ನಮ್ಮ ಸಂವಿಧಾನ “ಭಾರತದ ಪೌರರಿಗೆ’ ಮಾತ್ರ ದೇಶದಲ್ಲಿ ನಿರಾತಂಕವಾಗಿ ಸಂಚರಿಸುವ ಹಾಗೂ ನೆಲೆಸುವ ಸ್ವಾತಂತ್ರ್ಯ ನೀಡಿದೆ ವಿನಹ ಯಾವುದೇ ರಾಷ್ಟ್ರ ನಿಷ್ಠೆ, ಕಾನೂನು ಚೌಕಟ್ಟು ಬಗ್ಗೆ ಗೌರವ ಇಲ್ಲದ ಪರದೇಶಿಗರಿಗಲ್ಲ. “ಅವರಿಗೂ ನೀಡಿ’ ಎಂದು ಒತ್ತಾಯಿಸುವ ರಾಜಕಾರಣಿಗಳು, ಗುಲ್ಲೆಬ್ಬಿಸುವ ಬುದ್ಧಿಜೀವಿಗಳೆನಿಸಿದ ಮಂದಿ ತಂತಮ್ಮ ಮನೆಯೊಳಗೇ ಒಂದಿಬ್ಬರು ಅಪರಿಚಿತ ಆಗುಂತರಿಕರಿಗೆ ನೆಲೆ ಕಲ್ಪಿಸಬಲ್ಲರೇ?
“ರಾಷ್ಟ್ರೀಯ ಪೌರತ್ವ ದಾಖಲೆ ಪಟ್ಟಿ’ (ಎನ್‌ಆರ್‌ಸಿ) ಎಂದಾಗಲೇ ಹೌಹಾರಿ ಬೀಳುವ ತಥಾಕಥಿತ ಬುದ್ಧಿಜೀವಿಗಳು, ಗಾಳಿಕೋಳಿ (Weather cook)ಗಳಂತೆ ತೂರಾಡುವ ರಾಜಕಾರಣಿಗಳು, ತ್ರಿವರ್ಣ ಧ್ವಜದ ತಣ್ಣೆಳಲ್ಲಿ ಅಲೆಗಳಿಗೆ ಶಾಂತವಾಗಿ ಯೋಚಿಸುವ ಕಾಲಘಟ್ಟ ಒದಗಿದೆ. ಸುದೈವಶಾತ್ 1935ರ ಬರ್ಮಾ ವಿಭಜನೆ, 1947ರ ಪಾಕಿಸ್ಥಾನ ವಿಭಜನೆ, ಸರ್ದಾರ್ ವಲ್ಲಭ್‌ಭಾಯ್ ಪಟೇಲರ ನೇತಾರಿಕೆಯ “ವಿಲೀನತಾ ಸುತ್ತೋಲೆ’ (Instrument of Accession)ಯ ಐತಿಹಾಸಿಕ ದೇಶೀ ರಾಜ್ಯಗಳ ಒಂದುಗೂಡುವಿಕೆ, ಈ ಎಲ್ಲಾ ಪ್ರಕ್ರಿಯೆಗಳ ಇತಿಹಾಸದ ಏರುಪೇರುಗಳ ಒಟ್ಟು ಮೊತ್ತವೇ ನಮ್ಮ ಭಾರತದ ಭೂಪಠ. ಜನಸಂಖ್ಯೆಯಲ್ಲಿ ಎರಡನೇ ಬೃಹತ್ ಹಾಗೂ ವಿಸ್ತಾರದಲ್ಲಿ ಸಪ್ತಮ ಸ್ಥಾನವಾಗಿ ಜಾಗತಿಕ ಕುಟುಂಬದ ಮೇಲ್‌ಸ್ತರದ ರಾಷ್ಟ್ರ ಸರಣಿಯಲ್ಲಿ ಮಿಂಚುತ್ತಿರುವ ನಮ್ಮ “ಇಂಡಿಯಾ’ ಸುಂದರ ಸೂರ್ಯೋದಯಗಳಿಗೆ ತೆರೆದುಕೊಳ್ಳಬೇಡವೇ?
