ಬೈರೂತ್: ಲೆಬನಾನ್ ರಾಜಧಾನಿ ಬೈರೂತ್ ಬಂದರಿನಲ್ಲಿರುವ ವಸ್ತುಸಂಗ್ರಹ ಕೇಂದ್ರದಲ್ಲಿ ಸಂಭವಿಸಿದ ಮಹಾಸ್ಫೋಟಕ್ಕೆ ಕಾರಣ ಏನು ಗೊತ್ತಾ? ಅದು ಸಾವಿರಾರು ಟನ್ ಗಟ್ಟಲೇ ಸಂಗ್ರಹವಾಗಿಟ್ಟಿದ್ದ ಅಮೋನಿಯಂ ನೈಟ್ರೇಟ್! ಹೀಗೆ ಸಂಭವಿಸಿದ ಶಕ್ತಿಶಾಲಿ ಸ್ಫೋಟಕ್ಕೆ ಬೈರೂತ್ ನಗರ ಅಲುಗಾಡಿ ಹೋಗಿತ್ತು. ಸ್ಫೋಟಕ್ಕೆ 130ಕ್ಕೂ ಅಧಿಕ ಜನರು ಬಲಿಯಾಗಿದ್ದು, 4000 ಮಂದಿ ಗಾಯಗೊಂಡಿದ್ದಾರೆ. ಸುಮಾರು 3 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ.
ಅಮೋನಿಯಂ ನೈಟ್ರೇಟ್ ಅನ್ನು ರಸಗೊಬ್ಬರ ಉತ್ಪಾದನೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಅಲ್ಲದೇ ಗಣಿಗಾರಿಕೆ ಇಂಡಸ್ಟ್ರಿ ಕೂಡಾ ಬಂಡೆ ಒಡೆಯಲು, ಬಾಂಬ್ ಹಾಗೂ ಇತರ ಸೇನಾ ಸಂಬಂಧಿ ಆ್ಯಪ್ಲಿಕೇಶನ್ಸ್ ಗಳಲ್ಲಿಯೂ ಬಳಕೆ ಮಾಡುತ್ತಾರೆ.
ಅಮೋನಿಯಂ ನೈಟ್ರೇಟ್ ರಾಸಾಯನಿಕ ಅಂಶ ಭಯೋತ್ಪಾದಕ ಚಟುವಟಿಕೆಯಲ್ಲಿಯೂ ಬಳಕೆಯಾಗುತ್ತಿದೆ. ಉಗ್ರರು ಇದನ್ನು ಸುಲಭವಾಗಿ ಬಳಸಿಕೊಂಡು ವಿಧ್ವಂಸಕ ಕೃತ್ಯ ಎಸಗಿರುವ ಘಟನೆಯೂ ನಡೆಯುತ್ತಿದೆ. 1995ರಲ್ಲಿ ಒಕ್ಲಾಹಾಮಾದ ಅಲ್ಫ್ರೆಡ್ ಪಿ ಮುರ್ರಾ ಫೆಡರಲ್ ಕಟ್ಟಡದಲ್ಲಿ ನಡೆದ ಸ್ಫೋಟದಲ್ಲಿಯೂ ಅಮೋನಿಯಂ ನೈಟ್ರೇಟ್ ಬಳಸಲಾಗಿತ್ತು ಎಂದು ವರದಿ ವಿವರಿಸಿದೆ.
ಈ ಮಹಾಸ್ಫೋಟಕ್ಕೆ ಕಾರಣವಾಗಿದ್ದು 2,750 ಟನ್ ಅಮೋನಿಯಂ ನೈಟ್ರೇಟ್!
ಲೆಬನಾನ್ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ಬೈರುತ್ ನ ಬಂದರಿನ ವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿಸಿ ಇಟ್ಟಿರುವ 2,750 ಟನ್ ಗಳಷ್ಟು ಅಮೋನಿಯಂ ನೈಟ್ರೇಟ್ ರಾಸಾಯನಿಕಕ್ಕೆ ಬೆಂಕಿ ಹೊತ್ತುಕೊಂಡು ನಂತರ ಸ್ಫೋಟಗೊಂಡಿತ್ತು. ಈ ರಾಸಾಯನಿಕ ಬೈರುತ್ ನಗರಕ್ಕೆ ಸುಮಾರು ಆರು ವರ್ಷಗಳ ಹಿಂದೆ ಬಂದಿತ್ತು. ಇದನ್ನು ರಷ್ಯಾ ಮಾಲಕತ್ವದ ಸರಕು ಸಾಗಾಣೆ ಹಡಗಿನಲ್ಲಿ ತರಲಾಗಿತ್ತು. ಅಷ್ಟೇ ಅಲ್ಲ ದಾಸ್ತಾನು ಮಳಿಗೆಯಲ್ಲಿರುವ ಅಮೋನಿಯಂ ನೈಟ್ರೇಟ್ ರಾಸಾಯನಿಕ ತೆಗೆಸಲು ಆದೇಶ ನೀಡಬೇಕು ಎಂದು ಹಲವು ಬಾರಿ ಕೋರ್ಟ್ ಗೆ ಮನವಿ ಮಾಡಲಾಗಿತ್ತು. ಆದರೆ ಯಾವುದೇ ಆದೇಶ ಬಂದಿರಲಿಲ್ಲವಾಗಿತ್ತು ಎಂದು ಲೆಬನಾನ್ ಬಂದರು ಅಧಿಕಾರಿಗಳು ತಿಳಿಸಿದ್ದಾರೆ.
