Advertisement

Article: ನದಿ ಒಂದು ಹರಿಯುವುದು ನಿಂತರೆ ಏನಾಗಬಹುದು?

12:14 AM Nov 05, 2023 | Team Udayavani |

ಇದಕ್ಕೆ ಎರಡೇ ಪದಗಳಲ್ಲಿ ಉತ್ತರ ಬೇಕೇ? 100 ಪದಗಳಲ್ಲಿ ಹೇಳಬೇಕೇ? ಅಥವಾ ಎರಡು ಪುಟಗಳಲ್ಲಿ ವಿವರವಾಗಿ ಉತ್ತರ ನೀಡಬೇಕೇ? ಎಂದು ಮರು ಪ್ರಶ್ನೆ ಹಾಕಬಹುದು. ಯಾಕೆಂದರೆ ಮೂರು ಮಾದರಿಯಲ್ಲಿ ಉತ್ತರ ಕೊಡಬಹುದಾದ ಪ್ರಶ್ನೆ.

Advertisement

ಎರಡೇ ಪದಗಳೆಂದು ಕೊಳ್ಳಿ. ಬದುಕು ನಾಶ. ನೂರು ಪದಗಳಲ್ಲಿ ಎಂದುಕೊಳ್ಳಿ. ಆಗ ನದಿ ಕಾಣೆಯಾಗುವುದರಿಂದ ಉದ್ಭವಿಸುವ ಪರಿಣಾಮಗಳನ್ನು ಸ್ಥೂಲವಾಗಿ ವಿವರಿಸಬಹುದು. ಅದೇ ಎರಡು ಪುಟಗಳಲ್ಲಿ ಎಂದರೆ ಸುಮಾರು 1,500 ಪದಗಳಲ್ಲಿ ನದಿ ಹುಟ್ಟುವ ಮೊದಲು ಅಥವಾ ಆ ನಿರ್ದಿಷ್ಟ ಪ್ರದೇಶದಲ್ಲಿ ಹರಿದು ಬರುವ ಮೊದಲು ಹೇಗಿತ್ತು, ಹರಿಯ ತೊಡಗಿದ ಮೇಲೆ ಏನೆಲ್ಲ ಬದಲಾವಣೆಯಾಯಿತು? ನಾಳೆ ಒಂದುವೇಳೆ ಹರಿಯುವುದು ನಿಲ್ಲಿಸಿದರೆ, ಕಾಣೆಯಾದರೆ ಅಥವಾ ಬರಡಾದರೆ ಏನೆಲ್ಲ ಆಗಬಹುದು ಎಂಬುದನ್ನು ಭೂತ ಮತ್ತು ವರ್ತಮಾನದ ಸಂಕಲನ ಮತ್ತು ವ್ಯವಕಲನ ಮಾಡಿ, ಭವಿಷ್ಯವನ್ನು ಗುಣಾಕಾರ ಮಾಡಿ, ಭಾಗಾಕಾರವನ್ನೂ ಅನ್ವಯಿಸಿ, ಉಳಿದ ಶೇಷವನ್ನು ಗಮನಿಸಿ ವಿವರಿಸಬಹುದು. ಒಟ್ಟು ಒಂದು ಪ್ರಶ್ನೆಗೆ ಬಿಟ್ಟ ಸ್ಥಳ ತುಂಬಲಿಕ್ಕೂ ಅವಕಾಶವಿದೆ, ದೀರ್ಘ‌ವಾದ ಪ್ರಬಂಧ ಸ್ವರೂಪಿ ಉತ್ತರ ಬರೆಯಲು ಅವಕಾಶವಿದೆ.

ಒಂದು ನದಿ ಹರಿಯುವುದನ್ನು ನಿಲ್ಲಿಸಿದರೆ… ಮೊದಲು ಭೂಮಿ ಬೇಸರ ಪಡುತ್ತದೆ. ಅದರ ಪರಿಣಾಮ ಸುತ್ತಲಿನ ಹಸುರಿಗೆ ಅಕಾಲದಲ್ಲೇ ವೃದ್ಧಾಪ್ಯ ವ್ಯಾಪಿಸತೊಡಗುತ್ತದೆ. ಸ್ವಲ್ಪ ದಿನಗಳಲ್ಲೇ ತರಗೆಲೆ ಸಾಮ್ರಾಜ್ಯ ತೆರೆದುಕೊಳ್ಳುತ್ತದೆ. ಹಸುರು ಹೊದ್ದ ಮರಗಳೆಲ್ಲ ಒಣಗಿ ಉರುವಲುಗಳಾಗುತ್ತವೆ. ಭೂಮಿಯೂ ಬಿಳಿಚಿಕೊಳ್ಳತೊಡಗುತ್ತಾಳೆ. ಆ ಉತ್ಸಾಹ, ಹುಮ್ಮಸ್ಸು, ಜೀವನ ಪ್ರೀತಿ ಎಲ್ಲವನ್ನೂ ಕಳೆದುಕೊಳ್ಳುತ್ತಾಳೆ. ಬರಡಾಗುತ್ತಾಳೆ. ಒಂಟಿಯಾಗುತ್ತಾಳೆ. ಕಷ್ಟ ಕೇಳಲಿಕ್ಕೂ, ಹೇಳಿಕೊಳ್ಳಲಿಕ್ಕೂ ಯಾರೂ ಇರರು. ಓಯಸಿಸ್‌ ಸಹ ಕಾಣಸಿಗದ ಮರುಭೂಮಿಯಾಗಿ ಬಿಡುತ್ತಾಳೆ. ಇಷ್ಟೆಲ್ಲ ಆದ ಮೇಲೆ ಕುಸಿಯದೆ ಇರುತ್ತಾಳೆಯೇ? ಪ್ರಳಯ ಎಂದರೆ ಬರೀ ಜಲದ್ದೇ ಎಂದೇನೂ ಇಲ್ಲವಲ್ಲ. ಕಾವಿನ ಉರಿನಾಲಗೆಯೂ ಎಲ್ಲವನ್ನೂ ಆವಾಹನೆ ತೆಗೆದುಕೊಳ್ಳಬಹುದಲ್ಲ. ಅದೇ ಈಗ ಆಗುತ್ತಿರುವುದು ಎಂಬ ಅಭಿಪ್ರಾಯವೂ ಇದೆ. ಅದರ ಅನುಭವವೂ ನಮಗಾಗುತ್ತಿದೆ. ಝುಳಝುಳನೆ ಹರಿಯುವ ನದಿ ಇಲ್ಲವಾದರೆ ಹೀಗೆ…

ಯಾವುದರಲ್ಲೂ ಜೀವ ಕಳೆ ಇರದು. ಪ್ರೇತಕಳೆ ಎಲ್ಲೆಡೆ ತುಂಬಿ ತುಳುಕುವಾಗ ಪ್ರೀತಿ ಎಲ್ಲಿ ಇದ್ದೀತು? ಆ ಪ್ರೀತಿಯೇ ಇರದಿದ್ದಾಗ ಹೂವು ಹೇಗೆ ಅರಳೀತು? ಮೋಡ ಹೇಗೆ ಕಟ್ಟಿàತು? ಹನಿಯೊಂದೆರಡು ನೆಲಕ್ಕಿಳಿದು ಹಸುರು ಹುಟ್ಟಿತು ಹೇಗೆ? ಕವಿ ಜಿ.ಎಸ್‌. ಶಿವರುದ್ರಪ್ಪನವರು ಹೇಳಿದ್ದು ಸುಳ್ಳಲ್ಲ. ಎಲ್ಲದಕ್ಕೂ ಪ್ರೀತಿ ಬೇಕು. ನದಿಯನ್ನು ಉಳಿಸಿಕೊಳ್ಳಲು, ನದಿಯನ್ನು ಹರಿಯುವಂತೆ ಮಾಡಲೂ ಪ್ರೀತಿ ಇರಬೇಕು. ಆ ಪ್ರೀತಿ ಈಗ ಎಲ್ಲಿದೆ? ನಮ್ಮಲ್ಲಿದೆಯಾ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವ ವರ್ತಮಾನ ಕಾಲವಿದು.