ಇದು 125 ಕೋಟಿ ಸಂಖ್ಯೆಯ ಜನಮನದ ಸ್ವಗತದ ಪ್ರಶ್ನೆ. ಇಲ್ಲಿ ರಾಷ್ಟ್ರೀಯ ಮನೋಭೂಮಿಕೆಯೇ, ಉತ್ತರದ ಲೇಹ್‌ನಿಂದ ದಕ್ಷಿಣದ ತೂತುಕುಡಿಯವರೆಗೆ, ದೂರದ ಅಂಡಮಾನದಿಂದ ಪಶ್ಚಿಮದ ಲಕ್ಷದ್ವೀಪದವರೆಗೆ ನೆಲಸಿಗರ ಲಕ್ಷ ಸೆಳೆಯುವ ಮಾಪನ. “ರಾಷ್ಟ್ರ’ ಎಂಬ ಕಲ್ಪನೆಯೇ ಪ್ರಚಲಿತ 21ನೇ ಶತಮಾನದಲ್ಲಿ ನೆಲೆಯೂರಿದ್ದು ಈ ರಾಷ್ಟ್ರೀಯ ಪ್ರಜ್ಞೆಯ ಜಾಗೃತಿ ಆಧರಿಸಿ, ಪೌರತ್ವದ ಗಟ್ಟಿ ನೆಲದ ಮೇಲೆ ದೂರದ ಬ್ರಿಟಿಷರು, ಪೋರ್ಚುಗೀಸರು ಹಾಗೂ ಫ್ರೆಂಚರ ವಸಾಹತುಶಾಹಿತ್ವ, ಸಾಮ್ರಾಜ್ಯಶಾಹಿತ್ವದ ಧ್ವಜಗಳನ್ನು ಇಳಿಸಿ, ಅವರನ್ನು ಮರಳಿಸಿದ ಹೆಗ್ಗಳಿಕೆಯ ಭಾರತೀಯರು ನಾವು. ಇದೀಗ ತಣ್ಣನೆ ನಮ್ಮಿ ಗಡಿಯೊಳಗೆ ನುಸುಳುವವರನ್ನು ಬಾಚಿ, ತಬ್ಬಿ, ಮನೆಕಟ್ಟಿಲು ಜಾಗ, ಪಡಿತರ ಚೀಟಿ, ಮತದಾರರ ಪಟ್ಟಿಯಲ್ಲಿ ನಾಮಧಾರಿತ್ವ, ಬ್ಯಾಂಕ್ ಸಾಲ ಸೌಲಭ್ಯ, ಪಾಸ್‌ಪೋರ್ಟ್ ಕೊನೆಗೆ ಇವೆಲ್ಲದ್ದಕ್ಕೂ ಮಾತೃಸ್ವರೂಪವಾಗಿ ಆಧಾರ್ ನೀಡುವಿಕೆ. ಈ ತೆರನಾದ ಸ್ವಾಗತ ಫಲಕ ಸಾಧುವೇ? ಇದೆಲ್ಲಾ ಕತೆಯಲ್ಲ , 1951ರ ಮಾರ್ಚ್ 24, 1971ರ ಮಾರ್ಚ್ 24 ಹಾಗೂ 2001ರ ಜನಗಣತಿ-ಹೀಗೆ ಸಾಲು ಸಾಲು ಲೆಕ್ಕಾಚಾರಗಳು ಪಡಿನುಡಿಯುತ್ತಿರುವ ಈಶಾನ್ಯ ಭಾರತದ ಅದರಲ್ಲಿಯೂ ಅಸ್ಸಾಂ ಗುಡ್ಡಬೆಟ್ಟ ಬಯಲು ಕಂಡ ವಾಸ್ತವಿಕತೆ- ವ್ಯಥೆ.
