Advertisement

ಆ ಎರಡು ರಾತ್ರಿ ಭಾರತದಲ್ಲಿ ನಡೆದಿದ್ದೇನು?

12:30 AM Mar 02, 2019 | Team Udayavani |

ಪಾಕ್‌ನ ಎಫ್-16 ಅನ್ನು ಹೊಡೆದುರುಳಿಸಿದ ವಿಂಗ್‌ ಕಮಾಂಡರ್‌ ಅಭಿನಂದನ್‌ ಈಗ ಭಾರತದ ಹೀರೋ. ಮೊನ್ನೆವರೆಗೂ ಬರೀ ಯುದ್ಧ ವಿಮಾನದ ಪೈಲಟ್‌ ಆಗಿಯೇ ಇದ್ದರು. ಯಾಕೆಂದರೆ ಜನರಿಗೆ ಅವರ ಸಾಹಸಗಾಥೆ ಗೊತ್ತಿರಲಿಲ್ಲ. ಬುಧವಾರದ ಬೆಳಗ್ಗೆಯ ಕಾರ್ಯಾಚರಣೆ ಬಳಿಕ ಸ್ಪಷ್ಟ ಮಾಹಿತಿ ಲಭ್ಯವಾಗದೇ ಇದ್ದ ಕಾರಣ ಗೊಂದಲಗಳು ಏರ್ಪಟ್ಟಿದ್ದವು. ಭಾರತ ಪಾಕ್‌ ಎಫ್-16 ಅನ್ನು ಹೊಡೆದುರುಳಿಸಿತಾ ಅಥವಾ ಪಾಕ್‌ ವಿಮಾನ ಮಿಗ್‌ 21 ಅನ್ನು ಹೊಡೆದುರುಳಿಸಿತಾ ಎಂಬ ಅನುಮಾನಗಳು ಕಾಡುತ್ತಿದ್ದವು.

Advertisement

ಭಾರತದ ಯುದ್ದ ವಿಮಾನವೊಂದು ಕಾಣೆಯಾದ ಕುರಿತು ಭಾರತದ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರಗೊಂಡವು. ಭಾರತವೇ ಪಾಕ್‌ನ ಎಫ್-16 ಅನ್ನು ಹೊಡೆದುರುಳಿಸಿದೆ ಎಂದು ಸೇನೆ ಖಚಿತಪಡಿಸಿತ್ತು. ಆದರೆ ಭಾರತ ಎಫ್ 16ಅನ್ನು ಹೊಡೆದುರುಳಿಸಿದ್ದರೆ, ಮಿಗ್‌ ಹೇಗೆ ಕಣ್ಮರೆಯಾಯಿತು ಮೊದಲಾದ ಅನುಮಾನಗಳಿದ್ದವು. ಕಾಣೆಯಾದ “ಮಿಗ್‌ ಅನ್ನು ಪಾಕ್‌ ಎಫ್-16 ಹೊಡೆದುರುಳಿಸಿದೆ, ಓರ್ವ ಭಾರತೀಯ ಪೈಲಟ್‌ನನ್ನು ಸೆರೆಹಿಡಿದಿದ್ದೇವೆ’ ಎಂದು ಪಾಕ್‌ ಸರಕಾರ ಹಾಗೂ ಮಾಧ್ಯಮ ಹೇಳಿದ್ದರೂ ಅದನ್ನು ನಂಬುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಆದರೆ ಅಂತಿಮವಾಗಿ ಪಾಕ್‌ ಮಾಧ್ಯಮಗಳು ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರ ವಿಡಿಯೋ ಬಹಿರಂಗಗೊಳಿಸಿದ ಬಳಿಕ ಪಾಕ್‌ ವಶದಲ್ಲಿರುವುದು ದೃಢಪಟ್ಟಿತು. ಪಾಕ್‌ ಬತ್ತಳಿಕೆಯಲ್ಲಿರುವ ಅಮೆರಿಕ ನಿರ್ಮಿತ ಅತ್ಯಾಧುನಿಕ ಎಫ್ 16 ಯುದ್ಧ ವಿಮಾನವನ್ನು ಭಾರತದ ದಶಕಗಳ ಹಳೆಯ ಮಿಗ್‌ 21 ಹೊಡೆದುರುಳಿಸಿದ ವಿಷಯ ಬಹಿರಂಗೊಂಡಿತು. ಅವಘಡಕ್ಕೆ ತುತ್ತಾದ ಆ ಮಿಗ್‌ ಅನ್ನು ವಿಂಗ್‌ ಕಮಾಂಡರ್‌ ಅಭಿನಂದನ್‌ ಮುನ್ನಡೆಸುತ್ತಿದ್ದರು ಎಂಬ ಖಚಿತ ಮಾಹಿತಿ ಬುಧವಾರ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅವರ ಪರವಾದ ಹೇಳಿಕೆಗಳು, ಪ್ರಾರ್ಥನೆಗಳು ಆರಂಭವಾದವು. ಜತೆಗೆ ಅಭಿನಂಧನ್‌ ಭಾರತದ ಹೀರೋ ಆಗಿ ಬದಲಾದರು. ಚಹಾ ಸೇವಿಸುತ್ತಾ ಅಭಿನಂದನ್‌ ಅವರಲ್ಲಿ ಮಾತುಕತೆ ನಡೆಸುತ್ತಿದ್ದ ಎರಡು ವಿಡಿಯೋಗಳು ವೈರಲ್‌ ಆದವು. ಅವರ ಸುರಕ್ಷಿತ ವಾಪಸಾತಿಗೆ ದೇಶವೇ ಒಕ್ಕೊರಲಿನ ಪ್ರಾರ್ಥನೆಯಲ್ಲಿ ಭಾಗಿಯಾಯಿತು.

ಅಭಿನಂದನ್‌ ಅವರನ್ನು ಕರೆ ತರಲು ಪಕ್ಷಾತೀತ ಹೇಳಿಕೆಗಳು ಭಾರತದಲ್ಲಿ ಕೇಳಿ ಬಂದವು. ವಿವಿಧ ದೇಶಗಳ ರಾಯಭಾರಿಗಳ ಜತೆ ಕೇಂದ್ರ ಸರಕಾರ ಮಾತುಕತೆ ನಡೆಸಿತು. ಇದಾದ ಬಳಿಕ ಗುರುವಾರ ಪಾಕ್‌ ಸಂಸತ್ತಿನಲ್ಲಿ ಯಾವುದೇ ಷರತ್ತು ಇಲ್ಲದೇ, ಜಿನೇವಾ ಒಪ್ಪಂದದ ಪ್ರಕಾರ ಅಭಿನಂದನ್‌ ಅವರನ್ನು ಭಾರತಕ್ಕೆ ಒಪ್ಪಿಸುವುದಾಗಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಘೋಷಿಸಿದರು.

ಶುಕ್ರವಾರವೇ ಅಭಿನಂದ‌ನ್‌ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ಪಾಕ್‌ ವಿದೇಶಾಂಗ ಇಲಾಖೆಯೂ ಹೇಳಿತು. ಇದಾದ ಬಳಿಕ ಭಾರತದಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಯೋಧರಿಗೆ ಸ್ಫೂರ್ತಿ ತುಂಬಲು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಬಿಎಸ್‌ಎಫ್ ಯೋಧರ ಜತೆ ಕೆಲವು ಸಮಯ ಕಳೆದರು.

ಶುಕ್ರವಾರ ಬೆಳಗ್ಗಿನ ಜಾವದಿಂದಲೇ ಅಟಾರಿ ಗಡಿಯಲ್ಲಿ ಅಭಿನಂದನ್‌ ಅವರನ್ನು ಬರಮಾಡಿಕೊಳ್ಳಲು ಭಾರೀ ಸಂಖ್ಯೆಯಲ್ಲಿ ಜನ ಸಮುದಾಯ ನೆರೆದಿತ್ತು. ಶುಕ್ರವಾರ ಇಳಿ ಸಂಜೆಯ ಸುಮಾರಿಗೆ ಅಭಿನಂದನ್‌ ಅವರನ್ನು ಸಕಲ ಸರಕಾರಿ ಗೌರವಗಳ ಮುಖೇನ ಭಾರತಕ್ಕೆ ಪಾಕ್‌ ಸೇನೆ ಹಸ್ತಾಂತರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next