ಶಿವಮೊಗ್ಗ:ಬಿಟ್ ಕಾಯಿನ್ ವಿಚಾರವಾಗಿ ಕಾಂಗ್ರೆಸ್ಸಿಗರೇ ಹೇಳಬೇಕು,2018ರಲ್ಲಿ ಶ್ರೀಕಿಯನ್ನು ಕಾಂಗ್ರೆಸ್ ನಾಯಕರ ಮಕ್ಕಳ ಜೊತೆಗೆ ಹಿಡಿದಾಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು,ಆಗ ಸಿದ್ದರಾಮಯ್ಯ ಅವರೇ ಅಧಿಕಾರದಲ್ಲಿದ್ದರು ಎಂದು ಶನಿವಾರ ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಂದು ಶ್ರೀಕಿಯನ್ನು ಬಂಧಿಸಿರಲಿಲ್ಲ, ಬದಲಿಗೆ ಒಂದು ಸಹಿ ಪಡೆದು ಕಳುಹಿಸಲಾಗಿತ್ತು.ಪೊಲೀಸ್ ಠಾಣೆಗೆ ಕರೆದು ಶ್ರೀಕಿಯನ್ನು ವಿಚಾರಣೆ ಒಳಪಡಿಸಿರಲಿಲ್ಲ.ಶ್ರೀಕಿಯಿಂದ ಅಂದು ಕಾಂಗ್ರೆಸ್ಸಿಗರು ಏನು ನಿರೀಕ್ಷೆ ಮಾಡಿದ್ದರು. ಏಕೆ ಆತನನ್ನು ಬಿಟ್ಟಿದ್ದರು ಎಂದು ಕಾಂಗ್ರೆಸ್ಸಿಗರು ಸ್ಪಷ್ಟಪಡಿಸಬೇಕು, ಇದಕ್ಕೆ ಸಿದ್ದರಾಮಯ್ಯ ಉತ್ತರಿಸಬೇಕು’ ಎಂದು ಸವಾಲು ಹಾಕಿದರು.
‘2020ರಲ್ಲಿ ಶ್ರೀಕಿಯನ್ನು ಮಾಜಿ ಶಾಸಕರ ಮಗನ ಜೊತೆಗೆ ಡ್ರಗ್ಸ್ ಕೇಸ್ ನಲ್ಲಿ ನಾವು ಬಂಧಿಸಿದ್ದೇವೆ.ಆತನನ್ನು ವಿಚಾರಣೆಗೊಳಪಡಿಸಿದಾಗ ಆತ ಅಂತರಾಷ್ಟ್ರೀಯ ಹ್ಯಾಕರ್ ಎಂದು ತಿಳಿದುಬಂತು.ಬಳಿಕ ಇಂಟರ್ ಪೋಲ್, ಇಡಿಗೆ ಮಾಹಿತಿ ನೀಡಿ ಪಾರದರ್ಶಕವಾಗಿ ಶ್ರೀಕಿಯನ್ನು ವಿಚಾರಣೆಗೊಳಪಡಿಸಿದ್ದೇವೆ.ಕಾಂಗ್ರೆಸ್ಸಿಗರು ಬೊಬ್ಬೆ ಹೊಡೆಯುತ್ತಿದ್ದಾರೆ. ಸಾಕ್ಷಗಳನ್ನುನೀಡಲಿ. ನಾವು ಯಾರನ್ನು ಬೇಕಾದರೂ ವಿಚಾರಣೆಗೊಳಪಡಿಸುತ್ತೇವೆ’ ಎಂದರು.
