Advertisement

ಉಗ್ರರ ಕಿತ್ತಾಟ: ನಾವೇ ನಿಜವಾದ ಜಿಹಾದಿಗಳು…ತಾಲಿಬಾನ್ V/S ಐಸಿಸ್ ಖೊರಾಸಾನ್!

12:19 PM Aug 27, 2021 | Team Udayavani |

ತಾಲಿಬಾನ್ ಉಗ್ರರ ಹಿಡಿತದಲ್ಲಿರುವ ಅಫ್ಘಾನಿಸ್ತಾನದಲ್ಲಿ ಐಸಿಸ್ ಕೆ ಉಗ್ರರು ಕಾಬೂಲ್ ವಿಮಾನ ನಿಲ್ದಾಣ ಸಮೀಪ ಎರಡು ಆತ್ಮಹತ್ಯಾ ಬಾಂಬ್ ದಾಳಿ ನಡೆಸುವ ಮೂಲಕ ಐಸಿಸ್ ನಂತಹ ಉಗ್ರರ ಸಂಘಟನೆಗಳು ಮತ್ತಷ್ಟು ಬಲಹೆಚ್ಚಿಸಿಕೊಳ್ಳಲಿದೆ ಎಂಬ ಆತಂಕಕ್ಕೆ ಪುಷ್ಠಿ ನೀಡುವಂತಾಗಿದೆ ಎಂದು ವರದಿ ತಿಳಿಸಿದೆ.

Advertisement

ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಅಮೆರಿಕದ 13 ಸೈನಿಕರು ಸೇರಿದಂತೆ ನೂರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಐಸಿಸ್ ಖೊರಾಸಾನ್ ಉಗ್ರಗಾಮಿ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಏತನ್ಮಧ್ಯೆ ತನಗೂ ದಾಳಿಗೂ ಯಾವುದೇ ಸಂಬಂಧವಿಲ್ಲ ಎಂದು ತಾಲಿಬಾನ್ ನಾಟಕೀಯ ಹೇಳಿಕೆಯನ್ನು ನೀಡಿರುವುದಾಗಿ ವರದಿ ವಿಶ್ಲೇಷಿಸಿದೆ.

2011ರ ಬಳಿಕ ಅಫ್ಘಾನಿಸ್ತಾನದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಅಮೆರಿಕದ 13 ಸೈನಿಕರು ಸಾವನ್ನಪ್ಪಿರುವುದು ದೊಡ್ಡ ಹೊಡೆತ ನೀಡಿದೆ. ತಾಲಿಬಾನ್ ಆಡಳಿತವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ 2001ರಲ್ಲಿ ಅಮೆರಿಕ ಸೇನೆ ಬೀಡುಬಿಟ್ಟ ನಂತರ ಮತ್ತೆ ಉಗ್ರರ ಅಟ್ಟಹಾಸ ಮುಂದುವರಿದಂತಾಗಿದೆ. ಇದೀಗ 20 ವರ್ಷಗಳ ಬಳಿಕ ತಾಲಿಬಾನ್ ಅಫ್ಘಾನ್ ಆಡಳಿತವನ್ನು ವಶಕ್ಕೆ ತೆಗೆದುಕೊಂಡಿರುವ ಪರಿಣಾಮ ಆಲ್ ಖೈದಾ, ಐಸಿಸ್ ನಂತಹ ಉಗ್ರಗಾಮಿ ಸಂಘಟನೆಗಳು ಬೆಳೆಯಲು ಕಾರಣವಾಗಲಿದೆ ಎಂದು ರಾಜಕೀಯ ತಜ್ಞರು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಯಾರಿವರು ಐಸಿಸ್ ಖೊರಾಸಾನ್:

Advertisement

ಪಾಕಿಸ್ತಾನ್ ತಾಲಿಬಾನ್ ಉಗ್ರಗಾಮಿ ಸಂಘಟನೆಯಿಂದ ಹೊರಬಂದವರು ಅಫ್ಘಾನಿಸ್ತಾನದ ಉಗ್ರರ ಜತೆ ಕೈಜೋಡಿಸಿದ್ದರು. ಬಳಿಕ ತಮ್ಮದೇ ಪ್ರತ್ಯೇಕ ಐಸಿಸ್ ಖೊರಾಸಾನ್ ಉಗ್ರಗಾಮಿ ಸಂಘಟನೆಯನ್ನು ಹುಟ್ಟುಹಾಕಿದ್ದು, 2014ರಲ್ಲಿ ಸಿರಿಯಾ ಮತ್ತು ಇರಾಕ್ ನಲ್ಲಿ ತಮ್ಮ ಅಧಿಪತ್ಯ ಹೊಂದಿರುವುದನ್ನು ಘೋಷಿಸಿದ್ದರು.

ಈಶಾನ್ಯ ಅಫ್ಘಾನಿಸ್ತಾನದಲ್ಲಿ ಮುಖ್ಯವಾಗಿ ಕುನಾರ್, ನಂಗರ್ ಹಾರ್ ಮತ್ತು ನುರಿಸ್ತಾನ್ ಪ್ರಾಂತ್ಯಗಳಲ್ಲಿ ಐಸಿಸ್ ಖೊರಾಸಾನ್ ಹಿಡಿತವನ್ನು ಬಿಗಿಗೊಳಿಸಿದ ನಂತರ ಐಸಿಸ್ ಉಗ್ರಗಾಮಿ ಸಂಘಟನೆ ಐಸಿಸ್ ಕೆ ಉಗ್ರರಿಗೆ ಮಾನ್ಯತೆ ನೀಡಿರುವುದಾಗಿ ವರದಿ ವಿವರಿಸಿದೆ. ಅಷ್ಟೇ ಅಲ್ಲ ಐಸಿಸ್ ಖೊರಾಸಾನ್ ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಹಾಗೂ ಕಾಬೂಲ್ ಸೇರಿದಂತೆ ಅಫ್ಘಾನಿಸ್ತಾನದಲ್ಲಿ ಸ್ಲೀಪರ್ ಸೆಲ್ ಗಳ ಮೂಲಕ ಕಾರ್ಯಾಚರಿಸುತ್ತಿತ್ತು ಎಂದು ವರದಿ ಹೇಳಿದೆ.

