Advertisement

ಉಭಯ ರಾಜ್ಯಗಳ ಫ‌ಲಿತಾಂಶದಲ್ಲಿ ಕರ್ನಾಟಕದ ಪಕ್ಷಗಳು ಕಂಡಿದ್ದೇನು?

10:05 PM Dec 08, 2022 | Team Udayavani |

ಮಿಷನ್‌-150ಕ್ಕೆ ರಹದಾರಿ 
ಗುಜರಾತ್‌ನಲ್ಲಿ ಕಳೆದ ಚುನಾ ವಣೆಯಲ್ಲಿ ಗಳಿಸಿದ್ದ ಸ್ಥಾನಗಳನ್ನೂ ಹಿಂದಿಕ್ಕಿ ಅಸೀಮ ಬಲದೊಂದಿಗೆ ಭಾರ ತೀಯ ಜನತಾ ಪಕ್ಷ ಜಯಗಳಿಸುವ ಮೂಲಕ ವಿಪಕ್ಷಗಳು ಆಡಳಿತ ವಿರೋಧಿ ಅಲೆ ಎಂಬ ಅಪಪ್ರಚಾರವನ್ನು ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಹಿಮ್ಮೆಟ್ಟಿಸಿದೆ ಎಂದು ಯಾವುದೇ ಅಳುಕಿಲ್ಲದೇ ಹೇಳಬಹುದು. ಹೀಗಾಗಿ ಈ ಫಲಿತಾಂಶ ಕರ್ನಾಟಕಕ್ಕೂ ದಿಕ್ಸೂಚಿ ಎಂಬ ಆತ್ಮವಿಶ್ವಾಸ ಬಂದಿದೆ.

Advertisement

ಆಡಳಿತಾತ್ಮಕವಾಗಿ ನಾವು ಮೊದಲಿನಿಂದಲೂ ಗುಜರಾತ್‌ ಮಾಡೆಲ್‌ ಬಗ್ಗೆ ಮಾತನಾಡುತ್ತಲೇ ಬಂದಿದ್ದೇವೆ. ಗುಜರಾತ್‌ ನಮಗ್ಯಾಕೆ ಮಾದರಿ ಎಂಬುದನ್ನು ಅಂಕಿ-ಅಂಶಗಳ ಆಧಾರದ ಮೇಲೆ ಅಳೆಯುವ ಪ್ರವೀಣರಿಗೆ ರಾಜಕೀಯ ಸ್ಥಿರತೆ ಎಂಬ ವಿಚಾರ ಮರೆತು ಹೋಗುತ್ತದೆ. ಈ ಕಾರಣಕ್ಕಾಗಿ ಗುಜರಾತ್‌ ನಮಗೆ ಮಾದರಿಯಾಗಿದೆ.
ಅಲ್ಲಿ ಮುಖ್ಯಮಂತ್ರಿಗಳು ಆದ ವಿಜಯ್‌ ರೂಪಾನಿಯವರನ್ನೂ ಒಳಗೊಂಡಂತೆ 42 ಹಾಲಿ ಶಾಸಕರಿಗೆ ಟಿಕೆಟ್‌ ನೀಡಲಿಲ್ಲ. ಇದಕ್ಕೆ ಪರ್ಯಾಯವಾಗಿ ಯುವ ಮುಖಗಳು, ಮಹಿಳೆಯರು, ಸ್ಥಳೀಯ ಸಂಸ್ಥೆ, ಎಪಿಎಂಸಿಗಳಲ್ಲಿ ಗೆದ್ದು ಪಕ್ಷದ ಪರವಾಗಿ ಭರವಸೆ ಮೂಡಿಸಿದ್ದ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಲಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಛಲ ಬಿಡದೇ ಐದು ವರ್ಷಗಳ ಕಾಲ ಪಕ್ಷ ಕಟ್ಟಿದ 13 ಮಾಜಿ ಶಾಸಕರಿಗೆ ಈ ಬಾರಿ ಟಿಕೆಟ್‌ ನೀಡಲಾಗಿತ್ತು. ಗುಜರಾತ್‌ನಲ್ಲಿ ಬಿಜೆಪಿ ಪಕ್ಷ ಅಥವಾ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇರಲಿಲ್ಲ. ಆದರೆ ಸುದೀರ್ಘ‌ ಅವಧಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸರ್ಕಾರದ ಭಾಗವಾಗಿದ್ದ ವ್ಯಕ್ತಿಗಳ ವಿರುದ್ಧ ಕೆಲವೆಡೆ ಅಂಥ ಅಲೆ ಇದ್ದಿದ್ದು ನಿಜ. ಚುನಾವಣಾ ಚಾಣಾಕ್ಷರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಇದನ್ನು ಗುರುತಿಸಿ ಸಕಾಲಿಕ ಚಿಕಿತ್ಸೆಯನ್ನು ನೀಡಿದರು. ಆ ಮೂಲಕ ದೊಡ್ಡ ಸಂದೇಶ ಈ ಚುನಾವಣೆಯಿಂದ ರವಾನೆಯಾಯಿತು.

