ತಾಜ್‌ಮಹಲ್ ಬಗ್ಗೆ ನನ್ನಲ್ಲಿ ಆಸೆ ಹುಟ್ಟಿಸಿದ್ದು “ಅಮೃತಧಾರೆ’ ಸಿನಿಮಾ. ಅಲ್ಲಿ ಪುರು, ಅಮೃತಾಳನ್ನು ತೊಡೆಯ ಮೇಲೆ ಮಲಗಿಸಿಕೊಂಡು, ಪ್ರೇಮದ ಉತ್ತುಂಗವನ್ನು ತೋರಿಸುವ ಆ ಮಧುರ ಕ್ಷಣವೇ ಅದ್ಭುತ. ಹಾಗೆ ನನ್ನ ಪತಿಯೂ ನನ್ನನ್ನು ಅದೇ ರೀತಿ ಮಲಗಿಸಿಕೊಂಡು, ತಾಜ್‌ಮಹಲ್ ತೋರಿಸಬೇಕು ಎಂದು ಹಂಬಲಿಸುತ್ತಲೇ ಇದ್ದೆ. ಅದು ಮೊನ್ನೆ ಈಡೇರಿತು.
ಪುರು ಎಲ್ಲಿ ಅಮೃತಾಳನ್ನು ಕಲ್ಲು ಬೆಂಚಿನ ಮೇಲೆ ಕೂರಿಸಿದ್ದನೋ, ಅದೇ ಬೆಂಚಿನ ಮೇಲೆಯೇ ನಾನೂ ತನ್ಮಯಳಾಗಿ ಕುಳಿತಿದ್ದೆ. ಮುಲ್ತಾನ್ ಮಿಟ್ಟಿ ಮೆತ್ತಿದ್ದ ತಾಜ್‌ಮಹಲ್‌ನ ಆ ಮುತ್ತಿಕ್ಕುವ ಸೌಂದರ್ಯಕ್ಕೆ ಮನಸೋತೆ. ಸಂಜೆ ಆರು ಗಂಟೆಯಾಗಿದ್ದರಿಂದ, ಆಗ್ರಾದ ಸೆಖೆ ತಗ್ಗಿ, ತಣ್ಣನೆಯ ಚಳಿ ಕೊರೆಯಲು ಆರಂಭಿಸಿತ್ತು. ತಾಜ್ ಎದುರಿನ ಕೊಳದ ಅಕ್ಕಪಕ್ಕದ ಬಲುºಗಳೆಲ್ಲ ಬೆಳಗಿ, ಅಲ್ಲೊಂದು ಸ್ವರ್ಗ ಸೃಷ್ಟಿಯಾಗಿತ್ತು. ಹೊಸ ವರುಷದ ಮೊದಲ ದಿನವಾದ್ದರಿಂದ ಜನಜಂಗುಳಿ ಅಧಿಕವಿತ್ತು. ಎಲ್ಲೆಲ್ಲೂ ಪ್ರಣಯ ಪಕ್ಷಿಗಳೇ ಕಣ್ಣಿಗೆ ಬೀಳುತ್ತಿದ್ದರು.
