ಆಳಂದ: ಐದು ವರ್ಷದಲ್ಲಿ ಸಂಸದ ಖೂಬಾ ಅಭಿವೃದ್ಧಿ ಕಾರ್ಯ ಕೈಗೊಳ್ಳದೇ ಮತ ಕೇಳಲು ಬಂದಿದ್ದಾರೆ. ಅಧಿಕಾರ ಅವಧಿಯಲ್ಲಿ ನೀಡಿದ ಕೆಲಸವನ್ನು ಮಾಡದೇ ಸೋಲುವ ಭೀತಿಯಿಂದ ಜಂಭ ಕೊಚ್ಚಿಕೊಳ್ಳುತ್ತಾ, ಸುಳ್ಳು ಭರವಸೆ
ನೀಡುತ್ತಿದ್ದಾರೆ. ಇವರು ಯಾವ ಮುಖ ಹೊತ್ತು ಮತದಾರರ ಬಳಿ ಮತ ಕೇಳುತ್ತಿದ್ದಾರೆಯೋ ಗೊತ್ತಾಗುತ್ತಿಲ್ಲ ಎಂದು ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹರಿಹಾಯ್ದರು.
ಪಟ್ಟಣದ ವಿವೇಕವ ನಿ ಶಾಲಾ ಆವರಣದಲ್ಲಿ ಲೋಕಸಭೆ ಚುನಾವಣೆಯ ನಿಮಿತ್ತ ಕಾಂಗ್ರೆಸ್ ಕರೆದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲಸವನ್ನೇ ಮಾಡದೇ ಮತಕೇಳಲು ಬಂದ ಇಂತವರಿಗೆ ಚುನಾವಣೆಯಲ್ಲಿ
ತಕ್ಕ ಪಾಠ ಕಲಿಸಬೇಕು. ಒಮ್ಮೆ ನನಗೆ ಅವಕಾಶ ಕೊಟ್ಟು ನೋಡಿ, ಕೊಟ್ಟ ಭರವಸೆ ಈಡೇರಿಸುತ್ತೇನೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶವನ್ನು ಕಾವಲು ಕಾಯುವೆ ಎಂದು ಹೇಳಿ ತಮಗೆ ಬೇಕಾದವರಿಗೆ ಕೋಟ್ಯಂತರ ರೂ. ಲಾಭಮಾಡಿಕೊಟ್ಟು ದೇಶವನ್ನೇ ಕೊಳ್ಳೆಹೊಡೆದಿದ್ದಾರೆ. ಆದ್ದರಿಂದ ಜನ ಸಾಮಾನ್ಯರನ್ನು ಸಂಕಷ್ಟದಿಂದ ಪಾರು ಮಾಡಲು ಮತ್ತು ದೇಶದ ಹಿತಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಎಲ್ಲ ಧರ್ಮ ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಿದ ಕಾಂಗ್ರೆಸ್ ಪಕ್ಷದ ಸಾಧನೆಯಿಂದಲೇ ದೇಶ ಅಭಿವೃದ್ಧಿ ಪಥದತ್ತ ಸಾಗಿದೆ. 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿಗರು ಪ್ರಶ್ನಿಸುತ್ತಾರೆ. ದೇಶದಲ್ಲಿನ ರಸ್ತೆಗಳು, ಏರ್‌ಪೋಟ್ ìಗಳು, ಸುಸಜ್ಜಿತ ಆಸ್ಪತ್ರೆಗಳು, ರೈಲು ಜೋಡಣೆ ಮಾರ್ಗ, ವೈಜ್ಞಾನಿಕ ಕ್ಷೇತ್ರದಲ್ಲಿನ ಕ್ರಾಂತಿ ಸಾಧನೆ ಅಲ್ಲವೇ? ಇವೆಲ್ಲ ಸಾಧನೆಗಳು ಬಿಜೆಪಿಗರು ಬಂದ ಮೇಲೆ ಆಗಿವೆಯೇ? ಬಿಜೆಪಿಗರು ಕೇವಲ ಯುವಕರನ್ನು ಭಾವನಾತ್ಮಕವಾಗಿ ದಾರಿತಪ್ಪಿಸಿ, ಜಾತಿ-ಧರ್ಮಗಳ ನಡುವೆ ದ್ವೇಷಭಾವನೆ ಬಿತ್ತಿದ್ದಾರೆ ಎಂದು ಟೀಕಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಬಿ.ಆರ್. ಪಾಟೀಲ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ತಪ್ಪುಗಳಿಂದಲೇ ಸೋಲಾಗಿದೆ. ಸದ್ಯ ಸೋಲಿನ ಸೇಡು ತೀರಿಸಲು ಕಾಂಗ್ರೆಸ್‌ಗೆ ಮತ ನೀಡಿ ಈಶ್ವರ ಖಂಡ್ರೆ ಅವರನ್ನು ಗೆಲ್ಲಿಸಬೇಕು. ಮಾಜಿ ಸಚಿವ ಭೀಮಣ್ಣಾ ಖಂಡ್ರೆ ನಾಡಿಗೆ ದೊಡ್ಡ ಕೊಡುಗೆ ನೀಡಿದವರು. ಅವರ ಪುತ್ರ ಈಶ್ವರ ಖಂಡ್ರೆ ಚುನಾವಣೆ ಕಣದಲ್ಲಿದ್ದಾರೆ. ಅವರ ಗೆಲುವು ಅಭಿವೃದ್ಧಿ ದೃಷ್ಟಿಯಿಂದ ಮುಖ್ಯವಾಗಿದೆ ಎಂದರು. ಅಬ್ದುಲ ಸಲಾಂ ಸಗರಿ ಮಾತನಾಡಿ, ಬೀದರ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಬಿ.ಆರ್. ಪಾಟೀಲ ಅವರ ಬೇಡಿಕೆಯಂತೆ ಈ
ಬಾರಿ ಕಾಂಗ್ರೆಸ್‌ನಿಂದ ಲಿಂಗಾಯತ ಅಭ್ಯರ್ಥಿಗೆ ಟಿಕೆಟ್ ದೊರೆತಿದೆ. ಆದ್ದರಿಂದ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು ಎಂದು ಹೇಳಿದರು.
