Advertisement
ಚುನಾವಣೆಗಳು ಬಂತೆಂದರೆ ರಾಜಕೀಯ ಧುರೀಣರ ಬತ್ತಳಿಕೆಯಿಂದ ಮತದಾರರನ್ನು ಆಕರ್ಷಿಸುವ ಬಹಳಷ್ಟು ಘೋಷಣೆಗಳು ಹೊರಬೀಳುತ್ತವೆ. ಇವುಗಳಲ್ಲಿ ಆದ್ಯತಾ ರಂಗಕ್ಕೆ ನೀಡಿದ ಸಾಲಗಳ ಮರುಪಾವತಿಯಲ್ಲಿ ರಿಯಾಯಿತಿಯ ಆಶ್ವಾಸನೆ ಜನಸಾಮಾನ್ಯರನ್ನು ಆಕರ್ಷಿಸುವುದರಲ್ಲಿ ಸಫಲವಾಗುತ್ತದೆ. ಇದು ಜನರ ಬಾಯಲ್ಲಿ “ಸಾಲಮನ್ನಾ’ ಎನಿಸಿಕೊಳ್ಳುತ್ತದೆ. ಇದರ ಸಾಮಾಜಿಕ ಯುಕ್ತಾಯುಕ್ತತೆ ಏನೇ ಇದ್ದರೂ ಇಂತಹ ಅಮಿಷಗಳಿಂದ ವಿತ್ತೀಯ ಸಂಸ್ಥೆಗಳ ಮೇಲಾಗುವ ಅಲ್ಪಕಾಲಿಕ ಮತ್ತು ದೀರ್ಘಕಾಲಿಕ ಪರಿಣಾಮಗಳು ಆತಂಕಕಾರಿಯಾಗಿವೆ. ಇವುಗಳನ್ನು ವಿಶ್ಲೇಷಿಸುವುದು ಈ ಲೇಖನದ ಉದ್ದೇಶ.
Related Articles
Advertisement
ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದೇ ಕೃಷಿಯಲ್ಲಿ ರೂ. 36,369 ಕೋಟಿಗಳ ಋಣಮುಕ್ತಿಯನ್ನು ಘೋಷಿಸಿದೆ. ಆ ರಾಜ್ಯದ ಶೇ. 2.6 ಜಿಡಿಪಿಯಷ್ಟು ಪ್ರಮಾಣದ್ದಾಗಿದೆ ಈ ಮೊತ್ತ. ತಮಿಳುನಾಡಿನಲ್ಲಿ ಉಚ್ಚನ್ಯಾಯಾಲಯವೇ ಸಾಲಗಳ ಮರುಪಾವತಿಯನ್ನು ಮನ್ನಾ ಮಾಡಬೇಕೆಂದು ರಾಜ್ಯ ಸರಕಾರವನ್ನು ಆದೇಶಿಸಿದೆ. ಬರಗಾಲ ಪೀಡಿತವಾದ ಮಹಾರಾಷ್ಟ್ರದಲ್ಲಿ ಸಾಲಮನ್ನಾದ ಕೂಗು ವಿಧಾನಸಭೆಯಲ್ಲೂ ಮೊಳಗಿದೆ. ಮುಂದಿನ ವರ್ಷ ಚುನಾವಣೆ ಎದುರಿಸುತ್ತಿರುವ ಕರ್ನಾಟಕದಲ್ಲೂ ಸಾಲಮನ್ನಾವು ರಾಜಕಾರಣಿಗಳ ಕೈಯ್ಯಲ್ಲಿರುವ ಸುಲಭದ ಸನ್ನೆಗೋಲು. ಇತ್ತೀಚಿನ ರಾಜಕೀಯ ಪ್ರಣಾಳಿಕೆಗಳನ್ನು ಗಮನಿಸಿದರೆ ಇದೊಂದು ಸಾರ್ವತ್ರಿಕ ಸಾಧನ. ರಾಜಕೀಯವಾಗಿ ತುಂಬಾ ದುರ್ಬಳಕೆಯ ಸಾಧ್ಯತೆ ಇರುವಂತಹುದು.
ಪರಿಣಾಮಗಳು: “ಸಾಲಮನ್ನಾ’ದ ಕಾರ್ಯಾಚರಣೆಯನ್ನು ಗಮನಿಸಿದರೆ ಈ ನೀತಿಯಿಂದ ಬ್ಯಾಂಕಿಂಗ್ ಸಂಸ್ಥೆಗಳಿಗೆ ಹೆಚ್ಚಿನ ನಷ್ಟವೇನೂ ಮೇಲುನೋಟಕ್ಕೆ ಕಾಣದು. ಆದೇಶವನ್ನು ಅನುಸರಿಸಿ ಅರ್ಹ ಸಾಲಗಳನ್ನು ಪಟ್ಟಿ ಮಾಡಿ, ಒಟ್ಟು ಮೊತ್ತವನ್ನು ಸರಕಾರದಿಂದ ಬೇಡಿಕೆಯ ಮೂಲಕ ಪಡೆಯುವುದಷ್ಟೇ ಮಾಡಬೇಕಾದ್ದು. ಹಾಗೆ ಮನ್ನಾ ಮಾಡಿದ ಸಾಲದ ಮೊತ್ತ ಒಂದೇ ಗಂಟಿನಲ್ಲಿ ಅಥವಾ ಎರಡು-ಮೂರು ಕಂತುಗಳಿಂದ ಬ್ಯಾಂಕಿಗೆ ಲಭಿಸುತ್ತದೆ. ಒಂದು ರೀತಿಯಲ್ಲಿ ಬ್ಯಾಂಕುಗಳಿಗೆ ಇದು ಸಹಾಯಕವೆನ್ನಬಹುದು. ಮರುಪಾವತಿಯಿಲ್ಲದೆ ಅನುತ್ಪಾದಕತೆಗೆ ಜಾರಿದ ಸಾಲಗಳು ಯಾವುದೇ ಪರಿಶ್ರಮವಲ್ಲದೆ, ಒಂದೇ ಬಾರಿಗೆ ಮರುಪಾವತಿಗೊಳ್ಳುತ್ತವೆ. ಅಲ್ಪಕಾಲಿಕವಾಗಿ ಬ್ಯಾಂಕುಗಳು ನಿಟ್ಟುಸಿರು ಬಿಡುತ್ತವೆ.
ದೀರ್ಘಕಾಲಿಕವಾಗಿ ಇಂತಹ ಉಪಕ್ರಮಗಳು ಮಾಡುವ ಪರಿಣಾಮ ತೀವ್ರ. ಸಾಲಮನ್ನಾ ಘೋಷಣೆಯಿಂದ ಗ್ರಾಹಕರು ಬ್ಯಾಂಕಿಂಗ್ ಸಂಸ್ಥೆಗಳು ಆರೋಗ್ಯಕರವಾಗಿ ಮುನ್ನಡೆಯಲು ಕಾರಣವಾದ “ಮರುಪಾವತಿ ಸಂಸ್ಕೃತಿ’ಯಿಂದ ವಿಮುಖಗೊಳ್ಳುತ್ತಾರೆ. ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕಿನ ಮುಖ್ಯಸ್ಥರು ಹದಗೆಡುವ ಮರುಪಾವತಿ ಶಿಸ್ತಿನ ಬಗ್ಗೆ ಎಚ್ಚರಿಸುತ್ತಾ ಇದು ಬ್ಯಾಂಕುಗಳ, ವಿತ್ತೀಯ ಸಂಸ್ಥೆಗಳ ಆರೋಗ್ಯಕ್ಕೆ ಆಘಾತಕಾರಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದವರಿಗಾಗಿಯೇ ಕಾರ್ಯವೆಸಗುತ್ತಿರುವ ಚಿಕಣಿ ಸಾಲಸಂಸ್ಥೆಗಳು ಮರುಪಾವತಿಯ ಶಿಥಿಲತೆಯಿಂದ ವೈಫಲ್ಯ ಅನುಭವಿಸಿದರೆ, ಒಂದು ಆಧಾರ ಸಂಸ್ಥೆಯನ್ನೇ ನಾವು ಕಳೆದುಕೊಳ್ಳಬೇಕಾದೀತು. ಇದರ ದೂರಗಾಮೀ ಪರಿಣಾಮ ನಿಜಕ್ಕೂ ಆಘಾತಕಾರಿ. ಆರ್ಥಿಕ ಸೇರ್ಪಡೆಯ ಮುಂಚೂಣಿಯಲ್ಲಿರುವ ಈ ಸಂಸ್ಥೆಗಳು ಹಣಕಾಸು ವಂಚಿತರಿಗೆ ಸಬಲತೆಯನ್ನು ನೀಡುವುದನ್ನು ಇಲ್ಲಿ ಸ್ಮರಿಸಬೇಕು.
“ಸಾಲಮನ್ನಾ’ಕ್ಕೆ ಬೇಕಾದ ಹಣಕಾಸು ಆಯಾಯ ಸರಕಾರಗಳು ಸಾರ್ವಜನಿಕರಿಂದ ಸಂಗ್ರಹಿಸಿದ ಕರದಿಂದ ಸರಬರಾಜಾಗುತ್ತದೆ. ದೇಶದ ಆಡಳಿತ ಮತ್ತು ಪುರೋಗತಿಯ ಉದ್ದೇಶದಿಂದ ಸಂಗ್ರಹವಾದ ಈ ಹಣ ಆ ಉದ್ದೇಶಕ್ಕೆ ಬಳಕೆಯಾಗದೆ ಏಕಾಏಕಿ ಬೇರೆಡೆಗೆ ಹರಿದರೆ ಮೊದಲು ಬಾಧಿಸಲ್ಪಡುವುದು ಪ್ರಗತಿ.
