ಮುಂಬಯಿ: ಜೂನಿಯರ್ ತೆಂಡುಲ್ಕರ್ ಖ್ಯಾತಿಯ ಆಲ್‌ರೌಂಡರ್ ಅರ್ಜುನ್ ತೆಂಡುಲ್ಕರ್ ಅವರ ಮತ್ತೊಂದು ಐಪಿಎಲ್ ಋತು ಬೆಂಚ್ ಮೇಲೆಯೇ ಕಳೆದು ಹೋಗಿದೆ.
2021 ಹಾಗೂ 2022ರ ಸರಣಿಯ ಎಲ್ಲ 28 ಪಂದ್ಯಗಳಿಂದಲೂ ಅವರನ್ನು ಮುಂಬೈ ಇಂಡಿಯನ್ಸ್ ತಂಡದಿಂದ ಹೊರಗುಳಿಸಲಾಯಿತು.
ಡೆಲ್ಲಿ ಎದುರಿನ ಕೊನೆಯ ಲೀಗ್ ಪಂದ್ಯದಲ್ಲಾದರೂ ಅರ್ಜುನ್ ಆಡಬಹುದು ಎಂಬ ನಿರೀಕ್ಷೆಯೂ ಹುಸಿಯಾಯಿತು.
ಈ ಕುರಿತು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮೊದಲ ಸಲ ಪ್ರತಿಕ್ರಿಯಿಸಿದ್ದಾರೆ. “ಅರ್ಜುನ್ ಹಾದಿ ಬಹಳ ಸವಾಲಿನಿಂದ ಕೂಡಿದೆ. ಆತ ಕಠಿನ ಪರಿಶ್ರಮ ವಹಿಸಬೇಕಿದೆ. ಆದರೆ ಕಳೆದೆರಡು ಋತುಗಳಲ್ಲಿ ಆತನಿಗೆ ಐಪಿಎಲ್ ಆಡಲು ಅವಕಾಶ ಏಕೆ ಸಿಗಲಿಲ್ಲ ಎಂಬುದು ಬೇರೆ ಪ್ರಶ್ನೆ. ಈಗಾಗಲೇ ಮುಂಬೈ ಸೀಸನ್ ಮುಗಿದಿದೆ’ ಎಂದು “ಸಚ್ ಇನ್‌ಸೈಟ್’ ಕಾರ್ಯಕ್ರಮದಲ್ಲಿ ಸಚಿನ್ ಹೇಳಿದರು.
“ನಿನ್ನ ಮುಂದಿರುವ ಮಾರ್ಗ ಖಂಡಿತ ಸುಲಭದ್ದಲ್ಲ, ಇದು ಭಾರೀ ಸವಾಲಿನಿಂದ ಕೂಡಿದೆ ಎಂದು ನಾನು ಆತನಿಗೆ ಯಾವತ್ತೂ ಹೇಳುತ್ತಿರುತ್ತೇನೆ. ಕ್ರಿಕೆಟ್ ಮೇಲಿನ ಪ್ರೀತಿಯಿಂದಾಗಿ ನೀನು ಕ್ರಿಕೆಟ್ ಆಡತೊಡಗಿದೆ. ಇದನ್ನು ಅದೇ ಪ್ರೀತಿಯಲ್ಲಿ ಮುಂದುವರಿಸು. ಕಠಿನ ಶ್ರಮಪಡು. ಫಲಿತಾಂಶ ತನ್ನಿಂತಾನಾಗಿ ಲಭಿಸುತ್ತದೆ ಎಂಬುದಾಗಿ ಹೇಳಿದ್ದೇನೆ’ ಎಂದು ಪುತ್ರನಿಗೆ ನೀಡಿದ ಸಲಹೆ ಕುರಿತು ಸಚಿನ್ ಪ್ರತಿಕ್ರಿಯಿಸಿದರು.
ಆಯ್ಕೆ ವಿಷಯದಲ್ಲಿ ನಾನಿಲ್ಲ
“ಆಯ್ಕೆ ಪ್ರತಿಕ್ರಿಯೆ ಕುರಿತು ಹೇಳುವುದಾದರೆ, ನಾನು ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವುದೇ ಇಲ್ಲ. ಇವೆಲ್ಲವೂ ತಂಡದ ಆಡಳಿತ ಮಂಡಳಿಗೆ ಬಿಟ್ಟ ವಿಚಾರ’ ಎಂದು ಸಚಿನ್ ತೆಂಡುಲ್ಕರ್ ಹೇಳಿದರು.
ಮುಂಬೈ ಇಂಡಿಯನ್ಸ್‌ಗೂ ಸಚಿನ್ ತೆಂಡುಲ್ಕರ್‌ಗೂ ಸದ್ಯ ಆಧಿಕೃತ ಸಂಬಂಧವೇನಿಲ್ಲ. ಪಂದ್ಯಗಳ ವೇಳೆ ಹಾಜರಿದ್ದು, ತಂಡದೊಂದಿಗೆ ಬೆರೆತು, ಕೆಲವು ಸಲಹೆಗಳನ್ನು ನೀಡುತ್ತಾರೆ, ಅಷ್ಟೇ.