Advertisement
ಹಿರಿಯ ನಿರ್ದೇಶಕರೊಬ್ಬರು ಇತ್ತೀಚೆಗೆ ಹೇಳುತ್ತಿದ್ದರು. “ಇವತ್ತು ಚಿತ್ರರಂಗದ ಪರಿಸ್ಥಿತಿ ಸಾಕಷ್ಟು ಹದಗೆಟ್ಟಿದೆ. ಇವೆಲ್ಲಾ ಸರಿ ಹೋಗಬೇಕು ಎಂದರೆ ಒಂದೇ ಪರಿಹಾರ. ಒಳ್ಳೆಯ ಸಿನಿಮಾಗಳು ಬರಬೇಕು. ಆಗಷ್ಟೇ ಚಿತ್ರರಂಗ ಉಜ್ವಲವಾಗಿ ಬೆಳೆಯುವುದಕ್ಕೆ ಸಾಧ್ಯ’ ಎನ್ನುತ್ತಿದ್ದರು ಹಿರಿಯರು.
Related Articles
Advertisement
ಕನ್ನಡದ ವಿಷಯವಾಗಿ ಮಾತನಾಡಿದರೆ, ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳೇ ಬರುವುದಿಲ್ಲವಾ ಅಥವಾ ಕನ್ನಡದಲ್ಲಿ ಒಂದೊಳ್ಳೆಯ ಸಿನಿಮಾ ಬಂದು ಯಾವ ಕಾಲವಾಯಿತು ಎಂಬ ಪ್ರಶ್ನೆಗೆ, ಬೇಸರಕ್ಕೆ ಹಲವು ಉತ್ತರಗಳು ಸಿಗುತ್ತವೆ. ಈ ವರ್ಷವೇ ತೆಗೆದುಕೊಂಡರೆ, ಹಲವು ಚಿತ್ರಗಳನ್ನು ಉದಾಹರಿಸಬಹುದು. “ಕಥೆಯೊಂದು ಶುರುವಾಗಿದೆ’, “ಸಂಕಷ್ಟಕರ ಗಣಪತಿ’, “ಆ ಕರಾಳ ರಾತ್ರಿ’, “ಗುಳುr’, “ಕೃಷ್ಣ ತುಳಸಿ’, “ಇದೀಗ ಬಂದ ಸುದ್ದಿ’, “ಸಾವಿತ್ರಿ ಬಾಯಿ ಫುಲೆ’ ಸೇರಿದಂತೆ ಕೆಲವು ಚಿತ್ರಗಳು ಜನರಿಂದ ಮತ್ತು ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತಪಡೆದಿವೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಚಿತ್ರಗಳ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದಬರುತ್ತಿದೆ. ಆದರೆ, ಈ ಚಿತ್ರಗಳಲ್ಲಿ ಯಾವುದೇ ದೊಡ್ಡ ಸ್ಟಾರ್‌ಗಳಿರಲಿಲ್ಲ. ಇನ್ನು ಈ ಚಿತ್ರಗಳು 50 ಅಥವಾ 100 ದಿನಗಳನ್ನು ಪೂರೈಸಲಿಲ್ಲ ಮತ್ತು ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿಲ್ಲ. ಅಷ್ಟೆಲ್ಲಾ ಯಾಕೆ? ಈ ಚಿತ್ರಗಳಿಗೆ ಸರಿಯಾಗಿ ಚಿತ್ರಮಂದಿರಗಳು ಸಹ ಸಿಗಲಿಲ್ಲ. ಹಾಗಂತ ಇವೆಲ್ಲಾ ಕೆಟ್ಟ ಚಿತ್ರಗಳಾ? ಖಂಡಿತಾ ಅಲ್ಲ. ಆದರೆ, ಈ ಚಿತ್ರಗಳಿಗೆಲ್ಲಾ ಸಿಗಬೇಕಾದ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂಬುದಷ್ಟೇ ಸತ್ಯ.
ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರುವುದಿಲ್ಲ ಎಂದು ಕೊರಗುವವರು, ಯಾಕೆ ಈ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಲಿಲ್ಲ ಎಂಬ ಪ್ರಶ್ನೆ ಕೇಳುವುದು ಸುಲಭ. ಆದರೆ, ಇದಕ್ಕೆ ಖಂಡಿತಾ ಉತ್ತರ ಸಿಕ್ಕುವುದಿಲ್ಲ. ಏಕೆಂದರೆ, ಸಿನಿಮಾ ಎನ್ನುವುದು ಅವರವರ ವೈಯಕ್ತಿಕ ಅಭಿಪ್ರಾಯ. ಯಾವ ಸಿನಿಮಾ ನೋಡಬೇಕು ಎಂಬುದನ್ನು ತೀರ್ಮಾನಿಸುವುದು ಜನ. ಹಾಗಂತ ಒಳ್ಳೆಯ ಸಿನಿಮಾಗಳೇ ಬರುತ್ತಿಲ್ಲ ಎಂದು ಸಾರಾಸಗಟಾಗಿ ತೀರ್ಮಾನಕ್ಕೆ ಬರುವುದು ತಪ್ಪು. ಯಾವುದೇ ಚಿತ್ರರಂಗವೇ ಆಗಲಿ, ಎಲ್ಲಾ ಕಾಲಕ್ಕೂ ಒಳ್ಳೆಯ, ಕೆಟ್ಟ ಚಿತ್ರಗಳು ಬರುತ್ತಲೇ ಇರುತ್ತವೆ. ಆಗಲೂ ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬರುತ್ತಿದ್ದವು, ಈಗಲೂ ಬರುತ್ತಿವೆ. ಆದರೆ, ಹಲವು ಚಿತ್ರಗಳು ಒಂದೇ ವಾರದಲ್ಲಿ ಬಿಡುಗಡೆಯಾಗುತ್ತಿರವುದರಿಂದಲೋ, ಪ್ರಚಾರದ ಕೊರತೆಯೋ ಅಥವಾ ಇನ್ನಾವ ಕಾರಣಕ್ಕೋ, ಒಟ್ಟಿನಲ್ಲಿ ಜನರ ಮನಸ್ಸಿನಲ್ಲಿ ನಿಲ್ಲುತ್ತಿಲ್ಲ.
ಎಷ್ಟೋ ಚಿತ್ರಗಳಲ್ಲಿ ಹಲವು ಒಳ್ಳೆಯ ಅಂಶಗಳಿರುತ್ತವೆ. ಆದರೆ, ಆ ಒಳ್ಳೆಯ ಅಂಶಗಳನ್ನು ತೆರೆಯ ಮೇಲೆ ತೋರಿಸುವಲ್ಲಿ ಚಿತ್ರತಂಡದವರು ಎಡವಿರುತ್ತಾರೆ. ಇನ್ನು ಕೆಲವು ಎಲ್ಲಾ ರೀತಿಯಲ್ಲೂ ಒಳ್ಳೆಯ ಚಿತ್ರಗಳಾಗುತ್ತವೆ. ಆದರೆ, ಅದು ಅಂತಿಮವಾಗಿ ಪ್ರೇಕ್ಷಕರನ್ನು ಮುಟ್ಟುವುದಕ್ಕೆ ವಿಫಲವಾಗಿರುತ್ತದೆ. ಒಂದು ಚಿತ್ರ ಜನರ ಮನಸ್ಸಿಗೆ ಹಿಡಿಸಿರಬಹುದು. ಆದರೆ, ಅದು ಇನ್ನಷ್ಟು ಜನರಿಗೆ ತಲುಪುವುದಕ್ಕೆ ಸಮಯ ಬೇಕಾಗಬಹುದು. ಹಲವು ಚಿತ್ರಗಳ ಬಿಡುಗಡೆ ಇರುವುದರಿಂದ, ಚಿತ್ರಮಂದಿರಗಳು ಸಿಗದಿರಬಹುದು. ಚಿತ್ರಗಳ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಬಹುದು. ಇದೆಲ್ಲದರಿಂದ ಒಳ್ಳೆಯ ಚಿತ್ರಗಳು ಸಹ ಚಿತ್ರಮಂದಿರಗಳಿಂದ ಮಾಯವಾಗಬಹುದು. ಹಾಗಂತ ಅದು ಒಳ್ಳೆಯ ಚಿತ್ರವಲ್ಲ ಎಂದರ್ಥವಲ್ಲ. ಜನರಿಗೆ ತಲುಪಲಿಲ್ಲ ಎಂದಷ್ಟೇ ಅರ್ಥ. ಒಂದು ಚಿತ್ರ ಚೆನ್ನಾಗಿರುವುದು ಬೇರೆ, ಅದರ ಯಶಸ್ಸು, ಜನಪ್ರಿಯತೆ ಬೇರೆ. ಜನರ ಮನಸ್ಸಿಗೆ ಇಷ್ಟವಾಗುವ ಚಿತ್ರಗಳು ಯಶಸ್ವಿಯಾಗಬೇಗಬೇಕು, ನೂರು ದಿನ ಓಡಬೇಕು, ಅದನ್ನೆಲ್ಲರೂ ನೋಡಬೇಕು ಎಂಬ ಯಾವುದೇ ನಿಯಮವಿಲ್ಲ. ಹಾಗಾಗಿ ಒಂದೊಳ್ಳೆಯ ಚಿತ್ರಕ್ಕೂ, ಅದರ ಬಿಝಿನೆಸ್ಸಿಗೂ, ಪ್ರದರ್ಶನಕ್ಕೂ ಸಂಬಂಧವೇ ಇಲ್ಲ. ಇದೆಲ್ಲಾ ಕಾರಣಗಳಿಂದ ಒಂದು ಚಿತ್ರ ಒಳ್ಳೆಯ ಚಿತ್ರವಾಗಿ ಪರಿಗಣನೆಯಾದರೂ, ಅದು ಎಷ್ಟೋ ಜನರಿಗೆ ಮುಟ್ಟುವುದಿಲ್ಲ. ಹಾಗಂತ ಒಳ್ಳೆಯ ಚಿತ್ರಗಳು ಬರುತ್ತಿಲ್ಲ, ಚಿತ್ರರಂಗದ ಪರಿಸ್ಥಿತಿ ಹದೆಗೆಟ್ಟಿದೆ ಎಂಬುದು ತಪ್ಪಾಗುತ್ತದೆ.
ಇಷ್ಟಕ್ಕೂ ಒಳ್ಳೆಯ ಚಿತ್ರ ಮಾಡುವುದು ಹೇಗೆ?ಡಾ. ವಿಷ್ಣುವರ್ಧನ್ ಅವರು ಹಿಂದೊಮ್ಮೆ ಹೇಳಿದ ಮಾತು ನೆನಪಾಗುತ್ತದೆ. “ಒಂದೊಳ್ಳೆಯ ಚಿತ್ರ ಮಾಡುವುದು ಎನ್ನುವುದೆಲ್ಲಾ ಸುಳ್ಳು. ಒಳ್ಳೆಯ ಚಿತ್ರ ಮಾಡುವುದಕ್ಕಾಗುವುದಿಲ್ಲ. ಒಂದು ಚಿತ್ರ ಮಾಡಬಹುದು ಅಷ್ಟೇ. ಅದು ಒಳ್ಳೆಯದಾಗುವುದು, ಕೆಟ್ಟದಾಗುವುದು ನಮ್ಮ ಕೈಯಲ್ಲಿ ಇರುವುದಿಲ್ಲ’ ಎಂದು ವಿಷ್ಣುವರ್ಧನ್ ಅವರು ಹೇಳುತ್ತಿದ್ದರು. ಅದೇ ಸತ್ಯ. ಅದೇ ನಿತ್ಯ. ಚೇತನ್ ನಾಡಿಗೇರ್