Advertisement

BJP ;ಅಣ್ಣಾಮಲೈ ಏನು ದೊಡ್ಡ ಹೀರೋನಾ?: ರೇಣುಕಾಚಾರ್ಯ ತೀವ್ರ ವಾಗ್ದಾಳಿ

06:39 PM Jun 29, 2023 | Team Udayavani |

ಬೆಂಗಳೂರು: ಬಿಜೆಪಿ ಹೀನಾಯ ಸೋಲಿನ ಬಳಿಕ ರಾಜ್ಯದ ನಾಯಕರೊಳಗೆ ಆರೋಪ-ಪ್ರತ್ಯಾರೋಪಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಾಜಿ ಸಚಿವ ರೇಣುಕಾಚಾರ್ಯ ಗುರುವಾರ ರಾಜ್ಯ ಚುನಾವಣೆಯ ನೇತೃತ್ವ ವಹಿಸಿದ್ದ ಕೆಲ ನಾಯಕರ ಹೆಸರನ್ನು ಉಲ್ಲೇಖಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ ರೇಣುಕಾಚಾರ್ಯ, ”ಸೋಲಿಗೆ ಬಿಜೆಪಿ ಕೆಲ ನಾಯಕರ ಉದ್ದಟತನ ಮತ್ತು ಧೋರಣೆಗಳೇ ಕಾರಣ. ನಾನು ನರೇಂದ್ರ ಮೋದಿ, ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರ ಬಗ್ಗೆ ಮಾತನಾಡುವುದಿಲ್ಲ, ಆದರೆ ಕೆಲ ನಾಯಕರಿಂದಾಗಿ ನಾನು ಮಾತ್ರವಲ್ಲ ಬಿಜೆಪಿ ರಾಜ್ಯದೆಲ್ಲೆಡೆ ಸೋಲಲು ಕಾರಣವಾಯಿತು. ನನಗೆ ಭಯ ಇಲ್ಲ, ನಿರ್ಭೀತಿ ಇಂದ ಮಾತನಾಡುತ್ತೇನೆ. ಸಮಯ ಬಂದಾಗ ಎಲ್ಲರ ಕುರಿತು ಮಾತನಾಡುತ್ತೇನೆ”ಎಂದು ಕಿಡಿ ಕಾರಿದರು.

ಚುನಾವಣೆಗೆ ನಾಲ್ಕು ದಿನ ಇರುವ ವೇಳೆ ಆನ್ಲೈನ್ ವರ್ಚುವಲ್ ಮೀಟಿಂಗ್, ಆ ಮುಖಗಳನ್ನು ನೋಡಿ ಕಾರ್ಯಕರ್ತರು ರೋಸಿ ಹೋದರು. ಅವರಿಗೆ ಗ್ರಾಮ ಪಂಚಾಯತ್ ಚುನಾವಣೆ ಗೆಲ್ಲಲು ಯೋಗ್ಯತೆ ಇಲ್ಲ, ಇದು ಸತ್ಯ ಹೇಳುತ್ತಿದ್ದೇನೆ ಎಂದರು. ಸೆಲ್ಯೂಟ್ ಹೊಡೆಯುತ್ತಿದ್ದ ಅಣ್ಣಾಮಲೈ ಬಂದು ನಮಗೆ ಮಾರ್ಗದರ್ಶನ ಮಾಡುತ್ತಾರೆ. ಅವರೇನು ದೊಡ್ಡ ಹೀರೋನಾ? ಇಲ್ಲಿ ಬಂದು ಪೋಸ್ ನೀಡಿದರು ಎಂದು ಬಹಿರಂಗ ಆಕ್ರೋಶ ಹೊರ ಹಾಕಿದ್ದಾರೆ.

