“ಇಂಟರ್‌ವಲ್ ಮಧ್ಯದ 10 ನಿಮಿಷ ನೀವೇನ್ ಮಾಡ್ತೀರೋ ಗೊತ್ತಿಲ್ಲ. ಅದು ಬಿಟ್ಟರೆ ಎರಡು ಗಂಟೆ ಅಂತೂ ಸಖತ್ ಎಂಜಾಯ್ ಮಾಡ್ತೀರಾ …’
– ನಿರ್ದೇಶಕ ಸಂದೀಪ್ ಗೌಡ ಸಿಕ್ಕಾಪಟ್ಟೆ ವಿಶ್ವಾಸದಿಂದ ಹೀಗೆ ಹೇಳಿಕೊಂಡರು. ಅವರ ವಿಶ್ವಾಸ ಎಷ್ಟಿತ್ತೆಂದರೆ ಸಿನಿಮಾದ ಇಂಟರ್‌ವಲ್‌ನ ಹತ್ತು ನಿಮಿಷ ಪ್ರೇಕ್ಷಕ ಹಾಗೂ ವಿಮರ್ಶಕರು ಏನು ಮಾಡುತ್ತಾರೋ ಎಂದು ಯೋಚಿಸುತ್ತಿದ್ದರು. ಏಕೆಂದರೆ, ಅವರು ಮಾಡಿರುವ ಸಿನಿಮಾ ಅಷ್ಟರ ಮಟ್ಟಿಗೆ ಚೆನ್ನಾಗಿ ಮೂಡಿ ಬಂದಿದೆಯಂತೆ. ಅಂದ ಹಾಗೆ, ಅವರು ನಿರ್ಮಿಸಿ, ನಿರ್ದೇಶಿಸಿರುವ ಸಿನಿಮಾ “ಶತಾಯ ಗತಾಯ’. ಚಿತ್ರ ಈ ವಾರ ತೆರೆಕಾಣುತ್ತಿದೆ. ಬಿಡುಗಡೆಗೆ ಮುನ್ನ ಮಾಧ್ಯಮ ಮುಂದೆ ಬಂದಿದ್ದ ಸಂದೀಪ್ ಗೌಡ, ಫುಲ್ ಜೋಶ್‌ನಲ್ಲಿದ್ದರು. ಸಿನಿಮಾ ಸಕ್ಸಸ್ ಮೀಟ್‌ನಲ್ಲಿರಬೇಕಾದ ಜೋಶ್ “ರಿಲೀಸ್ ಮೀಟ್’ನಲ್ಲಿ ಎದ್ದು ಕಾಣುತ್ತಿತ್ತು.
ಸಂದೀಪ್ ಗೌಡ ಅವರಿಗೆ ಇದು ಮೊದಲ ಸಿನಿಮಾ. ಈ ಹಿಂದೆ ಕಿರುಚಿತ್ರ ಮಾಡಿದ ಅನುಭವವಿದೆ. ಆ ಅನುಭವದೊಂದಿಗೆ ಸಿನಿಮಾ ಮಾಡಿದ್ದಾರೆ. ಜೊತೆಗೆ ಅವರಿಗೆ ಸಿನಿಮಾ ಆಸಕ್ತಿ ಬೆಳೆಯುವಲ್ಲಿ ಕಂಠೀರವ ಸ್ಟುಡಿಯೋದ ಪಾತ್ರ ಕೂಡಾ ಇದೆಯಂತೆ. ಟ್ರಾವೆಲ್ಸ್ ನಡೆಸುತ್ತಿರುವ ಸಂದೀಪ್ ಗೌಡ ಅವರ ಕಚೇರಿ ಕಂಠೀರವ ಸ್ಟುಡಿಯೋ ಪಕ್ಕದ ಕಟ್ಟಡದ ಮೂರನೇ ಮಹಡಿಯಲ್ಲಿತ್ತಂತೆ. ಕಚೇರಿಯಿಂದ ಚಿತ್ರೀಕರಣ ನೋಡುತ್ತಲೇ ಸಿನಿಮಾ ಆಸಕ್ತಿ ಹೆಚ್ಚಾಯಿತಂತೆ. ಅದರ ಪರಿಣಾಮವಾಗಿ ಈಗ “ಶತಾಯ ಗತಾಯ’ ಮಾಡಿದ್ದಾರೆ. ಅವರೇ ಹೇಳುವಂತೆ ಸಿನಿಮಾ ನೋಡಿದವರು, ಇದು ಚೊಚ್ಚಲ ನಿರ್ದೇಶಕನ ಸಿನಿಮಾದಂತೆ ಕಾಣುತ್ತಿಲ್ಲ ಎಂದರಂತೆ. ಆ ಮಟ್ಟಿಗೆ ಚೆನ್ನಾಗಿ ಮೂಡಿಬಂದಿದೆ ಎಂದು ಮತ್ತೂಮ್ಮೆ ಹೇಳಿಕೊಂಡರು ಅವರು.
ಎಲ್ಲಾ ಓಕೆ, “ಶತಾಯ ಗತಾಯ’ದಲ್ಲಿ ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಿದರೆ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎಂಬ ಉತ್ತರ ಅವರಿಂದ ಬರುತ್ತದೆ. ತಾಯಿ-ಮಗ ಸೆಂಟಿಮೆಂಟ್ ಜೊತೆಗೆ ಇದೊಂದು ರಿವೆಂಜ್ ಸ್ಟೋರಿಯಂತೆ. ಮಗ ಹೇಗೆ ತನ್ನ ಸೇಡು ತೀರಿಸಿಕೊಳ್ಳುತ್ತಾನೆಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆಯಂತೆ. ತಾಯಿ-ಮಗನ ಸಿನಿಮಾ ಎಂದಾಕ್ಷಣ ಇಲ್ಲಿ ಅತಿಯಾದ ಸೆಂಟಿಮೆಂಟ್ ಇಲ್ಲದೇ, ಆ್ಯಕ್ಷನ್‌ಗೆ ಹೆಚ್ಚು ಒತ್ತುಕೊಡಲಾಗಿದೆ ಎನ್ನುವುದು ನಿರ್ದೇಶಕರ ಮಾತು. ಚಿತ್ರದಲ್ಲಿ ರಘು ರಾಮಪ್ಪ ನಾಯಕರಾಗಿ ನಟಿಸಿದ್ದಾರೆ. ಈ ಹಿಂದೆ “ಜಸ್ಟ್ ಪಾಸ್’ ಎಂಬ ಸಿನಿಮಾದಲ್ಲಿ ನಟಿಸಿದ್ದ ರಘು ಆ ನಂತರ ಸಿನಿಮಾ ಮಾಡಿರಲಿಲ್ಲ. ಈಗ “ಶತಾಯ ಗತಾಯ’ ಮೂಲಕ ವಾಪಾಸ್ಸಾಗುತ್ತಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ನಾಯಕಿಯಾಗಿ ಸೋನಿಕಾ ನಟಿಸಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿರುವ ರವಿನಂದನ್ ಜೈನ್ ಕೂಡಾ ಹಾಡುಗಳ ಬಗ್ಗೆ ಮಾತನಾಡಿದರು. ಚಿತ್ರವನ್ನು ವೆಂಕಟ್ ಬಿಡುಗಡೆ ಮಾಡುತ್ತಿದ್ದಾರೆ.