ಸುಮಾರು 2 ವರ್ಷದ ಹಿಂದೆ ಅಸ್ಸಾಮಿನ ತೇಜ್‌ಪುರದಿಂದ ಅರುಣಾಚಲ ಪ್ರದೇಶದ ತವಾಂಗ್‌ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಆದ ಅನುಭವವಿದು. ಸುಮಾರು 20ರಿಂದ 30 ಕಿ.ಮೀ. ಮಾರ್ಗದ ಉದ್ದಕ್ಕೂ ವಿಭಿನ್ನ ಭಾಷೆ, ವೇಷ, ಸಂಸ್ಕೃತಿಯ ಬಂಗಾಳಿ ಮುಸ್ಲಿಂ ಸಮುದಾಯ ಅಸ್ಸಾಂ ರಾಜ್ಯದಲ್ಲಿ ಗೋಚರಿಸಿತು! ಆ ಬಗ್ಗೆ ಕುತೂಹಲದಿಂದ ಪ್ರಶ್ನಿಸಿದಾಗ ಕಾರಿನ ಚಾಲಕನ ತನ್ನದೇ ಶೈಲಿಯ ವಿವರಣೆ ನನ್ನನ್ನು ದಂಗುಬಡಿಸಿತು. “”ಸರ್, ನಾವೀಗ ಬಾಂಗ್ಲಾ ಗಡಿ ಸಮೀಪಿಸಿ ಪ್ರಯಾಣ ಮಾಡುತ್ತಿದ್ದೇವೆ. ಇಲ್ಲಿನ ಗಡಿ ಗುರುತಿಸುವಿಕೆ, ಭದ್ರತೆ ತೀರಾ ಶಿಥಿಲ. ಆರಾಮದಲ್ಲಿ 1951ರಿಂದ ಅಂದಿನ ಪೂರ್ವ ಪಾಕಿಸ್ತಾನಿಯರು ಒಳನುಗ್ಗಿ, “ಭಾರತದ ಪೌರತ್ವದ ಸರ್ವಸ್ವವನ್ನೂ’ ತಮ್ಮ ಪಾಲಾಗಿಸಿಕೊಂಡಿದ್ದಾರೆ. 1971ರ ಹೋರಾಟದಿಂದ ಬಾಂಗ್ಲಾದೇಶ ನಿರ್ಮಾಣದ ಬಳಿಕವೂ ನಮ್ಮ ನೆಲದಲ್ಲೇ ಅಂದು ಬಂದ ನಿರಾಶ್ರಿತರು ನೆಲೆನಿಂತರು. ಮರಳಿ ಹೋಗಿಯೇ ಇಲ್ಲ. ಇಲ್ಲಿನ ಎಂ.ಎಲ್.ಎ., ರಾಜಕೀಯ ನಾಯಕರು ಎಲ್ಲರೂ ಮೂಲತಃ ಬಾಂಗ್ಲಾ ಮುಸ್ಲಿಮರೇ. ಹಾಗಾಗಿ ಇಲ್ಲಿ ಮಾತ್ರವಲ್ಲ ಕರಿಂಗಂಜ್, ಬಾಪೆìಟಾ ಹೀಗೆ ಒಟ್ಟು 8 ಜಿಲ್ಲೆಗಳಲ್ಲಿ ಅವರದೇ ಬಾಹುಳ್ಯ…!’ ಹೀಗೆ ನಮ್ಮ ವಾಹನದ ವೇಗವನ್ನೂ ಮೀರಿದ ಆ ಚಾಲಕನ ಮಾತಿನ ವೇಗ, ಓಘ ನನ್ನನ್ನು ಅರೆಗಳಿಗೆ ಬೆಚ್ಚಿ ಬೀಳಿಸಿತು.
“ಎನ್‌ಆರ್‌ಸಿ’ ವಿರೋಧಿಸಿ “ಪೌರತ್ವದ ತೆರೆದ ಮನೆ ಈ ವಿಶಾಲ ಭಾರತವಾಗಲಿ’ ಎಂದು ಸಂಸತ್ತಿನಲ್ಲಿ ಅರಚುವ ಮಂದಿ, ಪಶ್ಚಿಮ ಬಂಗಾಳದಲ್ಲಿ ಇದ್ದುಕೊಂಡು ನೆರೆಯ ಅಸ್ಸಾಂನ ಬಾಂಗ್ಲಾ ಅಕ್ರಮ ನುಸುಳುಕೋರರ “ನೆರೆ ಭಾಗ್ಯ’ದ ಬಗ್ಗೆ ವಿಕಾರವಾಗಿ ಕಿರುಚುವ ಮಂದಿ ಭಾರತದ ಭವಿಷ್ಯದ ಪ್ರಜಾ ಸಮುದಾಯದ ಬಗ್ಗೆ ಒಂದಿಷ್ಟು ಚಿಂತಿಸಬೇಕಾದ ಸನ್ನಿವೇಶ ಕೈಬೀಸಿ ಕರೆಯುತ್ತಿದೆ. ಏಕೆಂದರೆ ಉತ್ತರದ ಕಾಶ್ಮೀರದಲ್ಲಿ ಬುಲೆಟ್ ಹಾಗೂ ಅಸ್ಸಾಂನ ಬ್ಯಾಲೆಟ್ ಎರಡನ್ನೂ ಉದುರಿಸುವ – ಹೀಗೆ ನುಸುಳುಕೋರರ ಬರ್ಬರತೆ, ನಿರಂತರತೆಯ ಕಾವು ಚಿಂತೆಯಾಗಿ, ರಾಷ್ಟ್ರೀಯ ಮಟ್ಟದ ಚಿತೆಯಾಗಿಯೂ ನಮ್ಮನ್ನು ಕಾಡಲಿದೆ. ಇಂತಹ ದೇಶೀಯತೆಯ, ಪೌರತ್ವದ ಪ್ರಶ್ನೆ ಎದುರಾದಾಗ ಕೆನಡಾ, ಆಸ್ಟ್ರೇಲಿಯಾ, ಅಮೇರಿಕದಂತಹ ವಿಶಾಲ ದೇಶಗಳಿರಲಿ, ಇಸ್ರೇಲ್, ಜಪಾನ್, ಮ್ಯಾನ್ಮಾರ್, ಶ್ರೀಲಂಕಾದಂತಹ ಸಣ್ಣ ದೇಶಗಳಿರಲಿ ಗರಿಷ್ಠ ಪ್ರಮಾಣದ ಎಚ್ಚರಿಕೆ ವಹಿಸುತ್ತಿವೆ. ಹೆಚ್ಚೇಕೆ ಅಂಗೈ ಅಗಲದ ಸಿಂಗಾಪುರ, ಮಧ್ಯ ಏಷ್ಯಾದ ಸಣ್ಣಪುಟ್ಟ ರಾಷ್ಟ್ರಗಳೂ ಪರದೇಶಿಗರ ಬಗ್ಗೆ , ಪೌರತ್ವ ಬಿಡಿ, ಒಳ ಬರುವ ವೀಸಾಕ್ಕೂ ಹತ್ತಾರು ಬಾರಿ ಶೋಧನೆಯ ಜಾಲ ಹೊಂದಿದೆ ತಾನೇ?
ಈ ವಾಸ್ತವಿಕತೆಗೆ, ರಾಷ್ಟ್ರೀಯ ಭದ್ರತೆ, ಏಕತೆಯ ಸತ್ಯಕ್ಕೆ ಮಮತಾ ಬ್ಯಾನರ್ಜಿಯಂತಹ ಹರಿತ ನಾಲಗೆಯ, ಸಮೀಪ ದೃಷ್ಟಿಯ ರಾಜಕಾರಣಿಗಳು ಏಕೆ ಕಣ್ಣು ತೆರೆದುಕೊಳ್ಳುವುದಿಲ್ಲ? ದೇಶ ಎಂಬುದು ಯಾವುದೇ ರಾಜಕಾರಣಿಯ, ಕುಟುಂಬದ ಸ್ವಾರ್ಜಿತ ಸೊತ್ತು ಅಲ್ಲ. 2005ರಲ್ಲಿ “ಅಕ್ರಮ ನುಸುಳುಕೋರರಿಗೆ ಕೆಂಪು ಕಮ್ಯುನಿಸ್ಟರು ಹಸಿರು ನಿಶಾನೆ ತೋರುತ್ತಿದ್ದಾರೆ, ರಾಜಕೀಯ ಲಾಭಕ್ಕೆ’ ಎಂದು ರಾಜೀನಾಮೆಯ ಸ್ಟಂಟ್ ಮಾಡಿದವರು ಇದೇ ದೀದಿ. ಇಂದು “ಸ್ವಲಾಭಕ್ಕೆ’ ಪಶ್ಚಿಮ ಬಂಗಾಳದಲ್ಲಿದ್ದುಕೊಂಡು ನೆರೆಯ ಆಸ್ಸಾಮ್ ರಾಜ್ಯದ ಸುಮಾರು 40 ಲಕ್ಷ ಅಗಾಧ ಸಂಖ್ಯೆಯ ಅಕ್ರಮ ಬಾಂಗ್ಲಾದೇಶಿಯರ ಬಗ್ಗೆ ಎಲ್ಲಿಲ್ಲದ ಕರುಣೆ, ಮೊಸಳೆ ಕಣ್ಣೀರು ಸುರಿಸುವುದು ಏಕೆ? ತನ್ನ ಪಟ್ಟಭದ್ರ ಹಿತಾಸಕ್ತಿಗಾಗಿಯೇ 1985ರ ರಾಜೀವ ಗಾಂಧಿ ಸರಕಾರದ ಒಪ್ಪಂದದನ್ವಯ, ಅಂದಿನ ವಿದ್ಯಾರ್ಥಿ ಸಂಘಟನೆಗಳಿಗೆ ನೀಡಿದ ವಾಗ್ಧಾನದಂತೆ ಅಕ್ರಮ ನುಸುಳುಕೋರರಿಗೆ ಅರ್ಧಚಂದ್ರ ಪ್ರಯೋಗದ ಪ್ರಕ್ರಿಯೆ ಆರಂಭಗೊಳ್ಳಲೇ ಇಲ್ಲ. ಏಕೆ?
