ಮಂಗಳೂರು: ಕರಾವಳಿಯ ಮೂರು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಪಶ್ಚಿಮವಾಹಿನಿ ಯೋಜನೆಗೆ 1,394 ಕೋಟಿ ರೂ.ಗಳ ಸಮಗ್ರ ವರದಿ ತಯಾರಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಮೂರು ಹಂತಗಳಲ್ಲಿ ಯೋಜನೆ ಕಾರ್ಯಗತಗೊಳ್ಳುವ ನಿರೀಕ್ಷೆಯಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ತಾನು ಕೇಳಿದ ಪ್ರಶ್ನೆಗೆ ಕಾನೂನು, ಸಂಸದೀಯ ವ್ಯವಹಾರಗಳ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಸಚಿವ ಟಿ.ಬಿ. ಜಯಚಂದ್ರ ಅವರು ನೀಡಿದ ಉತ್ತರದ ಕುರಿತು ಐವನ್ ಡಿ’ಸೋಜಾ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಯೋಜನೆಗೆ ಮೊದಲ ಹಂತದಲ್ಲಿ 200 ಕೋಟಿ ರೂ., 2ನೇ ಹಂತದಲ್ಲಿ 611 ಕೋಟಿ ರೂ. ಹಾಗೂ 3ನೇ ಹಂತದಲ್ಲಿ 583 ಕೋಟಿ ರೂ.ಗಳನ್ನು ಕಾದಿರಿಸ ಲಾಗಿದೆ. ಯೋಜನೆ ಕುರಿತು ಈಗಾಗಲೇ ಡಿಪಿಆರ್ ಸಿದ್ಧಪಡಿಸ ಲಾಗಿದೆ. ಟೆಕ್ನಿಕಲ್ ಕನ್ಸಲ್ಟೆನ್ಸಿಯ ಮುಖಾಂತರ ಅ ಧಿಕಾರಿಗಳು ನಿರಂತರ ಸಂಪರ್ಕ ದಲ್ಲಿದ್ದಾರೆ ಎಂದು ಸಚಿವರು ನೀಡಿದ ಮಾಹಿತಿಯನ್ನು ಐವನ್ ಒದಗಿಸಿದರು.
ಮೂರು ಜಿಲ್ಲೆಗಳಲ್ಲಿ 2017-18ನೇ ಸಾಲಿನಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು 200 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಒಟ್ಟು 53 ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲಾಗಿದೆ. ದ.ಕ. ಜಿಲ್ಲೆಯಲ್ಲಿ 6, ಉಡುಪಿ 12 ಹಾಗೂ ಉತ್ತರ ಕನ್ನಡ ಜಿಲ್ಲೆಯ 4 ಮುಖ್ಯ ನದಿಗಳು ಪಶ್ಚಿಮಾಭಿಮುಖವಾಗಿ ಹರಿಯುತ್ತಿದೆ. ಪಶ್ಚಿಮವಾಹಿನಿ ಯೋಜನೆಯಡಿಯಲ್ಲಿ ಅನುಮೋದನೆಗೊಂಡಿರುವ ಒಟ್ಟು 53 ಕಾಮಗಾರಿಗಳ ಮೂಲಕ 845 ಎಂಸಿಎಫ್‌ಟಿ ನೀರು ಸಂಗ್ರಹಿಸಲು ಯೋಜಿಸಲಾಗಿದೆ.
ಜಿಲ್ಲೆಗೆ ಉಪ್ಪು ನೀರು ಸಂಸ್ಕರಣೆ ಬೇಕಾಗಿಲ್ಲ
ಕರಾವಳಿಯ ಮೂರು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಪಶ್ಚಿಮವಾಹಿನಿ ಯೋಜನೆ ಅನುಷ್ಠಾನಗೊಂಡರೆ ಉಪ್ಪು ನೀರು ಸಂಸ್ಕರಣ ಘಟಕವನ್ನು ಮಂಗಳೂರಿನಲ್ಲಿ ನಿರ್ಮಿಸುವ ಅಗತ್ಯವಿಲ್ಲ ಎಂದು ಐವನ್ ಡಿ’ಸೋಜಾ ಅಭಿಪ್ರಾಯಪಟ್ಟರು.