Advertisement

ಪೈಪ್‌ಲೈನ್‌ ಇದ್ರೂ ಮತ್ತೂಂದರ ಅಗತ್ಯವೇನು?

03:44 PM Nov 18, 2019 | Team Udayavani |

ಬೇತಮಂಗಲ: ಅಮೃತ್‌ಸಿಟಿ ಯೋಜನೆಯಡಿ ಬೇತಮಂಗಲ ಪಾಲಾರ್‌ ಕೆರೆಯಿಂದ ಕೆಜಿಎಫ್ಗೆ ಕೈಗೊಂಡಿರುವ ಪೈಪ್‌ಲೈನ್‌ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಅವ್ಯವಹಾರ ನಡೆದಿರುವ ಆರೋಪಗಳು ಕೇಳಿ ಬಂದಿವೆ.

Advertisement

ಈಗಾಗಲೇ ಕೆಜಿಎಫ್ ನಗರಕ್ಕೆ ಪೈಪ್‌ಲೈನ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಈಗ ಮತ್ತೂಮ್ಮೆ ಪೈಪ್‌ಲೈನ್‌ ಹಾಕುವ ಅವಶ್ಯಕತೆ ಇರಲಿಲ್ಲ. ಕನಿಷ್ಠ ಅದಕ್ಕೊಂದು ನಕಾಶೆಯೂ ಇಲ್ಲದೆ ಕಾಮಗಾರಿ ಮಾಡಲಾಗುತ್ತಿದೆ ಎಂದು ಜನ ಆರೋಪಿಸುತ್ತಿದ್ದು, ಬ್ರಿಟಿಷರ ಆಳ್ವಿಕೆಯಲ್ಲಿ ಕುಡಿಯಲು ನೀರು ಸಂಗ್ರಹ ಮಾಡಿಕೊಳ್ಳಲು ಬೇತಮಂಗಲದ ಪಾಲಾರ್‌ ಕೆರೆಯಲ್ಲಿ ಗುಣಮಟ್ಟದ ಅಣೆಕಟ್ಟನ್ನು ಕಟ್ಟಲಾಗಿತ್ತು. ಈ ಮೂಲಕ ಚಿನ್ನದ ಗಣಿ ಪ್ರದೇಶಕ್ಕೆ ನೀರು ಪೂರೈಕೆ ಮಾಡಲು ಶುದ್ಧೀಕರಣ ಘಟಕ ಪ್ರಾರಂಭಿಸಿ ಬೇತಮಂಗಲದಿಂದ ಕೆಜಿಎಫ್ಗೆ ಸರಬರಾಜು ಮಾಡಲಾಗುತ್ತಿತ್ತು.

ನಂತರ ಮಾಜಿ ಸಚಿವ ಎಂ.ವಿ.ಕೃಷ್ಣಪ್ಪ ಬೆಮಲ್‌ ಕಾರ್ಖಾನೆ ನೌಕರರಿಗೆ ಇಂತಿಷ್ಟು ತೆರಿಗೆ ಕಟ್ಟಿಸಿಕೊಂಡು ನೀರು ಪೂರೈಸುತ್ತಿದ್ದರು. ಕಾಲ ಕ್ರಮೇಣ ಉತ್ತಮ ಮಳೆಯಿಲ್ಲದೆ 13 ವರ್ಷಗಳ ಕಾಲ ಕೆರೆ ಬತ್ತಿ ಹೋಗಿತ್ತು. ಈ ಕೆರೆ 1640 ಎಕರೆ ವಿಸ್ತೀರ್ಣವಿದ್ದು, ಜಿಲ್ಲೆಯ ಕೆರೆಗಳಲ್ಲಿ 2ನೇ ಸ್ಥಾನ ಪಡೆದಿದೆ. ಕಳೆದ 1 ವರ್ಷದ ಹಿಂದೆ ಸುರಿದ ಮಳೆಯಿಂದ ತುಂಬಿ ಹರಿದಿದ್ದ ಕೆರೆ ಮತ್ತೆ ಮಳೆ ಕೊರತೆಯಿಂದ ನೀರು ಕಡಿಮೆಯಾಗಿದೆ. ಇಂತಹ ಸಮಯದಲ್ಲಿ ಮತ್ತೂಮ್ಮೆ ಪೈಪ್‌ಲೈನ್‌ ಏಕೆ ಹಾಕುತ್ತಿದ್ದಾರೆಂಬ ಮಾಹಿತಿಯೇ ಇಲ್ಲ ಎಂದು ಜನ ದೂರುತ್ತಿದ್ದಾರೆ.

