ಚಿಕ್ಕನಾಯಕನಹಳ್ಳಿ: ಪಟ್ಟಣದ ಹೆಂಕಣ್ಣನಕಟ್ಟೆ ಪಾರ್ಕ್‌ಗೆ ಭೇಟಿ ನೀಡಿದ್ದ ಲೋಕಾಯುಕ್ತ ಡಿವೈಎಸ್ಪಿ ರವೀಶ್ ಅವ್ಯವಸ್ಥೆ ಕಂಡು ಪುರಸಭೆ ಸಿ.ಒನಿರ್ವಾಣಯ್ಯ ಹಾಗೂ ಪರಿಸರ ಎಂಜಿನಿಯರ್ ಜ್ಯೋತೀಶ್ವರಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಪಾರ್ಕ್‌ನಲ್ಲಿ ತಾಲೂಕು ಪಂಚಾಯಿತಿ ಸಭಾಗಂಣದಲ್ಲಿ ನಿಗದಿಯಾಗಿದ್ದ ಭೇಟಿ ರದ್ದುಗೊಂಡ ಹಿನ್ನೆಲೆಯಲ್ಲಿ ಶೆಟ್ಟಿಕೆರೆ ರಸ್ತೆಯಲ್ಲಿನ ಹೆಂಕಣ್ಣನಕಟ್ಟೆ ಪಾರ್ಕ್‌ಗೆ ಭೇಟಿ ನೀಡಿ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಪರಿಸರ ಎಂಜಿನಿಯರ್ ಜ್ಯೋತೀಶ್ವರಿ ಅವರನ್ನು ಕರೆಸಿ, ಪಾರ್ಕ್‌ನ ನಿರ್ವಹಣೆ ಜವಾಬ್ದಾರಿ ಯಾರದು, ಪುರಸಭೆಗೂ ಇದಕ್ಕೂ ಸಂಬಂಧವಿಲ್ಲವೇ, ಪಟ್ಟಣದಲ್ಲಿ ಇರುವ ಒಂದು ಪಾರ್ಕ್ ನಿರ್ವಹಣೆ ಮಾಡಲು ಸಾಧ್ಯವಿಲ್ಲ ಎಂದಾದರೆ ಕೆಲಸ ಏನ್ ಮಾಡ್ತೀರ, ಸಾರ್ವಜನಿಕರು ಹಾಗೂ ಮಕ್ಕಳು ಒಳಗೆ ಬರಲು ಭಯಪಡುವ ರೀತಿ ಇದೆ.
ಸಾರ್ವಜನಿಕರ ಆಸ್ತಿ ಕಾಪಾಡ ಬೇಕಾದ ನೀವೇ ಉದಾಸಿನ ಮಾಡಿದರೆ ಸರ್ಕಾರಿ ಆಸ್ತಿಗಳ ರಕ್ಷಣೆ ಯಾರು ಮಾಡುತ್ತಾರೆ. ಶನಿವಾರದ ಒಳಗೆ ಪಾರ್ಕ್ ಸ್ವತ್ಛಗೊಳಿಸಬೇಕು. ವಾಕಿಂಗ್ ಪಾಥ್ ಸೇರಿ ಸಂಪೂರ್ಣ ಪಾರ್ಕ್ ಸಾರ್ವಜನಿಕರಿಗೆ ಅನುಕೂಲಕರವಾಗಿ ಸಿದ್ಧಪಡಿಸಬೇಕು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಾರ್ಕ್ ಒಳಗೆ ಹಾವು, ವಿಷಕಾರಿ ಕ್ರೀಮಿಕೀಟಗಳಿವೆ. ಮಕ್ಕಳು ದಿನನಿತ್ಯ ಆಟವಾಡಲು ಬರುತ್ತಾರೆ. ಪುರಸಭೆಗೆ ದೂರು ನೀಡಿದರೂ ಪ್ರಯೋಜನ ವಾಗಿಲ್ಲ ಎಂದು ಕಾಲೇಜು ವಿದ್ಯಾರ್ಥಿಗಳು ದೂರು ನೀಡಿದರು. ಎಂಜಿನಿ ಯರ್ ಯೋಗಾನಂದ ಬಾಬು, ಎಇಇ ಚಂದ್ರಶೇಖರ್ ಇತರರಿದ್ದರು.