ನಾಯಕತ್ವವೇ ಇಲ್ಲದೇ ಸೂತ್ರ ಹರಿದ ಗಾಳಿಪಟದಂತೆ ವರ್ತಿಸುವ ಕಾಂಗ್ರೆಸ್‌ ಅಧಃಪತನ ಕಳೆದ ವಿಧಾನಸಭಾ ಚುನಾ ವಣೆಯಿಂದಲೇ ರಾಜ್ಯದಲ್ಲಿ ಆರಂಭವಾಗಿದೆ. ಕರ್ನಾಟಕದಲ್ಲೂ ಅಧಿಕಾರದ ಹಗಲುಕನಸು ಕಾಣುತ್ತಿರುವ ಕಾಂಗ್ರೆಸ್‌ಗೆ ಭವಿಷ್ಯದ ಫಲಿತಾಂಶ ಕನ್ನಡಿಯ ಗಂಟು ಎಂಬುದು ನಿಸ್ಸಂದೇಹ.-ವಿ.ಸುನಿಲ್‌ ಕುಮಾರ್‌, ಸಚಿವರು

ಕರ್ನಾಟಕದ ಚಿತ್ರಣವೇ ಬೇರೆ 

ಹಿಮಾಚಲ ಪ್ರದೇಶ, ದೆಹಲಿ ಮಹಾನಗರ ಪಾಲಿಕೆ ಮತ್ತು ಗುಜರಾತ್‌ ಚುನಾ ವಣೆಗಳು ಒಂದೊಂದು ಚುನಾ ವಣೆಯಲ್ಲಿ ಒಂದೊಂದು ಪಕ್ಷವನ್ನು ಕೈ ಹಿಡಿಯುವುದರ ಮೂಲಕ ಬೇರೆ ಬೇರೆ ಸಂದೇಶಗಳನ್ನು ನೀಡಿವೆ. ಆಡಳಿತಾ ರೂಢ ಪಕ್ಷವನ್ನು ಧಿಕ್ಕರಿಸಿ ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಹಿಮಾಚಲ ಪ್ರದೇಶದಲ್ಲಿ ಆಶೀರ್ವಾದ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಕಾಂಗ್ರೆಸ್‌ ಪಕ್ಷವೇ ಪರ್ಯಾಯವೆಂಬ ಸಂದೇಶವನ್ನು ನೀಡಿರುತ್ತಾರೆ.

