Advertisement
ಹೀಗೆಂದು ರಾಜ್ಯದ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ಧಾಳಿಗಿಳಿದವರು ವಿಧಾನಸಭೆ ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ. ಬರ ಸ್ಥಿತಿ, ಸರ್ಕಾರದ ವೈಫಲ್ಯ ಕುರಿತಾಗಿ ಯಡಿಯೂರಪ್ಪ ಅವರು “ಉದಯವಾಣಿ’ಯೊಂದಿಗೆ ಹಲವು ಅನಿಸಿಕೆಗಳನ್ನು ಹಂಚಿಕೊಂಡರು.
Related Articles
Advertisement
* ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಕೆಲ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ ಅವರ ಕುರಿತಾಗಿ ಏಕವಚನ ಬಳಕೆ ಮೂಲಕ ತಾವು ದೊಡ್ಡ ನಾಯಕರೆಂಬ ಭ್ರಮೆಗೆ ಒಳಗಾಗಿದ್ದಾರೆ. ವಿಶ್ವ ಮೆಚ್ಚುವ ನಾಯಕನ ಬಗ್ಗೆ ಹಗುರ ಮಾತುಗಳಿಂದ ತಮ್ಮ ಯೋಗ್ಯತೆ ಎಂತಹದ್ದು ಎಂಬುದನ್ನು ಜನರ ಮುಂದಿಡುತ್ತಿದ್ದಾರಷ್ಟೆ.
* ಮೈಸೂರಿನಲ್ಲಿ ಕಾಂಗ್ರೆಸ್ ಸೋಲು ಖಚಿತವಾಗಿದೆ. ಮಿತ್ರಪಕ್ಷಗಳ ಭಿನ್ನಾಭಿಪ್ರಾಯದಿಂದ ಸಿದ್ದರಾಮಯ್ಯ ಕೆಂಗೆಟ್ಟಿದ್ದು, ಮನದೊಳಗಿನ ಹತಾಶೆ, ಸಿಟ್ಟನ್ನು ಬಿಜೆಪಿ ನಾಯಕರ ವಿರುದ್ಧ ಇಲ್ಲಸಲ್ಲದ ಆರೋಪಕ್ಕೆ ಬಳಸಿಕೊಳ್ಳುತ್ತಿದ್ದಾರೆ.
* ಕುಂದಗೋಳ* ಚಿಂಚೋಳಿ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಖಚಿತ. ಲೋಕಸಭೆಯಲ್ಲಿ 22 ಸ್ಥಾನಗಳಲ್ಲಿ ಗೆಲ್ಲುತ್ತೇವೆ. ಪ್ರಧಾನಿ ಮೋದಿ ಅಭಿವೃದ್ಧಿ ಯೋಜನೆಗಳಿಂದ ಎಲ್ಲಿ ಹೋದರೂ ಜನರು ಮೋದಿ, ಮೋದಿ ಎನ್ನುತ್ತಿದ್ದು, ಇದು ವಿಪಕ್ಷಗಳವರ ನಿದ್ದೆಗೆಡಿಸಿದೆ. ಎರಡು ವಿಧಾನಸಭೆ ಉಪ ಚುನಾವಣೆಯಲ್ಲಿ ಸರ್ಕಾರದವರು ಪೊಲೀಸ್ ಜೀಪುಗಳಲ್ಲಿ ಹಣ ಸಾಗಣೆ ಮೂಲಕ ಆಡಳಿತ ಯಂತ್ರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನಮ್ಮ ಜನ ಬಲದ ಮುಂದೆ ಅವರ ಹಣ ಬಲ ನಡೆಯದು.
* ಮೇ 23ರ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಖಚಿತ. ಕಾಂಗ್ರೆಸ್* ಜೆಡಿಎಸ್‌ನಲ್ಲಿ ಅನೇಕ ಅತೃಪ್ತ ಶಾಸಕರಿದ್ದಾರೆ. ಮೈತ್ರಿ ನಡುವಿನ ಅಸಮಾಧಾನ ಸ್ಫೋಟ ದಟ್ಟವಾಗಿದ್ದು, ಅಂತಹ ಸ್ಥಿತಿ ಬಂದಾಗ ವಿಪಕ್ಷವಾಗಿ ನಾವು ನಮ್ಮದೇ ರಾಜಕೀಯ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದೇನೆ ವಿನಃ, ನಾವು ಸರ್ಕಾರ ಬೀಳಿಸುತ್ತೇವೆ ಎಂದಾಗಲಿ, ಆಡಳಿತ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಅಂತಾಗಲಿ ನಾನು ಹೇಳಿಲ್ಲ.