ರಾಸಾಯನಿಕ ಹೇಗೆ ಸ್ಫೋಟಗೊಳ್ಳುತ್ತದೆ?
ಅಮೋನಿಯಂ ನೈಟ್ರೇಟ್ ಅದಕ್ಕೆ ಏನನ್ನೂ ಸೇರಿಸದೆ ಇದ್ದಲ್ಲಿ ಅದು ಅಪಾಯರಹಿತವಾದದ್ದು. ಆದರೆ ಒಂದು ವೇಳೆ ಅನಿಲ ರೂಪದಲ್ಲಿದ್ದರೆ ಅದು ಭಾರಿ ಬಿಸಿ ಮತ್ತು ಒತ್ತಡಕ್ಕೆ ಸಿಲುಕಿದಾಗ ಸ್ಫೋಟಗೊಳ್ಳುತ್ತದೆ. ಬೈರೂತ್ ಬಂದರಿನಲ್ಲಿ ಭಾರೀ ಪ್ರಮಾಣದಲ್ಲಿ ಅಮೋನಿಯಂ ನೈಟ್ರೇಟ್ ಸಂಗ್ರಹಿಸಿ ಇಡಲಾಗಿತ್ತು. ಒಂದು ವೇಳೆ ಅದಕ್ಕೆ ಬೆಂಕಿ ತಗುಲಿದರೆ ಅದರಿಂದ ಭಾರೀ ದೊಡ್ಡ ಸ್ಫೋಟ ಸಂಭವಿಸುತ್ತದೆ.
ಈ ಮೊದಲು ಇಂತಹ ಘಟನೆ ನಡೆದಿತ್ತೇ?
ಬೈರೂತ್ ಬಂದರು ಪ್ರದೇಶದಲ್ಲಿ ನಡೆದಂತೆ ಈ ಹಿಂದೆಯೂ ಇಂತಹ ಘಟನೆ ನಡೆದಿತ್ತು. 1947ರಲ್ಲಿ ಟೆಕ್ಸಾಸ್ ನಗರದಲ್ಲಿ ಸಂಭವಿಸಿದ ಸ್ಫೋಟದಲ್ಲಿ 581 ಮಂದಿ ಸಾವನ್ನಪ್ಪಿದ್ದು, 3,500 ಜನರು ಗಾಯಗೊಂಡಿದ್ದರು. ಅಮೋನಿಯಂ ನೈಟ್ರೇಟ್ ಹೊತ್ತು ಸಾಗುತ್ತಿದ್ದ ಎರಡು ಕಾರ್ಗೋ ಹಡಗು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿತ್ತು.
2013ರಲ್ಲಿ ಪಶ್ಚಿಮ ಟೆಕ್ಸಾಸ್ ನಲ್ಲಿ ಫರ್ಟಿಲೈಸರ್ (ರಸಗೊಬ್ಬರ) ಫ್ಲ್ಯಾಂಟ್ ನಲ್ಲಿ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ 15 ಜನರು ಸಾವನ್ನಪ್ಪಿದ್ದರು. 2015ರಲ್ಲಿ ಚೀನಾದ ಟಿಯಾನ್ಜಿನ್ ನ ಬಂದರು ಪ್ರದೇಶದಲ್ಲಿನ ಫರ್ಟಿಲೈಸರ್ ಸ್ಫೋಟದಿಂದ 165 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿತ್ತು.
ಬೈರೂತ್ ನಲ್ಲಿ ಸಂಭವಿಸಿದ ಸ್ಫೋಟ ಅದೆಷ್ಟು ಪವರ್ ಫುಲ್ ಆಗಿತ್ತು?
