ತನ್ನ ಪ್ರತಿಯೊಂದು ವಸ್ತುಗಳ ಬಗ್ಗೆಯೂ ತುಂಬಾ ಕಾಳಜಿ ಮಾಡುತ್ತಿದ್ದ ಝೆನ್ ವಿದ್ಯಾರ್ಥಿ ಶುನ್‌ಶುಯಿ, ಗುರು ಸುಜುಕಿ ರೋಶಿಯ ಪ್ರವಚನಗಳನ್ನು ಕೇಳಲು ಪ್ರತಿದಿನ ಸಂಜೆ ಸಭಾಗೃಹಕ್ಕೆ ಹೋಗುತ್ತಿದ್ದ. ಕೆಲವೊಮ್ಮೆ ಪ್ರವಚನಗಳು ಪುನರಾವರ್ತನೆಯಾಗುತ್ತಿದ್ದವು. ಆದರೂ ಕೇಳುಗರು ಬಹಳ ಆಸಕ್ತಿಯಿಂದ ಆಲಿಸುತ್ತಿರುವುದನ್ನು ಕಂಡು ಶುನ್‌ಶುಯಿಗೆ ವಿಸ್ಮಯವಾಗುತ್ತಿತ್ತು. ಆದರೂ, ಹೊಸ ವಿಷಯಗಳು ಸಿಗಬಹುದೆಂದು ವಿದ್ಯಾರ್ಥಿ ಪ್ರವಚನಗಳಿಗೆ ಹಾಜರಾಗುವುದನ್ನು ತಪ್ಪಿಸುತ್ತಿರಲಿಲ್ಲ.
ಹೀಗೆ, ಸುಮಾರು ಒಂದು ವರ್ಷವೇ ಮುಗಿದು ಹೋಯಿತು. ಒಂದು ದಿನ ಸಂಜೆ ಪ್ರವಚನ ಮುಗಿದಿತ್ತು. ಗುರು ಸುಜುಕಿ ರೋಶಿ ಸಭಿಕರಲ್ಲಿ, “ಪ್ರಶ್ನೆಗಳಿವೆಯೆ?’ ಎಂದು ಕೇಳಿದ. ಸಭಿಕರೆಲ್ಲರೂ ತಮ್ಮ ಸಂಶಯಗಳನ್ನು ಹೇಳಿಕೊಳ್ಳುತ್ತಿದ್ದರು. ಸುಜುಕಿ ರೋಶಿ ಅವುಗಳಿಗೆಲ್ಲ ಶಾಂತಚಿತ್ತನಾಗಿ ಉತ್ತರಿಸುತ್ತಿದ್ದ.
ತಾನು ಇಷ್ಟೊಂದು ದಿನ ಪ್ರವಚನಗಳನ್ನು ಕೇಳಿದರೂ ಅದನ್ನು ಚುಟುಕಾಗಿ ಯಾರ ಬಳಿಯಲ್ಲಾದರೂ ಹೇಳಿಕೊಳ್ಳುವುದು ಸಾಧ್ಯವಿಲ್ಲವಲ್ಲ ಎಂಬ ಕೊರಗು ಶುನ್‌ಶುಯಿಗೆ ಕಾಡುತ್ತಿತ್ತು.
ಪ್ರಶ್ನೋತ್ತರದ ಅವಧಿಯಲ್ಲಿ ಈ ಬಗ್ಗೆ ಕೇಳಲೋ ಬೇಡವೋ ಎಂಬ ಆತಂಕದಿಂದಲೇ ಅವನು ಪ್ರಶ್ನಿಸಿದ. “”ಸುಜುಕಿ ರೋಶಿ, ನಾನು ಬಹಳ ಸಮಯದಿಂದ ನಿಮ್ಮ ಪ್ರವಚನಗಳನ್ನು ಕೇಳುತ್ತಲೇ ಇದ್ದೇನೆ. ಬುದ್ಧಿಸಂ ಬಗ್ಗೆ ನೀವು ಎಷ್ಟೊಂದು ಪ್ರವಚನಗಳನ್ನು ನೀಡಿದ್ದೀರಿ. ಆದರೂ ನನಗೆ ಸಾರಾಂಶ ರೂಪದಲ್ಲಿ ಬುದ್ಧಿಸಂ ಬಗ್ಗೆ ಹೇಳಬಹುದೆ?”
“”ಸಾರಾಂಶ… ಅಂದರೆ?”
“”ಸಾರಾಂಶ ಎಂದರೆ… ಚುಟುಕಾಗಿ”
“”ಚುಟುಕಾಗಿ ! ಚುಟುಕಾಗಿ ಎಂದರೆ?”
“”ಎಂದರೆ, ಬುದ್ಧಿಸಂ ಎಂದರೇನು ಅಂತ ಒಂದೆರಡು ಪದಗಳಲ್ಲಿ ಹೇಳುತ್ತೀರಾ?” ಎಂದು ಕೇಳಿದ.
ಸಭೆಯಲ್ಲಿದ್ದವರೆಲ್ಲರೂ ನಕ್ಕರು.
ಆದರೆ, ಶುನ್‌ಶುಯಿ ಮಾತ್ರ ಗುರುವಿನ ಉತ್ತರ ಬರೆದುಕೊಳ್ಳಲು ಪೆನ್ನು-ಪುಸ್ತಕ ಸಿದ್ಧವಾಗಿಟ್ಟಿದ್ದ.
ಸುಜುಕಿ ರೋಶಿ ಹೇಳಿದ, “ಪ್ರತಿಯೊಂದೂ ಬದಲಾಗುತ್ತದೆ. ಮುಂದಿನ ಪ್ರಶ್ನೆ?’
ಶುನ್‌ಶುಯಿ ಕಾಳಜಿಯಿಂದ ಬರೆದುಕೊಂಡ, “” ಪ್ರತಿಯೊಂದು ಬದಲಾಗುತ್ತದೆ”
ಕೆಆರ್