ನದಿ ಕಾನನ ಎನ್ನುವುದನ್ನು ಕೇಳಿದ್ದೇವೆ. ನದಿ ಮತ್ತು ಕಾಡು ಒಟ್ಟಿಗಿದ್ದರೆ ಚೆಂದದ ಜತೆಗೆ ಯೋಗ್ಯ. ಒಬ್ಬರನ್ನು ಬಿಟ್ಟು ಮತ್ತೂಬ್ಬರು ಇರಲಾರರು. ಇದ್ದರೂ ಒಬ್ಬರೂ ಸುಖವಾಗಿರಲಾರರು. ಕಾನನವಿದ್ದರೆ ನದಿ ಹರಿದಾಳು. ನದಿ ಇದ್ದರೆ ಕಾನನ ಚಿಗುರಿಯಾಳು. ಇವರಿಬ್ಬರು ಇದ್ದರೆ ಉಳಿದೆಲ್ಲವೂ, ಎಲ್ಲರೂ. ಇಬ್ಬರದೂ ಮಧುರ ಸಂಬಂಧ ಎನ್ನುವುದಕ್ಕಿಂತ ಅವಿನಾಭಾವ ಸಂಬಂಧ. ಭೂಮಿ ಇವರೆಲ್ಲರ ತಾಯಿ ಬಿಡಿ. ಇಂಥದ್ದರಲ್ಲಿ ಒಬ್ಬರನ್ನು ಬಿಟ್ಟು ಮತ್ತೂಬ್ಬರನ್ನು ನೆನಪಿಸಿಕೊಳ್ಳುವುದು ಹೇಗೆ? ಸಾಧ್ಯವೇ?

Advertisement

ಇವೆಲ್ಲವನ್ನೂ ನಾವೀಗ ಭಾಷೆ-ಬದುಕಿಗೆ, ಭಾಷೆ-ಭಾವಕ್ಕೂ ಅನ್ವಯಿಸೋಣ. ಮಾತು ಭಾಷೆಯ ಮೌಖೀಕ ಸ್ವರೂಪ. ಅಕ್ಷರ ಅದರ ಲಿಖೀತ ಸ್ವರೂಪ ಎಂದುಕೊಳ್ಳೋಣ. ಅಕ್ಷರಸ್ಥರ ಪರಂಪರೆ ಇಲ್ಲದಿರುವಾಗ ಭಾಷೆ ಇತ್ತು. ನಮ್ಮ ಜನಪದ ಸಂಪತ್ತು ಇದ್ದದ್ದು ಅಂಥದ್ದೇ ಒಂದು ಭಾಷೆಯ ಸ್ವರೂಪದಲ್ಲಿಯೇ ತಾನೇ. ನಾವು ಅಕ್ಷರ ಪರಂಪರೆ ಆರಂಭವಾದ ಮೇಲೆ ಅವೆಲ್ಲವನ್ನೂ ಲಿಖೀತ ಸ್ವರೂಪದಲ್ಲಿ ದಾಖಲಿಸುವ, ಸಂಗ್ರಹಿಸಿಡುವ ಕೆಲಸ ಮಾಡಿರಬಹುದು. ಆದರೆ ಭಾಷೆ ಇತ್ತು ಎಂಬುದಕ್ಕೆ ತಕರಾರು ಇಲ್ಲ. ಈ ಪರಂಪರೆಯಿಂದ ನಾವು ಬೆಳೆದಿದ್ದೇವೆ, ನಮ್ಮ ಜಗತ್ತೂ ಬೆಳೆದಿದೆ.