‘ಇಂಟರ್ ಪೋಲ್ ನವರು ಏನೂ ಮಾಡಲಿಲ್ಲ ಹಾಗಾಗಿ ಆತ ಬಿಡುಗಡೆಯಾದ.ಇಡಿ ತನಿಖೆ ನಡೆಸುತ್ತಿದೆ ಆದರೆ ಕೋರ್ಟ್ ಬಿಡುಗಡೆ ಮಾಡಿದೆ. ಶ್ರೀಕಿ ವಿರುದ್ಧ ಎಷ್ಟು ಪ್ರಕರಣ ದಾಖಲಿಸಲು ಸಾಧ್ಯವೋ ಅಷ್ಟು ಪ್ರಕರಣ ದಾಖಲಿಸಿದ್ದೇವೆ. ಉನ್ನತ ತನಿಖೆ ಅಗತ್ಯವಿದ್ದರೆ ಅದಕ್ಕೂ ನಾವು ಸಿದ್ದರಿದ್ದೇವೆ. ಶ್ರೀಕಿ ವಿಚಾರಣೆಯಲ್ಲಿ ಸಿಕ್ಕ ಎಲ್ಲ ಮಾಹಿತಿಯನ್ನು ನಾವು ಕೋರ್ಟ್ ಗೆ ನೀಡಿದ್ದೇವೆ. ಶ್ರೀಕಿಯೇ ಇದೆಲ್ಲವೂ ಬೋಗಸ್ ಎಂದು ಹೇಳಿದ್ದಾನೆ’ಎಂದರು.
‘ಇಬ್ಬರು ಕಾಂಗ್ರೆಸ್ ನಾಯಕರ ಮಕ್ಕಳ ಜೊತೆ ಶ್ರೀಕಿ ಇದ್ದ.ಶ್ರೀಕಿಯನ್ನು ಕಾಂಗ್ರೆಸ್ ನ ಯುವ ನಾಯಕರು ಏಕೆ ಇಟ್ಟುಕೊಂಡಿದ್ದರು ಎಂದು ಮೊದಲು ಹೇಳಲಿ.ಕಾಂಗ್ರೆಸ್ ನವರು ತನಿಖೆಯನ್ನೇ ಮಾಡಲಿಲ್ಲ. ನಾವು ಸರಿಯಾಗಿ ತನಿಖೆ ಮಾಡಿದ್ದೇವೆ.ಶ್ರೀಕಿ ವಿರುದ್ಧ ಚಾರ್ಜ್ ಶೀಟ್ ಹಾಕಿ ಕೋರ್ಟ್ ಗೆ ನೀಡಿದ್ದೇವೆ.ಶ್ರೀಕಿಯನ್ನು ಪೊಲೀಸ್ ಠಾಣೆ ಮಟ್ಟದಲ್ಲಿ ಬಿಟ್ಟಿಲ್ಲ. ಕೋರ್ಟ್ ನಿಂದ ಬಿಡುಗಡೆ ಹೊಂದಿದ್ದಾನೆ’ ಎಂದರು.
‘ಈ ಪ್ರಕರಣ ನಡೆದು ಎಂಟು ತಿಂಗಳಾಗಿದೆ. ಈಗ ಕಾಂಗ್ರೆಸ್ಸಿಗರು ವಿಷಯ ಯಾವ ಕಾರಣಕ್ಕಾಗಿ ಎತ್ತಿದ್ದಾರೋ ಗೊತ್ತಿಲ್ಲ.ಈ ಪ್ರಕರಣದಲ್ಲಿ ಸಿಎಂ ತಲೆದಂಡ ಏಕಾಗುತ್ತದೆ. ಬದಲಿಗೆ ಕಾಂಗ್ರೆಸ್ ನಾಯಕರ ತಲೆದಂಡವಾಗುತ್ತದೆ’ಎಂದರು.
‘ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲು ಮೆಟಿರಿಯಲ್ ನಮ್ಮ ಬಳಿ ಇದೆ. ಅಮೇರಿಕಾ ಅಧ್ಯಕ್ಷರು ಪ್ರಧಾನಿಗೆ ಪತ್ರ ಬರೆದಿದ್ದಾರೆ ಎನ್ನುತ್ತಿದ್ದಾರೆ ಹಾಗಾದರೆ ಪತ್ರವೆಲ್ಲಿದೆ’ ಎಂದು ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದರು.