Advertisement
ಮಾಧವ,ನೆನಪಿದೆಯಾ? ಜೊತೆ ಜೊತೆಯಾಗಿ ಕುಳಿತು ನಾವಾಡಿರುವ ಮಾತುಗಳಿಗೆ, ಕಾಡುಹರಟೆಗಳಿಗೆ ಲೆಕ್ಕವೇ ಇಲ್ಲ. ಒಮ್ಮೊಮ್ಮೆ ಅರಳು ಹುರಿದಂತೆ ಹರಟೆ ಕೊಚ್ಚಿದರೆ, ಇನ್ನೊಮ್ಮೆ ಗಂಭೀರವಾದ ಚರ್ಚೆಗಳು. ಒಂದಷ್ಟು ಬಾರಿ ಒಬ್ಬರ ಕಾಲನ್ನೊಬ್ಬರು ಎಳೆಯುತ್ತಿದ್ದರೆ, ಮತ್ತೂಂದಷ್ಟು ಬಾರಿ ಭವಿಷ್ಯದ ಕುರಿತು ಸಲಹೆ-ಸಾಂತ್ವನಗಳು. ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಿದೆ, ಕರುಳು ಕಿತ್ತುಬರುವಂತೆ ದುಃಖ ತೋಡಿಕೊಂಡದ್ದೂ ಇದೆ. ಮಾತುಗಳಿಂದ ಕೋಪಗೊಂಡದ್ದು, ಬೇಸರಿಸಿಕೊಂಡದ್ದು… ಮತ್ತೆ ಮಾತಾಡಿ ಅವುಗಳನ್ನು ಬಗೆಹರಿಸಿಕೊಂಡದ್ದೂ ಇದೆ.
Related Articles
Advertisement
ಧೈರ್ಯಸ್ಥೆ ಎನಿಸಿಕೊಂಡ ನಾನೇ ಇದೊಂದು ವಿಷಯದಲ್ಲಿ ಮಾತ್ರ ಅಂಜುಬುರುಕಿಯಾಗುತ್ತೇನೆ. ನಾಲಿಗೆಯ ತುದಿಯವರೆಗೂ ಬಂದ ಮಾತುಗಳು ಒಮ್ಮೆಲೇ ಮೌನದ ಶಿಖರವನ್ನೇರಿ ಕುಳಿತುಬಿಡುತ್ತವೆ. ಆಗೆಲ್ಲ, ನಮ್ಮ ನಡುವೆ ಅಧಿಪತ್ಯ ಸಾಧಿಸುವುದು…. ದಿವ್ಯಮೌನ!!
ಆಶ್ಚರ್ಯವೆಂದರೆ, ನಾನು ಮೌನಗೌರಿಯಾಗಿ ಕುಳಿತಾಗೆಲ್ಲ ನೀನೂ ಮೂಗನಂತೆ ಸುಮ್ಮನಿದ್ದುಬಿಡುತ್ತೀಯ. ಅದು ನನ್ನ ಮೌನಕ್ಕೆ ನೀನು ನೀಡುವ ಮೌನ ಸಾಂತ್ವನವೋ ಅಥವಾ ನೀನೂ ನನ್ನನ್ನು ಪ್ರೀತಿಸುತ್ತಿದ್ದು, ಹೇಳಿಕೊಳ್ಳಲಾರದೆ ಒದ್ದಾಡುತ್ತಿರಬಹುದಾ?… ಈ ಆಲೋಚನೆ ಬಂದಾಗೆಲ್ಲ ನಿನ್ನ ಕಣ್ಣುಗಳಲ್ಲಿ ಹುಡುಕಾಡುತ್ತೇನೆ, ಏನಾದರೂ ಸುಳಿವು ಕಾಣಬಹುದಾ ಅಂತ. ನಿನ್ನ ಆ ಮೌನ ಸ್ನೇಹದ ಸುಧೆಯೋ, ಪ್ರೇಮದ ಪ್ರವಾಹವೋ ಅಂತ ನಿರ್ಧರಿಸಲಾಗದೆ ಸೋತು ಸುಮ್ಮನಾಗುತ್ತೇನೆ.
ನಮ್ಮ ಈ ಮೌನದ ಪರಿಗೆ ಒಂದಷ್ಟು ಅಸ್ಪಷ್ಟತೆಗಳಿವೆ ಗೆಳೆಯ. ಸ್ಪಷ್ಟತೆಗಾಗಿ ಇಲ್ಲಿ ಮಾತುಗಳ ಪ್ರವೇಶವಾಗಬೇಕೆಂಬ ಅನಿವಾರ್ಯವೂ ಇಲ್ಲ. ಮೌನಿಯಾಗೇ ನನ್ನ ಅಂಗೈಗೆ, ನಿನ್ನ ಅಂಗೈಯೊಳಗೊಂದಿಷ್ಟು ಬೆಚ್ಚಗಿನ ಜಾಗ ಕೊಟ್ಟರೂ ಸಾಕು…ಅಷ್ಟೇ ಸಾಕು…
ಕೇಳ್ಳೋ ಹುಡುಗಾ, ಮಾತುಗಳು ನಿರಂತರವಾಗಿ ಬಂದಪ್ಪುವ ಶರಧಿಯ ಅಲೆಗಳಂತೆ. ಮೌನ, ಅದೇ ಅಲೆಯೊಳಗೆ ಹುದುಗಿಕೊಂಡು ಬರುವ ಮರಳ ಕಣಗಳಂತೆ. ನಮ್ಮ ನಡುವಿನ ಪ್ರತಿಯೊಂದು ಮಾತಿನ ಅಲೆಯ ಒಡಲಲ್ಲೂ, ಮೌನದಿ ಅಭಿವ್ಯಕ್ತವಾಗುವ ಒಲವ ಮರಳ ಕಣಗಳಿವೆ. ಆ ಪುಟ್ಟ ಕಣಗಳಲ್ಲಿ ಪದಗಳ ಚೌಕಟ್ಟಿನಲ್ಲಿ ಕಟ್ಟಿಕೊಡಲಾರದಷ್ಟು ಅಗಾಧ ಪ್ರೇಮವಿದೆ.
ನಿನ್ನೊಲವ ತರಂಗಗಳ ಆಗಮನಕ್ಕಾಗಿ, ಕಡಲ ತೀರದ ಮರಳ ಹಾಸಿನಂತೆ ನನ್ನೆದೆ ಉಸಿರು ಬಿಗಿ ಹಿಡಿದು ಕಾದಿದೆ. ಒಂದೊಮ್ಮೆಯಾದರೂ ನನ್ನ ಮೌನವನ್ನು ಅರ್ಥೈಸಿಕೊಂಡುಬಿಡೋ ಹುಡುಗಾ…
ಇಂತಿ ನಿನ್ನ ರಾಧೆ!ನಿರಾಳ