Advertisement

ಅರಮನೆಗೆ ಟೆಲಿಫೋನ್‌ ಬಂದಾಗ ಏನಾಯ್ತು?

06:00 AM Sep 27, 2018 | |

ಚೀನಾದ ರಾಜ ಮನೆತನದ ಕಟ್ಟ ಕಡೆಯ ಕುಡಿಯ ಹೆಸರು ಪುಯಿ. ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಆತ ಬದುಕಿದ್ದ. ಅವನು ಅರಮನೆ ಬಿಟ್ಟು ಆಚೆ ಜಗತ್ತನ್ನು ಕಂಡವನೇ ಅಲ್ಲ. ರಾಜರ ಸಲಹೆಗಾರರು ಭದ್ರತೆಯ ದೃಷ್ಟಿಯಿಂದ ಅವನನ್ನು ಅರಮನೆಯಿಂದ ಆಚೆಗೆ ಹೋಗದಂತೆ ತಡೆಹಿಡಿದಿದ್ದರು. ಅವನಿಗೆ ಯಂತ್ರಗಳು, ಉಪಕರಣಗಳು ಇವ್ಯಾವುದರ ಬಗ್ಗೆಯೂ ಮಾಹಿತಿಯಿರಲಿಲ್ಲ. ಚಿಕ್ಕಂದಿನಿಂದಲೂ ಅವನ ಒಡನಾಟ ಕೆಲವೇ ಕೆಲವು ವ್ಯಕ್ತಿಗಳೊಂದಿಗೆ ಮಾತ್ರ ಆಗುತ್ತಿದ್ದಿತು. ಅದೂ ವಿಶೇಷ ಅನುಮತಿಯ ಮೇರೆಗೆ. ಅವನಿಗೊಬ್ಬ ಗುರುವನ್ನು ಗೊತ್ತು ಮಾಡಿದ್ದರು. ಆತ ಪ್ರತಿದಿನ ಪುಯಿಗೆ ಶಿಕ್ಷಣ ನೀಡುತ್ತಿದ್ದ. ಏನನ್ನು ಕಲಿಸಬೇಕೆಬುದನ್ನೂ ಆಸ್ಥಾನ ಸಲಹೆಗಾರರು ಮೊದಲೇ ತಿಳಿಸಿಬಿಟ್ಟಿದ್ದರು. ಒಂದು ದಿನ ಅದು ಹೇಗೋ ದೂರವಾಣಿಯ ಬಗ್ಗೆ ಪುಯಿಗೆ ತಿಳಿದುಹೋಯಿತು. ಪುಯಿಗೆ ಕುತೂಹಲ ತಡೆಯಲಾಗಲಿಲ್ಲ. ತನಗೂ ದೂರವಾಣಿ ಬೇಕು ಎಂದು ಹಟ ಹಿಡಿದ. ಆದರೆ ಸಲಹೆಗಾರರು ದೂರವಾಣಿ ಕೊಡಿಸಲು ಹಿಂಜರಿದರು. ಅದರಿಂದಾಗಿ ಪುಯಿ ಹೊರಜಗತ್ತಿನೊಂದಿಗೆ ಸಂಪರ್ಕ ಸಾಧಿಸುವನೆಂಬುದು ಅವರ ಆತಂಕವಾಗಿತ್ತು. ಅಲ್ಲದೆ ಚೀನಾದ ರಾಜಮನೆತನದ ಶಿಷ್ಟಾಚಾರಕ್ಕೆ ವಿರುದ್ಧವಾದ ಸಂಗತಿಗಳನ್ನು ತಿಳಿದುಕೊಳ್ಳುತ್ತಾನೆ ಎಂಬ ಭಯವೂ ಅವರಿಗಿತ್ತು. ಕಡೆಗೂ ಪುಯಿಯೇ ಗೆದ್ದುಬಿಟ್ಟ. ಅವನಿಗೊಂದು ದೂರವಾಣಿಯಿಂದ ಕೊಡಿಸಲಾಯಿತು. ಎಲ್ಲರಿಗೂ ಅಚ್ಚರಿಯಾಗುವಂತೆ ಸಲಹೆಗಾರರು ಭಯಪಟ್ಟಂತೆ ಏನೂ ನಡೆಯಲಿಲ್ಲ. ದೂರವಾಣಿಯನ್ನು ಪುಯಿ ಒಂದೇ ಕಾರಣಕ್ಕೆ ಬಳಸುತ್ತಿದ್ದ. ಸಿಕ್ಕ ಸಿಕ್ಕವರಿಗೆಲ್ಲಾ ಹುಸಿ ಕರೆಗಳನ್ನು ಮಾಡಲು. ಅದಕ್ಕಾಗಿ ಬೀಜಿಂಗ್‌ನ ಟೆಲಿಫೋನ್‌ ಡೈರೆಕ್ಟರಿಯೊಂದನ್ನು ತರಿಸಿಟ್ಟುಕೊಂಡಿದ್ದ. ಬೋರಾದಾಗ ಯಾವುದಾದರೂ ನಂಬರ್‌ ಒತ್ತಿ ಕೇಕೆ ಹಾಕಿ ನಕ್ಕು ಇಟ್ಟು ಬಿಡುತ್ತಿದ್ದ. ಕೆಲವೊಮ್ಮೆ ರೆಸ್ಟೋರೆಂಟುಗಳಿಗೆ ಫೋನ್‌ ಮಾಡಿ ಯಾರದೋ ಮನೆಗಳಿಗೆ ಖಾದ್ಯಗಳನ್ನು ಪಾರ್ಸೆಲ್‌ ಮಾಡಿಸುತ್ತಿದ್ದ!
 

Advertisement
Advertisement

Udayavani is now on Telegram. Click here to join our channel and stay updated with the latest news.

Next