ಕೆಂಪಾಗಿ ಕಂಗೊಳಿಸುತ್ತಿದ್ದ ಸೂರ್ಯ. ಜೋರಾಗಿ ಬೀಸುತ್ತಿದ್ದ ಗಾಳಿ. ಜೊತೆಗೆ ಒಂದಷ್ಟು ಚಳಿ. ಆಗಾಗ ಇಣುಕಿ ಮರೆಯಾಗುತ್ತಿದ್ದ ಬಿಸಿಲು, ಸುತ್ತಲ ಹಸಿರು …. ರಸ್ತೆ ಬದಿ ಕಿರಿದಾರಿಯೊಂದರಲ್ಲಿ ಕಿಕ್ಕಿರಿದಿದ್ದ ಜನ. ಇದೆಲ್ಲಾ ಸಕಲೇಶಪುರ ನಗರದೊಳಗೆ ಕಂಡು ಬಂದ ದೃಶ್ಯ. ಅಲ್ಲಿ ಮಾತಿಗಿಂತ ಕಣ್ಣುಗಳೇ ಮಾತಾಡುತ್ತಿದ್ದವು. ಕಾರಣ, ಅದೊಂದು ಹೊಸ ವಾತಾವರಣ, ಫ್ರೆಶ್ ಎನಿಸುವ ಸ್ಥಳದಲ್ಲಿ ಕನ್ನಡ ಚಿತ್ರವೊಂದರ ಚಿತ್ರೀಕರಣ ಭರದಿಂದ ಸಾಗುತ್ತಿತ್ತು. ಅಂದಹಾಗೆ, ಅದು “ಮುಗಿಲ್ ಪೇಟೆ’.
ನಗರ ಮಧ್ಯೆಯೇ ಚಿಕ್ಕದಾದ ರಸ್ತೆಯಲ್ಲಿ ನಿರ್ದೇಶಕ ಭರತ್ ನಾವುಂದ ಕೈಯಲ್ಲಿ ಮೈಕ್ ಹಿಡಿದು ಮಾನಿಟರ್ ಮುಂದೆ ಕೂತಿದ್ದರು. ಸ್ಟೈಲಿಶ್ ಆಗಿ ಕಾಣುತ್ತಿದ್ದ ನಾಯಕ ಮನುರಂಜನ್‌ಗೆ ದೃಶ್ಯವೊಂದರ ಬಗ್ಗೆ ವಿವರ ಕೊಡುತ್ತಿದ್ದರು. ಪಕ್ಕದಲ್ಲೇ ನಿಂತಿದ್ದ ನಾಯಕಿ ಖಯಾದು ಲೋಹರ್ ಕೂಡ ನಿರ್ದೇಶಕರ ಮಾತು ಆಲಿಸುತ್ತಿದ್ದರು. ಉಳಿದಂತೆ ಚಿತ್ರೀಕರಣದ ಸೆಟ್ ಹುಡುಗರೆಲ್ಲರೂ ತಣ್ಣಗೆ ತೀಡುತ್ತಿದ್ದ ಗಾಳಿಯಲ್ಲೇ ಆಗಾಗ ಬೀಳುತ್ತಿದ್ದ ಬಿಸಿಲಿಗೆ ಮೈ ಹೊಡ್ಡಿ ನಿಲ್ಲುತ್ತಿದ್ದರು. ಹಸಿರು ಪಾಚಿ ಕಟ್ಟಿದ್ದ ಗೋಡೆ ಮೇಲೆ ನಾಯಕ ಖಯಾದು ಇರುವ “ಸ್ಕೂಟಿ ಕಳ್ಳಿ’ ಎಂಬ ಪೋಸ್ಟರ್ ಅಂಟಿಸಲಾಗಿತ್ತು. ಅದನ್ನು ನೋಡುತ್ತ ರಸ್ತೆ ಬದಿ ನಿಂತಿದ್ದ ಪತ್ರಕರ್ತರನ್ನು ಆತ್ಮೀಯವಾಗಿ ಬರಮಾಡಿಕೊಂಡ ನಿರ್ದೇಶಕ ಭರತ್, ಚಿತ್ರೀಕರಣ ನಡೆಯುವ ಸ್ಥಳದ ಪಕ್ಕದಲ್ಲೇ ಇದ್ದ ಕ್ಲಬ್‌ವೊಂದರ ಆವರಣಕ್ಕೆ ಕರೆದೊಯ್ದರು. ಚಿತ್ರದ ಕುರಿತು ಅಲ್ಲೊಂದಷ್ಟು ಮಾತುಕತೆ ನಡೆಯಿತು.