ಖೊರಾಸಾನ್ ಇರಾನ್ ಐತಿಹಾಸಿಕ ಪ್ರಾಂತ್ಯದ ಹೆಸರಾಗಿದೆ. ಇದೇ ಹೆಸರಿನ ಮೂಲಕ ಐಸಿಸ್ ಗುರುತಿಸಿಕೊಂಡಿದ್ದು, ಇಂದು ಪಾಕಿಸ್ತಾನ, ಇರಾನ್, ಅಫ್ಘಾನಿಸ್ತಾನ ಮತ್ತು ಸೆಂಟ್ರಲ್ ಏಷ್ಯಾದಲ್ಲಿ ಐಸಿಸ್ ಕೆ ಸಕ್ರಿಯವಾಗಿದೆ.

ಐಸಿಸ್ ಖೊರಾಸಾನ್ ಉಗ್ರಗಾಮಿ ಸಂಘಟನೆ ಮಸೀದಿ, ಸಾರ್ವಜನಿಕ ಸ್ಥಳ, ಆಸ್ಪತ್ರೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದು, ಮುಖ್ಯವಾಗಿ ಶಿಯಾ ಜನಾಂಗದ ಮೇಲೆ ಹೆಚ್ಚಿನ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ. ಬಾಂಬ್ ದಾಳಿ, ಹತ್ಯೆಗಳನ್ನು ನಡೆಸಿದರೂ ಕೂಡಾ ಐಸಿಸ್ ಖೊರಾಸಾನ್ ಅಫ್ಘಾನಿಸ್ತಾನದಲ್ಲಿ ಯಾವುದೇ ಪ್ರದೇಶದ ಮೇಲೆ ಹಿಡಿತ ಸಾಧಿಸುವಲ್ಲಿ ವಿಫಲವಾಗಿತ್ತು. ಅದಕ್ಕೆ ಕಾರಣ ತಾಲಿಬಾನ್ ಮತ್ತು ಅಮೆರಿಕ ನೇತೃತ್ವದ ಪಡೆಗಳ ಕಾರ್ಯಾಚರಣೆ.

ಐಸಿಸ್ ಖೊರಾಸಾನ್ ಸಂಘಟನೆಯನ್ನು ಹಫೀಜ್ ಸಯೀದ್ ಖಾನ್ ಹುಟ್ಟುಹಾಕಿದ್ದು, ಇಬ್ಬರೂ ಈತ 2016ರ ಜುಲೈ 26ರಂದು ಅಫ್ಘಾನಿಸ್ತಾನದ ನಂಗರ್ ಹಾರ್ ಪ್ರಾಂತ್ಯದಲ್ಲಿ ಅಮೆರಿಕದ ಸೇನಾಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹತ್ಯೆಗೀಡಾಗಿದ್ದ. ಖಾನ್ ಸಾವಿನ ಬಳಿಕ ಮೂರು ಮಂದಿ ಐಸಿಸ್ ಖೊರಾಸಾನ್ ನೇತೃತ್ವ ವಹಿಸಿಕೊಂಡಿದ್ದು, ಮೂವರನ್ನು ಅಮೆರಿಕ ಸೇನಾಪಡೆ ಹತ್ಯೆಗೈದಿತ್ತು.

ತಾಲಿಬಾನ್ V/s ಐಸಿಸ್ ಖೊರಾಸಾನ್:

ತಾಲಿಬಾನ್ ಮತ್ತು ಐಸಿಸ್ ಖೊರಾಸಾನ್ ಸಂಘಟನೆಯಲ್ಲಿರುವುದು ಕಟ್ಟಾ ಸುನ್ನಿ ಉಗ್ರರು. ಇವರ ನಡುವೆ ಹಗ್ಗಜಗ್ಗಾಟವೂ ಮುಂದುವರಿದೆ. ಎರಡೂ ಸಂಘಟನೆಗಳು ತಾವೇ ನಿಜವಾದ ಜಿಹಾದಿಗಳು ಎಂಬುದು ಅವರ ವಾದವಾಗಿದೆ. ಇದರ ಪರಿಣಾಮ ತಾಲಿಬಾನ್ ಮತ್ತು ಐಸಿಸ್ ಖೊರಾಸಾನ್ ಸಂಘಟನೆ ನಡುವೆ ರಕ್ತದೋಕುಳಿ ಹರಿದಿತ್ತು. 2019ರಲ್ಲಿ ಐಸಿಸ್ ಕೆ ತಮ್ಮ ಪ್ರದೇಶವನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾದ ನಂತರ ತಾಲಿಬಾನ್ ದೊಡ್ಡ ಮಟ್ಟದ ಜಯ ಸಾಧಿಸಿತ್ತು.

ತಾಲಿಬಾನ್ ಮತ್ತು ಐಸಿಸ್ ಖೊರಾಸಾಸ್ ಜಿಹಾದಿಗಳ ನಡುವಿನ ದ್ವೇಷ ಮುಂದುವರಿದಿದ್ದು, ತಾಲಿಬಾನ್ ಧರ್ಮಭ್ರಷ್ಟ ಸಂಘಟನೆ ಎಂದು ಐಸಿಸ್ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next