ದುಬಾೖ,: ಕ್ರಿಕೆಟ್ ಪ್ರೇಮಿಗಳ ಪಾಲಿಗೆ ರವಿವಾರ ಸೂಪರ್ ಸಂಡೇ ಅಲ್ಲ “ಸೂಪರ್ ಓವರ್ ಸಂಡೇ’ ಆಗಿತ್ತು. ಒಂದೇ ದಿನದಲ್ಲಿ ಎರಡು ಪಂದ್ಯಗಳು ಟೈ ಆಗಿ, ಮೂರು ಸೂಪರ್ ಓವರ್‌ಗಳನ್ನು ಕಂಡ ಐತಿಹಾಸಿಕ ದಿನ ಇದಾಗಿತ್ತು. ಕೆಲವೇ ಗಂಟೆಗಳ ಮೊದಲು ಕೆಕೆಆರ್-ಹೈದರಾಬಾದ್ ನಡುವಿನ ಟೈ ಪಂದ್ಯವನ್ನು ಕಣ್ತುಂಬಿಸಿಕೊಂಡ ಗುಂಗಿನಲ್ಲೇ ಇದ್ದ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ನಡುರಾತ್ರಿ
ಕಳೆದ ಬಳಿಕ ಮತ್ತೂಂದು ಟೈ ಪಂದ್ಯವನ್ನು ಸವಿಯುವ ಭಾಗ್ಯ! ಮುಂಬೈ- ಪಂಜಾಬ್ ನಡುವಿನ ಮುಖಾಮುಖೀಯೂ ಟೈ ಆಗಿ ಸೂಪರ್ ಓವರ್‌ನತ್ತ ಮುಖ ಮಾಡಿತು. ಅಷ್ಟೇ ಅಲ್ಲ, ಸೂಪರ್ ಓವರ್ ಕೂಡ ಟೈ ಆಗಿ ಎರಡನೇ ಸೂಪರ್ ಓವರ್ ಮೂಲಕ ಫಲಿತಾಂಶವನ್ನು ನಿರ್ಧರಿಸುವ ಅಪೂರ್ವ ಕ್ಷಣಕ್ಕೆ ಈ ಪಂದ್ಯ ಸಾಕ್ಷಿಯಾಯಿತು!
ಟಿ20 ಚರಿತ್ರೆಯ ಪಂದ್ಯವೊಂದರಲ್ಲಿ ಎರಡು ಸೂಪರ್ ಓವರ್ ಗಳನ್ನು ಎಸೆದ ಮೊದಲ ನಿದರ್ಶನ ಇದಾಗಿತ್ತು. ಕೊನೆಗೂ “ಕನ್ನಡಿಗರ ತಂಡ’ವಾದ ಪಂಜಾಬ್‌ಗ ಅದೃಷ್ಟದ ಬಾಗಿಲು ತೆರೆಯಿತು. ಕೇವಲ ಆರ್ ಸಿಬಿಯನ್ನಷ್ಟೇ ಸೋಲಿಸಲು ಶಕ್ತವೆಂಬ ಅಪವಾದ ಹೊತ್ತಿದ್ದ ರಾಹುಲ್ ಬಳಗ ರೋಹಿತ್ ಪಡೆಯನ್ನು ದ್ವಿತೀಯ ಸೂಪರ್ ಓವರ್‌ನಲ್ಲಿ ಮಗುಚಿ ಸಂಭ್ರಮಿಸಿತು
2014ರ ನಿದರ್ಶನ
