ಆಹಾರ ಯಾವುದೇ ಇರಲಿ, ಆದರೆ ಸೀಸನ್ ತಕ್ಕಂತ ಆಹಾರ ಸೇವನೆ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಎಂಬುದು ಸಂಶೋಧನೆಯಿಂದಲೂ ಸಾಬೀತಾಗಿರುವ ವಿಚಾರ. ಚಳಿಗಾಲ ಆರಂಭವಾಗಿದೆ. ಹೆಚ್ಚಿನವರು ಇಷ್ಟಪಡದ ಕುಂಬಳಕಾಯಿ ಈಗ ಎಲ್ಲೆಡೆಯೂ ದೊರೆಯುತ್ತಿದೆ. ಆದರೆ ಇದರಲ್ಲಿರುವ ಪೋಷಕಾಂಶಗಳು ಮತ್ತು ಆರೋಗ್ಯವೃದ್ಧಿಸುವ ಗುಣಗಳನ್ನು ತಿಳಿದರೆ ಖಂಡಿತ ಕುಂಬಳಕಾಯಿ ತಿನ್ನುವ ಮನಸ್ಸಾದೀತು.
ರುಚಿ ಮತ್ತು ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಕುಂಬಳಕಾಯಿ ಮಧುಮೇಹಿಗಳಿಗೆ ಸೂಕ್ತ. ಇದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಜತೆಗೆ ನರದೌರ್ಬಲ್ಯ, ಹೃದಯ ಸಂಬಂಧಿ ಕಾಯಿಲೆಗಳು, ದೃಷ್ಟಿ ತೊಂದರೆ, ಚರ್ಮದ ಸೋಂಕು, ಮೂತ್ರಪಿಂಡದ ಸಮಸ್ಯೆಗಳನ್ನು ತಡೆಗಟ್ಟಬಹುದು.
ಕುಂಬಳಕಾಯಿಯಲ್ಲಿ ಕಡಿಮೆ ಕ್ಯಾಲರಿ ಇದ್ದು, ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಾಪಾಡುತ್ತದೆ. ಇದರಲ್ಲಿ ಫೈಬರ್ ಯಥೇತ್ಛ ಪ್ರಮಾಣದಲ್ಲಿದ್ದು, ಜೀರ್ಣಕ್ರಿಯೆಗೆ
ತುಂಬಾ ಸಹಕಾರಿ.
ಬೇಯಿಸಿದ ಕುಂಬಳಕಾಯಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಕುಂಬಳಕಾಯಿಯ ಬೀಜವೂ ಆರೋಗ್ಯ ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಇದು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಅತ್ಯುತ್ತಮ. ಇದರಲ್ಲಿ ಅಧಿಕ ಪ್ರಮಾಣ ಕಬ್ಬಿಣಾಂಶವಿದ್ದು, ಅಪರ್ಯಾಪ್ತ ಕೊಬ್ಬಿನಾಂಶವನ್ನೂ ಹೊಂದಿದೆ. ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿರಿಸುತ್ತದೆ.
100 ಗ್ರಾಮ್‌ನಷ್ಟು ಬೇಯಿಸಿದ ಕುಂಬಳಕಾಯಿಯಲ್ಲಿ ದಿನಕ್ಕೆ ಬೇಕಾಗುವ ಶೇ. 26ರಷ್ಟು ಪೋಟ್ಯಾಶಿಯಂ, ಶೇ.18ರಷ್ಟು ಕಾಕಾರ್ಬೋಹೈಡ್ರೇಟ್, ಶೇ. 72ರಷ್ಟು ಫೈಬರ್, ಶೇ. 38ರಷ್ಟು ಪ್ರೋಟಿನ್, ವಿಟಮಿನ್ ಎ ಶೇ. 1, ಕ್ಯಾಲ್ಸಿಯಂ ಶೇ. 5, ಕಬ್ಬಿಣಾಂಶ ಶೇ. 18, ಮೇಗ್ನಿಷಿಯಂ ಶೇ.65ರಷ್ಟಿದೆ.