ಶಾಲೆಗಳ ಸಮಸ್ಯೆಗಳು.
Advertisement
ಸೌಲಭ್ಯ ವಂಚಿತ ಸ್ಥಿತಿ ಅನುಭವಿಸುತ್ತಿರುವ ಕರ್ನಾಟಕದ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು,ಕೇರಳಗಳ ಗಡಿಗಳಲ್ಲಿರುವ ಕನ್ನಡಿಗರಿಗೆ ಕೊಂಚ ಕರ್ನಾಟಕ ಸರ್ಕಾರದ ವಾತ್ಸಲ್ಯ, ಸೌಲಭ್ಯಗಳು ಸಿಕ್ಕಿವೆಯಾದರೂ, ಆಂಧ್ರಪ್ರದೇಶದೊಳಗಿನ ಕನ್ನಡ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇಂಥ ಸೌಲಭ್ಯ ಈವರೆಗೆ ಸಿಕ್ಕಿಲ್ಲ. ಈ ಬಗ್ಗೆ ಕರ್ನಾಟಕ ಸರ್ಕಾರದ ಗಮನ ಹರಿಸುವುದು ಇಂದಿನಅವಶ್ಯಕತೆಗಳಲ್ಲೊಂದಾಗಿದೆ.
ಆದರೆ, ಹೆತ್ತವರ ನಿರೀಕ್ಷೆಗೆ ತಕ್ಕಂತೆ ಇಲ್ಲಿನ ಕನ್ನಡ ಶಾಲೆಗಳು ಇಲ್ಲದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಹಿಂದಿನ ಆಂಧ್ರಪ್ರದೇಶದ ಗಡಿ ಜಿಲ್ಲೆಗಳಾದ ಮೆಹಬೂಬ್ ನಗರ, ಮೆದಕ್, ಹೈದರಾಬಾದ್, ಅನಂತಪುರಂ, ಕರ್ನೂಲುಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಕನ್ನಡ ಶಾಲೆಗಳಿವೆ. ಇವತ್ತಿಗೂ ಆಂಧ್ರದ ಗಡಿಯಂಚಿನ ಭಾಗಗಳಲ್ಲಿ ಕನ್ನಡ ಜೀವಂತವಾಗಿದೆ ಎನ್ನಲು ಈ ಶಾಲೆಗಳಲ್ಲಿ ಸುಮಾರು 1600 ಮಕ್ಕಳು ಓದುತ್ತಿರುವುದೇ ಸಾಕ್ಷಿ.
Related Articles
Advertisement
ಇಂಥ ಸಂದರ್ಭದಲ್ಲಿ ಈ ಕನ್ನಡ ಶಾಲೆಗಳಿಗೆ, ಅಲ್ಲಿನ ಸಿಬ್ಬಂದಿಗೆ ಹಾಗೂ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರದ ನೈತಿಕ ಬೆಂಬಲ ಅತ್ಯಗತ್ಯವಾಗಿದೆ. ಹೊರರಾಜ್ಯದಲ್ಲಿದ್ದರೂ, ಇಲ್ಲಿ ಓದುವ ಮಕ್ಕಳ ಹಾಗೂ ಅವರನ್ನು ಕನ್ನಡ ಶಾಲೆಗಳಿಗೆ ಸೇರಿಸಿದ ಪಾಲಕರ ಅಭಿಮಾನ ಮುಕ್ಕಾಗಿಲ್ಲ. ಆದರೆ, ಇದನ್ನು ಕಾಪಾಡಿ ಪೋಷಿಸುವ ಇಚ್ಛಾಶಕ್ತಿ ಆಂಧ್ರ ಸರ್ಕಾರಕ್ಕೆ ಇಲ್ಲ. ಹಾಗಾಗಿ, ಕಾನೂನಾನ್ಮಕವಾಗಿ ಕರ್ನಾಟಕ ಸರ್ಕಾರ ತನಗೆ ಸಾಧ್ಯವಿರುವ ವ್ಯಾಪ್ತಿಯಲ್ಲಿ ಕನ್ನಡ ಶಾಲೆಗಳ ಜತೆಗೆ ಸಂಪರ್ಕ ಸಾಧಿಸಬೇಕು.