ಲೆಬನಾನ್ ಬೈರೂತ್ ನಲ್ಲಿ ಸಂಭವಿಸಿದ್ದು ಅತೀ ದೊಡ್ಡ ನ್ಯೂಕ್ಲಿಯರ್ ರಹಿತ ಮಹಾಸ್ಫೋಟವಾಗಿದೆ. ಇತ್ತೀಚೆಗಿನ ಇತಿಹಾಸದಲ್ಲಿ ನಡೆದ ಅತೀ ದೊಡ್ಡ ಸ್ಫೋಟವಾಗಿದೆ ಎಂದು ಅಮ್ನೆಸ್ಟಿ ಇಂಟರ್ ನ್ಯಾಷನಲ್ ಕ್ರೈಸಿಸ್ ರೆಸ್ಪಾನ್ಸ್ ಟೀಮ್ ನ ಶಸ್ತ್ರಾಸ್ತ್ರ ಸಂಶೋಧನೆಯ ಮುಖ್ಯಸ್ಥ ಬ್ರಯಾನ್ ಕಾಸ್ಟ್ ನರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ನಗರ ಪ್ರದೇಶದಲ್ಲಿ ದಶಕಗಳ ಕಾಲದಿಂದ ಸಂಭವಿಸದಂತಹ ಮಹಾ ಸ್ಫೋಟ ಇದಾಗಿದೆ. ಇದರಿಂದ ಮನುಷ್ಯರ ಮೇಲಾಗುವ ಪರಿಣಾಮ ತುಂಬಾ ಮುಖ್ಯವಾದ ಅಂಶ. ಕಿಲೋಮೀಟರ್ ಗಳಷ್ಟು ದೂರ ಇರುವ ಜನರ ಮೇಲೂ ಇದು ಪರಿಣಾಮ ಬೀರುತ್ತದೆ. ಬೈರೂತ್ ನಲ್ಲಿ ಸಂಭವಿಸಿರುವ ಸ್ಫೋಟ ಎಷ್ಟು ಪ್ರಮಾಣದ ತೀವ್ರತೆ ಹೊಂದಿರಬಹುದು ಎಂಬುದನ್ನು ಲೆಕ್ಕಾಚಾರ ಹಾಕಲು ಅಮೆರಿಕದ ಮಿಲಿಟರಿ ಅಧಿಕಾರಿಗಳಿಗೆ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಬೈರೂತ್ ನಲ್ಲಿ ಸಂಭವಿಸಿರುವ ಸ್ಫೋಟ ಕೆಲವೊಮ್ಮೆ ಅಮೆರಿಕ ಯುದ್ಧದಲ್ಲಿ ಉಪಯೋಗಿಸಿದ ವೈಮಾನಿಕ ಬಾಂಬ್ ದಾಳಿಗಿಂತ ಹತ್ತು ಪಟ್ಟು ಪ್ರಬಲವಾಗಿತ್ತು. 2017ರಲ್ಲಿ ಉಪಯೋಗಿಸಿದ್ದ ಬಾಂಬ್ ಜಿಬಿಯು-43 ಅನ್ನು ವೈಮಾನಿಕ ದಾಳಿಯಲ್ಲಿ ಉಪಯೋಗಿಸಲಾಗಿತ್ತು. ಈ ಸ್ಫೋಟಕದ ತೂಕ 18,700 ಪೌಂಡ್ಸ್ ಅಥವಾ 9.35 ಟನ್ಸ್ ಎಂದು ಟಿಎನ್ ಟಿ ವಿವರಿಸಿದೆ. ಅಮೆರಿಕ ಡಿಫೆನ್ಸ್ ಅಮ್ಯೂನಿಶನ್ ಸೆಂಟರ್ ನ ಅಂಕಿಅಂಶದ ಪ್ರಕಾರ, ಬೈರೂತ್ ನಲ್ಲಿ ಸಂಭವಿಸಿದ ಸ್ಫೋಟ ಸುಮಾರು 75 ವರ್ಷಗಳ ಹಿಂದೆ ಹಿರೋಶಿಮಾದಲ್ಲಿ (15ಸಾವಿರ ಟನ್) ನಡೆಸಿದ ನ್ಯೂಕ್ಲಿಯರ್ ಬಾಂಬ್ ಸ್ಫೋಟಕ್ಕಿಂತ ಭಾರೀ ಸಣ್ಣ ಪ್ರಮಾಣದ್ದಾಗಿದೆ ಎಂದು ವಿವರಿಸಿದೆ.
ಆದರೂ ಈ ಸ್ಫೋಟದ ಬಗ್ಗೆ ಅಮೆರಿಕ ಅನುಮಾನ ವ್ಯಕ್ತಪಡಿಸಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಮೋನಿಯಂ ನೈಟ್ರೇಟ್ ಸಂಗ್ರಹಿಸಿ ಇಟ್ಟುಕೊಂಡಿದ್ದೇಕೆ. ಇದೊಂದು ಸಾಮಾನ್ಯ ಸ್ಫೋಟವಲ್ಲ ಎಂದು ತಿಳಿಸಿದೆ. ಇದರ ಹಿಂದಿರು ನಿಜವಾದ ಉದ್ದೇಶ ಏನು ಎಂಬುದು ತಿಳಿಯಬೇಕಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.