ಅಂದಹಾಗೆ, “ಮುಗಿಲ್ ಪೇಟೆ’ ಕಳೆದ 10 ದಿನಗಳಿಂದಲೂ ಚಿತ್ರೀಕರಣ ಆಗುತ್ತಿದೆ. ಅಲ್ಲಿ ನಡೆದ ಶೂಟಿಂಗ್ ಅನುಭವ ಬಗ್ಗೆ ನಿರ್ದೇಶಕ ಭರತ್ ನಾವುಂದ ಹೇಳಿದ್ದಿಷ್ಟು. “ಇಲ್ಲಿಯವರೆಗೆ ಹತ್ತು ದಿನಗಳ ಚಿತ್ರೀಕರಣವಾಗಿದೆ. ಮಾತಿನ ಭಾಗ ಶೇ.25 ರಷ್ಟು ಮುಗಿದಿದೆ. ಈ ಹಂತದ ಚಿತ್ರೀಕರಣ ಬಳಿಕ ಕಳಸ, ಕುದುರೆ ಮುಖ, ನಗರ ಹಾಗು ಕುಂದಾಪುರದಲ್ಲಿ ಚಿತ್ರೀಕರಣ ನಡೆಸಲಾಗುವುದು. ಫೈಟ್‌ಗೆ ಸೆಟ್ ಹಾಕಲಾಗುತ್ತೆ. ಕಥೆಯಲ್ಲಿ ಫ್ಲ್ಯಾಶ್‌ಬ್ಯಾಕ್ ಇರುವುದರಿಂದ ಅದು ಸಿಟಿಯಲ್ಲೇ ನಡೆಯಲಿದೆ. ಹಾಗಾಗಿ ಸಿಟಿ ಒಳಗೆ ಚಿತ್ರೀಕರಿಸುತ್ತಿದ್ದೇವೆ. ಇದು ಚಿತ್ರದ ಪ್ರಮುಖ ದೃಶ್ಯ. “ಮುಗಿಲ್ ಪೇಟೆ’ ಎಂಬುದು ನಾಯಕಿ ಇರುವ ಊರು. ಇದು ಲವ್‌ಸ್ಟೋರಿಯೂ ಅಲ್ಲ, ಬ್ರೇಕಪ್ ಸ್ಟೋರಿಯೂ ಅಲ್ಲ, ಲವ್ ಮಾಡುತ್ತಲೇ ನಮಗೇ ಗೊತ್ತಾಗದೆ ಲೈಫಲ್ಲಿ ಬ್ರೇಕಪ್ ಆಗಿರುತ್ತೆ. ಅಂತಹ ವಿಷಯ ಇಟ್ಟುಕೊಂಡು ಚಿತ್ರ ಮಾಡುತ್ತಿದ್ದೇನೆ. ಇನ್ನು, ಮನುರಂಜನ್ ಅವರ ಲುಕ್ಕು, ಬಾಡಿಲಾಂಗ್ವೇಜ್, ಡೈಲಾಗ್ ಡೆಲಿವರಿ ಎಲ್ಲವೂ ಇಲ್ಲಿ ಹೊಸದಾಗಿರುತ್ತೆ. ಹಿಂದಿನ ಮನುರಂಜನ್ ಇಲ್ಲಿ ಕಾಣಲ್ಲ. ಅವರಿಗಿಲ್ಲಿ ಮೂರು ಶೇಡ್ ಇದೆ. ಅದನ್ನು ಚಿತ್ರದಲ್ಲೇ ನೋಡಬೇಕು. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಲವ್, ಎಮೋಶನ್ಸ್, ಹಾಸ್ಯ, ಸೆಂಟಿಮೆಂಟ್ ಒಳಗೊಂಡ ಹೊಸ ಬಗೆಯ ಚಿತ್ರ. ನಾರ್ಮಲ್ ವಿಲನ್ ಇಲ್ಲಿರಲ್ಲ. ಪ್ರೇಮಿಗಳೇ ಇಲ್ಲಿ ವಿಲನ್. ಅದು ಹೇಗೆ ಅನ್ನೋದು ಚಿತ್ರದಲ್ಲೇ ಕಾಣಬೇಕು. ಖಳನಟರೊಬ್ಬರು ಇದ್ದಾರೆ. ಯಾರೆಂಬುದು ಸಸ್ಪೆನ್ಸ್’ ಎಂದರು ಭರತ್ ನಾವುಂದ.