ಆಂಧ್ರ ಪ್ರದೇಶ ಸರ್ಕಾರದ ಜತೆ ಮಾತುಕತೆ ನಡೆಸಬೇಕು, ಹೊರ ರಾಜ್ಯಗಳ ಕನ್ನಡ ವಿದ್ಯಾರ್ಥಿಗಳ ವ್ಯಾಸಂಗ ಹಾಗೂ ಅವರ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಬೇಕು, ಹೊರ ರಾಜ್ಯಗಳಲ್ಲಿ ಭಾಷಾ ಅಲ್ಪಸಂಖ್ಯಾತರಾಗಿರುವ ಕನ್ನಡಿಗರಿಗೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಸೌಲಭ್ಯಗಳು ಸಿಗುವಂತೆ ಮಾಡುವುದು ಇಂದಿನ ಜರೂರತ್ತಾಗಿದೆ.
ಈ ಹಿಂದೆ, 2014ರಲ್ಲಿ ನೆರೆ ರಾಜ್ಯದ ಗಡಿಭಾಗದಲ್ಲಿರುವ ಕನ್ನಡ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಬೇಕಾದ ಪಠ್ಯ ಪುಸ್ತಕವನ್ನು ಕರ್ನಾಟಕ ಸರ್ಕಾರ ಉಚಿತವಾಗಿ ಸರಬರಾಜು ಮಾಡಬೇಕು ಎಂದು ಜಿ.ಒ. ಆದೇಶಿಸಿದೆ. ಅದು ಸಕಾಲದಲ್ಲಿ ತಲುಪುತ್ತಿಲ್ಲ. ಈ ಬಗ್ಗೆ ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳಬೇಕು. ಕರ್ನಾಟಕ ಸರ್ಕಾರದಿಂದ ಸಿಗಬೇಕಾದ ಸಹಾಯಗಳನ್ನುಹೀಗೆ ಪಟ್ಟಿ ಮಾಡಬಹುದಾಗಿದೆ: *ಈಗಾಗಲೇ, ಕೇರಳ, ಮಹಾರಾಷ್ಟ್ರ ಗಡಿ ಭಾಗದ ವಿದ್ಯಾರ್ಥಿಗಳನ್ನು ತನ್ನ ಗೆಜೆಟ್‌ನಲ್ಲಿ ಕರ್ನಾಟಕದ ವಿದ್ಯಾರ್ಥಿಗಳೆಂದು ಪರಿಗಣಿಸಿ ಅವರಿಗೆ ಸೌಲಭ್ಯಗಳನ್ನು ಕರ್ನಾಟಕ ಸರ್ಕಾರ ನೀಡುತ್ತಿದೆ. ಆದರೆ, ಆಂಧ್ರ ಪ್ರದೇಶದ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಕ್ಕಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಉನ್ನತ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ಸೇರಿದಂತೆ ಇತರ ಸಾರಿಗೆ ಸಂಬಂಧಿ ಪ್ರಯೋಜನ ಕೊಡಬೇಕು. *ಕರ್ನಾಟಕದಲ್ಲಿ ವ್ಯಾಸಂಗ ಮಾಡುತ್ತಿರುವ ಕನ್ನಡಿಗ ವಿದ್ಯಾರ್ಥಿಗಳಿಗೆ ಸಿಗುವ ವಿದ್ಯಾರ್ಥಿ ವೇತನ, ಬೈಸಿಕಲ್, ಸಮವಸ್ತ್ರ ಮುಂತಾದ ಸೌಲಭ್ಯಗಳು ಗಡಿನಾಡಿನಲ್ಲಿ ಕಲಿಯುತ್ತಿರುವ ಈ ಕನ್ನಡ ಮಕ್ಕಳಿಗೆ ಸಿಗುವಂತಾಗಬೇಕು. * ಆಂಧ್ರ ಸರ್ಕಾರದ ಸಹಯೋಗದೊಂದಿಗೆ, ಹತ್ತನೇ ತರಗತಿ ಮುಗಿಸುವ ಈ ವಿದ್ಯಾರ್ಥಿಗಳಿಗೆ ಗಡಿಭಾಗಗಳಲ್ಲೇ ಉನ್ನತ ಶಿಕ್ಷಣ ಮುಂದುವರಿಸಲು ಅನುಕೂಲವಾಗುವಂತೆ ಪದವಿ ಪೂರ್ವ, ಪದವಿ, ಐಟಿಐ, ಡಿಪ್ಲೋಮಾ ಮುಂತಾದ ವಿದ್ಯಾಸಂಸ್ಥೆಗಳನ್ನು ಕೊಡಬೇಕು. ಬಿ.