Advertisement

ವಂಚನೆ ಎಂದರೆ ಏನು?

08:51 PM Sep 08, 2019 | Sriram |

ಯಾರೇ ಆಗಲಿ, ಒಬ್ಬ ವ್ಯಕ್ತಿಯನ್ನು ಕಪಟದಿಂದ, ಮೋಸದಿಂದ ಕುಟಿಲೋಪಾಯದಿಂದ ಇಲ್ಲವೇ ಅಪ್ರಾಮಾಣಿಕತೆಯಿಂದ ಹಾಗೆ ಮರೆಮಾಚಿಸಿದ ವ್ಯಕ್ತಿಯನ್ನು ಪುಸಲಾಯಿಸಿ, ಅವನಲ್ಲಿರುವ ಯಾವುದೇ ಆಸ್ತಿಯನ್ನು ಇನ್ನೊಬ್ಬರಿಗೆ ಕೊಡುವಂತೆ ಮಾಡಿದರೆ; ಅಥವಾ ಆ ಆಸ್ತಿ ಮೊದಲೇ ಇನ್ನೊಬ್ಬನ ಕೈಯಲ್ಲಿದ್ದು ಅದನ್ನು ಆ ಇನ್ನೊಬ್ಬನೇ ಉಳಿಸಿಕೊಳ್ಳುವುದಕ್ಕೆ ಒಪ್ಪಿಸಿದ್ದರೆ, ಇಲ್ಲವೇ ಆ ವ್ಯಕ್ತಿಯನ್ನು ಯಾವುದೇ ಕೆಲಸವನ್ನು ಮಾಡದ ಹಾಗೆ ಅಥವಾ ಮಾಡುವ ಹಾಗೆ ಬುದ್ಧಿಪೂರ್ವಕವಾಗಿ ಪುಸಲಾಯಿಸುತ್ತಾನೋ, ಇದರಿಂದ ಹಾಗೆ ಮರೆಮಾಚಿಸಲ್ಪಟ್ಟ ವ್ಯಕ್ತಿಗೆ ದೈಹಿಕವಾಗಿ ಮಾನಸಿಕವಾಗಿ ಮಾನಕ್ಕೆ ಅಥವಾ ಆಸ್ತಿಗೆ ಹಾನಿಯುಂಟಾದರೆ ಅಥವಾ ಹಾನಿ ಉಂಟಾಗುವ ಸಂಭವವಿದ್ದರೆ ಅವನು ವಂಚನೆ ಮಾಡಿದ್ದಾನೆ ಎಂದಾಗುತ್ತದೆ.

Advertisement

ಸರಳವಾದ ಭಾಷೆಯಲ್ಲಿ ಹೇಳುವುದಾದರೆ, ಕಪಟ, ಮೋಸ, ಕುಟಿಲೋಪಾಯ ಅಥವಾ ಅಪ್ರಾಮಾಣಿಕತೆಯಿಂದ, ಯಾರೇ ಆಗಲಿ ಇನ್ನೊಬ್ಬನನ್ನು ಪುಸಲಾಯಿಸಿ, ತಲೆಸವರಿ, ಅವನ ಆಸ್ತಿಪಾಸ್ತಿಯನ್ನು ಲಪಟಾಯಿಸಿದರೆ ಅಥವಾ ಅವನಿಗೆ ಯಾವುದೇ ರೀತಿಯ ಹಾನಿಯನ್ನು ಉಂಟುಮಾಡಿದರೆ (ಧನಹಾನಿ, ಮಾನ ಹಾನಿ, ಮಾನಸಿಕ ಹಾನಿ) ಅದನ್ನು ವಂಚನೆ ಎನ್ನಲಾಗುತ್ತದೆ. ಮೋಸ ಅನ್ನುವುದು ಎರಡೇ ಅಕ್ಷರದ ಪದವಾದರೂ, ಅದರ ಪ್ರಕಾರಗಳು ಭಿನ್ನವಾದವು, ವೈವಿಧ್ಯಮಯವಾದವು. ಮನುಷ್ಯನು ತನ್ನ ಬುದ್ಧಿಶಕ್ತಿಯನ್ನು ಚಾಣಾಕ್ಷತನವನ್ನು ಮೆರೆಸಲು, ಅನೇಕಾನೇಕ ಅವಕಾಶಗಳನ್ನು ಒದಗಿಸಿ ಕೊಡುವಂಥದ್ದು. ಮೋಸ ಮಾಡುವ ಪರಿಯನ್ನು ನಾವು ನೋಡಿದರೆ ನಾವು ಬೆರಗಾಗುತ್ತೇವೆ. ಮೂಕವಿಸ್ಮಿತರಾಗುತ್ತೇವೆ. ಮೋಸಕ್ಕೆ ಬಲಿಯಾದವರು ನಾವೇ. ಆದರೆ, ನಮ್ಮ ದಡ್ಡತನಕ್ಕೆ ನಮ್ಮನ್ನು ನಾವೇ ಹಳಿದುಕೊಳ್ಳುತ್ತೇವೆ.

ಮೋಸ ಮಾಡುವವರೆಲ್ಲರೂ ನಯವಂಚಕರಾಗಿರುತ್ತಾರೆ. ನಿಮ್ಮ ಭೋಳೆ ಸ್ವಭಾವ, ನಿಮ್ಮ ಅನನುಭವ, ನಿಮ್ಮ ದುರಾಸೆ, ಬೆಳ್ಳಗಿರುವುದೆಲ್ಲ ಹಾಲೆಂದು ನಂಬುವ ನಿಮ್ಮ ದೌರ್ಬಲ್ಯಇವುಗಳು ನಿಮ್ಮನ್ನು ಮೋಸಗಾರ ತನ್ನ ಬಲೆಯ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳಲು ನೆ‌ರವಾಗುತ್ತದೆ.

ಬೋನಿನ ಕೊಂಡಿಗೆ ಸಿಕ್ಕಿಸಿದ ಸುಟ್ಟ ಕೊಬ್ಬರಿಯ ಚೂರಿನ ಕಂಪಿನಿಂದ ಆಕರ್ಷಿತವಾದ ಇಲಿ, ಕೊಬ್ಬರಿಯ ಚೂರನ್ನು ಕಚ್ಚಿದಾಗ ಬೋನಿನ ಬಾಗಿಲು ರಪ್ಪನೆ ಹಾಕಿಕೊಂಡು, ಸಿಕ್ಕಿ ಹಾಕಿಕೊಳ್ಳುವ ಹಾಗೆ, ನಾವು ಮೋಸಗಾರನ ಜಾಲದೊಳಗೆ ಸಿಕ್ಕಿಹಾಕಿಕೊಳ್ಳುತ್ತೇವೆ.

-ಎಸ್‌.ಆರ್‌. ಗೌತಮ್‌ (ಕೃಪೆ: ನವ ಕರ್ನಾಟಕ ಪ್ರಕಾಶನ)

Advertisement
Advertisement

Udayavani is now on Telegram. Click here to join our channel and stay updated with the latest news.

Next