Advertisement

ಪಶ್ಚಿಮ ರೈಲ್ವೇಯಿಂದ ಒಂದೇ ದಿನದಲ್ಲಿ ದಾಖಲೆಯ 5.5 ಲಕ್ಷ ಟಿಕೆಟ್‌ ಮಾರಾಟ

10:15 AM Feb 10, 2020 | Team Udayavani |

ಮುಂಬಯಿ: ಪಶ್ಚಿಮ ರೈಲ್ವೇಯು ಯುಟಿಎಸ್‌ ಆ್ಯಪ್‌ ಮೂಲಕ ಮುಂಬಯಿ ಉಪನಗರ ರೈಲು ಪ್ರಯಾಣಿಕರಿಗೆ ಒಂದೇ ದಿನದಲ್ಲಿ 5,50,000 ಟಿಕೆಟ್‌ಗಳನ್ನು ಮಾರಾಟ ಮಾಡುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ.

Advertisement

ಫೆ. 3ರಂದು 5,50,000 ಪ್ರಯಾಣಿಕರು ಅಥವಾ ದಿನದ 5.28 ಮಿಲಿಯನ್‌ ಪ್ರಯಾಣಿಕರ ಪೈಕಿ ಶೇ. 11.03 ರಷ್ಟು ಜನರು ತಮ್ಮ ಮೊಬೈಲ್‌ನಲ್ಲಿ ಯುಟಿಎಸ್‌ ಆ್ಯಪ್‌ ಮೂಲಕ ಟಿಕೆಟ್‌ ಖರೀದಿಸುವುದರೊಂದಿಗೆ ಈ ಸಾಧನೆಯನ್ನು ಮಾಡಲಾಗಿದೆ ಎಂದು ಪಶ್ಚಿಮ ರೈಲ್ವೇಯ ಮುಖ್ಯ ಜನಸಂಪರ್ಕಾಧಿಕಾರಿ ರವೀಂದರ್‌ ಭಾಕರ್‌ ಮಾಹಿತಿ ನೀಡಿದ್ದಾರೆ.

2018ರ ನವೆಂಬರ್‌ ಅವಧಿಯಲ್ಲಿ 1,24,000ದಷ್ಟಿದ್ದ ಸರಾಸರಿ ದೈನಂದಿನ ಸಕ್ರಿಯ ಬಳಕೆದಾರರ ಸಂಖ್ಯೆಯು 2020ರ ಜನವರಿಯಲ್ಲಿ 3,39,000ಕ್ಕೆ ಏರಿತು ಮತ್ತು ಫೆ. 3 ರಂದು 5,50,000ರವರೆಗೆ ಗಣನೀಯ ಏರಿಕೆಯನ್ನು ಕಂಡಿದೆ. ಈ ರೀತಿಯಲ್ಲಿ ಡಿಜಿಟಲ್‌ ಟಿಕೆಟಿಂಗ್‌ ಪ್ರಯಾಣಿಕರಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿ ನುಡಿದಿದ್ದಾರೆ.

ರೈಲ್ವೇ ಪ್ರಾರಂಭಿಸಿರುವ ಯುಟಿಎಸ್‌ ಮೊಬೈಲ್‌ ಆ್ಯಪ್‌ ದೂರದ ಪ್ರಯಾಣದ ರೈಲುಗಳು ಮತ್ತು ಉಪನಗರ ಲೋಕಲ್‌ ರೈಲುಗಳ ಕಾಯ್ದಿರಿಸದ ಟಿಕೆಟ್‌ ಕಾಯ್ದಿರಿಸಲು ಅನುವು ಮಾಡಿಕೊಡುತ್ತದೆ. ಪ್ರಯಾಣಿಕರಲ್ಲಿ ಸ್ವಯಂ-ಟಿಕೆಟಿಂಗ್‌ ಅನ್ನು ಉತ್ತೇಜಿಸುವುದು ಮತ್ತು ವಿವಿಧ ರೈಲ್ವೇ ನಿಲ್ದಾಣಗಳಲ್ಲಿ ದೀರ್ಘ‌ ಸರತಿ ಸಾಲುಗಳ ಅಗ್ನಿಪರೀಕ್ಷೆಯನ್ನು ಎದುರಿಸದೆ ಪ್ರಯಾಣಿಕರು ಟಿಕೆಟ್‌ ಖರೀದಿಸುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದೊಂದಿಗೆ ಇದನ್ನು ಪರಿಚಯಿಸಲಾಗಿದೆ.

ಯುಟಿಎಸ್‌ ಆ್ಯಪ್‌ ಅನ್ನು ಜನಪ್ರಿಯಗೊಳಿಸಲು ಪಶ್ಚಿಮ ರೈಲ್ವೇಯು ಹಲವಾರು ಜಾಗೃತಿ ಅಭಿಯಾನಗಳನ್ನು ನಡೆಸಿದೆ. ಆ್ಯಪ್‌ ಡೌನ್ಲೋಡ್ ಮಾಡುವುದು ಮತ್ತು ಬಳಸುವುದು ಹೇಗೆ ಎಂಬ ಬಗ್ಗೆ ಪ್ರಯಾಣಿಕರಿಗೆ ತಿಳಿಸಲು ವಿವಿಧ ನಿಲ್ದಾಣಗಳಲ್ಲಿ ಅಭಿಯಾನಗಳನ್ನು ನಡೆಸಲಾಗಿದೆ ಎಂದು ಭಾಕರ್‌ ತಿಳಿಸಿದ್ದಾರೆ.

Advertisement

ಈ ಆ್ಯಪ್‌ ಡೌನ್ಲೋಡ್ ಮಾಡಲು ಸುಲಭ ಮತ್ತು ಕಾರ್ಯನಿರ್ವಹಿಸಲು ಸರಳವಾಗಿದೆ. ಎಲ್ಲಾ ಕಾಯ್ದಿರಿಸದ ಮತ್ತು ಸೀಸನ್‌ ಟಿಕೆಟ್‌ಗಳನ್ನು ಇದರಲ್ಲಿ ಕಾಯ್ದಿರಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next