ಹೀರೋ ಮನುರಂಜನ್ ಮೊದಲು ಸಕಲೇಶಪುರ ಜನತೆಗೆ ಹಾಗು ಪೊಲೀಸರಿಗೆ ಥ್ಯಾಂಕ್ಸ್ ಹೇಳಿದರು. ಕಾರಣ, ಹತ್ತು ದಿನಗಳ ಕಾಲ ನಡೆದ ಶೂಟಿಂಗ್‌ನಲ್ಲಿ ಯಾವ ತೊಂದರೆಯೂ ಆಗದಂತೆ ನೋಡಿಕೊಂಡಿದ್ದಕ್ಕಂತೆ. “ನನ್ನ ಪಾತ್ರ ಡಿಫರೆಂಟ್ ಆಗಿದೆ. ಟೋಟಲಿ ಹಿಂದಿನ ಚಿತ್ರಗಳಿಗಿಂತ ಭಿನ್ನ. ಈ ಬಾರಿ ಸ್ವಲ್ಪ ಕಾಮಿಡಿ ಟ್ರೈ ಮಾಡಿದ್ದೇನೆ. ಅದು ಹೇಗೆ ವಕೌìಟ್ ಆಗುತ್ತೋ ಗೊತ್ತಿಲ್ಲ. ರಷಸ್ ನೋಡಿದಾಗ, ಖುಷಿಯಾಯ್ತು. ಹೊಸ ಮನುರಂಜನ್ ಕಾಣಬಹುದು. ಆ ಕ್ರೆಡಿಟ್ ನಿರ್ದೇಶಕರಿಗೆ ಮತ್ತು ಕ್ಯಾಮೆರಾಮೆನ್ ಗಂಗು ಅವರಿಗೆ ಸಲ್ಲಬೇಕು. ಚಿತ್ರದಲ್ಲಿ ನಾಯಕ, ನಾಯಕಿ, ನಿರ್ಮಾಪಕ, ನಿರ್ದೇಶಕ ಅನ್ನೋದೆಲ್ಲಾ ಇಲ್ಲ. ಎಲ್ಲರೂ ಕುಟುಂಬದವರಂತೆ ಕೆಲಸ ಮಾಡುತ್ತಿದ್ದಾರೆ. ನಿರ್ಮಾಪಕರು ನನ್ನ ಫ್ರೆಂಡ್ಸ್. ಹಾಗಾಗಿ ನನ್ನ ಬ್ಯಾನರ್‌ನಂತೆ ಕೆಲಸ ಮಾಡುತ್ತಿದ್ದೇನೆ. ನಾಯಕಿ ಖಯಾದು ಅವರು ಶ್ರಮವಹಿಸಿದ್ದಾರೆ. ಚಿತ್ರಕ್ಕಾಗಿ ತಿಂಗಳುಗಟ್ಟಲೆ ವರ್ಕ್‌ಶಾಪ್ ಮಾಡಿದ್ದಾರೆ. ಕನ್ನಡ ಕಲಿಯುತ್ತಿದ್ದಾರೆ. ನನಗೆ ನಿರ್ದೇಶಕರು ಸ್ವಲ್ಪ ಟಾರ್ಚರ್ ಕೊಡ್ತಾರೆ. ಹಿಂಗೆ ನಿಲ್ಲಬೇಕು, ಹಿಂಗೆ ಡೈಲಾಗ್ ಬರಬೇಕು, ಲೆಫ್ಟ್ ಕೈ ಜೇಬಲ್ಲಿ ಹೋಗಂಗಿಲ್ಲ. “ಡ್ಯಾಡಿ ಕಾಣಾ¤ರೆ ಸರ್, ಹಾಗೆ ನಿಲ್ಲಬೇಡಿ’ ಅಂತಾರೆ. ಆದರೂ, ಹತ್ತು ದಿನದ ಅನುಭವ ಚೆನ್ನಾಗಿತ್ತು. ಒಂದು ಮಾತಂತೂ ನಿಜ. ಇಲ್ಲಿ ಹೊಸ ಮನುರಂಜನ್ ಕಾಣಾ¤ರೆ. ಹೊಸ ಬಗೆಯ ಚಿತ್ರ ಕೊಡ್ತಾರೆ ಎಂದ ಮನುರಂಜನ್‌ಗೆ, ಹಾಗಾದರೆ, ಇಲ್ಲೂ ಕಿಸ್ಸಿಂಗ್ ಸೀನ್ ಏನಾದ್ರೂ ಇದೆಯಾ? ಈ ಪ್ರಶ್ನೆಗೆ ಅಂಥದ್ದೇನೂ ಇಲ್ಲ. ಆದರೆ, ರೊಮ್ಯಾನ್ಸ್ ಇರುತ್ತೆ’ ಎಂದು ಹೇಳಿ ಸುಮ್ಮನಾದರು.