ಹಣ ದುರ್ಬಳಕೆಗೆ ಹುನ್ನಾರ: ದಶಕಗಳ ಹಿಂದೆ ಪೈಪ್‌ ಲೈನ್‌ ಅಳವಡಿಸಲಾಗಿದೆ. ಅವುಗಳನ್ನು ದುರಸ್ತಿಪಡಿಸುವುದನ್ನು ಬಿಟ್ಟು, ಈಗ ಬೃಹತ್‌ ಪೈಪ್‌ಲೈನ್‌ ಹಾಕಲಾಗುತ್ತಿದೆ. ಕೊಟ್ಯಂತರ ರೂ. ಅನುದಾನ ಲಪಟಾಯಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಗಂಭೀರ ಆರೋಪಗಳೂ ಕೇಳಿ ಬಂದಿವೆ.

ಕೆರೆಗೆ ಬರ, ಬೃಹತ್‌ ಪೈಪ್‌ಲೈನ್‌: ಈ ಭಾಗದ ಜನರಿಗೇ ಕುಡಿಯುವ ನೀರಿಲ್ಲ. ಇನ್ನು ಕೆಜಿಎಫ್ನ ಗರಕ್ಕೆ ಎಲ್ಲಿಂದ ತೆಗೆದುಕೊಂಡು ಹೋಗುತ್ತಿದ್ದಾರೆ. ಅಲ್ಲದೆ, ಬೃಹತ್‌ ಪೈಪ್‌ಲೈನ್‌ ಅಳವಡಿಸುತ್ತಿರುವುದಾರೂ ಏಕೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.

Advertisement

ಕುಡಿವ ನೀರಿನ ಪೈಪ್‌ಗೆ ಹಾನಿ: ಬೇತಮಂಗಲ ಪಾಲಾರ್‌ ಕೆರೆಯಿಂದ ಕುಡಿಯುವ ನೀರು ಸರಬರಾಜು ಮಾಡಲು ಕೈಗೊಂಡಿರುವ ಬೃಹತ್‌ ಪೈಪ್‌ಲೈನ್‌ನಿಂದ ಅಭಿವೃದ್ಧಿಗೆ ಪೆಟ್ಟು ಬಿದ್ದಿದೆ. ಮತ್ತೂಂದು ಕಡೆ ಗ್ರಾಪಂಯಿಂದ ಸಾರ್ವಜನಿಕರಿಗೆ ಪೂರೈಕೆ ಮಾಡುವ ಪೈಪ್‌ಲೈನ್‌ಗಳಿಗೆ ಹಾನಿಯಾಗಿದ್ದು, ನೀರಿಗೆ ಸಮಸ್ಯೆಯಾಗಿದೆ. ಇವರು ಬೃಹತ್‌ ಪೈಪ್‌ಲೈನ್‌ಗಳನ್ನು ಅಳವಡಿಸಲು ಸೂಕ್ತ ಸಿದ್ಧತೆ ನಡೆಸಿಕೊಳ್ಳದೆ, ಯಾವುದೇ ನಕಾಶೆ ತಯಾರಿಸಿಕೊಳ್ಳದೆ ಬೇಕಾಬಿಟ್ಟಿ ಸ್ಥಳದಲ್ಲಿ ರಸ್ತೆ ಅಗೆದು ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಗ್ರಾಪಂ ಸದಸ್ಯೆ ಪ್ರಿಯದರ್ಶಿನಿ ಎಸ್‌.ಧರಣಿ ಆರೋಪಿಸಿದ್ದಾರೆ.

ಇಂದಿನ ಪರಿಸ್ಥಿತಿಯಲ್ಲಿ ಕೆರೆಗಳು ತುಂಬುವ ಲಕ್ಷಣಗಳು ಕಾಣುತ್ತಿಲ್ಲ. ಒಂದು ವೇಳೆ ಅಲ್ಪ-ಸ್ವಲ್ಪ ನೀರು ಬಂದರೂ ಕೆಜಿಎಫ್ ನಗರಕ್ಕೆ ನೀರು ಬಿಟ್ಟರೆ ಬೇತಮಂಗಲ ಭಾಗದ ಜನ, ಜಾನುವಾರುಗಳು ತೀವ್ರ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ನೀರು ಬಿಡುವ ವಿಚಾರದಲ್ಲೆ ಬೇತಮಂಗಲ ಭಾಗದ ಜನತೆ ಒಪ್ಪುತ್ತಿಲ್ಲ. ಈಗಾಗಲೇ ಪೈಪ್‌ಲೈಲ್‌ ಕೆಜಿಎಫ್ನ ಗರಕ್ಕಿದೆ. ಇದೀಗ ಬೃಹತ್‌ ಪೈಪ್‌ಲೈನ್‌ ಜೋಡಣೆ ಮಾಡುವ ಅಗತ್ಯವಿತ್ತೇ ಎಂದು ಪ್ರಶ್ನಿಸುತ್ತಿದ್ದಾರೆ.

 

-ಆರ್‌.ಪುರುಷೋತ್ತಮರೆಡ್ಡಿ

Advertisement

Udayavani is now on Telegram. Click here to join our channel and stay updated with the latest news.

Next