ಮಣಿಪಾಲ: ಇಡೀ ಭೂಮಂಡಲವನ್ನೇ ಹೈರಾಣಾಗಿಸಿರುವ ಕೋವಿಡ್ 19 ವೈರಾಣುವಿನ ಮೂಲ ಯಾವುದು? ಚೀನವೂ ಸೇರಿದಂತೆ ಹಲವು ದೇಶಗಳ ತಜ್ಞರು ಈ ಕುರಿತು ಭಿನ್ನವಾದ ತರ್ಕಗಳನ್ನು ಮಂಡಿಸಿದ್ದರೂ ಇದು ಇನ್ನೂ ಬಗೆಹರಿಯದ ಪ್ರಶ್ನೆಯಾಗಿಯೇ ಉಳಿದಿದೆ. ಚೀನದ ವುಹಾನ್ ನಗರದ ಹುನನ್ ಪ್ರಾಣಿಗಳ ಮಾರುಕಟ್ಟೆಯಲ್ಲಿ ಕೋವಿಡ್ ವೈರಾಣು ಮೊದಲಿಗೆ ಕಾಣಿಸಿಕೊಂಡಿತು ಎಂಬ ಚೀನದ ತರ್ಕವನ್ನು ಸದ್ಯಕ್ಕೆ ಜಗತ್ತು ಅರೆ ಅನುಮಾನದಿಂದಲೇ ಒಪ್ಪಿ ಕೊಂಡಿದ್ದರೂ ಯಾವ ಪ್ರಾಣಿಯಿಂದ ಅಥವಾ ಯಾವ ಜೀವಿಯಿಂದ ಈ ವೈರಾಣು ಮನುಷ್ಯನಿಗೆ ವರ್ಗಾವಣೆಯಾಯಿತು ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿಲ್ಲ.
ಆರಂಭದಲ್ಲಿ ಹಾವಿನಿಂದ ಎಂದರು. ಬಳಿಕ ಚೀನದ ಕಾಡುಪ್ರಾಣಿ ಗಳಿಂದ ಎಂದರು. ಅನಂತರ ಬಾವಲಿಯಿಂದ, ಮೀನಿನಿಂದ ಬಂತು ಎನ್ನಲಾಯಿತು. ಕೊನೆಗೆ ಚೀನಿಯರು ಬಹಳ ಇಷ್ಟಪಟ್ಟು ಮೆಲ್ಲುವ ಚಿಪ್ಪುಹಂದಿಯಿಂದ ಮನುಷ್ಯರಿಗೆ ವರ್ಗಾವಣೆಯಾಗಿರಬಹುದು ಎಂಬ ನಿರ್ಧಾರಕ್ಕೆ ಬರಲಾಯಿತು.
ಈ ನಡುವೆ ಚೀನ, ಇಟಲಿ ಮತ್ತು ಅಮೆರಿಕದಿಂದ ತನ್ನಲ್ಲಿಗೆ ವೈರಾಣು ಪ್ರಯಾಣಿಸಿ ಬಂದಿದೆ ಎಂದು ಸಾಧಿಸಿ ತೋರಿಸುವ ಪ್ರಯತ್ನವನ್ನೂ ಮಾಡಿತು. ಆದರೆ ಜಗತ್ತು ಇದನ್ನು ನಂಬಿಲ್ಲ. ಹುನನ್ ಪ್ರಾಣಿಗಳ ಮಾರುಕಟ್ಟೆಯೇ ಕೋವಿಡ್ ವೈರಾಣುವಿನ ಮೂಲ ಎಂಬ ತರ್ಕವೇ ಸದ್ಯ ಸ್ಥಿರವಾಗಿ ನಿಂತಿದೆ. ಆದರೆ ಈಗ ಈ ತರ್ಕದ ಮೇಲೆ ಕೆಲವೊಂದು ಅನುಮಾನಗಳು ಉದ್ಭವವಾಗಿರುವುದು ವೈರಾಣುವಿನ ಮೂಲ ಯಾವುದು ಎಂಬ ಚರ್ಚೆಗೆ ಹೊಸ ನೆಲೆಯೊಂದನ್ನು ಕಲ್ಪಿಸಿಕೊಟ್ಟಿದೆ. ಈಗ ಸಾರ್ ಸಿಒವಿ-2 ಎಂಬ ಅಧಿಕೃತ ಹೆಸರನ್ನು ಪಡೆದುಕೊಂಡ ಕೋವಿಡ್ ಸಾರ್ನಂತೆಯೇ ಬಾವಲಿಗಳಿಂದಲೇ ಏಕೆ ಬಂದಿರಬಾರದು ಎಂಬ ನಿಟ್ಟಿನಲ್ಲಿ ಈಗ ಸಂಶೋಧನೆ ನಡೆಯುತ್ತಿದೆ. ಏಕೆಂದರೆ ಬಾವಲಿಯಿಂದ ಹರಡುವ ವೈರಾಣುಗಳ ಎಲ್ಲ ಲಕ್ಷಣಗಳು ಕೋವಿಡ್‌ನಲ್ಲಿವೆ.
