ಮೈಸೂರು: ಕಾಂಗ್ರೆಸ್ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದೆ. ಆದರೆ ಭ್ರಷ್ಟ, ಕೋಮುವಾದಿ ಪಕ್ಷವಾದ ಬಿಜೆಪಿಯ ಕೊಡುಗೆ ಏನು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಚಾಮುಂಡೇಶ್ವರಿ ಕ್ಷೇತ್ರದ ಇಲವಾಲ ಮತ್ತು ಜಯಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲವಾಲದಲ್ಲಿ ನಡೆದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಇಂದು ನಾವೆಲ್ಲರೂ ಸ್ವತಂತ್ರವಾಗಿರಬೇಕಾದರೆ ಕಾಂಗ್ರೆಸ್ ಪಕ್ಷ ಕಾರಣ.
ದೇಶದ ಸ್ವಾತಂತ್ರ್ಯಕ್ಕಾಗಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲಾ ಧರ್ಮದವರು ಹೋರಾಟ ಮಾಡಿದರು. ಆದರೆ ಬಿಜೆಪಿಯಾಗಲಿ, ಜೆಡಿಎಸ್ ಹೋರಾಟ ಮಾಡಿಲ್ಲ. 1925ರಲ್ಲಿ ಆರೆಸ್ಸೆಸ್ ಸ್ಥಾಪನೆಯಾಯಿತು. 1951ರಲ್ಲಿ ಜನಸಂಘ ಪ್ರಾರಂಭವಾಯಿತು. 1980ರಲ್ಲಿ ಬಿಜೆಪಿ ಸ್ಥಾಪನೆಯಾಯಿತು. ಇವರೆಲ್ಲ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರಾ ಎಂದು ಪ್ರಶ್ನಿಸಿದರು.
ರಾಷ್ಟ್ರಗೀತೆ, ಸಂವಿಧಾನ ರಚನೆಯಾಗಿದ್ದು, ಕಾಂಗ್ರೆಸ್‌ನಿಂದ. ರಾಷ್ಟ್ರಧ್ವಜ ಎಂದರೆ ನಮಗೆ ಹೆಮ್ಮೆಯ ವಿಚಾರ. ಆದರೆ ಇದೇ ಧ್ವಜವನ್ನು ಸಾವರ್ಕರ್, ಎಂ.ಎಸ್. ಗೋಳ್ವಾಲ್ಕರ್ ವಿರೋಧಿಸಿದ್ದರು. ದೇಶಭಕ್ತಿ ಪ್ರಾರಂಭವಾಗಿದ್ದೇ ಕಾಂಗ್ರೆಸ್ ಪಕ್ಷದಿಂದ. ಆದರೀಗ ಬಿಜೆಪಿಯವರು ನಮಗೆ ದೇಶಭಕ್ತಿಯ ಬಗ್ಗೆ ಪಾಠ ಹೇಳಲು ಬರುತ್ತಿದ್ದಾರೆಂದು ಲೇವಡಿ ಮಾಡಿದರು.
ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬಿಟ್ಟು, ಬದ್ಧತೆಯಿಂದ ಕಾಂಗ್ರೆಸ್ ಪಕ್ಷದಲ್ಲೆ ಇರಬೇಕು. ನಾವು ಅಧಿಕಾರದಲ್ಲಿದ್ದಾಗ ಮಾಡಿದಂತಹ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕು. ನಮ್ಮ ಸರ್ಕಾರಕ್ಕೆ ಇಂದಿನ ಶೇ.40 ಕಮಿಷನ್ ಸರ್ಕಾರವನ್ನು ಹೋಲಿಕೆ ಮಾಡಿ ಈ ಸರ್ಕಾರವನ್ನು ಕಿತ್ತೂಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಶಪಥ ಮಾಡಬೇಕು ಎಂದರು.