ಸಿನಿಮಾದಲ್ಲಿ ಅಮೃತಾ ಕುಳಿತಿದ್ದ ಕಲ್ಲು ಬೆಂಚಿನ ಮೇಲೇ ಫೋಟೋ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದೆ. ಪತಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು, ಅವರ ಕಾಲ ಮೇಲೆ ನಾನು ಕೆನ್ನೆಯಿಟ್ಟು, ಕುಳಿತೆ. ಸೆಲ್ಫಿ ತೆಗೆದರೆ, ಅದು ಚೆನ್ನಾಗಿ ಕವರ್ ಆಗುವುದಿಲ್ಲವೆಂದು ತಿಳಿದು, ನಮ್ಮ ಕ್ಯಾಮೆರಾವನ್ನು ಅಲ್ಲೇ ಇದ್ದ ಒಬ್ಬ ವ್ಯಕ್ತಿಗೆ ಕೊಟ್ಟೆವು. ಆತ, “ಇಷ್ಟು ಹತ್ತಿರದಿಂದ ಫೋಟೋ ತೆಗೆದರೆ ಚೆನ್ನಾಗಿ ಬರುವುದಿಲ್ಲ. ಸ್ವಲ್ಪ ದೂರದಿಂದ ತೆಗೀತೀನಿ. ಹೇಗಿದ್ದರೂ ಒಳ್ಳೆಯ ಲೆನ್ಸ್ ಇದೆಯಲ್ಲ’ ಎನ್ನುತ್ತಾ ಆತ ತುಸು ಹಿಂಭಾಗಕ್ಕೆ ಹೋದ. ಮರುಕ್ಷಣವೇ, ಜನರ ನಡುವೆ ಆತ ಪುಸಕ್ಕನೆ ನುಗ್ಗಿ, ಓಡಿ ಹೋಗಲೆತ್ನಿಸಿದ. ಆ ಜನಸಾಗರದ ನಡುವೆ ಆತನನ್ನು ಎಲ್ಲಿ ಹುಡುಕುವುದು ಎಂಬುದೇ ದೊಡ್ಡ ತಲೆನೋವಾಯಿತು. ನನ್ನ ಪತಿ, ನನ್ನನ್ನು ಬಿಟ್ಟು ಆತನ ಹಿಂದೆ ಓಡಿ ಹೋದರು.
ಕೊನೆಗೆ ಆ ಕ್ಯಾಮೆರಾ ಕಳ್ಳನನ್ನು ಅಲ್ಲೇ ಇದ್ದ ಹುಡುಗಿಯೊಬ್ಬಳು ಹಿಡಿದಿದ್ದಳು! ಕ್ಯಾಮೆರಾ ಹಿಡಿದು ಓಡಿದ್ದನ್ನು ಕಂಡ ಆಕೆ, ಆತನನ್ನು ಹಿಂಬಾಲಿಸಿ, ಕೆನ್ನೆಗೆ ನಾಲ್ಕು ಬಾರಿಸಿದ್ದಳು. ಜನರೆಲ್ಲ ಹೊಡೆಯಲು ಸೇರಿಕೊಂಡಾಗ ಆತ ಗಾಬರಿ ಬಿದ್ದು, ಕ್ಯಾಮೆರಾವನ್ನು ಆಕೆಯ ಕೈಗೆ ಕೊಟ್ಟಿದ್ದನಂತೆ! ಅವಳ ಹೆಸರು ಸಂಜೌತಾ ಅಂತ. ಆಕೆ ಕುಂಗ್‌ಫು ಪಟುವಂತೆ. ಅಲ್ಲದೇ, ರನ್ನಿಂಗ್‌ರೇಸ್‌ನಲ್ಲಿ ಜೆಎನ್‌ಯುನಿಂದ ದೆಹಲಿಯನ್ನು ಪ್ರತಿನಿಧಿಸುತ್ತಿದ್ದ ಕ್ರೀಡಾಪಟುವಂತೆ. ಸಂಜೌತಾ, ಕ್ಯಾಮೆರಾವನ್ನು ನಮ್ಮ ಕೈಗಿಟ್ಟು, ಕ್ಷಣದಲ್ಲೇ ಮರೆಯಾದಳು.
ಅವಳ ಉಪಕಾರವನ್ನು ನಾನು ಎಂದಿಗೂ ಮರೆಯಲಾರೆ. ಕಡೆಗೂ ನನ್ನ ಬದುಕಿನ ಅತ್ಯಮೂಲ್ಯ ಚಿತ್ರ, ಕ್ಯಾಮೆರಾದೊಳಗೆ ಬಂಧಿಯಾಯಿತು. ನನ್ನ ಈ ಖುಷಿಯ ಎಲ್ಲ ಕ್ರೆಡಿಟ್ಟೂ ಆಕೆಗೇ ಸಲ್ಲಬೇಕು.
ಸಂಚಿತಾ ಪ್ರಭು, ಹೊನ್ನಾವರ