ಈಗ ಮನುಷ್ಯನಿಂದ ಮನುಷ್ಯನಿಗೆ ಹರಡುವುದರಿಂದಾಗಿ ಇದು ಮಾನವ ವೈರಸ್ ಆಗಿ ಬದಲಾಗಿದೆ. ಪ್ರಾಣಿಗಳಲ್ಲಿ ಕೋವಿಡ್ ಸುಲಭವಾಗಿ ಹರಡುತ್ತದೆ ಎನ್ನುವುದು ಹುಲಿಗೆ ಮತ್ತು ಬೆಕ್ಕಿಗೆ ಕೋವಿಡ್ ಸೋಂಕು ತಗಲುವ ಮೂಲಕ ದೃಢ ಪಟ್ಟಿದೆ. ವಿಜ್ಞಾನಿಗಳು ಈಗ ಈ ಅಂಶವನ್ನು ಹಿಡಿದು ಸಂಶೋಧನೆ ನಡೆಸುತ್ತಿದ್ದಾರೆ. ಒಟ್ಟಾರೆಯಾಗಿ ಪ್ರಾಣಿಗಳೇ ವೈರಾಣುವಿನ ಮೂಲ ಎನ್ನುವುದರಲ್ಲಿ ಸಂಶಯ ಉಳಿದಿಲ್ಲ. ಆದರೆ ಯಾವ ಪ್ರಾಣಿ ಎನ್ನುವುದೇ ಬಾಕಿ ಉಳಿದಿರುವ ಪ್ರಶ್ನೆ.
ಚಿಪ್ಪುಹಂದಿಗಳಿಂದ ಬಂದಿರುವ ಸಾಧ್ಯತೆ ಇಲ್ಲ ಎನ್ನುವ ತರ್ಕವನ್ನು ನೇಚರ್ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಲೇಖನವೊಂದರಲ್ಲಿ ಸಾಧಿಸಿ ತೋರಿಸಲಾಗಿದೆ. ಏಕೆಂದರೆ ಹುನನ್ ಮಾರುಕಟ್ಟೆಯಲ್ಲಿ ಚಿಪ್ಪು ಹಂದಿಗಳನ್ನು ಬಹಿರಂಗವಾಗಿ ಮಾರಾಟ ಮಾಡುತ್ತಿರಲಿಲ್ಲ ಎನ್ನುವುದನ್ನು ಕಂಡುಕೊಳ್ಳಲಾಗಿದೆ. ಅಲ್ಲದೆ ಈ ಎಲ್ಲ ಅಧ್ಯಯನಗಳನ್ನು ಪ್ರಾಯೋಜಿಸಿರುವುದು ಚೀನದ ಸರಕಾರ. ಈ ದೇಶವನ್ನು ಇಡೀ ಜಗತ್ತು ಸಂಶಯದ ದೃಷ್ಟಿಯಿಂದ ನೋಡುತ್ತಿರುವಾಗ ಅದರ ಪ್ರಾಯೊಧೀಜಕತ್ವದಲ್ಲಿ ನಡೆದಿರುವ ಸಂಶೋಧನೆಗಳ ವಿಶ್ವಾಸಾರ್ಹತೆಯೂ ಚರ್ಚೆಗೀಡಾಗಿದೆ. ದ ಲ್ಯಾನ್ಸೆಟ್ ನಿಯತಕಾಲಿಕದಲ್ಲಿ ಪ್ರಕಟವಾದ ವರದಿಯ ಪ್ರಕಾರ 41 ಕೋವಿಡ್ ರೋಗಿಗಳನ್ನು ಅವಲೋಕಿಸಿದಾಗ 27 ಮಂದಿ ಹುನನ್ ಮಾರುಕಟ್ಟೆಯ ನೇರ ಸಂಪರ್ಕದಲ್ಲಿರುವುದು ದೃಢಪಟ್ಟಿದೆ. ಹೀಗಾಗಿ ಯಾವುದೇ ವೈಜ್ಞಾನಿಕ ಪುರಾವೆಗಳು ಕಣ್ಣ ಮುಂದೆ ಇಲ್ಲದಿರುವುದರಿಂದ ಹುನನ್ ಮಾರುಕಟ್ಟೆಯೇ ಕೋವಿಡ್‌ನ ಮೂಲಸ್ಥಾನ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಮೊದಲ ಕೋವಿಡ್ ಸೋಂಕಿತನಿಗೆ ಮಾರುಕಟ್ಟೆಯ ನೇರ ಸಂಪರ್ಕ ಇರಲಿಲ್ಲ ಎನ್ನುವ ಅಂಶ ಈ ವಿಚಾರವನ್ನು ಇನ್ನಷ್ಟು ಜಟಿಲವಾಗಿಸಿದೆ.
