Advertisement

ಯಾವ ಕಾಣಿಕೆ ನೀಡಲಿ ನಿನಗೆ…?

08:06 PM Sep 09, 2019 | mahesh |

ನನ್ನ ಮುದ್ದು ಗೌರಮ್ಮನಿಗೆ, ನನ್ನ ಜಗತ್ತಿನ ಗೆಳತಿಗೆ, ಆತ್ಮಬಂಧುವಿಗೆ, ನನ್ನ ಪಾಲಿನ ಮಮತೆಗೆ, ನನ್ನ ಬದುಕಿನ ಪ್ರತಿ ಕ್ಷಣಗಳನ್ನೂ ಸಾರ್ಥಕವಾಗಿಸಿದ ನನ್ನೊಲುಮೆಯ ಬಂಗಾರದ ಹೃದಯದೊಡತಿಗೆ…

Advertisement

ಹೀಗೆ, ಏನೋ ಬರೆಯಲು ಕುಳಿತ ಈ ಬಿ.ಕೆ ನ ಜೋಳಿಗೆಯಲ್ಲಿ ನಿನ್ನಡೆಗಿನ ಆಕರ್ಷಣೆಯ ಜೊತೆಗೆ ಆರಾಧನೆಯಿದೆ, ಎಂದೂ ಮುಗಿಯದ ಪ್ರೇಮವಿದೆ, ಅದರ ಜೊತೆ ಜೊತೆಗೆ ಎಲ್ಲಿ ನನ್ನ ಕಣ್ಣಿಗೂ ಕಾಣಿಸದಷ್ಟು ದೂರವಾಗಿ ಬಿಡುತ್ತೀಯೋ ಎನ್ನುವ ದೊಡ್ಡ ತಲ್ಲಣವಿದೆ.

ಗೌರಮ್ಮ, ಕೆಲವೊಮ್ಮೆ ನಮ್ಮ ಕಣ್ಣೆದುರಿಗಿರುವ ಪ್ರೀತಿ ಕಾಣಿಸುವುದಿಲ್ಲ. ಶ್ರೀಮಂತರ ಮನೆಯ ತಿಜೋರಿಗಳಲ್ಲಿ, ರೂಪವಂತರ ಎದೆಯ ಗೂಡುಗಳಲ್ಲಿ, ಪ್ರೀತಿ ಹುಡುಕಲು ಹೊರಟುಬಿಡುತ್ತೇವೆ. ಆದರೆ, ಹಣದ ಋಣವಿಟ್ಟುಕೊಂಡು ಹುಟ್ಟುವ ಪ್ರೀತಿ – ಪ್ರೇಮಗಳಿಗೆ ಹೆಚ್ಚಿನ ಆಯುಷ್ಯವಿರುವುದಿಲ್ಲ.

ನಾನು ಒಮ್ಮೆಯಾದರೂ ನಿನ್ನ ಮುಂದೆ ಮಂಡಿಯೂರಿ ಕುಳಿತು ನಿನ್ನೆಡೆಗಿರುವ ನನ್ನ ಅಗಾಧ ಪ್ರೀತಿಯನ್ನು ಹೇಳಿಕೊಳ್ಳಲಾಗಲಿಲ್ಲವಲ್ಲ ಅಂದುಕೊಂಡು, ಈ ಕ್ಷಣಕ್ಕೂ ಕೊರಗುತ್ತಿದೇನೆ. ನಿನ್ನ ಬಳಿ ಹೇಳಿಕೊಳ್ಳುವ ಮನಸ್ಸು ನನಗೆ ಖಂಡಿತ ಬೆಟ್ಟದಷ್ಟಿತ್ತು. ಆದರೆ, ಹೇಳಿಕೊಂಡ ಮರುಕ್ಷಣವೇ ಎಲ್ಲಿ ನನ್ನಿಂದ ದೂರಾಗುತ್ತೀಯೋ ಎಂಬ ತಲ್ಲಣವೂ ಸಾಗರದಷ್ಟಿತ್ತು.

ನಾನು ಈಗ ಹೇಗೋ ಬದುಕುತ್ತಿರಬಹುದು, ಆದರೆ ಪ್ರತಿ ಕ್ಷಣವೂ ನಿನ್ನ ಬಗ್ಗೆನೇ ಯೋಚಿಸುತ್ತಾ, ನಿನಗೆ ಒಳಿತನ್ನೇ ಬಯಸುತ್ತಾ, ಆಗಾಗ ನಿನ್ನ ಆರೋಗ್ಯದ ಬಗ್ಗೆ ಪ್ರಾರ್ಥಿಸುತ್ತಾ, ಕೇವಲ ನಿನ್ನ ಸ್ನೇಹ – ಪ್ರೀತಿಯನ್ನೇ ಧ್ಯಾನಿಸುತ್ತ ಇದ್ದೇನೆ.

Advertisement

ನೀನು ನನಗಿಷ್ಟ ಎನ್ನುವ ಆರೂವರೆ ಅಕ್ಷರಗಳನ್ನು ಯಾವಾಗಲೂ ಹೇಳುತ್ತಿರುತ್ತೇನೆ, ಯಾಕೆ ಅಂತ ಗೊತ್ತಾ? ನಿನ್ನ ಮುಗ್ಧತೆಗೆ, ನಿನ್ನ ನಿಷ್ಕಲ್ಮಶವಾದ ಹೃದಯಕ್ಕೆ ಶರಣಾದ ಹುಡುಗ ನಾನೊಬ್ಬನೇ ಗೌರಮ್ಮ.

ನಿನ್ನ ಬಗೆಗಿನ ಈ ಸ್ನೇಹ – ಪ್ರೀತಿಯನ್ನು ಬರೆಸಿಕೊಳ್ಳುತ್ತಿರುವ ಈ ಅಕ್ಷರಗಳ ಋಣ ದೊಡ್ಡದಿದೆ. ಮದುವೆಗೆ ಆಹ್ವಾನಿಸಿದರೆ ನಿನಗೇನು ಉಡುಗೊರೆ ಕೊಡಬಲ್ಲೆ ಎನ್ನುವುದನ್ನು ಇನ್ನೂ ನಿರ್ಧರಿಸಲಾಗುತ್ತಿಲ್ಲ.

ಎಷ್ಟೇ ಜನ್ಮಗಳು ಕಳೆದರೂ ಅಷ್ಟೇ, ಈ ಬಡಪಾಯಿ ಹುಡುಗನ ಹೃದಯದಲ್ಲಿ ನಿಷ್ಕಲ್ಮಶವಾದ ಈ ಸ್ನೇಹ – ಪ್ರೀತಿ ಎಂದಿಗೂ ಕಡಿಮೆ ಆಗಲ್ಲ..

ನಿನ್ನ ಮುದ್ದಿನ ಬಿ.ಕೆ

Advertisement

Udayavani is now on Telegram. Click here to join our channel and stay updated with the latest news.

Next