ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ ಅವರು ವಿಭಿನ್ನ ಪಾತ್ರದಲ್ಲಿ ಅಭಿನಯಿಸಿರುವ “ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಸೆಲಬ್ರಿಟಿ ಪ್ರದರ್ಶನವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ನಿರ್ದೇಶಕ ನಾಗಾಭರಣ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ತಮಿಳು ನಟ ಶರತ್, ಸುಂದರ್ ರಾಜ್, ಪ್ರಮಿಳಾ ಜೋಷಾಯ್, ಭಾರತಿ ವಿಷ್ಣುವರ್ಧನ್, ರಾಜೇಂದ್ರ ಸಿಂಗ್ ಬಾಬು, ವಿಜಯಲಕ್ಷ್ಮಿ ಸಿಂಗ್, ಭಾವನಾ ರಾವ್, ಹರ್ಷಿಕಾ ಪೂಣಚ್ಚ, ದಿಲೀಪ್ ರಾಜ್, ಬಿ. ಸರೋಜಾ ದೇವಿ, ಸಾಹಿತಿ ನಾಗೇಂದ್ರ ಪ್ರಸಾದ್, ನಿರ್ದೇಶಕ ಪ್ರೇಮ್, ಹಾಗೂ ಇನ್ನಿತರೆ ಸಿನಿಮಾ ತಾರೆಯರು ಚಿತ್ರ ಪ್ರದರ್ಶನದಲ್ಲಿ ಹಾಜರಿದ್ದರು.
ಇನ್ನು ಮುಖ್ಯವಾಗಿ ಅಂಬರೀಶ್ ಅವರನ್ನು ಹ್ಯಾಂಡಲ್ ಮಾಡುವುದು ಸುಲಭದ ಮಾತಲ್ಲ. ಅಂತದರಲ್ಲಿ ತಮ್ಮ ಮೊದಲ ಚಿತ್ರದಲ್ಲೇ ಅವರ ಬಳಿ ಕೆಲಸ ಮಾಡಿಸಿದ ನಿರ್ದೇಶಕ ಗುರುದತ್, ಸುದೀಪ್ ಹಾಗೂ ಚಿತ್ರತಂಡಕ್ಕೆ ಹ್ಯಾಟ್ಸಾಫ್, ಅಲ್ಲದೇ ಇಂತಹ ಪಾತ್ರವನ್ನು ಅಂಬಿ ಮೊದಲ ಬಾರಿಗೆ ಮಾಡಿರುವುದು. ಅಂಬಿಗೆ ವಯಸ್ಸಾಯ್ತೋ ಇಲ್ಲವೋ ಎಂಬುದನ್ನು ಪ್ರೇಕ್ಷಕರೇ ನೋಡಿ ಹೇಳಬೇಕು ಎಂದು ಅಂಬರೀಶ್ ಪತ್ನಿ ಸುಮಲತಾ ಹೇಳಿದರು.
ರಾಕಿಂಗ್ ಸ್ಟಾರ್ ಯಶ್ ಕೂಡಾ ಅಂಬಿಗೆ ವಯಸ್ಸಾಯ್ತು ಅಂತ ಹೇಗೆ ಹೇಳ್ತಿರಾ..? ಅವರು ಕಣ್ಣು ಹೊಡೆಯೋದನ್ನ ನೋಡಿಲ್ವಾ ಎಂದು ತಮಾಷೆಯಾಗಿ ಹೇಳಿದಲ್ಲದೇ. ಅವರನ್ನು ತೆರೆಯ ಮೇಲೆ ನೋಡುವುದೇ ಒಂದು ಸಂಭ್ರಮ. ಸಿನಿಮಾ ನೋಡಿ ಬಹಳ ಸಂತೋಷವಾಯ್ತು ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ಇವರ ಜೊತೆಗೆ ಹಿರಿಯ ನಿರ್ದೇಶಕ ನಾಗಾಭರಣ ಚಿತ್ರ ನಮಗೇ ಗೊತ್ತಿಲ್ಲದಂತೆ ನಮ್ಮನ್ನ ಆವರಿಸುತ್ತದೆ ಎಂದರೆ, ಚಿತ್ರದಲ್ಲಿ ಲವ್ ಸ್ಟೋರಿ ಸಖತ್ತಾಗಿದೆ. ಮುದ್ದುಮುದ್ದಾಗಿ ನಟಿಸಿದ್ದಾರೆ ಅಂಬಿ. ನೋಡೋಕೆ ಖುಷಿಯಾಗುತ್ತೆ ಅಂತ ಖುಷಿಯಿಂದ ಹೇಳಿದ್ರು ನಿರ್ದೇಶಕ ಜೋಗಿ ಪ್ರೇಮ್.