ಸ್ವಯಂ ಸಮಾಧಾನಕ್ಕೆ ಸಿಎಂ ರೆಸಾರ್ಟ್ ವಾಸ: ಸಿಎಂ ಕುಮಾರಸ್ವಾಮಿ ರೆಸಾರ್ಟ್‌ಗೆ ಹೋಗಿರುವುದು ಚಿಕಿತ್ಸೆಗಾಗಿ ಅಲ್ಲ. ಬದಲಾಗಿ ಚುನಾವಣೆ ಸೋಲಿನ ಭೀತಿ, ಮೈತ್ರಿ ಪಕ್ಷಗಳ ನಡುವೆ ಹೆಚ್ಚಿದ ಆಂತರಿಕ ಕಲಹದಿಂದ ತೃಪ್ತಿ ಇಲ್ಲದಂತಾಗಿ ಸ್ವಯಂ ಸಮಾಧಾನಕ್ಕಾಗಿ ರೆಸಾರ್ಟ್ ಸೇರಿದ್ದಾರೆ. ಸಮ್ಮಿಶ್ರ ಸರ್ಕಾರ ಜನ ಹಿತ ಮರೆತು ಸ್ವಾರ್ಥಕ್ಕೆ ಸಿಲುಕಿದ್ದರಿಂದ ರಾಜ್ಯ ಅಭಿವೃದ್ಧಿ ವಿಚಾರದಲ್ಲಿ 10 ವರ್ಷ ಹಿಂದೆ ಸರಿದಿದೆ.
ಅಭಿವೃದ್ಧಿ ವಿಷಯವಾಗಿ ಅನೇಕ ದುಷ್ಪರಿಣಾಮ ಎದುರಿಸುವಂತಾಗಿದೆ. ರೈತರ ಸಾಲಮನ್ನಾ ಮಾಡುವುದಾಗಿ ಹೇಳಿ ಸಾಲಮನ್ನಾ ಮಾಡದೇ ಮುಖ್ಯಮಂತ್ರಿ ರೈತರಿಗೆ ದ್ರೋಹ ಬಗೆದಿದ್ದಾರೆ. ಇಂತಹ ಸ್ಥಿತಿಗೆ ಕೇವಲ 37 ಶಾಸಕರನ್ನು ಹೊಂದಿರುವ ಜೆಡಿಎಸ್‌ಗೆ ಅಧಿಕಾರ ನೀಡಿದ ಕಾಂಗ್ರೆಸ್ ಪಕ್ಷ ಹೊಣೆಯಾಗಬೇಕಾಗುತ್ತದೆ.
ಬಿಜೆಪಿ ಶಾಸಕರಿಗೆ ಪತ್ರ ಬರೆದಿದ್ದೇನೆ: ಬರದ ಸ್ಥಿತಿಗತಿ, ಜನರ ಸಂಕಷ್ಟಗಳ ಕುರಿತಾಗಿ ನಿಮ್ಮ ಕ್ಷೇತ್ರದ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ಬಿಜೆಪಿಯ ಎಲ್ಲ ಶಾಸಕರಿಗೆ ಪತ್ರ ಬರೆದಿದ್ದೇನೆ. ಮೇ 20ರಂದು ಬಿಜೆಪಿ ಶಾಸಕರು, ಸಂಸದರು ಹಾಗೂ ಪ್ರಮುಖ ಪದಾಧಿಕಾರಿಗಳ ಸಭೆ ಕರೆದಿದ್ದು, ಸಭೆಯಲ್ಲಿ ಬರ ಸ್ಥಿತಿ ಕುರಿತು ಚರ್ಚಿಸಲಾಗುವುದು. ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯುವ ಪ್ರಮುಖ ನಿರ್ಧಾರ ಕೈಗೊಳ್ಳಲಾಗುವುದು.
* ಅಮರೇಗೌಡ ಗೋನವಾರ