ಮೂರು ತಿಂಗಳು ಮೊದಲೇ ಸೋಂಕು : ಹೀಗೊಂದು ಹೊಸ ತರ್ಕ ಈಗ ಹುಟ್ಟಿಕೊಂಡಿದೆ. ಅದು ಹೇಳುವುದೇನೆಂದರೆ ಹುನನ್ ಮಾರುಕಟ್ಟೆಯಲ್ಲಿ ಕೋವಿಡ್ ವೈರಾಣು ಅದು ಪ್ರಕಟವಾಗುವ ಮೂರು ತಿಂಗಳ ಮೊದಲೇ ಮನುಷ್ಯನ ಶರೀರ ಸೇರಿರುವ ಸಾಧ್ಯತೆಯಿದೆ. ಮೂರು ತಿಂಗಳಲ್ಲಿ ಈ ವೈರಾಣು ತನ್ನ ಗುಣಲಕ್ಷಣಗಳನ್ನು ಮನುಷ್ಯನ ಶರೀರ ಪ್ರಕೃತಿಗೆ ತಕ್ಕಂತೆ ಬದಲಾಯಿಸಿಕೊಂಡ ಬಳಿಕ ಪ್ರಕಟಗೊಂಡಿದೆ. ಹೀಗಾಗಿ ಚೀನ ಹೇಳುವಂತೆ ಡಿಸೆಂಬರ್‌ನಲ್ಲಿ ಮೊದಲ ಕೋವಿಡ್ ಪ್ರಕರಣ ಬೆಳಕಿಗೆ ಬಂದಿದ್ದರೂ ಅದು ಮನುಷ್ಯನ ಶರೀರವನ್ನು ಅದಕ್ಕಿಂತ ಬಹಳ ಮುಂಚೆಯೇ ಸೇರಿರಬಹುದು. ಈ ತರ್ಕವನ್ನು ಒಪ್ಪಿಕೊಂಡರೆ ಕೋವಿಡ್ ವೈರಾಣು ಮೂಲ ಯಾವುದು ಎಂಬ ಪ್ರಶ್ನೆ ಮತ್ತಷ್ಟು ಜಟಿಲವಾಗುತ್ತದೆ.
ಜೈವಿಕ ಅಸ್ತ್ರ : ಈ ನಡುವೆ ಕೋವಿಡ್ ವೈರಾಣು ಚೀನವೇ ಸೃಷ್ಟಿಸಿರುವ ಜೈವಿಕ ಯುದ್ಧಾಸ್ತ್ರ ಎಂಬ ತರ್ಕವೂ ಚಲಾವಣೆಯಲ್ಲಿದೆ. ಚೀನ ಎಷ್ಟೇ ನಿರಾಕರಿಸಿದರೂ ಈ ಸಾಧ್ಯತೆಗೆ ಪೂರಕವಾಗಿರುವ ಪರಿಸರ ಅಲ್ಲಿ ಇರುವುದು ನಿಜ. ಚೀನದ ಲೆವೆಲ್ 4 ವೈರಾಣು ಸಂಶೋಧನಾ ಸಂಸ್ಥೆ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಇರುವುದು ಹುನನ್‌ನಿಂದ ಬರೀ 30 ಕಿ. ಮೀ. ದೂರದಲ್ಲಿ. ಕೋವಿಡ್ ಹಾವಳಿ ವಿಪರೀತವಾಗುತ್ತಿದ್ದಂತೆಯೇ ಚೀನ ಮೊದಲು ಮಾಡಿದ ಕೆಲಸ ಹುನನ್ ಮಾರು ಕಟ್ಟೆಯನ್ನು ಸ್ವತ್ಛಗೊಳಿಸಿದ್ದು. ಈ ಮೂಲಕ ಅಲ್ಲಿ ಯಾವೊಂದು ಕುರುಹು ಸಿಗದಂತೆ ಮಾಡಿದೆ. ಹೀಗಾಗಿ ಸಂಶಯದ ಮೊನೆಯೊಂದು ಸದಾ ಕೊರೆಯುತ್ತಲೇ ಇದೆ.
-ಉಮೇಶ್ ಕೋಟ್ಯಾನ್