ಆದರೀಗ ಆಧುನಿಕ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ ಎನ್ನುವುದು ಎಲ್ಲ ವಲಯವನ್ನೂ ಆವರಿಸಿಕೊಳ್ಳುತ್ತಿರುವಾಗ ಭಾಷಾ ವಲಯವನ್ನು ಬಿಟ್ಟುಕೊಟ್ಟಿತೇ? ಭಾಷೆಗೆ ಯಾವ ತೆರನಾದ ಸಂಕಷ್ಟವೂ ಬಾರದೇ? ದೊಡ್ಡ ನೆರೆಯೊಂದು ಹಾದು ಹೋದ ಮೇಲೂ ಗಟ್ಟಿಯಾಗಿ ಉಳಿದುಕೊಳ್ಳುವಷ್ಟು ಸಾಮರ್ಥ್ಯ ನಮ್ಮ ಭಾಷೆಗಿದೆಯೇ? ಈ ಕುರಿತ ಚರ್ಚೆ ಆರಂಭವಾಗಿದೆ. ಇಲ್ಲ, ಸಾಧ್ಯವೇ ಇಲ್ಲ. ಭಾಷೆ ಉಳಿಯದು ಎನ್ನುವವರೂ ಇದ್ದಾರೆ. ಹಾಗೇನೂ ಆಗದು. ಆದರೂ ಅದಕ್ಕೆ ಇನ್ನಷ್ಟು ವರ್ಷಗಳು ಬೇಕು ಎನ್ನುವವರಿದ್ದಾರೆ. ಆದರೆ ಬಕಾಸುರ ಬಾಗಿಲಲ್ಲಿ ನಿಂತಿದ್ದಾನೆ. ಯಾರನ್ನು ನುಂಗಬೇಕು? ಯಾರನ್ನು ಬಿಡಬೇಕು? ಎಂಬುದು ಅವನ ಆಯ್ಕೆಯೇ ಹೊರತು ನಮ್ಮದಲ್ಲ.

ಆಧುನಿಕ ಸಂದರ್ಭದಲ್ಲಿ ಬದುಕುತ್ತಿರುವ ಭಾಷಿಗರು ನಾವು. ಕನ್ನಡಿಗರು ನಾವು. ಯಾವ ಭಾಷೆಯನ್ನು ಪ್ರೀತಿಸಬೇಕೆಂಬ ಗೊಂದಲದಲ್ಲೂ ಬಿದ್ದಿದ್ದೇವೆ ನಾವು. ಮಾತೃಭಾಷೆಯೋ, ಪ್ರಾದೇಶಿಕ ಭಾಷೆಯೋ, ರಾಷ್ಟ್ರ ಭಾಷೆಯೋ, ರಾಷ್ಟ್ರಾದ್ಯಂತ ಮಾತನಾಡುವ ಭಾಷೆಯೋ, ಉದ್ಯೋಗ ತಂದುಕೊಡುವ ಭಾಷೆಯೋ ಈ ಬಗೆಯ ಗೊಂದಲ ಒಂದೆಡೆ. ಮತ್ತೂಂದೆಡೆ, ಯಾವ ಭಾಷೆಗೆ ಅನ್ನ ಕೊಡುವ ಶಕ್ತಿ ಇದೆ ಎಂಬ ಹುಡುಕಾಟದಲ್ಲೂ ಮುಳುಗಿದ್ದೇವೆ. ಇಲ್ಲೀಗ ಸದ್ಯಕ್ಕೆ ಭಾವನೆಗಳ ಲೆಕ್ಕಾಚಾರವಲ್ಲ. ಬರೀ ಅಕ್ಷರದ ಚರ್ಚೆಯಲ್ಲಿ ಮುಳುಗಿದ್ದೇವೆ. ಹಾಗಾಗಿ ಬದುಕು ಕೊಡುವ ಭಾಷೆಯ ಹಿಂದೆ ಬಿದ್ದಿದ್ದೇವೆ. ಇದು ನಾಲ್ಕೈದು ದಶಕಗಳ ತುಮುಲ.