ಎಡ್, ಡಿಎಡ್ ಎಂಎಡ್ ಸಂಸ್ಥೆಗಳನ್ನು ಸ್ಥಾಪಿಸಲು ಮುಂದಾಗಬೇಕು. *ಗಡಿನಾಡ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಶೇ. 5ರಷ್ಟು ಮೀಸಲಾತಿ ಇದೆ. ಇದು ಕರ್ನಾಟಕದ ಎಲ್ಲಾ ಕಾಲೇಜುಗಳಲ್ಲಿ ಸಮರ್ಥವಾಗಿ ಅನುಷ್ಠಾನಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು. *ಹೊರರಾಜ್ಯಗಳ ಕನ್ನಡ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉದ್ಯೋಗದಲ್ಲಿ ಶೇ. 5ರಷ್ಟು ಮೀಸಲಾತಿಯನ್ನು ಈಗಾಗಲೇ ನೀಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ವರ್ಗದ ವಿದ್ಯಾರ್ಥಿಗಳು ಹೆಚ್ಚಾಗಿದ್ದು ಪೈಪೋಟಿ ಹೆಚ್ಚುತ್ತಿರುವ ಕಾರಣ ಈ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. * ಇತರೆ ರಾಜ್ಯಗಳಲ್ಲಿ ಓದುತ್ತಿರುವ ಕನ್ನಡ ವಿದ್ಯಾರ್ಥಿಗಳ ಜಾತಿ ಮೀಸಲಾತಿ ಮಾನದಂಡಗಳು ಆಯಾ ರಾಜ್ಯಗಳ ನಿಯಮಗಳಿಗೆ ಸಂಬಂಧಪಟ್ಟಂತೆ ಬೇರೆ ಬೇರೆಯಾಗಿರುತ್ತವೆ. ಆದ್ದರಿಂದ, ಇತರೆ ರಾಜ್ಯಗಳಲ್ಲಿ ಓದಿದ ಕನ್ನಡ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಉದ್ಯೋಗ
ಪಡೆಯುವಾಗ ಕೇಳಲಾಗುವ ಜಾತಿ ಪ್ರಮಾಣ ಪತ್ರ ಹಾಗೂ ಸಿಂಧುತ್ವ ಪ್ರಮಾಣ ಪತ್ರಗಳಿಂದ ವಿನಾಯ್ತಿ ನೀಡಬೇಕು. *ಕನ್ನಡಿಗರ ಮಕ್ಕಳು ಆರ್ಥಿಕ ತೊಂದರೆಗಳಿಂದಾಗಿ ಶಿಕ್ಷಣ ತೊರೆಯುವಂತಾಗಿ ಅಂಥ ಮಕ್ಕಳು ಬಾಲಕಾರ್ಮಿಕರಾಗುತ್ತಿದ್ದಾರೆ. ಆ ಮಕ್ಕಳ ಡ್ರಾಪ್ ಔಟ್ ತಪ್ಪಿಸಲು ಸರ್ಕಾರ ವಿಶಿಷ್ಠ ಕಾರ್ಯಯೋಜನೆ ರೂಪಿಸಬೇಕಿದೆ. * ಕನ್ನಡ ಪರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅಲ್ಲಿನ ಕನ್ನಡಿಗರ ಆತ್ಮವಿಶ್ವಾಸ ಹೆಚ್ಚಿಸಲು ಕಾರ್ಯಕ್ರಮಗಳನ್ನು ರೂಪಿಸಬೇಕು. *62ನೇ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಾದರೂ ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಮನವಿ. ಗಿರಿಜಾಪತಿ,
ಶಿಕ್ಷಕರು, ಡಿ.ಹಿರೇಹಾಳ್ (ಆಂಧ್ರಪ್ರದೇಶ)