ನಾಯಕಿ ಖಯಾದು ಅವರಿಗೆ ಇದು ಮೊದಲ ಚಿತ್ರ. “ವರ್ಕ್‌ಶಾಪ್ ಮಾಡಿದ್ದರಿಂದ ಕೆಲಸ ಮಾಡೋಕೆ ಸುಲಭವಾಯ್ತು. ಕನ್ನಡ ಕಲಿಯುತ್ತಿದ್ದೇನೆ. ಸೆಟ್‌ನಲ್ಲಿ ಭಾಷೆ ಕಲಿಸೋಕೆ ಎಲ್ಲರೂ ಇದ್ದಾರೆ. ಸಾಧ್ಯವಾದಷ್ಟು ಕನ್ನಡ ಮಾತಾಡ್ತೀನಿ. ಒಂದೊಳ್ಳೆಯ ತಂಡದ ಜೊತೆ ಕೆಲಸ ಮಾಡಿದ್ದು ಹೊಸ ಅನುಭವ’ ಎಂಬುದು ಖಯಾದು ಮಾತು.
ಛಾಯಾಗ್ರಾಹಕ ಗಂಗು (ರವಿವರ್ಮ) ಅವರಿಗೆ ಸಾಕಷ್ಟು ಚಾಲೆಂಜ್ ಚಿತ್ರವಂತೆ ಇದು. ನಿರ್ದೇಶಕರ ಜೊತೆ ಅವರಿಗಿದು ಎರಡನೇ ಚಿತ್ರ. ಮನುರಂಜನ್‌ಗೆ ಈ ಚಿತ್ರದ ಮೂಲಕ ಹೊಸ ಇಮೇಜ್ ಸಿಗಲಿದೆ ಎಂಬ ಭರವಸೆ ಕೊಟ್ಟರು ಗಂಗು. ಕಾರ್ಯಕಾರಿ ನಿರ್ಮಾಪಕ ಸಿಂಜುÉ ಕಣ್ಣನ್ ಅವರಿಗೆ ಒಳ್ಳೆಯ ಚಿತ್ರ ಕೊಡುವ ಉತ್ಸಾಹ. ಹಾಗಾಗಿ ಚಿತ್ರಕ್ಕೆ ಏನೆಲ್ಲಾ ಬೇಕೋ ಎಲ್ಲಾ ಪೂರೈಸುತ್ತಿದ್ದೇವೆ. ಗುಣಮಟ್ಟದ ಚಿತ್ರ ಕೊಡುವ ಉದ್ದೇಶವಿದೆ ಎಂದರು ಅವರು.
ಚಿತ್ರದಲ್ಲಿ ಮೂರು ಫೈಟ್ ಇರಲಿದ್ದು, ಅದನ್ನು ವಿಶೇಷವಾಗಿ ಸಂಯೋಜಿಸುವ ಯೋಚನೆ ಮನು, ಭರತ್ ಅವರಿಗಿದೆಯಂತೆ. ಎರಡು ಪುಟ ಎಮೋಶನಲ್ ಡೈಲಾಗ್ ಜೊತೆಗೆ ಭರ್ಜರಿ ಫೈಟ್ಸ್ ಇಡುವ ಪ್ಲಾನ್ ಅವರದು. ಅದನ್ನು ರಿಹರ್ಸಲ್ ಮಾಡಿ ಮಾಡುವ ಯೋಚನೆ ಇದೆಯಂತೆ.
– ವಿಜಯ್ ಭರಮಸಾಗರ