ಇದೀಗ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದೊಂದಿಗೆ ಮೋದಿ ಸರಕಾರದ ಉಸ್ತುವಾರಿಯಲ್ಲಿ 1951 ಹಾಗೂ 1971ರ ಜನಗಣತಿ ಆಧಾರಿತವಾಗಿ ಅಸ್ಸಾಂನಲ್ಲಿ “ರಾಷ್ಟ್ರೀಯ ಪೌರ ಹೊತ್ತಗೆ’ಯ ಪುಟಗಳ ಪ್ರಥಮ ಕರಡು ಪ್ರತಿ ಹೊರ ಬಂದಿದೆ. ಆಕ್ಷೇಪಣೆಗಳಿದ್ದರೆ, ಸೂಕ್ತ ದಾಖಲೆಯೊಂದಿಗೆ ಮುಂದೆ ಬಂದು, ನ್ಯಾಯದಾನ ಪಡೆಯಲೂ ಅನುವು ನೀಡಲಾಗಿದೆ.ನಮ್ಮ ಸಂವಿಧಾನ ತನ್ನ 19 (1) (ಡಿ, ಇ) ಉಪವಿಧಿಗಳಲ್ಲಿ ಹಲವು ವಿಧಿ ನಿಷೇಧಗಳೊಂದಿಗೆ ಕೇವಲ “ಭಾರತದ ಪೌರರಿಗೆ’ ಮಾತ್ರ ನಿರಾತಂಕವಾಗಿ ಸಂಚರಿಸುವ ಹಾಗೂ ನೆಲಸುವ ಸ್ವಾತಂತ್ರ್ಯ ನೀಡಿದೆ. ವಿನಹ ಯಾವುದೇ ರಾಷ್ಟ್ರ ನಿಷ್ಠೆ, ಕಾನೂನು ಚೌಕಟ್ಟು ಬಗ್ಗೆ ಗೌರವ ಇಲ್ಲದೆ ಪರದೇಶಿಗರಿಗಿಲ್ಲ. “ಅವರಿಗೂ ನೀಡಿ’ ಎಂದು ಒತ್ತಾಯಿಸುವ ರಾಜಕಾರಣಿಗಳು, ಗುಲ್ಲೆಬ್ಬಿಸುವ ಬುದ್ಧಿಜೀವಿಗಳೆನಿಸಿದ ಮಂದಿ ತಂತಮ್ಮ ಮನೆಯೊಳಗೇ ಒಂದಿಬ್ಬರು ಅಪರಿಚಿತ ಆಗುಂತರಿಕರಿಗೆ ನೆಲೆ ಕಲ್ಪಿಸಬಲ್ಲರೇ? ಹಾಗಿದ್ದರೆ ವಿಶಾಲ ದೇಶ ಎಂದ ಮೇಲೆ ಅಂತಹ ಬೇಜಾವಾಬ್ದಾರಿಯ ಪ್ರದರ್ಶನ ಸಾಧುವೇ? ಇದು ನಾಳೆಗಳ ಬಗೆಗಿನ ಜ್ವಲಂತ ಪ್ರಶ್ನೆ , ನಾಡಿನ ನೇರ ಪ್ರಶ್ನೆ.
ಡಾ| ಪಿ. ಅನಂತಕೃಷ್ಣ ಭಟ್