆಡ್ಯೂಲ್) 9ರಲ್ಲಿ ಶಾಸಕಾಂಗದಲ್ಲಿ ನಿರ್ಣಯಿಸಲಾದ ಸಾಂವಿಧಾನಿಕ ತಿದ್ದುಪಡಿಗಳು ನ್ಯಾಯಿಕ ಸಮಿತಿಗಳಿಂದ ಅಧ್ಯಯನಕ್ಕೊಳಪಟ್ಟ ನಂತರವೇ ತಿದ್ದುಪಡಿಗೊಳ್ಳುವಂತೆಯೂ ಹೊಸ ಮಾರ್ಗಸೂಚಿ ಜಾರಿ ಮಾಡಿತು.

ಹದಿಮೂರು ನ್ಯಾಯಮೂರ್ತಿಗಳ ನ್ಯಾಯಪೀಠವು 7-6ರಷ್ಟಿದ್ದ ಅತಿಸೂಕ್ಷ್ಮ ಬಹುಮತದಿಂದ ಈ ತೀರ್ಪು ನೀಡಿತು. ಸಂವಿಧಾನದ ಮೂಲಭೂತ ವೈಶಿಷ್ಟ್ಯಗಳನ್ನು ತಿರುಚುವ‌ ಅಥವಾ ಅದನ್ನು ಊನಗೊಳಿಸುವ ಅಧಿಕಾರ ಸಂಸತ್ತಿಗಿಲ್ಲ ಎನ್ನುವ ಮೂಲಕ, ಬೆಳೆಯುತ್ತಲೇ ಇದ್ದ ಶಾಸಕಾಂಗದ ಕೈಗಳನ್ನು ಹಿಡಿದು ನಿಲ್ಲಿಸಿತು. ಈಗಲೂ ಭಾರತದ ಕಾನೂನು ವಿದ್ಯಾರ್ಥಿಗಳು ಅಭ್ಯಸಿಸುವ ಬಹು ಮುಖ್ಯವಾದ ಕೇಸುಗಳಲ್ಲಿ ಕೇಶವಾನಂದ ಭಾರತಿ ಹಾಗೂ ಕೇರಳ ಸರ್ಕಾರದ ಕೇಸು ಅಗ್ರಗಣ್ಯವಾಗಿದೆ. ಕೇಶವಾನಂದ ಪ್ರಕರಣದ ಸಿದ್ಧತೆಗೆ ನಡೆಸಿದ ತಯಾರಿ, ಅದಕ್ಕಾಗಿ ಪಟ್ಟ ಪರಿಶ್ರಮ ಅಗಾಧವಾದದ್ದು. ಅಕ್ಷರಶಃ ನೂರಾರು ಪ್ರಕರಣಗಳನ್ನು ಅಂದು ಉಲ್ಲೇಖೀಸಲಾಗಿತ್ತು, ಅಟಾರ್ನಿ ಜನರಲ್‌ರಂತೂ 71 ದೇಶಗಳ ಸಂವಿಧಾನಿಕ ನಿಬಂಧನೆಗಳನ್ನು ವಿಶ್ಲೇಷಿಸುವ ಚಾರ್ಟ್‌ ಸಿದ್ಧಪಡಿಸಿದ್ದರು.

ಎ.ಎನ್‌.ರೇಗೆ ಇಂದಿರಾ ಕಟಾಕ್ಷ!

ಈ ತೀರ್ಪಿನ ನಂತರ ಆಘಾತಕಾರಿ ಬೆಳವಣಿಗೆಯೊಂದೂ ನಡೆಯಿತು. ಇಂದಿರಾ ಸರ್ಕಾರ, ನ್ಯಾಯಮೂರ್ತಿಗಳಾದ ಕೆ.ಎಸ್‌. ಹೆಗ್ಡೆ, ಜೆ.ಎನ್‌.ಶೀಲತ್‌ ಮತ್ತು ಎ.ಎನ್‌. ಗ್ರೋವರ್‌ ಎಂಬ ಮೂವರ ಹಿರಿತನವನ್ನು ಬದಿ ಗಿರಿಸಿ ನ್ಯಾಯಮೂರ್ತಿ ಎ.ಎನ್‌.ರೇ ಅವರನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಿತು. (ಎ.ಎನ್‌.ರೇ. ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದರು!) ಪ್ರಕರಣದಲ್ಲಿ ಜ. ಕೆ.ಎಸ್‌. ಹೆಗ್ಡೆ, ಜ. ಜೆ.ಎನ್‌.ಶೀಲತ್‌ ಮತ್ತು ಜ. ಎ.ಎನ್‌. ಗ್ರೋವರ್‌ ಬಹುಮತದ ಪರವಾಗಿ ಇದ್ದದ್ದು ಇಂದಿರಾ ಸರ್ಕಾರದ ಮುನಿಸಿಗೆ ಕಾರಣವಾಗಿತ್ತು. ಎ.ಎನ್‌. ರೇ. ಅವರನ್ನು ಸಿಜೆಐ ಆಗಿ ನೇಮಿಸಿದ್ದನ್ನು ಭಾರತೀಯ ಕಾನೂನು ಇತಿಹಾಸದಲ್ಲೇ ಕರಾಳ ದಿನ ಎಂದು ಪರಿಗಣಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next