Advertisement

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಗುಜರಾತ್‌ ಫ‌ಲಿತಾಂಶ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ ಅಲ್ಲಿನ ಸೋಷಿಯಲ್‌ ಎಂಜಿನಿಯರಿಂಗ್‌ ಬೇರೆ, ಇಲ್ಲಿನದೇ ಬೇರೆ. ಜತೆಗೆ, ಅಲ್ಲಿನ ರಾಜಕೀಯ ಪರಿಸ್ಥಿತಿಗೂ ಇಲ್ಲಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಕರ್ನಾಟಕದಲ್ಲಿ ಬಿಜೆಪಿ ಇದುವರೆಗೂ 113 ಸ್ಥಾನ ಸ್ವಂತ ಶಕ್ತಿಯ ಮೇಲೆ ಗೆದ್ದು ಬಂದಿಲ್ಲ.
ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಸಮರ್ಥ ನಾಯಕತ್ವ ಇದೆ, ಅತಿ ದೊಡ್ಡ ಕಾರ್ಯಕರ್ತರ ಪಡೆಯ ಸಂಘಟನೆಯ ಬಲವೂ ಇದೆ. ಎಲ್ಲದಕ್ಕಿಂತ ಮುಖ್ಯವಾಗಿ ಬಿಜೆಪಿ ಸರ್ಕಾರದ ಹಗರಣಗಳು, 40 ಪರ್ಸೆಂಟ್‌ ವಿಚಾರದಲ್ಲಿ ಸಾರ್ವಜನಿಕ ವಲಯದಲ್ಲಿ ಬಿಜೆಪಿ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಹಿಮಾಚಲ ಪ್ರದೇಶದ ರೀತಿಯಲ್ಲಿ ಆಡಳಿತ ವಿರೋಧಿ ಅಲೆ ಇಲ್ಲಿನ ಫ‌ಲಿತಾಂಶದ ಮೇಲೂ ಪರಿಣಾಮ ಬೀರಬಹುದಲ್ಲವೇ.
ಇನ್ನು ಆಪ್‌ ವಿಚಾರಕ್ಕೆ ಬಂದರೆ ರಾಜ್ಯದಲ್ಲಿ ಆ ಪಕ್ಷಕ್ಕೆ ಸಮರ್ಥ ನಾಯಕತ್ವದ ಕೊರತೆ ಇದೆ. ಆ ಪಕ್ಷ ಗುಜರಾತ್‌ನಲ್ಲಿ ಕಾಂಗ್ರೆಸ್‌ ಗೆಲುವಿಗೆ ಕೆಲವೆಡೆ ಅಡ್ಡಿಯಾಗಿರಬಹುದು. ಆದರೆ, ಕರ್ನಾಟಕದಲ್ಲಿ ಆ ರೀತಿ ಆಗುವುದಿಲ್ಲ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ಎದುರಾದ ಎಲ್ಲ ಉಪ ಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳಿಂದ ನಡೆದ ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿದೆ.-ರಮೇಶ್‌ ಬಾಬು, ಕೆಪಿಸಿಸಿ ವಕ್ತಾರ

ಇಲ್ಲಿರುವುದು ಎರಡೇ ಪಕ್ಷಗಳಲ್ಲ 

“ಗುಜರಾತ್‌ ವಿಧಾನ ಸಭೆ ಚುನಾವಣೆಯ ಫ‌ಲಿತಾಂಶ ನಿರೀಕ್ಷಿತ ವಾದದ್ದು. ಅಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಇತ್ತು. ಆಮ್‌ ಆದ್ಮಿ ಪಕ್ಷ ಇವರಿಬ್ಬರ ಮಧ್ಯೆ ಬಂತು. ಜೆಡಿಎಸ್‌ ಪಕ್ಷ ಅಲ್ಲಿ ಏನೂ ಇರಲಿಲ್ಲ. ಆದರೆ, ಕರ್ನಾಟಕದ ರಾಜಕೀಯ ಪರಿಸ್ಥಿತಿ ಬೇರೆ ಇದೆ. ಇಲ್ಲಿ ಜೆಡಿಎಸ್‌ಗೆ ತನ್ನದೇ ಶಕ್ತಿ, ಪ್ರಭಾವ ಹಾಗೂ ಮತದಾರ ವರ್ಗ ಇದೆ. ಕಳೆದೆರಡು ವಿಧಾನಸಭಾ ಚುನಾವಣೆಗಳಲ್ಲಿ ನಮಗೆ ಸ್ಥಾನಗಳು ಕಡಿಮೆ ಸಿಕ್ಕಿರಬಹುದು. ಆದರೆ, ಮತ ಗಳಿಕೆಯ ಶೇಕಡವಾರು ಪ್ರಮಾಣ ಏರಿಕೆಯಾಗಿದೆ. ಈ ಮಾನದಂಡ ಇಟ್ಟುಕೊಂಡು ಗುಜರಾತ್‌ ಫ‌ಲಿತಾಂಶ ನೋಡಬೇಕಾಗಿದೆ. ಕರ್ನಾಟಕದಲ್ಲಿ ಎರಡೇ ಪಕ್ಷಗಳಿಲ್ಲ. ಹಾಗಾಗಿ, ಈ ಫ‌ಲಿತಾಂಶ ಕರ್ನಾಟದಲ್ಲೂ ಪುನರಾವರ್ತನೆ ಆಗುತ್ತದೆ ಅನ್ನುವ ವಿಶ್ಲೇಷಣೆ ಸಮಂಜಸವಲ್ಲ.