ಆದರೆ ಐಪಿಎಲ್‌ನಲ್ಲಿ ಸೂಪರ್ ಓವರ್ ಟೈ ಆದ ನಿದರ್ಶನ ಇದೇ ಮೊದಲಲ್ಲ. 2014ರ ರಾಜಸ್ಥಾನ್ -ಕೆಕೆಆರ್ ನಡುವಿನ ಅಬುಧಾಬಿ ಪಂದ್ಯದ ವೇಳೆ ಎರಡೂ ತಂಡಗಳು 152 ರನ್ ಬಾರಿಸಿದ್ದರಿಂದ ಸೂಪರ್ ಓವರ್ ಎಸೆಯಲಾಗಿತ್ತು. ಇಲ್ಲಿ ಮತ್ತೆ ಇತ್ತಂಡಗಳು ಸಮ ಬಲದ ಸಾಧನೆ ತೋರ್ಪಡಿಸಿ ತಲಾ 11 ರನ್ ಬಾರಿಸಿದವು. ಆದರೆ ಅಂದು ಟೈ-ಬ್ರೇಕರ್‌ಗಾಗಿ ಮತ್ತೂಂದು ಓವರ್ ಎಸೆಯಲಿಲ್ಲ. ಬದಲಾಗಿ, ಪಂದ್ಯದಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ರಾಜಸ್ಥಾನ್ ತಂಡವನ್ನು ವಿಜಯಿ ಎಂದು ಘೋಷಿಸಲಾಗಿತ್ತು. 2019ರ ಇಂಗ್ಲೆಂಡ್-ನ್ಯೂಜಿಲ್ಯಾಂಡ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯ ಹಾಗೂ ಸೂಪರ್ ಓವರ್ ಕೂಡ ಟೈ ಆದಾಗ ಬೌಂಡರಿ ಲೆಕ್ಕಾಚಾರದ ಮೂಲಕವೇ ವಿಜಯಿ ತಂಡವನ್ನು ನಿರ್ಧರಿಸಿದ್ದನ್ನು ನೆನಪಿಸಿಕೊಳ್ಳಿ.
ಇದನ್ನೂ ಓದಿ:ಪಂಜಾಬ್ VS ಮುಂಬೈ: ಒಂದೇ ಪಂದ್ಯದಲ್ಲಿ 2 ಸೂಪರ್ ಓವರ್: ಟಿ20 ಇತಿಹಾಸದಲ್ಲೇ ಮೊದಲು
ಸೂಪರ್ ಓವರ್ ಟೈ ಆಗುತ್ತ ಹೋದರೆ?!
ಪಂದ್ಯವೊಂದು 2 ಸೂಪರ್ ಓವರ್ ಕಂಡ ಬಳಿಕ ಇಂಥದೊಂದು ಪ್ರಶ್ನೆ ಅನೇಕರನ್ನು ಕಾಡಿದ್ದರೆ ಅಚ್ಚರಿ ಇಲ್ಲ. ಆರಂಭಿಕ ನಿಯಮದಂತೆ, ತಂಡವೊಂದು ಅಧಿಕ ರನ್ ಗಳಿಸುವ ತನಕ ಅನಿಯಮಿತ ಸೂಪರ್ ಓವರ್‌ಗಳನ್ನು ಎಸೆಯುತ್ತಲೇ ಇರಲಾಗುವುದು!
ಆದರೆ ಇದನ್ನು ಈಗ ಬದಲಾಯಿಸಲಾಗಿದೆ. ನೂತನ ನಿಯಮದಂತೆ, ಭಾರತೀಯ ಕಾಲಮಾನದಂತೆ ರಾತ್ರಿ 8 ಗಂಟೆ ಬಳಿಕ (ಮೊದಲ ಪಂದ್ಯ) ಹಾಗೂ ನಡುರಾತ್ರಿ 12 ಗಂಟೆ ಬಳಿಕ (ದ್ವಿತೀಯ ಪಂದ್ಯ) ಸೂಪರ್ ಓವರ್ ಎಸೆಯುವಂತಿಲ್ಲ. ಆಗ ಅಂಕಗಳನ್ನು ಎರಡೂ ತಂಡಗಳಿಗೆ ಹಂಚಲು ನಿರ್ಧರಿಸಲಾಗಿದೆ. ಆದರೆ ಇದಕ್ಕೆ ನಾಯಕರ ಒಪ್ಪಿಗೆ ಅಗತ್ಯ.