ಪರ್ಯಾಯಗಳು: ಕೃಷಿ ರಂಗಕ್ಕೆ ಅಂಟಿದ ಪಿಡುಗು ಸಾಲ ಮನ್ನಾದಂತಹ ತಾತ್ಕಾಲಿಕ ಮುಲಾಮಿನಿಂದ ನಿವಾರಣೆಯಾಗುವಂತಹದಲ್ಲ. ಅದಕ್ಕೆ ಕೃಷಿರಂಗದ ಅವ್ಯವಸ್ಥೆಗಳ ಅಧ್ಯಯನದ ಬಳಿಕ ಪರ್ಯಾಪ್ತವಾದ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು.
ವೈಜ್ಞಾನಿಕವಾದ ಉತ್ಪನ್ನಗಳ ಮೌಲ್ಯಮಾಪನ, ಬೆಂಬಲ ಬೆಲೆಯಲ್ಲಿ ಕೃಷ್ಯುತ್ಪನ್ನಗಳ ಖರೀದಿ ವ್ಯವಸ್ಥೆ, ಮಾರುಕಟ್ಟೆಯ ಗೊಂದಲಗಳ ನಿವಾರಣೆ, ಉತ್ಪನ್ನಗಳು ಕೆಡದಂತೆ ಸಂಗ್ರಹಿಸುವ ದಾಸ್ತಾನು ವ್ಯವಸ್ಥೆ, ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಮೇಲ್ನೋಟಕ್ಕೆ ಕಾಣುವ, ಕೃಷಿ ರಂಗದ ಮತ್ತು ಕೃಷಿಕರ ಆರ್ಥಿಕ ಹಿನ್ನಡೆಗೆ ಕಾರಣವಾದ ಸಮಸ್ಯೆಗಳು. ಇವುಗಳ ಪರಿಹಾರಕ್ಕೆ ಧೀರ ಹೆಜ್ಜೆಗಳನ್ನಿಟ್ಟರೆ ರೈತರ ಭರವಸೆ ಬೆಳೆಯುವುದು ಮತ್ತು ಇಂದಿನ ದುಃಸ್ಥಿತಿ ದೂರವಾಗಬಹುದು. ಇದು ಸಾಲಮನ್ನಾಕ್ಕಿಂತ ಹೆಚ್ಚು ಪರಿಣಾಮಕಾರಿ. “ಸಾಲಮನ್ನಾ’ ಮಾಡುವ ಮೂಲಕ ತಾತ್ಕಾಲಿಕ ಸಮಸ್ಯೆ ಬಗೆಹರಿಯುವುದೇ ಹೊರತು ದೂರಗಾಮಿಯಾಗಿ ಕೆಟ್ಟ ಪರಿಣಾಮಗಳೇ ಉಂಟಾಗುತ್ತವೆ. ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಸಾಲಮನ್ನಾ ಪಡೆದ ಫಲಾನುಭವಿ ಮತ್ತೆ ಅದೇ ಸಾಲಗಳನ್ನು ಪಡೆದು ಮುಂದಿನ “ಸಾಲಮನ್ನಾ’ಕ್ಕೆ ಕಾಯುವಂತಾಗಬಹುದೇ ಹೊರತು ಇನ್ನೇನೂ ಇದರಿಂದ ಸಾಧಿಸಲಾಗದು.
ರೈತರಿಗೆ ಬೇಕಾಗಿರುವುದು ಸಾರ್ವಕಾಲಿಕ ನೀರಿನ ಪೂರೈಕೆ, ಸಾಗಣೆಯ ವ್ಯವಸ್ಥೆ, ಬೆಳೆದ ಕೃಷಿ ಉತ್ಪನ್ನಗಳಿಗೆ ಸೂಕ್ತಬೆಲೆ, ಆರೋಗ್ಯ ರಕ್ಷಣೆ, ಉತ್ಪನ್ನಗಳ ಖರೀದಿ ವ್ಯವಸ್ಥೆ ಇತ್ಯಾದಿ. ಈ ಬಗ್ಗೆ ಒಂದು ರಾಷ್ಟ್ರೀಯ ಧೋರಣೆಯ ಬಗ್ಗೆ ಚಿಂತಿಸಿ ಕಾರ್ಯಗತಗೊಳಿಸಲು ಇದು ಸಕಾಲ.
– ಡಾ| ಕೊಳ್ಚಪ್ಪೆ ಗೋವಿಂದ ಭಟ್