ಮುಂಬೈ: ಫೆ.29ರ ನಂತರ ಪೇಟಿಎಂ ಗ್ರಾಹಕರ ಪ್ರೀಪೇಯ್ಡ್ ಪೇಮೆಂಟ್, ವಾಲೆಟ್, ಫಾಸ್ಟ್‌ಟ್ಯಾಗ್ ಖಾತೆಗಳಿಗೆ ಯಾವುದೇ ಠೇವಣಿ ಅಥವಾ ಟಾಪ್-ಅಪ್ ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ ಬುಧವಾರ ಆರ್‌ಬಿಐ ನಿರ್ಬಂಧ ವಿಧಿಸಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ನ ಸಮಗ್ರ ಆಡಿಟ್ ವರದಿ ಮತ್ತು ಬಾಹ್ಯ ಲೆಕ್ಕಪರಿಶೋಧಕರಿಂದ ಮೌಲ್ಯಮಾಪನಾ ವರದಿಯನ್ನು ಆಧರಿಸಿ ಆರ್‌ಬಿಐ ಈ ಕ್ರಮವನ್ನು ಕೈಗೊಂಡಿದೆ.
“ಯಾವುದೇ ಪೇಟಿಎಂ ಗ್ರಾಹಕರ ಖಾತೆ, ಪ್ರೀಪೇಯ್ಡ ಪೇಮೆಂಟ್, ವಾಲೆಟ್, ಫಾಸ್ಟ್‌ಟ್ಯಾಗ್, ಎಸಿಎಂಸಿ ಕಾರ್ಡ್, ಇತರೆ ಖಾತೆಗಳಲ್ಲಿ ಫೆ.29ರಿಂದ ಬಡ್ಡಿ, ಕ್ಯಾಶ್‌ಬ್ಯಾಕ್ ಅಥವಾ ಮರುಪಾವತಿ ಹೊರತುಪಡಿಸಿ ಠೇವಣಿ, ಸಾಲದ ವ್ಯವಹಾರ, ಟಾಪ್ ಅಪ್ ವ್ಯವಹಾರ ಮಾಡದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ ನಿರ್ಬಂಧ ವಿಧಿಸಲಾಗಿದೆ’ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಹಾಗಾದರೆ, ಫೆಬ್ರವರಿ 29 ರ ನಂತರ ನಿಮ್ಮ ಪೇಟಿಎಂ ಫಾಸ್ಟ್‌ಟ್ಯಾಗ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎಂದರ್ಥವೇ? ಆರ್ ಬಿಐ ಪ್ರಕಟಣೆಯ ಪ್ರಕಾರ ಪೇಟಿಎಂ ವ್ಯಾಲೆಟ್ ಮೂಲಕ ಬಳಕೆದಾರರು ತಮ್ಮ ಪೇಟಿಎಂ ಫಾಸ್ಟ್‌ಟ್ಯಾಗನ್ನು ರೀಚಾರ್ಜ್ ಮಾಡಲು ಅಥವಾ ಟಾಪ್ ಅಪ್ ಮಾಡಲು ಸಾಧ್ಯವಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ಪೇಟಿಎಂ ನ ಮೂಲ ಸಂಸ್ಥೆ, One97 ಕಮ್ಯುನಿಕೇಷನ್ಸ್ ಲಿಮಿಟೆಡ್ (OCL), ಇಂದು ಸ್ಟಾಕ್ ಎಕ್ಸ್‌ಚೇಂಜ್ ಗಳಿಗೆ ವಿವರವಾದ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಆರ್ ಬಿಐ ನ ಈ ಕ್ರಮವು “ಬಳಕೆದಾರರ ಉಳಿತಾಯ ಖಾತೆಗಳು, ವ್ಯಾಲೆಟ್‌ಗಳು, ಫಾಸ್ಟ್‌ಟ್ಯಾಗ್‌ಗಳು ಮತ್ತು ಎನ್ಸಿಎಂಸಿಖಾತೆಗಳಲ್ಲಿನ ಠೇವಣಿಗಳ ಮೇಲೆ ಪರಿಣಾಮ ಬೀರುವುದಿಲ್ಲ, ಅಸ್ತಿತ್ವದಲ್ಲಿರುವ ಬಾಕಿಗಳನ್ನು ಬಳಸಿ ಅವರು ಮುಂದುವರಿಯಬಹುದು” ಎಂದಿದೆ.
ಆದರೆ ಕಂಪನಿಯು ಪೇಟಿಎಂ ಫಾಸ್ಟ್ ಟ್ಯಾಗ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸಲಿಲ್ಲ, ಇದನ್ನು ಪೇಟಿಎಂ ವಾಲೆಟ್ ಬಳಸಿ ರೀಚಾರ್ಜ್ ಮಾಡಬಹುದು, ಇದನ್ನು ಫೆಬ್ರವರಿ 29 ರ ನಂತರ ನಿರ್ಬಂಧಿಸಲಾಗಿದೆ. ಜೊತೆಗೆ, ಹಲವಾರು ಇತರ ಪ್ರಮುಖ ಬ್ಯಾಂಕಿಂಗ್ ಸೇವೆಗಳನ್ನು ಸಹ ನಿರ್ಬಂಧಿಸಲಾಗಿದೆ.
ಆದಾಗ್ಯೂ, ಪೇಟಿಎಂ ಬಳಕೆದಾರರು ತಮ್ಮ ಪಿಪಿಬಿಎಲ್ ಖಾತೆ, ಪೆಟಿಎಂ ವ್ಯಾಲೆಟ್ ಅಥವಾ ಫಾಸ್ಟ್‌ಟ್ಯಾಗ್ ನಲ್ಲಿ ಅಸ್ತಿತ್ವದಲ್ಲಿರುವ ಬ್ಯಾಲೆನ್ಸ್ ಗಳನ್ನು ಯಾವುದೇ ತೊಂದರೆಯಿಲ್ಲದೆ ಬಳಸಬಹುದು. ಆರ್‌ಬಿಐ ನಿರ್ದೇಶನವು ಫೆಬ್ರವರಿ 29 ರ ನಂತರ ಕ್ರೆಡಿಟ್ ಟಾಪ್-ಅಪ್ ಗಳನ್ನು ನಿರ್ದಿಷ್ಟವಾಗಿ ನಿರ್ಬಂಧಿಸುತ್ತದೆ.