ಆದರೆ ಅದಕ್ಕಿಂತಲೂ ಘೋರವಾದ ಅಪಾಯದಲ್ಲಿ ಸಿಲುಕಿರುವುದು ಗೊತ್ತೇ ಇದೆಯಲ್ಲ. ಬರೆಯುವುದನ್ನು ಕಡಿಮೆ ಮಾಡಿ ದಶಕ ಕಳೆಯುತ್ತಾ ಬಂದಿತು. ಈಗೀಗ ಮಾತನಾಡುವುದನ್ನೂ ಮರೆಯುತ್ತಿದ್ದೇವೆ. ಗಂಭೀರ ವದನರಾಗಿ ರಾರಾಜಿಸಲು ಅಭ್ಯಾಸ ಮಾಡುತ್ತಿದ್ದೇವೆ. ಎದುರಿಗೆ ಯಾರು ಸಿಕ್ಕರೂ ನಮ್ಮ ಭಾಷೆ ಮುಗುಳ್ನಗೆಯೊಂದೇ ಆಗಿರುತ್ತದೆ. ಈ ಭಾಷೆ ಬಹುತೇಕ ಬಾರಿ ಪರಿಚಯಸ್ಥರಿಗೂ, ಅಪರಿಚಿತರಿಗೂ ಒಂದೇ ಅಗಿರುತ್ತದೆ. ಮನೆಯಲ್ಲೂ ಅಷ್ಟೇ. ಇಡೀ ಕುಟುಂಬ ಮುಳುಗಿರುವುದು ಮೊಬೈಲ್‌ ಅಥವಾ ಟಿವಿ ಯೊಳಗೆ. ಊಟಕ್ಕೆ ಕುಳಿತಾಗಲೂ ಮಾತನಾಡುವ ಸ್ವಭಾವಕ್ಕೆ ಕೈ ಮುಗಿದಿದ್ದೇವೆ. ಇಷ್ಟೆಲ್ಲ ಮಾಡುತ್ತಿರುವ ನಮಗೆ ಭಾಷೆಯೂ ಬೇಕೆನಿಸುತ್ತಿಲ್ಲ, ಭಾವನೆಗಳೂ ಇದೆ ಎನಿಸುತ್ತಿಲ್ಲ. ಯಾಕೆ ಬದುಕಲು ಈ ಮಾತು, ಭಾಷೆ ಬೇಕೆನಿಸುತ್ತಿಲ್ಲ. ಸದ್ಯ ಒಂದಿಷ್ಟು ಕಾರಣಗಳಿಗೆ ಅಕ್ಷರಗಳನ್ನು ಇಟ್ಟುಕೊಂಡಿದ್ದೇವೆ. ಅದಕ್ಕೂ ಕೃತಕ ಬುದ್ಧಿಮತ್ತೆ ಬಂದು ಬಿಟ್ಟರೆ ನಾವು ಅದನ್ನೂ ಮಾಡಬೇಕಿಲ್ಲ. ಒಂದು ಸಂಗತಿಯ ಕುರಿತು ನಮ್ಮ ಮನದೊಳಗೆ ಏನಾಗುತ್ತಿದೆ ಎಂಬುದನ್ನು ಅರಿತು ಕೃತಕ ಬುದ್ಧಿ ಮತ್ತೆ ಹೇಳಿಬಿಟ್ಟರೆ ನಾವೇನು ಮಾತನಾಡುವುದು? ನಾವೇನು ಹೇಳುವುದು? ಎಲ್ಲವೂ ಅದೇ ಹೇಳುತ್ತದಲ್ಲ.!

ಆಸ್ಪತ್ರೆಯ ತುರ್ತು ಚಿಕಿತ್ಸೆಯ ಕೋಣೆ. ಆಗ ತಾನೇ ಆಂಬ್ಯುಲೆನ್ಸ್‌ನಲ್ಲಿ ಬಂದ ದೇಹವೊಂದು ಹಾಸಿಗೆ ಮೇಲೆ ಮಲಗಿದೆ. ವೈದ್ಯರು ಬಂದರು ಚಿಕಿತ್ಸೆಗೆ. ಆ ದೇಹಕ್ಕೆ ಪ್ರಜ್ಞೆ ಇದೆ. ನೋವನ್ನು ಹೇಳಲೂ ತಿಳಿದಿದೆ, ಸಾಧ್ಯವಾಗುತ್ತಿಲ್ಲ. ವೈದ್ಯರ ಮುಖ ನೋಡಿಕೊಂಡು ಮುಖ ಭಾವದಲ್ಲಿ ಏನನ್ನೋ ಹೇಳಲು ಹೋಗುತ್ತಿದ್ದಾನೆ. ಅದನ್ನು ವೈದ್ಯರು ಗಮನಿಸುತ್ತಿಲ್ಲ. ಬದಲಾಗಿ ಆ ದೇಹದ ಎದುರು ಕುಳಿತ ವ್ಯಕ್ತಿಯ ಕಡೆ ಕಿವಿಕೊಟ್ಟಿದ್ದಾರೆ. ಅವನೆಲ್ಲವನ್ನೂ ಹೇಳುತ್ತಿದ್ದಾನೆ, ವೈದ್ಯರು ಮತ್ತು ಅವರ ಸಹಾಯಕರು ಬರೆದುಕೊಳ್ಳುತ್ತಿದ್ದಾರೆ. ಎಲ್ಲವೂ ಮುಗಿದ ಮೇಲೆ ಔಷಧದ ಚೀಟಿ ಕೊಟ್ಟು ತರುವಂತೆ ಹೇಳಿ ಹೊರಟರು. ಈ ವ್ಯಕ್ತಿ ಚೀಟಿ ಹಿಡಿದುಕೊಂಡು ಅವರ ಹಿಂದೆಯೇ ಹೋದ. ತುರ್ತು ಚಿಕಿತ್ಸಾ ಕೋಣೆಯಲ್ಲಿ ಆ ದೇಹವೊಂದೇ. ಒಬ್ಬನೇ. ಭಾವನೆಗಳಿವೆ… ವ್ಯಕ್ತಪಡಿಸಲಾಗುತ್ತಿಲ್ಲ.