ಹಿಂದಿನ ಕಾಂಗ್ರೆಸ್‌ ಸರ್ಕಾರದ ಐದು ವರ್ಷಗಳನ್ನು, ಈಗಿನ ಬಿಜೆಪಿ ಸರ್ಕಾರದ ಆಡಳಿತವನ್ನು ಜನ ನೋಡಿದ್ದಾರೆ. ಬಿಜೆಪಿ ನಾಯಕರು ಏನೇ ಕಸರತ್ತುಗಳನ್ನು ನಡೆಸಬಹುದು. ಏನೆಲ್ಲಾ ಪ್ರಭಾವಗಳನ್ನು ಬೀರುವ ಕೆಲಸ ಮಾಡಬಹುದು. ಆದರೆ, ತಳಮಟ್ಟದಲ್ಲಿ ಜನರಿಗೆ ಬಿಜೆಪಿ ಬಗ್ಗೆ ಒಲವು ಇಲ್ಲ ಎಂಬುದು ವಾಸ್ತವ. ಜೆಡಿಎಸ್‌ನ ಜನತಾ ಜಲಾಧಾರೆ, ಪಂಚರತ್ನ ಕಾರ್ಯಕ್ರಮಗಳಲ್ಲಿ ಸಿಗುತ್ತಿರುವ ಅಭೂತಪೂರ್ವ ಸ್ಪಂದನೆ, ಮುಂದಿನ ದಿನಗಳಲ್ಲಿ ನಮಗೆ ನಿರೀಕ್ಷೆಗೂ ಮೀರಿ ಒಳ್ಳೆಯ ಪರಿಣಾಮ ಮತ್ತು ಫ‌ಲಿತಾಂಶ ತಂದು ಕೊಡಲಿದೆ ಎಂಬ ವಿಶ್ವಾಸವಿದೆ.ಆ ವಿಶ್ವಾಸವನ್ನು ಉಳಿಸಿಕೊಂಡು, ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಜೆಡಿಎಸ್‌ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಮಾಡಬೇಕಿದೆ. ನಮ್ಮ ಕಾರ್ಯಕ್ರಮಗಳನ್ನು ಜನರ ಮನೆ ಬಾಗಿಲಿಗೆ ಪರಿಚಯಿಸುವ ಕೆಲಸ ಇನ್ನಷ್ಟು ಚುರುಕಿನಿಂದ ಮಾಡಬೇಕು ಎಂಬ ಪಣ ತೊಡಬೇಕು. ಇದು ಗುಜರಾತ್‌ ಫ‌ಲಿತಾಂಶದಿಂದ ಜೆಡಿಎಸ್‌ ಕಲಿಯಬೇಕಾದ ಪಾಠ. – ಕೆ.ಎ. ತಿಪ್ಪೇಸ್ವಾಮಿ, ವಿಧಾನ ಪರಿಷತ್‌ ಸದಸ್ಯ