ಬಿಜೆಪಿ ಕಾರ್ಯಕರ್ತರಿಗೆ ನೋವಿದೆ. ಇದು ರೇಣುಕಾಚಾರ್ಯನ ಮಾತಲ್ಲ, ಅನೇಕ ನಾಯಕರು, ಮಾಜಿ ಶಾಸಕರು, ಕಾರ್ಯಕರ್ತರ ನೋವಿನ ಬಗ್ಗೆ, ಪಕ್ಷದ ಒಳಗಿನ ಆಂತರಿಕ ನೋವಿನ ಬಗ್ಗೆ ಮಾತನಾಡುತ್ತಿದ್ದೇನೆ. ಬೊಮ್ಮಾಯಿ ಅವರ ಬಗ್ಗೆ ನನ್ನ ವಿರೋಧವಿಲ್ಲ. ಅವರ ಕೈಗಳನ್ನು ಕಟ್ಟಿ ಹಾಕಲಾಗಿತ್ತು ಎಂದರು.

ಬೆಳಗಾವಿ ಅಧಿವೇಶನದಲ್ಲಿ ಬೊಮ್ಮಾಯಿ ಅವರಿಗೆ ಹೇಳಿದ್ದೆ, ಯಾವುದೇ ಕಾರಣಕ್ಕೂ ಅಕ್ಕಿ ಕಡಿತ ಮಾಡಬೇಡಿ ಎಂದು ಹೇಳಿದ್ದೆ ಕೇಳಲಿಲ್ಲ. ಅದು ಶಾಪವಾಯಿತು ಎಂದರು.

Advertisement

ಡಾ. ಸುಧಾಕರ್ ಅವರು ಸೋತಾಗ ಹೋಗಿ ಸಾಂತ್ವನ ಹೇಳಿದರು. ಬೇರೆ ಯಾರೂ ಸೋತಿಲ್ಲವೇ?, ಸುಧಾಕರ್ ಎರಡೆರಡು ಖಾತೆ ಕೊಡದಿದ್ದರೆ ಬಿಜೆಪಿಯನ್ನು ಮುಗಿಸಿ ಬಿಡುತ್ತೇನೆ ಎಂದಿದ್ದರು. ಅವರು ಒಬ್ಬರೇ ಸೋತದ್ದೇ, ಸೋತ ಯಾರಿಗಾದರೂ ಸೌಜನ್ಯಕ್ಕಾದರೂ ಕರೆ ಮಾಡಿದರಾ ಎಂದು ಕಿಡಿ ಕಾರಿದರು.

ನಮ್ಮವರು ಮಲಗಿದ್ದರು, ನಮ್ಮ ಪ್ರಣಾಳಿಕೆ ಜನರಿಗೆ ತಲುಪಲಿಲ್ಲ, ಅಕ್ಕಿ ಕಡಿತ ಮಾಡಿದರು. ಅರ್ಧ ಲೀಟರ್ ಹಾಲು ಯಾರಿಗೆ ಬೇಕು. ಸರಿಯಾಗಿ ಜಾಹೀರಾತು ಕೊಡಲಿಲ್ಲ, ಕಾಂಗ್ರೆಸ್ ನವರು ಸರಿಯಾಗಿ ಜನರಿಗೆ ಮನವರಿಕೆ ಮಾಡಿದರು ಎಂದರು.

ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಒಂದೊಂದು ಜಿಲ್ಲೆಗೆ ಮೂರು ಮೂರು ಬಾರಿ ಪ್ರವಾಸ ಮಾಡಿದರು, ಅದು ಮತಗಳಾಗಿ ಪರಿವರ್ತನೆ ಆಗಲಿಲ್ಲ. ಅವರು ರಾಜೀನಾಮೆ ಕೊಟ್ಟೆ ಎಂದು ಒಂದು ಗಂಟೆಯೊಳಗೆ ಇಲ್ಲ ಎಂದರು ಎಂದು ಮತ್ತೊಮ್ಮೆ ವಾಗ್ದಾಳಿ ನಡೆಸಿದರು.

ಕೆಲವರು ಬಿಜೆಪಿ ಕಚೇರಿ ಕಾರ್ಪರೇಟ್ ಆಫೀಸ್ ಮಾಡಿ ಕೊಂಡರು. ಸರ್ವಾಧಿಕಾರಿ ಧೋರಣೆ, ಕಾರ್ಯ ಕರ್ತರನ್ನು ಬೆದರಿಸುವುದನ್ನು ಬಿಡಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next