ನಾವು ಆಧುನಿಕ ಜೀವಿಗಳು ಮುಂದೊಂದು ದಿನ ಹೀಗಾಗಿ ಬಿಡುತ್ತೇವೆಯೇ? ಮಾತು, ಅಕ್ಷರ, ಭಾಷೆ-ಎಲ್ಲವನ್ನೂ ಮರೆತು ಭಾವಗಳನ್ನೂ ಬದಿಗಿಟ್ಟು ಯಂತ್ರದಂತಾಗುತ್ತೇವೆಯೇ ಎಂಬ ಆತಂಕ ಹೆಚ್ಚಾಗುತ್ತಿದೆ. ಕಾರಣವಿಷ್ಟೇ. ನಾವೀಗ ಮನುಷ್ಯರಿಗಿಂತ ಹೆಚ್ಚು ಯಂತ್ರದ ಜತೆಗೇ ಮೂಕವಾಗಿ ಸಂಭಾಷಿಸುತ್ತಿದ್ದೇವೆ. ಅದು ಟಿವಿಯೋ, ಕಂಪ್ಯೂಟರೋ, ಮೊಬೈಲೋ..ಅಥವಾ ಎಲ್ಲವೋ..ಯಂತ್ರಗಳ ಮಧ್ಯೆ ನಾವೂ ಭಾವವಿರುವ ಯಂತ್ರಗಳಾಗುತ್ತಿದ್ದೇವಲ್ಲ.

ನದಿಯೂ ಉಳಿಯಬೇಕು. ಕಾನನವೂ ಉಳಿಯಬೇಕು. ಮೋಡ ಕಟ್ಟಿ ಮಳೆ ಸುರಿಯುತ್ತಿರಬೇಕು. ಈ ಸರಪಳಿಯಲ್ಲಿ ಯಾವುದು ತಪ್ಪಿದರೂ ಅಲ್ಲೋಲ ಕಲ್ಲೋಲ. ನಾವೂ ಮಾತನ್ನೂ ಇಟ್ಟುಕೊಳ್ಳೋಣ, ಅಕ್ಷರವನ್ನೂ ಇಟ್ಟುಕೊಳ್ಳೋಣ, ಭಾಷೆಯನ್ನೂ ಬಿಡದಿರೋಣ, ಭಾವನೆಗಳನ್ನೂ ಮರೆಯದಿರೋಣ. ಅದಾದರೆ ಭಾಷೆಯಷ್ಟೇ ಗೆಲ್ಲುವುದಿಲ್ಲ, ಬದುಕೂ ಗೆಲ್ಲುತ್ತದೆ. ನಾವೂ ಗೆಲ್ಲುತ್ತೇವೆ. ಅದಾಗಬೇಕು, ಅದಕ್ಕೆ ಇಂದೇ ಮುಂದಡಿ ಇಡಬೇಕು. ಬದುಕಿನ ಹೊಸ ಅಧ್ಯಾಯಕ್ಕೆ ಮುನ್ನುಡಿ ನಾವೇ ಬರೆಯಬೇಕು, ಬೇರೆಯವರಿಂದ ಬರೆಸುವುದಲ್ಲ.

-ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next