ಇಲ್ಲಿಯೂ ನಾವು ರೆಡಿ 
ದೆಹಲಿಯ ಮುನ್ಸಿಪಲ್‌ ಚುನಾ ವಣೆಗಳಲ್ಲಿ ಆಮ್‌ ಆದ್ಮಿ ಪಕ್ಷದ ಬಿರುಗಾಳಿಗೆ ಆಡಳಿತಾರೂಢ ಬಿಜೆಪಿ ತತ್ತರಿಸಿದೆ. ಗುಜರಾತ್‌ ಚುನಾ ವಣೆಯಲ್ಲೂ ಆಮ್‌ ಆದ್ಮಿ ಪಕ್ಷ ಗಮನಾರ್ಹ ಸಾಧನೆ ಮಾಡಿದೆ. ಬಿಜೆಪಿ ಕೇಂದ್ರದ ಅಷ್ಟೂ ಆಡಳಿತ ಯಂತ್ರದ ಶಕ್ತಿಯನ್ನು ವಿನಿಯೋಗಿಸಿ ಚುನಾವಣೆ ಪ್ರಚಾರ ಮಾಡಿತು. ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯದಲ್ಲಿ ಐದು ಸ್ಥಾನ ಗೆಲ್ಲುವುದು ಅಷ್ಟು ಸಲೀಸಿನ ವಿಚಾರವಲ್ಲ. ಸಂಖ್ಯೆ ಕಡಿಮೆ ಇರಬಹುದು ಆದರೆ ನಾವು ಗುಜರಾತ್‌ ನಲ್ಲಿ ಸಮರ್ಥ ಪ್ರತಿಪಕ್ಷವಾಗಿ ನಮ್ಮ ಜವಾಬ್ದಾರಿ ಮೆರೆಯಲಿದ್ದೇವೆ.
ಗುಜರಾತ್‌, ಹಿಮಾಚಲ ಪ್ರದೇಶ ಫ‌ಲಿತಾಂಶ ಒಂದು ಅನುಭವ. ದೆಹಲಿ ಮಾಡೆಲ್‌ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಮ್‌ ಆದ್ಮಿ ಪಕ್ಷ ಕರ್ನಾಟಕ ಸೇರಿದಂತೆ ದೇಶಾದ್ಯಂತ ವಿಸ್ತರಿಸಲಿದೆ.
ಈ ಚುನಾವಣೆಗಳಿಂದ ಸಾಬೀತಾಗಿರುವ ಸತ್ಯವೇನೆಂದರೆ ಈ ದೇಶದ ಜನ ನಿಜವಾದ ಪಾರದರ್ಶಕ ಜನಪರ ಆಡಳಿತವನ್ನು ಎದುರು ನೋಡುತ್ತಿದ್ದಾರೆ ಎಂಬುದು ನನ್ನ ಅನಿಸಿಕೆ. ನಾಳಿನ ಭವಿಷ್ಯದಲ್ಲಿ ಭಾರತದ ರಾಜಕಾರಣದಲ್ಲಿ ಆಶಾ ಕಿರಣವೆಂದೆನಿಸಿರುವ ಆಮ್‌ ಆದ್ಮಿ ಪಕ್ಷ ನಿರ್ಣಾಯಕ ಸ್ಥಾನ ಪಡೆದುಕೊಳ್ಳಲಿದೆ. ಕರ್ನಾಟಕದಲ್ಲೂ ನಾವು ವಿಧಾನಸಭೆ ಚುನಾವಣೆ ಗಂಭೀರವಾಗಿ ಪರಿಗಣಿಸಿ ನಮ್ಮದೇ ಆದ ವಿಚಾರ ಮುಂದಿಟ್ಟು ಎದುರಿಸಲಿದ್ದೇವೆ. – ಭಾಸ್ಕರ್‌ರಾವ್‌, ಆಪ್‌ ರಾಜ್ಯ ಉಪಾಧ್ಯಕ್ಷ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next