ಯುವಜನ ಮತ್ತು ಕ್ರೀಡಾ ಸಚಿವ ರಹಿಖಾನ್, ಬಸವ ಕಲ್ಯಾಣ ಶಾಸಕ ಬಿ. ನಾರಾಯಣ, ಸಚಿವ ರಾಜಶೇಖರ ಪಾಟೀಲ ಹುಮನಾಬಾದ, ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ ಕೋರಳ್ಳಿ, ಅರುಣಕುಮಾರ ಪಾಟೀಲ, ಶರಣಕುಮಾರ ಮೋದಿ, ತಾಪಂ ಮಾಜಿ ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವಪ್ಪ ಗುತ್ತೇದಾರ ಮಾತನಾಡಿದರು.
ಮಾಜಿ ಸಚಿವ ಡಾ| ಶರಣ ಪ್ರಕಾಶ ಪಾಟೀಲ, ಶ್ಯಾಮರಾವ್ ಪ್ಯಾಟಿ, ಶರಣಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ಮುಖಂಡ ಶಂಕರಾವ್ ದೇಶಮುಖ, ಚಂದ್ರಶೇಖರ ಹಿರೇಮಠ, ಮಲ್ಲಪ್ಪ ಹತ್ತರಕಿ, ರವಿಂದ್ರ ಕೋರಳ್ಳಿ, ಲಿಂಗರಾಜ ಪಾಟೀಲ, ದತ್ತಪ್ಪ ಅಟ್ಟೂರ, ಎಪಿಎಂಸಿ ಮಾಜಿ ಅಧ್ಯಕ್ಷ ಶರಣು ಭೂಸನೂರ, ಸತೀಶ ಪನಶೆಟ್ಟಿ, ಜಿಪಂ ಸದಸ್ಯ ಸಿದ್ಧರಾಮ ಪ್ಯಾಟಿ, ಪಂಡಿತ ಶೇರಿಕಾರ ಇತರರು ಪಾಲ್ಗೊಂಡಿದ್ದರು. ಸತೀಶ ಪನಶೆಟ್ಟಿ ನಿರೂಪಿಸಿ, ವಂದಿಸಿದರು.
ಐದು ವರ್ಷದಲ್ಲಿ ಪ್ರಧಾನಿ ಮೋದಿ ಸುಳ್ಳು ಭರವಸೆ ನೀಡಿ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. 2014ರಲ್ಲಿ ನೀಡಿದ ಭರವಸೆಯಲ್ಲಿ ಒಂದನ್ನು ಈಡೇರಿಸಿಲ್ಲ. ನೋಟು ನಿಷೇಧದಿಂದ ಆತಂಕವಾದ ಹತ್ತಿಕ್ಕುತ್ತದೆ, ಕಪ್ಪು ಹಣ, ಭ್ರಷ್ಟಾಚಾರ ನಿಮೂರ್ಲನೆ ಆಗುತ್ತದೆ ಎನ್ನುವ ಭರವಸೆ ಹುಸಿಯಾಗಿದೆ. ಅವರ ಯಾವ ಭರವಸೆಯೂ ಈಡೇರಿಲ್ಲ. ಬಂಡವಾಳ ಶಾಹಿಗಳ ಜೇಬು ತುಂಬುವ ಧೋರಣೆಯಿಂದ ನೋಟು ನಿಷೇಧ ಕೈಗೊಂಡು ಕೋಟ್ಯಂತರ ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ್ದಾರೆ. ಈಶ್ವರ ಖಂಡ್ರೆ, ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